Site icon Vistara News

Kids food | ಮಕ್ಕಳೂಟವೆಂದರೆ ಮಕ್ಕಳಾಟವಲ್ಲ, ಅದಕ್ಕೇ ಹೀಗೆ ಮಾಡಿ

kids food

ಮಕ್ಕಳಿಗೆ ಊಟ ಮಾಡಿಸುವುದೆಂದರೆ ದೊಡ್ಡ ಯಜ್ಞ ಮಾಡಿದ ಹಾಗೆ. ಯಾವುದೇ ಉಣಿಸು-ತಿನಿಸನ್ನು ಹೇಗೇ ಮಾಡಿದರೂ ಅವರಿಗದು ಬೇಡ. ಹೀಗಿರುವಾಗ ಅವರಿಗೆ ಸತ್ವಯುತ ಆಹಾರ ನೀಡುವುದು ಪಾಲಕರಿಗೆ ಪ್ರತಿದಿನದ ಸವಾಲು. ಆದರೆ ಬೆಳೆಯುವ ಮಕ್ಕಳಿಗೆ ಸೂಕ್ತ ಪೋಷಣೆ ಇಲ್ಲದಿದ್ದರೆ ಆಗುವಂಥ ಸಮಸ್ಯೆ ಒಂದೆರಡೇ ಅಲ್ಲ. ಈ ಸಮಸ್ಯೆ ತಾತ್ಕಾಲಿಕವಾಗಿದ್ದೂ ಇರಬಹುದು, ದೀರ್ಘಕಾಲೀನವಾಗಿಯೂ ಇರಬಹುದು. ಜೊತೆಗೆ, ಬಾಲ್ಯದಲ್ಲಿ ಮಕ್ಕಳು ರೂಢಿಸಿಕೊಳ್ಳುವ ಆಹಾರ ಪದ್ಧತಿ ಮುಂದೆಯೂ ಅವರ ಬದುಕಿನಲ್ಲಿ ಉತ್ತಮ ಆಹಾರಶೈಲಿ ಇರಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

ಎಲ್ಲಾ ಮಕ್ಕಳೂ ʻಸೇರುವುದಿಲ್ಲʼ ಎಂದೇ ಒಂದಿಷ್ಟು ತರಕಾರಿ-ಹಣ್ಣುಗಳನ್ನು ತೆಗೆದಿರಿಸುತ್ತಾರೆ. ನಿಜಕ್ಕೂ ಅವು ಸೇರುವುದಿಲ್ಲವೇಕೆ ಎಂಬುದು ಅವರಿಗೂ ಗೊತ್ತಿರುವುದಿಲ್ಲ. ಹಾಗಿರುವಾಗ ಆಯಾ ತರಕಾರಿಗಳ ಮಾಮೂಲಿ ಅಡುಗೆಗಳನ್ನು ಮಾಡುವ ಬದಲು, ಕೆಲವು ಅಚ್ಚರಿಗಳನ್ನು ಅವರ ಮುಂದಿಡಬೇಕಾಗುತ್ತದೆ. ಉದಾ, ಮೂಲಂಗಿ ಪೋಷಕಾಂಶಗಳ ಆಗರ. ಆದರೆ ಅದನ್ನು ಮಕ್ಕಳಿಗೆ ತಿನ್ನಿಸುವುದು ಖಂಡಿತ ಸುಲಭವಲ್ಲ. ಮೂಲಂಗಿ ಸಾಂಬಾರ್‌ ಮಾಡಿದರೆ ಮುಖ ಕಿವುಚುವ ಮಕ್ಕಳಿಗೆ, ಹಸಿ ಮೂಲಂಗಿ ರಾಯತ ಕೊಡಬಹುದು. ಅವರ ಮುಂದಿಡುವ ಹೊತ್ತಿಗೆ ಮೂಲಂಗಿ ಮೊಸರಿಗೆ ಹಾಕಿಕೊಟ್ಟರೆ, ಮೂಲಂಗಿಯ ಕಂಪು ಗೊತ್ತಾಗುವುದಿಲ್ಲ. ಹಾಗಲ ಕಾಯಿಯ ಕಹಿಯನ್ನೂ ನಾನಾ ರೀತಿಯ ರುಚಿಕರ ಗೊಜ್ಜುಗಳಲ್ಲಿ ಮರೆಮಾಚಬಹುದು.

ಸ್ವಲ್ಪ ರಂಗುರಂಗಾದ ಹಣ್ಣು-ತರಕಾರಿಗಳು ತಟ್ಟೆಯಲ್ಲಿರುವುದು ಪ್ರಯೋಜನಕಾರಿ. ಇದಕ್ಕಾಗಿ ನಾನಾ ರೀತಿಯ ಪಾಸ್ತಾ ಸಾಲಡ್‌ಗಳನ್ನು ಪ್ರಯತ್ನಿಸಬಹುದು. ಮೈದಾ ಬದಲು ಬಹುಧಾನ್ಯಗಳಿಂದ ಮಾಡಿದ ಪಾಸ್ತಾ ಇನ್ನೂ ಉತ್ತಮ. ಇದರಿಂದ ಪ್ರೊಟೀನ್‌ ಮತ್ತು ಕಾರ್ಬ್‌ನಂತಹ ಮುಖ್ಯ ಪೋಷಕಾಂಶಗಳು ಮತ್ತು ಹಣ್ಣು-ತರಕಾರಿಗಳಿಂದ ದೊರೆಯುವ ಸೂಕ್ಷ್ಮ ಸತ್ವಗಳೆರಡನ್ನೂ ಸಮತೋಲನದಲ್ಲಿ ನೀಡಬಹುದು.

ಫ್ರೆಂಚ್‌ ಫ್ರೈ ಅಥವಾ ಗೋಬಿ ಮಂಚೂರಿಯನ್ನು ಹೊಟ್ಟೆ ತುಂಬಾ ತಿಂದು, ʻಇವತ್ತಿನ ಲೆಕ್ಕದ ತರಕಾರಿ ತಿಂದಾಯ್ತುʼ ಎಂದೂ ಲೆಕ್ಕ ಹಾಕುವಷ್ಟು ಜಾಣರು ನಮ್ಮ ಮಕ್ಕಳು. ಆದರೆ ಕರಿದ ಆಲೂಗಡ್ಡೆಯಿಂದ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಮಕ್ಕಳ ಇಂಥ ಲೆಕ್ಕಾಚಾರಕ್ಕೆ ಸೊಪ್ಪು ಹಾಕದೆ, ಆರೋಗ್ಯಕ್ಕೇನು ಒಳ್ಳೆಯದು ಎಂಬುದನ್ನು ಅವರ ಗಮನಕ್ಕೆ ತರಲೇಬೇಕಾಗುತ್ತದೆ. ಕರಿದ ತಿಂಡಿಗಳ ಬದಲು, ಹುರಿದಿದ್ದು ಅಥವಾ ಏರ್‌ಫ್ರೈ ಮಾಡಿದ್ದನ್ನು ಪ್ರಯತ್ನಿಸಬಹುದು. ಸಂಸ್ಕರಿಸಿದ ಕೊಬ್ಬು ಮಾಡುವ ಅವಾಂತರ ಒಂದೆರಡೇ ಅಲ್ಲ.

ಹಣ್ಣು-ತರಕಾರಿಗಳ ಜ್ಯೂಸ್‌ ಬದಲು, ಅವುಗಳನ್ನು ಇಡಿಯಾಗಿ ಅಥವಾ ಕತ್ತರಿಸಿ ತಿನ್ನಲು ಕೊಡಿ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಹಣ್ಣಿನ ರಸಗಳನ್ನು ಬಳಸಬಹುದು. ಸಂಸ್ಕರಣೆ ಹೆಚ್ಚಿದಷ್ಟೂ, ಆಹಾರದ ಪೋಷಕಾಂಶಗಳು ನಶಿಸುತ್ತವೆ. ತಾಜಾ ಇದ್ದಷ್ಟೂ ಪ್ರಯೋಜನ ಹೆಚ್ಚು. ಆಯಾ ಋತುಮಾನದ ಹಣ್ಣು-ತರಕಾರಿಗೆ ಮೊದಲ ಆದ್ಯತೆ ನೀಡಿ. ಅಕಾಲದಲ್ಲಿ ಬರುವ ಹಣ್ಣುಗಳು, ಬಾಳಿಕೆಗೆಂದು ರಾಸಾಯನಿಕಗಳನ್ನು ಸಿಂಪಡಿಸಿಕೊಂಡಿರಬಹುದು ಅಥವಾ ಆ ಋತುಮಾನಕ್ಕೆ ಸೂಕ್ತ ಅಲ್ಲದೆಯೂ ಇರಬಹುದು.

ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!

ಒಂದೇ ರೀತಿಯ ಧಾನ್ಯದ ಬದಲು, ಬಹುರೀತಿಯ ಧಾನ್ಯಗಳ ಬಳಕೆಗೆ ಆದ್ಯತೆ ನೀಡಿ. ಹೊಟ್ಟು ತೆಗೆದು ಸಂಸ್ಕರಿಸಿದ ಧಾನ್ಯಗಳು ಸರ್ವಥಾ ಬೇಡ. ಹೊಟ್ಟು-ತೌಡಿನ ಸಮೇತ ಇಡಿಯಾಗಿರುವ ಧಾನ್ಯಗಳು ಹೆಚ್ಚು ಸತ್ವಯುತ. ಹಸಿ ಕಾಳುಗಳನ್ನು ನಾನಾ ರೀತಿಯ ಅಡುಗೆಗಳ ಮೂಲಕ ಮಕ್ಕಳಿಗೆ ತಿನ್ನಿಸಬಹುದು. ಇದರಿಂದ ಅವರ ದೈನಂದಿನ ಪ್ರೊಟೀನ್‌ ಲೆಕ್ಕಾಚಾರಕ್ಕೆ ಪುಷ್ಟಿ ದೊರೆಯುತ್ತದೆ. ಮಕ್ಕಳು ಎಷ್ಟು ತಿನ್ನುತ್ತಾರೆ ಎನ್ನುವುದಕ್ಕಿಂತ ಏನನ್ನು ತಿನ್ನುತ್ತಾರೆ ಎಂಬ ಬಗ್ಗೆ ಹೆಚ್ಚಿನ ನಿಗಾ ಬೇಕು.

ಹಾಲು-ಮೊಸರು ಮಕ್ಕಳ ಅಗತ್ಯ ಅಹಾರಗಳು. ಮೊಸರು ಇಷ್ಟಪಡದ ಮಕ್ಕಳಿಗೆ ನಾನಾ ಪರಿಮಳದ ಮಜ್ಜಿಗೆಗಳನ್ನು ನೀಡಲು ಪ್ರಯತ್ನಿಸಬಹುದು. ಬೆಣ್ಣೆ-ತುಪ್ಪ ಅತಿಯಾಗಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಿ ಮಕ್ಕಳಿಗೆ ಬೇಕಾಗುತ್ತದೆ. ಚೀಸ್‌ ಸೇವನೆಗೆ ಕಡಿವಾಣ ಇರಲಿ. ನೀರು ಕುಡಿಯದ ಮಕ್ಕಳಿಗೇನೂ ಬರಗಾಲವಿಲ್ಲ. ನೀರಿನ ಬದಲು ಜ್ಯೂಸ್‌, ಸೋಡಾಗಳಿಗೆ ಬೇಡಿಕೆ ಇಡುವ ಮಕ್ಕಳೂ ಇದ್ದಾರೆ. ನಯವಾಗಿ, ಆದರೆ ಸ್ಪಷ್ಟವಾಗಿ ನಿರಾಕರಿಸಿ. ನೀರಿಗೆ ಬದಲು ಬೇರಾವುದೂ ಇಲ್ಲ ಎಂದು ಖಚಿತವಾಗಿ ತಿಳಿಹೇಳಿ.

ಇದನ್ನೂ ಓದಿ | Hair care | ಫಳಫಳಿಸುವ ತಲೆಕೂದಲಿಗೆ ಸತ್ವಯುತ ಆಹಾರವೇ ಮೂಲ

Exit mobile version