ಬೆಂಗಳೂರು: ನಿದ್ರೆ ಯಾರಿಗೆ ಬೇಡ ಹೇಳಿ? ಈಗ ಚಿಕ್ಕಮಕ್ಕಳು ಕೂಡ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೇ ಯಾವುದೋ ಒತ್ತಡದಲ್ಲಿ ಬಳಲುತ್ತಿರುವವರ ಹಾಗೇ ಇರುತ್ತಾರೆ. ಮಕ್ಕಳ ಬೆಳವಣಿಗೆಗೆ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯವಾದದ್ದು. ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರುತ್ತದೆ. ಹಾಗಾಗಿ ನಿದ್ರೆ ಎನ್ನವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಉತ್ತಮ ನಿದ್ರೆ ಮಕ್ಕಳ ದೇಹದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹಾಗಾಗಿ ಇದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಈ ಕೆಲವು ಅಂಶಗಳು ನಿಮ್ಮ ಮಕ್ಕಳ ನಿದ್ರೆಯನ್ನು (Kids Sleep) ಕೆಡಿಸುತ್ತದೆಯಂತೆ. ಅವು ಯಾವುವು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
- ಮಕ್ಕಳು ಹೆಚ್ಚು ಹೊತ್ತು ಟಿವಿ ನೋಡುವುದು, ಮೊಬೈಲ್ ಬಳಸುವುದು. ಇವು ನಿದ್ರೆಯ ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಯಾಕೆಂದರೆ ಟಿವಿ, ಮೊಬೈಲ್ ನಿಂದ ಹೊರಬರುವ ನೀಲಿ ಬೆಳಕು ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ನ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ.
- ಹಾಗೇ ಪ್ರತಿದಿನ ಮಕ್ಕಳನ್ನು ಒಂದೇ ಸಮಯದಲ್ಲಿ ಮಲಗುವಂತೆ ರೂಢಿ ಮಾಡಬೇಕು. ಇದರಿಂದ ಅವರ ದೇಹ ಆ ಸಮಯಕ್ಕೆ ಸರಿಯಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳ ನಿದ್ರೆಯ ದಿನಚರಿಯನ್ನು ಸರಿಯಾಗಿ ರೂಢಿ ಮಾಡಿಸಿ.
- ಕೆಲವು ಒತ್ತಡದ ಘಟನೆಗಳು ಮಕ್ಕಳ ನಿದ್ರೆಗೆ ಭಂಗವನ್ನುಂಟುಮಾಡುತ್ತದೆ. ಶಾಲೆ, ಸ್ನೇಹಿತರು ಮತ್ತು ಕುಟುಂಬದವರ ಸಮಸ್ಯೆಗಳು ಮಕ್ಕಳಲ್ಲಿ ಆತಂಕವನ್ನುಂಟುಮಾಡುತ್ತದೆ. ಇದರಿಂದ ನಿದ್ರೆಯಲ್ಲಿ ಮಕ್ಕಳು ಬೆಚ್ಚಿ ಬೀಳುತ್ತಾರೆ. ಇದು ಅವರ ನಿದ್ರೆಯನ್ನು ಕೆಡಿಸುತ್ತದೆ.
- ಮಕ್ಕಳು ಸುಖವಾಗಿ ನಿದ್ರೆ ಮಾಡಲು ಅವರು ಮಲಗುವ ವಾತಾವರಣ ಅನುಕೂಲಕರವಾಗಿರಬೇಕು. ಅವರು ಮಲಗುವಂತಹ ಹಾಸಿಗೆ , ಅತಿಯಾದ ಶಬ್ದ, ರೂಂನ ತಾಪಮಾನ ಮಕ್ಕಳ ನಿದ್ರೆಗೆ ಭಂಗ ತರುತ್ತದೆಯಂತೆ. ಹಾಗಾಗಿ ಮಕ್ಕಳು ಮಲಗುವ ಕೋಣೆ ಆರಾಮದಾಯವಾಗಿರುವಂತೆ ನೋಡಿಕೊಳ್ಳಿ.
- ಹಾಗೇ ಮಕ್ಕಳು ಮಲಗುವಾಗ ಅತಿಯಾಗಿ ಸಕ್ಕರೆಯುಕ್ತ ತಿಂಡಿಗಳನ್ನು ಅಥವಾ ಪಾನೀಯಗಳನ್ನು ಸೇವಿಸುವುದು ನಿದ್ರೆಗೆ ಅಡ್ಡಿಯನ್ನುಂಟುಮಾಡುತ್ತದೆಯಂತೆ. ಹಾಗಾಗಿ ಇವುಗಳನ್ನು ಕಡಿಮೆ ಮಾಡಿ. ಮಕ್ಕಳು ಮಲಗುವ ಮುನ್ನ ಇವುಗಳನ್ನು ನೀಡುವುದು ತಪ್ಪಿಸಿ.
- ಮಕ್ಕಳಲ್ಲಿ ಕಂಡುಬರುವಂತಹ ಅಲರ್ಜಿ, ಉಸಿರಾಟದ ಸಮಸ್ಯೆಗಳು, ಮೈಕೈ ನೋವು ಮುಂತಾದ ದೈಹಿಕ ಅಸ್ವಸ್ಥಗಳಿಂದ ಅವರಿಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳ ದೈಹಿಕ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ನೀಡಿ.
- ಮಕ್ಕಳಿಗೆ ಅತಿಯಾಗಿ ಓದಲು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುವುದು ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಅವರಿಗೆ ನಿದ್ರೆ ಬರುವುದಿಲ್ಲ. ಹಾಗಾಗಿ ಅವರಿಗೆ ಇಷ್ಟವಾದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡಿ.
- ನಿದ್ರೆ ಮಕ್ಕಳ ಆರೋಗ್ಯಕ್ಕೆ ಉತ್ತಮ ನಿಜ. ಅಂದಮಾತ್ರಕ್ಕೆ ಅವರಿಗೆ ಹಗಲಿನಲ್ಲಿ ನಿದ್ರೆ ಮಾಡಿಸಬೇಡಿ. ಇದರಿಂದ ಅವರಿಗೆ ರಾತ್ರಿ ನಿದ್ರೆ ಬರುವುದಿಲ್ಲ.
- ಸ್ಲೀಪ್ ಅಪ್ನಿಯ, ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್, ನೈಟ್ ಟೆರರ್ಸ್ ಅಥವಾ ಸ್ಲೀಪ್ ವಾಕಿಂಗ್ ನಂತಹ ನಿದ್ರೆಗೆ ಸಂಬಂಧಪಟ್ಟ ಕಾಯಿಲೆಗಳು ನಿದ್ರೆಗೆ ಭಂಗವನ್ನುಂಟುಮಾಡುತ್ತವೆ. ಹಾಗಾಗಿ ಇವುಗಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರನ್ನು ಭೇಟಿ ಮಾಡಿ.
- ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರ ನಿದ್ರಾಶೈಲಿಯನ್ನು ಅನುಸರಿಸುತ್ತಾರೆ. ಪೋಷಕರು ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ರೂಢಿಸಿಕೊಂಡರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ.
ಇದನ್ನೂ ಓದಿ: Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!
ಮಕ್ಕಳು ಸರಿಯಾಗಲಿಲ್ಲ ನಿದ್ರೆ ಮಾಡಲಿಲ್ಲ ಎಂದರೆ ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಪೋಷಕರು ಸರಿಯಾಗಿ ತಿಳಿದುಕೊಂಡಿರಬೇಕು. ಇದರಿಂದ ಮಕ್ಕಳ ದೈಹಿಕ, ಮಾನಸಿಕ ಆರೊಗ್ಯವನ್ನು ಸುಧಾರಿಸಬಹುದು.