Site icon Vistara News

Kids Growing Too Fast: ಇತ್ತೀಚೆಗೆ ಮಕ್ಕಳೇಕೆ ಬಲುಬೇಗ ಪ್ರೌಢರಾಗುತ್ತಿದ್ದಾರೆ?

Kids Today Are Growing Up Way Too Fast

Kids Today Are Growing Up Way Too Fast

ಕ್ಕಳು ಬಲುಬೇಗ ದೈಹಿಕ ಪ್ರೌಢತೆ ಗಳಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಮೊದಲೆಲ್ಲಾ 13-14 ವರ್ಷಗಳ ಪ್ರಾಯದಲ್ಲಿ ಹುಡುಗಿಯರು ಋತುಮತಿಯರಾದರೆ, ಗಂಡು ಮಕ್ಕಳ ಮುಖದ ಮೇಲೆ ಮೀಸೆ ಮೂಡುವುದಕ್ಕೆ 15 ದಾಟಬೇಕಿತ್ತು. ಆದರೀಗ ಇವೆಲ್ಲ ಮೂರರಿಂದ ನಾಲ್ಕು ವರ್ಷಗಳಷ್ಟು ಹಿಂಬಡ್ತಿ ನಡೆದಿವೆ. ಇಷ್ಟಾಗಿ, ಇನ್ನೂ ಕಿರಿಯ ವಯಸ್ಸಿನಲ್ಲಿ ಮಕ್ಕಳು ಪ್ರೌಢರಾಗುತ್ತಿರುವ ದೃಷ್ಟಾಂತಗಳಿವೆ. ಎಳೆಯರು ಮಾನಸಿಕರಾಗಿ ಅಪಕ್ವರಾಗಿರುವಾಗ ಇದನ್ನು ಎದುರಿಸುವುದು ಮಕ್ಕಳು ಮತ್ತು ಹೆತ್ತವರ ಪಾಲಿಗೆ ಸಾಹಸವೇ ಸರಿ. ಹೀಗೇಕಾಗುತ್ತದೆ?

ಅತಿ ತೂಕ

ದೇಹದಲ್ಲಿ ಕೊಬ್ಬಿನ ಸಾಂದ್ರತೆ ಹೆಚ್ಚಿದ್ದರೆ ಈಸ್ಟ್ರೋಜನ್‌ ಚೋದಕಗಳು ಬೇಗನೇ ಪ್ರಚೋದನೆಗೊಳ್ಳುತ್ತವೆ. ಹಾಗಾಗಿ ಮಕ್ಕಳು ಪ್ರಮಾಣಕ್ಕಿಂತ ಹೆಚ್ಚಿನ ತೂಕ ಶೇಖರಿಸಿಕೊಳ್ಳದಂತೆ ಎಚ್ಚರ ವಹಿಸುವುದು ಅಗತ್ಯ. ವಾರಕ್ಕೆ ನಾಲ್ಕೈದು ದಿನ, ದಿನವಹಿ ಒಂದು ತಾಸಾದರೂ ಅವರು ಚನ್ನಾಗಿ ಬೆವರುವಷ್ಟು ಆಡಬೇಕು. ಅವರಿಷ್ಟದ ಯಾವುದೇ ಒಳಾಂಗಣ-ಹೊರಾಂಗಣ ಕ್ರೀಡೆಯಲ್ಲಿ ಅವನ್ನು ಕಡ್ಡಾಯ ತೊಡಗಿಸಬೇಕು.

ಬಿಪಿಎ

ಬಹಳಷ್ಟು ಪ್ಲಾಸ್ಟಿಕ್‌ ಕಂಟೇನರ್‌ಗಳು, ಪ್ಲಾಸ್ಟಿಕ್‌ ಬಾಟಲಿ, ಆಹಾರ ಪ್ಯಾಕಿಂಗ್‌ ವಸ್ತುಗಳಲ್ಲಿ ಬೇಡವೆಂದರೂ ಉಚಿತವಾಗಿ ದೊರೆಯುವ ರಾಸಾಯನಿಕವಿದು. ಆಹಾರದ ಮೂಲಕ ನಮ್ಮ ದೇಹವನ್ನು ಸೇರುವ ಈ ರಾಸಾಯನಿಕ ದೇಹದ ಪ್ರಾಕೃತಿಕ ಸಮತೋಲನವನ್ನೇ ಬುಡಮೇಲು ಮಾಡುತ್ತಿದೆ. ಬೇಗನೇ ಪ್ರೌಢರಾಗುವುದು, ಫಲವಂತಿಕೆಯ ಸಮಸ್ಯೆ, ಹೆಣ್ಣು ಮಕ್ಕಳಲ್ಲಿ ಪಿಸಿಒಡಿ ಮತ್ತು ಪಿಸಿಒಎಸ್‌ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಆದಷ್ಟೂ ಲೋಹ ಅಥವಾ ಗಾಜಿನ ಪಾತ್ರೆಗಳನ್ನೇ ಬಳಸುವುದು ಒಳ್ಳೆಯದು. ಮಕ್ಕಳ ಟಿಫನ್‌ ಬಾಕ್ಸ್‌ಗಳಿಗಾಗಿ ಪ್ಲಾಸ್ಟಿಕ್‌ ಬಳಕೆ ಅನಿವಾರ್ಯವಾದರೆ, ಬಿಪಿಎ-ಮುಕ್ತ ವಸ್ತುಗಳನ್ನೇ ಬಳಸುವುದು ಸೂಕ್ತ.

ಜಂಕ್‌ ಎಂಬ ಉರುಳು

ಅನಾರೋಗ್ಯಕರ ಜಂಕ್‌ ಫುಡ್‌ಗಳಿಂದಾಗಿ ಆರೋಗ್ಯ ಏನಕ್ಕೇನ ಆಗುತ್ತಿರುವುದು ಗೊತ್ತಿಲ್ಲದಿರುವುದೇನಲ್ಲ. 3ರಿಂದ 7 ವರ್ಷಗಳ ನಡುವಿನಲ್ಲಿ ಹೆಚ್ಚಿನ ಕುರುಕಲು ಮತ್ತು ಪ್ರಾಣಿಜನ್ಯ ಕೊಬ್ಬು ಮತ್ತು ಪ್ರೊಟೀನ್ ಸೇವಿಸಿದ ಮಕ್ಕಳಲ್ಲಿ ಹರೆಯ ಬೇಗನೇ ಬರುತ್ತಿರುವುದನ್ನು ಅಧ್ಯಯನಗಳು ತೋರಿಸುತ್ತಿವೆ. ಬದಲಿಗೆ, ಸಸ್ಯಜನ್ಯ ಪ್ರೊಟೀನ್‌ ಹೆಚ್ಚಾಗಿ ಸೇವಿಸಿದ ಮಕ್ಕಳ ಬೆಳವಣಿಗೆಯ ಹಂತಗಳಲ್ಲಿ ಈ ಏರುಪೇರು ದಾಖಲಾಗಿಲ್ಲ. ಸಂಸ್ಕರಿಸಿದ ಆಹಾರಗಳಂತೂ ಈ ದಿಸೆಯಲ್ಲಿ ಮಕ್ಕಳ ಮೊದಲ ಶತ್ರು.

ಸಾಮಾಜಿಕ ಮಾಧ್ಯಮಗಳು

ಕಿರಿಯ ವಯಸ್ಸಿನಲ್ಲೇ ʻವಯಸ್ಕರಿಗೆ ಮಾತ್ರʼ ಎನ್ನುವಂಥ ವಿಷಯಗಳಿಗೆ ಮಕ್ಕಳು ತೆರೆದುಕೊಳ್ಳುತ್ತಿರುವುದು ಇನ್ನೊಂದು ಸಮಸ್ಯೆ. ಪುಟ್ಟ ಮಕ್ಕಳ ಪಿಟ್ಯುಟರಿ ಗ್ರಂಥಿಯನ್ನು ಕಿರಿಯ ವಯೋಮಾನದಲ್ಲಿ ಸಕ್ರಿಯ ಮಾಡುತ್ತಿವೆ ಸಾಮಾಜಿಕ ಮಾಧ್ಯಮಗಳು. ಇದರಿಂದಾಗಿ ಈಸ್ಟ್ರೋಜೆನ್‌ ಮತ್ತು ಟೆಸ್ಟೋಸ್ಟೆರಾನ್‌ಗಳು ಬೇಗನೇ ಜಾಗೃತಗೊಂಡು, ಮಕ್ಕಳ ಹರೆಯವನ್ನು ಅವಧಿಗೆ ಮೊದಲೇ ಎಳೆತರುತ್ತಿವೆ. ಹಾಗಾಗಿ ಸ್ಕ್ರೀನ್‌ ಟೈಮ್‌ನಲ್ಲಿ ಮಕ್ಕಳೇನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪಾಲಕರು ಗಮನ ಹರಿಸಲೇಬೇಕಿದೆ.

ಪ್ರೊಟೀನ್‌ ಶೇಕ್‌

ಪ್ಯಾಕ್‌ ಮಾಡಿದ ಪ್ರೊಟೀನ್‌ ಶೇಕ್‌ ಮತ್ತಿತರ ಪೂರಕ ಆಹಾರಗಳು ಸಹ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ಸಾಧ್ಯವಾದಷ್ಟೂ ನೀಡುತ್ತಿವೆ. ಹದಿಹರೆಯದ ಗಂಡು ಮಕ್ಕಳದಲ್ಲಿ ಸ್ತನಗಳ ಬೆಳವಣಿಗೆ, ಹದಿಯವಸ್ಸಿನ ಹುಡುಗಿಯರ ಮುಖದ ಮೇಲೆ ಕೂದಲು- ಇಂಥ ವಿಪರೀತ ವಿದ್ಯಮಾನಗಳು ಕಂಡುಬರುತ್ತಿವೆ. ಹಾಗಾಗಿ ಈ ಸಂಸ್ಕರಿತ ಪ್ರೊಟೀನ್‌ಗಳ ಬದಲು ಸಹಜ ಅಹಾರ ಮೂಲಕವೇ ಪೋಷಕಾಂಶಗಳ ಸಮತೋಲನ ಕಾಪಾಡಿದರೆ, ಮಕ್ಕಳ ಹಾರ್ಮೋನುಗಳಲ್ಲಿ ಅಸಹಜತೆಯನ್ನು ನಿವಾರಿಸಬಹುದು.

ಹಸುವಿನ ಹಾಲು

ಇತ್ತೀಚಿನ ವರ್ಷಗಳಲ್ಲಿ ಇದೂ ಸಹ ಖಳನಾಯಕ್‌ ಪಾತ್ರ ವಹಿಸುತ್ತಿದೆ. ಕಾರಣಗಳು ಮತ್ತೇನಲ್ಲ, ಆರ್‌ಎಸ್‌ಬಿಟಿ ಪ್ರೊಟೀನುಗಳನ್ನು ಹಸುಗಳಿಗೆ ಉಣಿಸುತ್ತಿರುವುದು. ಅವುಗಳು ಹೆಚ್ಚಿನ ಹಾಲು ಕೊಡಬೇಕೆಂಬ ಉದ್ದೇಶದಿಂದ ಬಳಸಲಾಗುತ್ತಿರುವ ಕೃತಕ ಪ್ರೊಟೀನ್‌ಗಳು ಈಗ ಬೆಳೆಯುವ ಮಕ್ಕಳ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಮಕ್ಕಳಲ್ಲಿ ಹರೆಯ ಬೇಗನೇ ಬರುವಂತೆ ಮಾಡುತ್ತಿವೆ ಈ ರಾಸಾಯನಿಕಗಳು. ಹಾಗಾಗಿ, ಹಾಲಿನ ಬಳಕೆ ಅತಿಯಾಗಿ ಮಾಡುವುದನ್ನು ತಪ್ಪಿಸಿ. ಸಾಧ್ಯವಿದ್ದರೆ, ಆರ್‌ಎಸ್‌ಬಿಟಿ-ರಹಿತ ಹಾಲು ದೊರೆಯುತ್ತದೆಯೇ ಪ್ರಯತ್ನಿಸಿ.

ಇದನ್ನೂ ಓದಿ: Mental Health: ಪರೀಕ್ಷೆ ತಯಾರಿಯಲ್ಲಿ ಬುದ್ಧಿಗೊಂದೇ ಅಲ್ಲ, ದೇಹಕ್ಕೂ ಬೇಕು ಸರಿಯಾದ ಗ್ರಾಸ!

Exit mobile version