ಭಾರತೀಯ ಅಡುಗೆಯಲ್ಲಿ ನಾವು ಸಾಕಷ್ಟು ಮಸಾಲೆ ಪದಾರ್ಥಗಳನ್ನು ನಿತ್ಯವೂ ಬಳಸುತ್ತೇವೆ. ಹಿಂದಿನಿಂದಲೂ ನಮ್ಮ ಹಿರಿಯರು ಅಡುಗೆಮನೆಯಲ್ಲಿ ಧಾರಾಳವಾಗಿ ಗರಂ ಮಸಾಲಾ, ಅರಿಶಿನ, ಚಾಟ್ ಮಸಾಲಾ ಹೀಗೆ ಬಗೆಬಗೆಯ ಮಸಾಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸುತ್ತಲೇ ಬಂದಿದ್ದಾರೆ. ಇದು ಭಾರತೀಯ ಅಡುಗೆಯ ಸ್ವಾದವನ್ನೂ ರಂಗನ್ನೂ ಘಮವನ್ನೂ ಹೆಚ್ಚಿಸಿದೆಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಆದರೆ, ನಿತ್ಯವೂ ಇಂತಹ ಅಡುಗೆಯನ್ನು ಡಬ್ಬಿಯಲ್ಲಿ ಹಾಕಿ ಆಫೀಸಿಗೆ ಕೊಂಡೊಯ್ಯುತ್ತೇವೆ. ಅಲ್ಲೇ ತೊಳೆದು ತಂದರೂ, ಸರಿಯಾಗಿ ಮನೆಯಲ್ಲಿ ತೊಳೆಯಲು ಮತ್ತೆ ಡಬ್ಬಿ ಬಿಚ್ಚುತ್ತೇವೆ. ನಿತ್ಯವೂ ಬಗೆಬಗೆಯ ಆಹಾರ ಹೊತ್ತುಕೊಂಡು ಹೋದ ಡಬ್ಬಿ ಮಾತ್ರ ಘಮ್ಮೆಂದು ನಾರಲು ಶುರುವಾಗಿರುತ್ತದೆ. ಎಷ್ಟೇ ಚೆನ್ನಾಗಿ ತೊಳೆದರೂ, ನಿತ್ಯವೂ ಊಟ ತೆಗೆದುಕೊಂಡು ಹೋಗುವ ಡಬ್ಬಿಯಲ್ಲಿ ಅಳಿಸಲಾಗದ ವಾಸನೆಯೊಂದು ಉಳಿದುಕೊಂಡ ಹಾಗೆ ಅನಿಸತೊಡಗುತ್ತದೆ. ಕೆಲವೊಮ್ಮೆ ಒಂದು ಅಡುಗೆಯನ್ನು ತೆಗೆದುಕೊಂಡು ಹೋದ ಡಬ್ಬಿಯಲ್ಲಿ ತೊಳೆದು ಮತ್ತೊಂದನ್ನು ಹಾಕಿ ತೆಗೆದುಕೊಂಡು ಹೋದರೂ ಹಳೆಯ ಆಹಾರದ ವಾಸನೆ ಹೊಸ ತಿಂಡಿಯೊಂದಿಗೆ ಸೇರಿಕೊಂಡು ಹೊಸ ತಿಂಡಿಯ ನಿಜವಾದ ಘಮ ಸವಿಯಲು ಸಿಗುವುದಿಲ್ಲ. ಇನ್ನೂ ಕೆಲವೊಮ್ಮೆ ಮಸಾಲೆ ಪದಾರ್ಥಗಳನ್ನು ಹಾಕಿಟ್ಟ ಡಬ್ಬಿಯಲ್ಲಿ ಬೇರೇನನ್ನೂ ಹಾಕಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ. ಹೀಗೆ ಊಟದ ಡಬ್ಬಿಯ ಕೆಟ್ಟ ವಾಸನೆಯನ್ನು ಹೋಗುವಂತೆ ಮಾಡುವ ಉಪಾಯಗಳೇನು ಎಂಬುದನ್ನು ನೋಡೋಣ.
1. ಬೇಕಿಂಗ್ ಸೋಡಾ: ಕೆಟ್ಟ ವಾಸನೆಯನ್ನು ತೆಗೆಯುವಲ್ಲಿ ಬೇಕಿಂಗ್ ಸೋಡಾ ಪರಿಣಾಮಕಾರಿ ಕೆಲಸ ಮಾಡುತ್ತದೆ. ಒಂದು ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಕಲಸಿ ಪೇಸ್ಟ್ ಮಾಡಿಕೊಂಡು ಊಟದ ಡಬ್ಬಿಯೊಳಗೆ ಹಚ್ಚಿ ಒಂದೆರಡು ಗಂಟೆ ಬಿಡಿ. ನಂತರ ಬಿಸಿನೀರಿನಲ್ಲಿ ತೊಳೆಯಿರಿ. ಡಬ್ಬಿಯಲ್ಲಿರುವ ಹಳೆಯ ಕೆಟ್ಟ ವಾಸನೆ ಮಾಯವಾಗುತ್ತದೆ.
2. ಆಲೂಗಡ್ಡೆ: ಹಸಿ ಆಲೂಗಡ್ಡೆಯೂ ಊಟದ ಡಬ್ಬಿಯ ಕೆಟ್ಟ ವಾಸನೆ ಹೋಗಲಾಡಿಸುತ್ತದೆ ಎಂದರೆ ನಂಬುತ್ತೀರಾ? ಹೌದು. ಹಸಿ ಆಲೂಗಡ್ಡೆಯನ್ನು ಉರುಟಾದ ಹೋಳುಗಳನ್ನಾಗಿ ಮಾಡಿ ಆ ಹೋಳಿನಿಂದ ಊಟದ ಡಬ್ಬಿಯ ಒಳಮೈಯನ್ನು ಉಜ್ಜಿ. ಹೋಳನ್ನು ಹಾಗೆಯೇ ೧೫-೨೦ ನಿಮಿಷಗಳ ಕಾಲ ಒಳಗೆ ಬಿಡಿ.
ಇದನ್ನೂ ಓದಿ: smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು
3. ವೈಟ್ ವಿನೆಗರ್: ವೈಟ್ ವಿನೆಗರ್‌ಗೆ ಬ್ಯಾಕ್ಟೀರಿಯಾವನ್ನು ಸಾಯಿಸುವ ಶಕ್ತಿಯಿದ್ದು, ಅದರ ಜೊತೆಗೆ, ಆಲ್ಕಲೈನ್ ವಾಸನೆಯನ್ನು ಹೊಡೆದೋಡಿಸುವ ತಾಕತ್ತಿದೆ. ವಿನೆಗರ್ ಹಾಗೂ ನೀರು ಎರಡನ್ನೂ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೆಲ ಗಂಟೆಗಳ ಕಾಲ ಡಬ್ಬಿಯಲ್ಲಿ ತುಂಬಿಸಿಡಿ. ನಂತರ ಬಿಸಿನೀರಿನಲ್ಲಿ ತೊಳೆದು ಒಣಗಿಸಿದರೆ, ಎಂಥ ವಾಸನೆಯಿದ್ದರೂ ವಾಸನೆ ಮಾಯವಾಗುತ್ತದೆ.
4. ನಿಂಬೆಹಣ್ಣಿನ ಸಿಪ್ಪೆ: ನಿಂಬೆಹಣ್ಣನ್ನು ಬಳಸಿದ ಮೇಲೆ ಅದರ ಸಿಪ್ಪೆಯನ್ನು ಎಸೆಯುವ ಬದಲು ತೆಗೆದಿಡಿ. ಅದನ್ನು ವಾಸನೆಯುಕ್ತ ಡಬ್ಬಿಯೊಳಗೆ ಹಾಕಿ ತಿಕ್ಕಿ ಒಂದೆರಡು ಗಂಟೆ ಹಾಗೇ ಬಿಡಿ. ಆಮೇಲೆ ತೊಳೆದು ಒಣಗಿಸಿ. ಡಬ್ಬಿಯ ಕಲೆ, ವಾಸನೆ ಎಲ್ಲವೂ ಹೋಗುತ್ತದೆ.
೫. ಚೆಕ್ಕೆ: ಚೆಕ್ಕೆಯೂ ಕೂಡಾ ವಾಸನೆಯನ್ನು ಹೊಡೆದೋಡಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದು ಊಟದ ಡಬ್ಬಿಯಲ್ಲಿನ ಕೆಟ್ಟ ವಾಸನೆ ತೆಗೆಯುತ್ತದೆ. ಚೆಕ್ಕೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಅದನ್ನು ಊಟದ ಡಬ್ಬಿಗೆ ಹಾಕಿಡಿ. ನಂತರ ತೊಳೆಯಿರಿ. ವಾಸನೆ ಹೋಗುತ್ತದೆ.
ಇದನ್ನೂ ಓದಿ: Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!