Site icon Vistara News

Kitchen Tips: ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವಾಗ ನಿಮ್ಮ ಆರೋಗ್ಯದ ಬಗ್ಗೆ ಈ ಅಂಶಗಳು ತಿಳಿದಿರಲಿ!

non stick utensil

ನಾನ್‌ ಸ್ಟಿಕ್‌ ಪಾತ್ರೆಗಳು (Non stick utensils) ಮಾರುಕಟ್ಟೆಗೆ ಬಂದಂದಿನಿಂದ ಹಲವರಿಗೆ ಅಡುಗೆ ಮನೆ ಕೆಲಸ ಸರಳವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೊಟೇಲಿನಲ್ಲಿ ಸಿಗುವ ದೋಸೆಯಂತೆ ತೆಳುವಾಗಿ ತುಪ್ಪ ದೋಸೆ ರೋಸ್ಟ್‌ ಮಾಡಬಹುದು. ಪ್ಯಾನ್‌ಗೆ ಅಂಟದಂತೆ ಬೇಕುಬೇಕಾದ ಸಬ್ಜಿ ಮಾಡಬಹುದು, ಅಷ್ಟೇ ಅಲ್ಲ, ಕಡಿಮೆ ಎಣ್ಣೆ, ತುಪ್ಪ ಬಳಸಿ ಫಟಾಫಟ್‌ ತಿಂಡಿಗಳನ್ನು ಯಾವ ತಲೆಬಿಸಿಗಳೂ ಇಲ್ಲದಂತೆ ಮಾಡಬಹುದು ಎಂಬುದು ಸತ್ಯವೇ ಆಗಿದ್ದರೂ, ನಾನ್‌ಸ್ಟಿಕ್‌ನಿಂದಾಗುವ ಆರೋಗ್ಯ ಸಮಸ್ಯೆಗಳು, ಆರೋಗ್ಯದ ಮೇಲಿನ ಅಪಾಯದ ಬಗೆಗೂ ಅರಿವಿರುವುದು ಅಗತ್ಯವಾಗಿದೆ. ನಾನ್‌ಸ್ಟಿಕ್‌ ಪಾತ್ರೆಗಳನ್ನು (non stick utensil) ಬಳಸದೆ ಇರುವುದು ಒಳ್ಳೆಯದೇ ಆದರೂ ಅಗತ್ಯ ಸಂದರ್ಭಗಳಲ್ಲಿ ಬಳಸುವ ಅನಿವಾರ್ಯತೆಯಲ್ಲಿ ಇಟ್ಟುಕೊಂಡಿದ್ದರೆ, ಈ ಕೆಳಗಿನ ಕೆಲವು ಸಾಮಾನ್ಯ ವಿಚಾರಗಳು (kitchen tips) ನಿಮಗೆ ಗೊತ್ತಿರಲಿ.

1. ಬಹುತೇಕ ನಾನ್‌ಸ್ಟಿಕ್‌ ಪಾತ್ರೆಗಳು ಟೆಫ್ಲಾನ್‌ ಎಂಬ ರಾಸಾಯನಿಕದಿಂದ ಮೇಲ್ಪದರವನ್ನು ಹೊಂದಿರುತ್ತವೆ. ಈ ಟೆಫ್ಲಾನ್‌ನಲ್ಲಿ ಪರ್‌ಫ್ಲೂರೋಆಕ್ಟಾನಿಕ್‌ ಆಸಿಡ್‌ (ಪಿಎಫ್‌ಒಎ) ಎಂಬ ರಸಾಯನಿಕ ಇರುವುದರಿಂದ ಅದು ಕಡಿಮೆ ಎಣ್ಣೆ ಅಥವಾ ತುಪ್ಪದೊಂದಿಗೆ ಪಾತ್ರೆಯ ತಳಕ್ಕೆ ಅಂಟದಂತೆ ಅಡುಗೆ ಮಾಡಬಲ್ಲ ಸಾಮರ್ಥ್ಯವನ್ನು ಕೊಡುತ್ತದೆ. ಕೆಲವು ನಾನ್‌ಸ್ಟಿಕ್‌ ಬ್ರಾಂಡ್‌ಗಳು ಸೆರಾಮಿಕ್‌ ಮೇಲ್ಪದರವನ್ನೂ ಬಳಸುತ್ತವೆ. ನಿತ್ಯವೂ ಈ ಪಾತ್ರೆಗಳನ್ನು ಬಳಸುತ್ತಿದ್ದರೆ ಈ ಮೇಲ್ಪದರ ಎದ್ದು ಹೋಗುತ್ತದೆ ಅಥವಾ ಗೀರುಗಳು ಬೀಳುತ್ತವೆ. ಹೀಗೆ ಅರ್ಧಂಬರ್ಧ ಎದ್ದು ಹೋದ ಅಥವಾ ಗೀರು ಬಿದ್ದ ಮೇಲ್ಪದರದ ನಾನ್‌ಸ್ಟಿಕ್‌ ಪಾತ್ರೆಗಳಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಪಾತ್ರೆಗಳ ಮೇಲ್ಪದರ ಹೀಗೆ ಎದ್ದು ಹೋಗಿದ್ದು ಕಂಡ ತಕ್ಷಣ ಅಂಥ ಪಾತ್ರಗಳಲ್ಲಿ ಅಡುಗೆ ಮಾಡುವುದು ದೋಸೆ ಹುಯ್ಯುವುದು ಬಿಟ್ಟು, ಪಾತ್ರೆಯನ್ನು ಬದಲಾಯಿಸಿ ಹೊಸ ಪಾತ್ರೆ, ಕಾವಲಿ ತನ್ನಿ.

2. ಬಹಳ ಕಾಲ ಪಾತ್ರೆ ಬಳಸಿ ಬಳಸಿ ಕೊನೆಗೆ ಅದು ಹಳೆಯದಾಗುತ್ತದೆ. ಅದರ ಮೇಲ್ಪದರಕ್ಕೆ ಯಾವುದೇ ಹೆಚ್ಚು ಗಾಯಗಳಾಗದಿದ್ದರೂ, ಮೇಲ್ಪದರ ಸವೆದು ಹೋಗದಿದ್ದರೂ ಚೆನ್ನಾಗಿದೆ ಎಂದು ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ನಾನ್‌ಸ್ಟಿಕ್‌ ಪಾತ್ರೆ ಐದು ವರ್ಷಕ್ಕಿಂತ ಹೆಚ್ಚು ಹಳೆಯದಾದರೆ ಅದನ್ನು ಬದಲಿಸುವುದು ಒಳ್ಳೆಯದು. ೨೦೧೫ಕ್ಕಿಂತ ಮೊದಲು ತಯಾರಾದ ಪಾತ್ರೆ ನಿಮ್ಮದಾಗಿದ್ದರೆ, ಅದರಲ್ಲಿ ಪಿಎಫ್‌ಒಎ ಮುಕ್ತ ಎಂಬ ವಿವರಣೆ ಇದ್ದರೂ, ಪಿಎಫ್‌ಒಎ ರಾಸಾಯನಿಕ ಇರುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಹಳೆಯ ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಿಡಿ.

3. ಬಣ್ಣ ಮಾಸಿದ ನಾನ್‌ ಸ್ಟಿಕ್‌ ಪಾತ್ರೆಗಳನ್ನೂ ಬಿಡುವುದು ಒಳ್ಳೆಯದು. ಬಳಕೆ ಮಾಡುತ್ತಾ ಮಾಡುತ್ತಾ ಹಳೆಯದಾದ ಪಾತ್ರೆಗಳು ಬಣ್ಣ ಮಾಸುತ್ತವೆ. ಬಣ್ಣ ಮಾಸಿದೆ ಎಂದರೆ ಹಾಳಾಗಿದೆ ಎಂದೇ ಅರ್ಥ.

4. ಪಾತ್ರೆ ನಿಮ್ಮ ಕೈಯಿಂದ ಬಿದ್ದೋ ಅಥವಾ ಉಷ್ಣತೆ ತಾಗಿ ತಾಗಿ ಅದರ ಆಕಾರವನ್ನೇ ಬದಲಿಸಿ ಬೆಂಡಾಗಿದ್ದರೂ ಕೂಡಾ ಅಂತಹ ನಾನ್‌ಸ್ಟಿಕ್‌ ಪಾತ್ರೆಗಳ ಬಳಕೆ ಒಳ್ಳೆಯದಲ್ಲ. ಬೆಂಡಾದ ಪಾತ್ರೆಯಲ್ಲಿ ಎಲ್ಲ BAಭಗಕ್ಕೂ ಸಮನಾದ ಶಾಖ ತಾಗದೆ, ಸರಿಯಾಗಿ ಬೇಯುವುದೂ ಇಲ್ಲ. ಹಾಗಾಗಿ ಆಹಾರಕ್ಕೆ ಅದು ಸರಿಯಾದ ಪಾತ್ರೆಯಲ್ಲ.

nonstick utensils

5. ಮೇಲ್ಪದರ ಎದ್ದು ಬರುತ್ತಿದ್ದರೆ ಕೂಡಾ ನಾನ್‌ಸ್ಟಿಕ್‌ ಪಾತ್ರೆ ಬಿಡಬಹುದು. ಮೇಲ್ಪದರವನ್ನು ಮುಟ್ಟಿದರೆ ಒಣಗಿದ ಪೈಂಟ್‌ನ ಹಾಗೆ ಸಿಪ್ಪೆ ಏದ್ದು ಬರುವಂತಿದ್ದರೆ ಅಂಥ ಪಾತ್ರೆಗಳನ್ನು ಖಂಡಿತಾ ಬಳಸಬೇಡಿ.

ಇದನ್ನೂ ಓದಿ: Kitchen Tips: ಈ ಐದು ಆಹಾರಗಳನ್ನು ಪ್ರೆಶರ್‌ ಕುಕ್ಕರಿನಲ್ಲಿ ಬೇಯಿಸಬಾರದು, ಯಾವುದು ಗೊತ್ತೆ?

6. ನಾನ್‌ಸ್ಟಿಕ್‌ ಪಾತ್ರೆಗಳ ಮೇಲ್ಪದ ಹೋಗಿ ತುಕ್ಕು ಹಿಡಿಯುತ್ತಿದ್ದರೆ ಅಂಥ ಪಾತ್ರೆಗಳನ್ನೂ ಬದಲಿಸಿ. ಅವುಗಳೂ ಕೂಡಾ ಆರೋಗ್ಯಕ್ಕೆ ಹಾನಿಯನ್ನೇ ಮಾಡುತ್ತವೆ.

7. ಮೇಲ್ಪದರ ಎದ್ದು ಹೋಗಿದ್ದರೆ, ಪಾತ್ರೆ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಅದರಿಂದಾಗಿಯೇ ನಾನ್‌ಸ್ಟಿಕ್‌ ಪಾತ್ರೆಯಲ್ಲಿ ಅಡುಗೆ ಮಾಡಿದರೆ ತಳ ಹಿಡಿಯಲಾರಂಭಿಸುತ್ತದೆ. ಮಾಡಿದ ಅಡುಗೆ ತಳಕ್ಕೆ ಅಂಟಿ ಹಿಡಿಯಲು ಆರಂಭವಾಗುತ್ತದೆ. ಹೀಗೆ ಆಗುತ್ತಿದ್ದರೆ, ಅಂಥ ಪಾತ್ರೆ ಬಿಟ್ಟು ಬಿಡಿ.

ನಿತ್ಯವೂ ನಾನ್‌ಸ್ಟಿಕ್‌ ಪಾತ್ರೆಯನ್ನೇ ಬಳಸುವುದು ಖಂಡಿತಾ ಆರೋಗ್ಯಕ್ಕೆ ಹಾನಿಕರ. ಅಪರೂಪಕ್ಕೊಮ್ಮೆ, ತುರ್ತು ಸಂದರ್ಭಗಳಲ್ಲಿ ಅವಸರದ ಅಡುಗೆಗೆಂದು ಬಳಸಿದರೆ ಹೆಚ್ಚು ತೊಂದರೆಯಿಲ್ಲ. ಆದರೆ, ನಿತ್ಯ ಬಳಕೆಯನ್ನು ಕಬ್ಬಿಣದ ಕಾವಲಿ, ಸ್ಟೀಲ್‌ ಪಾತ್ರೆ ಅಥವಾ ಮಣ್ಣಿನ ಮಡಿಕೆಗಳ ಬಳಕೆಯೇ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Migraine Headache: ಬೇಸಿಗೆಯಲ್ಲಿ ಉಲ್ಬಣಿಸುವ ತಲೆನೋವಿಗೆ ಪರಿಹಾರ ನಿಮ್ಮಲ್ಲೇ ಇದೆ!

Exit mobile version