Site icon Vistara News

Long life secret | ಹೆಚ್ಚು ಕಾಲ ಬದುಕಿರಬೇಕೆಂದರೆ ಹೇಗಿರಬೇಕು? ಸಂಶೋಧನೆ ತಿಳಿಸಿದ ರಹಸ್ಯ

life purpose

ಧನಿಕನೊಬ್ಬ ಸನ್ಯಾಸಿಯ ಬಳಿಗೆ ಬಂದ. ತಾನೊಬ್ಬ ವರ್ತಕ. ಈಗ ವೃತ್ತಿಯಿಂದ ನಿವೃತ್ತನಾಗಿದ್ದೇನೆ. ಜೀವನವಿಡೀ ದುಡಿದಿದ್ದು ಮೂರು ತಲೆಮಾರಿಗೆ ಸಾಕಾಗುವಷ್ಟಿದೆ. ಈಗ ತನ್ನ ಮಕ್ಕಳೂ ದುಡಿಯುತ್ತಿದ್ದಾರೆ. ಜೀವನದಲ್ಲಿ ತನಗೇನೂ ಕೊರತೆಯಿಲ್ಲ, ಆದರೂ ಸಂತೋಷವಿಲ್ಲ ಎಂದು ಅಲವತ್ತುಕೊಂಡ. ಅವನೆಡೆಗೆ ನೋಡಿ ಒಮ್ಮೆ ಮುಗುಳ್ನಕ್ಕ ಸನ್ಯಾಸಿ, ಅವನಿಗೊಂದಿಷ್ಟು ಬೀಜಗಳನ್ನು ಕೊಟ್ಟು, ಅವುಗಳನ್ನು ಕುಂಡಗಳಲ್ಲಿ ಬಿತ್ತಿ, ದಿನಾ ಗಮನಿಸುವಂತೆ ತಿಳಿಸಿದ. ಸನ್ಯಾಸಿಯ ಉದ್ದೇಶ ಧನಿಕನಿಗೆ ಅರ್ಥವಾಗದಿದ್ದರೂ, ಆತ ಹೇಳಿದಂತೆ ಮಾಡಿದ. ಕುಂಡಗಳಲ್ಲಿ ಬಿತ್ತಿದ ಬೀಜಗಳು ಮೊಳಕೆಯೊಡೆದು ಸಸಿಯಾದವು; ಬೆಳೆದು ಗಿಡವಾದವು; ಗಿಡಗಳು ಹೂಬಿಟ್ಟವು- ದಿನಾ ಅವುಗಳನ್ನು ಗಮನಿಸುವುದೇ ಅಭ್ಯಾಸವಾಗಿದ್ದ ಧನಿಕನಿಗೆ ತಾನೇ ಬೆಳೆಸಿದ ಸಸಿ-ಗಿಡ-ಹೂವು-ಕಾಯಿಗಳು ಬದುಕಿಗೊಂದು ಉದ್ದೇಶ ನೀಡಿದ್ದವು. ನಿರರ್ಥಕ ಎನಿಸಿದ ಬದುಕಿನಿಂದ ಮರೆಯಾಗಿದ್ದ ಸಂತೋಷ ತಾನಾಗಿ ಮರಳಿಬಂದಿತ್ತು. ಇತ್ತೀಚೆಗೆ ಅಮೆರಿಕದಲ್ಲಿ ನಡೆಸಿದ ಅಧ್ಯಯನಗಳೂ ಇದನ್ನೇ ಹೇಳುತ್ತಿವೆ.

ಯಾರೆಲ್ಲಾ ತಮ್ಮ ಬದುಕಿನಲ್ಲಿ ಘನವಾದ ಗುರಿ, ಉದ್ದೇಶವನ್ನು ಹೊಂದಿರುತ್ತಾರೋ ಅವರು ಒತ್ತಡವನ್ನು ಸಮರ್ಥವಾಗಿ ಎದುರಿಸುತ್ತಾರೆ ಮತ್ತು ಉತ್ತಮ ನಡತೆಯನ್ನೂ ಹೊಂದಿರುತ್ತಾರಂತೆ. ಅಮೆರಿಕದಲ್ಲಿ ದೇಶಾದ್ಯಂತ ನಡುವಯಸ್ಸಿನ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರನ್ನು ಸಮೀಕ್ಷೆಯೊಂದಕ್ಕೆ ಒಳಪಡಿಸಲಾಗಿತ್ತು. ಲಿಂಗ, ವರ್ಣ, ಜನಾಂಗದಂಥ ಎಲ್ಲ ಭಿನ್ನತೆ, ವೈವಿಧ್ಯತೆಗಳನ್ನೂ ಒಳಗೊಂಡಿದ್ದ ಈ ಅಧ್ಯಯನವು, ಆಯಸ್ಸು ಮತ್ತು ಜೀವನದ ಉದ್ದೇಶಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬುದನ್ನು ಸಂಶೋಧಿಸುತ್ತಿತ್ತು. ಬದುಕಿನಲ್ಲಿ ಘನವಾದ ಉದ್ದೇಶ ಇದ್ದ ಹೆಚ್ಚಿನವರು ದೀರ್ಘಾಯುಗಳಾಗಿರುವುದನ್ನು ಅಧ್ಯಯನ ದಾಖಲಿಸಿದೆ.

ಬದುಕಿನ ಉದ್ದೇಶ ಅಥವಾ ಗುರಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇರಬಹುದು. ಹಲವರಿಗೆ ಕುಟುಂಬ ಸಲಹುವುದು ಗುರಿಯಾದರೆ, ತಮ್ಮ ಸಮಾಜ/ ಸಮುದಾಯಕ್ಕಾಗಿ ಕೆಲಸ ಮಾಡುವುದು ಕೆಲವರ ಉದ್ದೇಶವಾಗಿರಬಹುದು. ಇಂಥ ಎಲ್ಲವನ್ನೂ ಮೀರಿದ ಬೇರೆಯದ್ದೇ ಉದ್ದೇಶ ಕೆಲವರ ಬದುಕಿಗೆ ಇರಬಹುದು- ಅಂತೂ ಜೀವನಕ್ಕೊಂದು ಗುರಿ ಬೇಕು, ಗೊತ್ತು-ಗುರಿ ಇಲ್ಲದಂತಾದರೆ ಕಷ್ಟ. ಇದನ್ನು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಎಲ್ಲ ಲಿಂಗ, ವರ್ಣ, ಜನಾಂಗಗಳ ಜನರು ಒಪ್ಪಿಕೊಂಡಿದ್ದಾರೆ. ಬದುಕಿನ ಉದ್ದೇಶಕ್ಕೆ ಮಹಿಳೆಯರು ಹೆಚ್ಚಿನ ಸ್ಪಂದನೆಯನ್ನು ತೋರಿಸುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ | Anti Obesity Day | ಬೊಜ್ಜು ಕರಗಿಸಲು ಸಾಧ್ಯವಿದೆ!

ಜೀವನಕ್ಕೆ ಗುರುತರ ಉದ್ದೇಶ ಹೊಂದಿದ್ದವರಲ್ಲಿ ಸಾವಿನ ಪ್ರಮಾಣ, ಉದ್ದೇಶ ಇಲ್ಲದವರಿಗೆ ಹೋಲಿಸಿದಲ್ಲಿ, ಶೇ. ೧೫.೨ ರಷ್ಟು ಕಡಿಮೆಯಿತ್ತು. ಇಂಥ ಜೀವನಪ್ರೀತಿ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿದೆ. ಅಂದರೆ, ಬದುಕಿಗೆ ಉದ್ದೇಶ ಇರುವ ಮತ್ತು ಇಲ್ಲದಿರುವವರ ನಡುವೆ ದೀರ್ಘಾಯುಗಳಾಗಿರುವವರ ಸಂಖ್ಯೆ ಪುರುಷರಲ್ಲಿ ಶೇ. ೨೦ ಇದ್ದರೆ, ಮಹಿಳೆಯರಲ್ಲಿ ಶೇ. ೩೪ರಷ್ಟು ದಾಖಲಾಗಿದೆ. ಇವೆಲ್ಲರಲ್ಲಿ ಒತ್ತಡ ನಿರ್ವಹಣೆಯನ್ನು ಅತ್ಯಂತ ಧನಾತ್ಮಕವಾಗಿ ಸ್ವೀಕರಿಸುವ ಮನೋಭಾವ ಪ್ರಮುಖವಾಗಿ ಕಂಡುಬಂದಿದೆ. ಹಾಗಾಗಿ ಒತ್ತಡವನ್ನು ದಕ್ಷವಾಗಿ ನಿರ್ವಹಿಸಿದವರು ದೀರ್ಘಾಯುಗಳಾಗುತ್ತಾರೆಂಬ ನಂಬಿಕೆಗೆ ಇಂಬು ದೊರೆತಿದೆ. ಮಾತ್ರವಲ್ಲ, ಬದುಕಿಗೆ ಮಹೋದ್ದೇಶ ಇದ್ದವರು ದಿನನಿತ್ಯದ ಯಾವ ಒತ್ತಡಗಳಿಗೂ ಮಣಿಯದೇ ಇರುವುದೂ ಅ‍ಧ್ಯಯನದಲ್ಲಿ ದಾಖಲಾಗಿದೆ.

ಇವುಗಳ ಜೊತೆ ಮತ್ತೊಂದು ಕುತೂಹಲಕರ ಅಂಶವೂ ದಾಖಲಾಗಿದೆ. ಬದುಕಿಗೊಂದು ಗುರಿ ಹೊಂದಿದವರು ತಮ್ಮ ಆರೋಗ್ಯದ ಕಾಳಜಿಯನ್ನೂ ಮಾಡುತ್ತಾರಂತೆ. ಅಂದರೆ ದೈಹಿಕ ಚಟುವಟಿಕೆಯಲ್ಲಿ ಆಸಕ್ತಿ, ಕುಡಿತದಂಥ ಚಟಗಳಿಂದ ದೂರವಿರುವುದು, ಒಳ್ಳೆಯ ಆಹಾರಾಭ್ಯಾಸ- ಮುಂತಾದವುಗಳ ಬಗ್ಗೆ ಅವರು ಆಸಕ್ತಿ ತೋರುತ್ತಾರಂತೆ. ಇದರಿಂದಾಗಿ ಅವರ ಆಯಸ್ಸು ವೃದ್ಧಿಯಾಗುತ್ತದೆಯೋ ಗೊತ್ತಿಲ್ಲ. ಅಂತೂ ದೀರ್ಘಾಯು ಆಗುವ ಮನಸ್ಸಿದ್ದವರು, ಬದುಕಿಗೊಂದು ಗುರಿ ಇರಿಸಿಕೊಳ್ಳುವುದು ಒಳ್ಳೆಯರು.

ಇದನ್ನೂ ಓದಿ | Health Tips For Diabetes | ಮಧುಮೇಹ ಬಾರದಿರಲು ಈ ಆರು ಆಹಾರಗಳನ್ನು ಬಿಟ್ಟುಬಿಡಿ!

Exit mobile version