Site icon Vistara News

Life Goals: ಗುರಿಯೆಡೆಗೆ ಸ್ಪಷ್ಟ ನಡೆಗೆ ಇವಿಷ್ಟಾದರೂ ಶಿಸ್ತು ಬೇಕು!

life lessons

ಬದುಕಿನಲ್ಲಿ ಅಂದುಕೊಂಡದ್ದನ್ನು ಸಾಧಿಸುವ ಸುಖ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಹಾಗೆ ಮಾಡಿದಿರಿ ಎಂದರೆ ಅವರ ಬದುಕಿನಲ್ಲೊಂದು ಶಿಸ್ತು ಇದೆ ಎಂದರ್ಥ. ಕೆಲವೊಮ್ಮೆ ನಿತ್ಯ ಬದುಕಿನ ಜಂಜಡಗಳಲ್ಲಿ ಎಷ್ಟು ಕಳೆದುಹೋಗಿ ಬಿಡುತ್ತೇವೆ ಎಂದರೆ, ಕೆಲವು ಸಣ್ಣಪುಟ್ಟ ಸಂಗತಿಗಳನ್ನೇ ಮಾಡಲಾಗದ ಸ್ಥಿತಿ ತಲುಪುತ್ತೇವೆ. ಕನಿಷ್ಟ ನಮಗಾಗಿ ಒಂದರ್ಧ ವಾಕಿಂಗ್‌ ಮಾಡಲಾಗದಷ್ಟು ನಮ್ಮ ಬದುಕಿನ ಜಂಜಡದಲ್ಲಿ ಕಳೆದುಹೋಗಿರುತ್ತೇವೆ. ಅಂದುಕೊಂಡದ್ದನ್ನು ಮಾಡಲು, ಕನಿಷ್ಟ ಅದರತ್ತ ಪ್ರಯತ್ನ ಪಡಲು, ಎಲ್ಲವನ್ನು ಸರಿದಾರಿಗೆ ತರಲು, ಶಿಸ್ತಿನ ಮೂಲಕ ಸರಿದಾರಿಗೆ ಬರಲು, ಗುರಿಯೆಡೆಗಿನ ನಡಿಗೆ ಸ್ಪಷ್ಟವಾಗಲು ನಮಗೆ ನಾವೇ ಕೆಲವೊಂದು ನಿರ್ದಿಷ್ಟ ವೇಳಾಪಟ್ಟಿ ಮಾಡಿಕೊಳ್ಳಬೇಕಾಗುತ್ತದೆ. ಅದರಂತೆ ನಡೆಯಬೇಕಾಗುತ್ತದೆ. ನಿಮ್ಮ ಈ ಹಾದಿ ಸುಗಮವಾಗಲು ಇವುಗಳನ್ನು ಅನುಸರಿಸಲು ಪ್ರಯತ್ನಪಟ್ಟರೆ ಖಂಡಿತಾ ಅಂದುಕೊಂಡದ್ದರ ಕಡೆಗಿನ ನಡಿಗೆಯ ಉದ್ದೇಶ, ಹಾದಿ ಸ್ಪಷ್ಟವಾಗುತ್ತದೆ. ಯಾಕೆ ನೀವೊಮ್ಮೆ ಹೀಗೆ ಟ್ರೈ ಮಾಡಬಾರದು?

೧. ಬೆಳಗ್ಗೆ ಐದು ಗಂಟೆಗೆ ಏಳಿ. ಬೆಳಗ್ಗೆ ಬೇಗ ಏಳುವುದೆಂದರೆ ನೀವು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದೀರಿ ಎಂದೇ ಅರ್ಥ. ಬೆಳಗ್ಗೆ ಬೇಗ ಏಳುವುದರಿಂದ ಹಲವಾರು ಲಾಭಗಳಿವೆ. ನೀವು ಅಂದುಕೊಂಡದ್ದನ್ನು ಮಾಡಿಕೊಳ್ಳಲು ಹೆಚ್ಚು ಸಮಯ ನಿಮ್ಮ ಪಾಲಿಗೆ ಸಿಗುತ್ತದೆ. ವ್ಯಾಯಾಮ, ಇಡೀ ದಿನ ಏನು ಮಾಡಬೇಕೆಂಬ ಪ್ಲಾನ್‌, ವೃತ್ತಿ, ಹೆಚ್ಚು ಕ್ರಿಯಾಶೀಲವಾಗಿರುವುದು ಎಲ್ಲವನ್ನೂ ಸಂಭಾಳಿಸಲು ಬೇಕಾದಷ್ಟು ಸಮಯ ಸಿಗುತ್ತದೆ. ನಿಮ್ಮ ಗುರಿಯನ್ನು ತಲುಪಲು, ಬದುಕಿನಲ್ಲಿ ಗುರಿಯತ್ತ ಮುನ್ನುಗ್ಗಲು ಬೆಳಗ್ಗೆ ಬೇಗ ಏಳುವುದು ಒಂದು ಸ್ಪಷ್ಟ ದಾರಿಯನ್ನು ಹಾಇ ಕೊಡುತ್ತದೆ.

೨.ಮಲಗುವ ಮೊದಲು ಡೈರಿ ಬರೆದಿಡಿ. ಮಲಗುವ ಮೊದಲು ಇಡೀ ದಿನ ಹೇಗೆ ಕಳೆಯಿತೆನ್ನುವುದರ ಬಗೆಗೆ ಒಂದು ಪುಟ ಬರೆಯುವುದು ಮನಸ್ಸಿಗೆ ನೆಮ್ಮದಿ ಹಾಗೂ ಒಳ್ಳೆಯ ನಿದ್ದೆ ಕೊಡಬಲ್ಲ ಕೆಲಸ. ಈ ದಿನ ಅಂದುಕೊಂಡದ್ದನ್ನು ಮಾಡಿ ಮುಗಿಸಿದ ತೃಪ್ತಿ, ನಾಳೆ ಮಾಡಬೇಕಾದ ಕೆಲಸಗಳು, ಸಂತೋಷ ನೀಡಿದ ಘಟನೆ, ಅಥವಾ ತುಂಬ ಬೇಸರದ ಅಥವಾ ನೆಗೆಟಿವ್‌ ಆಲೋಚನೆಗಳು ನಿಮ್ಮನ್ನು ಕಾಡಿದರೆ, ಅವುಗಳನ್ನು ಬರೆಯಬಹುದು. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಸಾಕಷ್ಟು ಉತ್ತಮಗೊಳಿಸುವಲ್ಲಿ ನೆರವಾಗುತ್ತದೆ. ನೀವು ಹೆಚ್ಚು ಹೆಚ್ಚು ಪ್ರಬುದ್ಧರಾಗಿ, ನಿಮ್ಮ ತಳಮಳಗಳನ್ನು ನೀವೇ ನಿಭಾಯಿಸಬಲ್ಲವರಾಗಿ, ಜವಾಬ್ದಾರಿಯವರಾಗಿ ಅಭಿವೃದ್ಧಿ ಹೊಂದುವಿರಿ. ಟ್ರೈ ಮಾಡಿ ನೋಡಿ.

೩. ಜಗತ್ತು ವೇಗವಾಗಿ ಅಪ್‌ಡೇಟ್‌ ಆಗುತ್ತಿದೆ. ಹೊಸ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ಕಾಲಿಡುತ್ತಿವೆ. ಹೀಗಿರುವಾಗ, ಜಗತ್ತಿಗೆ ತಕ್ಕಂತೆ ಅಪ್‌ಡೇಟ್‌ ಆಗುವುದು ಬಹಳ ಮುಖ್ಯ. ಪ್ರತಿನಿತ್ಯ. ದಿನಕ್ಕೆ ೩೦ ನಿಮಿಷಗಳ ಕಾಲ ಒಂದು ಯಾವುದಾದರೊಂದು ಆನ್‌ಲೈನ್‌ ಕಲಿಕೆಯನ್ನು ಮಾಡುತ್ತೇನೆ ಅಂದುಕೊಂಡು ಟ್ರೈ ಮಾಡಿ. ಕಲಿತ ವಿದ್ಯೆಗಳು ಯಾವತ್ತೂ ನಿಮ್ಮನ್ನು ಕೈ ಬಿಡುವುದಿಲ್ಲ. ಉದಾಹರಣೆಗೆ, ಕೋಡಿಂಗ್‌, ಯುಟ್ಯೂಬ್‌, ಬರವಣಿಗೆ, ಡಿಜಿಟಲ್‌ ಮಾರ್ಕೆಟಿಂಗ್‌, ಪೇಜ್‌ ಡಿಸೈನಿಂಗ್‌, ಗ್ರಾಫಿಕ್ಸ್‌ ಇತ್ಯಾದಿ ಇತ್ಯಾದಿಗಳನ್ನು ಕಲಿತರೆ ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರಗಳಿಂದ ಆಯ್ಕೆ ಮಾಡಿ ಕಲಿಕೆಯತ್ತ ಮುಖ ಮಾಡಿ. ವಯಸ್ಸು ಏನೇ ಇದ್ದರೂ ಕಲಿಕೆಯಲ್ಲಿ ಇವು ಮುಖ್ಯವಾಗುವುದಿಲ್ಲ.

೩. ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೆ ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡಿ. ಅದು ಯೋಗವೇ ಆಗಿರಬಹುದು, ಜಿಮ್‌ ಆಗಿರಬಹುದು, ಅಥವಾ ಇನ್ಯಾವುದೇ ತರಹದ ವ್ಯಾಯಾಮಕ್ಕೆ ನಿಮ್ಮ ಒಂದು ಗಂಟೆ ನಿಮಗೆ ಅತ್ಯಗತ್ಯ. ಓಡುವುದು, ಈಜುವುದು ಇತ್ಯಾದಿಗಳನ್ನು ಅಭ್ಯಾಸ ಮಾಡುವುದು ನಿಮಗೆ ಉತ್ತಮ ಲಾಭಗಳನ್ನು ನೀಡುತ್ತದೆ. ದೇಹವನ್ನು ಆರೋಗ್ಯವಾಗಿ ಇಟ್ಟುಕೊಂಡರೆ, ಕೆಲಸ ಗುರಿಯತ್ತ ಫೋಕಸ್‌ ವೃದ್ಧಿಸುತ್ತದೆ.

೪. ದಿನಕ್ಕೆ ಕನಿಷ್ಠ ಹತ್ತು ನಿಮಿಷಗಳ ಕಾಲ ಮೌನವಾಗಿ ಕೂರುವುದ್ನು ಅಭ್ಯಾಸ ಮಾಡಿಕೊಳ್ಳಿ. ನಿತ್ಯವೂ ಏನೆಲ್ಲ ಯೋಚನೆಗಳಿಂದ ದಿನ ಕಳೆಯುತ್ತಿರುತ್ತೇವೆ. ಪ್ರತಿ ನಿಮಿಷವೂ ನಮ್ಮ ಮನಸ್ಸು ನೂರಾಋಉ ಯೋಚನೆಗಳನ್ನು ಮಾಡುತ್ತಲೇ ಇರುತ್ತದೆ. ಹಾಗಾಗಿ ಈ ಯೋಚನೆಗಳಿಂದ ಮನಸ್ಸು ಹೊರಬರಲು ಅದಕ್ಕೆ ೧೦ ನಿಮಿಷ ಕೊಡುವುದನ್ನು ಅಭ್ಯಾಸ ಮಾಡಿ. ನಿಮ್ಮ ಮನಸ್ಸಿನ ಜೊತೆ ಮಾತಾಡಿ. ನಮಗೆ ನಮ್ಮ ಬಳಿಯೇ ಹೇಳಿಕೊಳ್ಳಲು ಸಾಕಷ್ಟು ವಿಚಾರಗಳಿರುತ್ತವೆ. ಅದಕ್ಕೆ ಅದರದೇ ಆದ ಸಮಯ ಬೇಕು. ಈ ಎಲ್ಲ ಯೋಚನೆಗಳಿಂದ ಹೊರಗೆ ಬಂದು ಖಾಲಿಯಾಗಿ ಮನಸ್ಸು ಹತ್ತು ನಿಮಿಷ ಕೂರಲಿ, ಯೋಚನೆಗಳಿಲ್ಲದೆ. ಖುಷಿಯಾಗಿರುವುದನ್ನು ಅಭ್ಯಾಸ ಮಾಡಿ. ಆ ಕ್ಷಣವನ್ನು ಚೆನ್ನಾಗಿ ಅನುಭವಿಸಿ. ಇದು ಮನಸ್ಸಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Better life in 2023 | ಈ ವರ್ಷ ಉತ್ತಮ ಜೀವನ, ಇದು ಶೇ.75 ಭಾರತೀಯರ ಅಭಿಪ್ರಾಯ

೫. ನಿದ್ದೆಗೊಂದು ಸಮಯ ಪಾಲನೆ ಇರಲಿ. ನಿದ್ದೆಯೆಂಬುದುದ ಅತ್ಯಂತ ಅವಶ್ಯಕ. ಮಾನಸಿಕ ಆರೋಗ್ಯದ ಕೀಲಿ ಕೈ ನಿದ್ದೆಯೇ. ಹಾಗಾಗಿ ನಿದ್ದೆಯ ಸಮಯವನ್ನು ಪಾಳಿಸಿ. ಬೇಗ ಮಲಗಿ. ಮಲಗುವ ೨ ಗಂಟೆಗೂ ಮೊದಲು ಸ್ಕ್ರೀನ್‌ ಟೈಂ ಮುಗಿದಿರಲಿ. ಎರಡು ಗಂಟೆಗೂ ಮೊದಲೇ ಊಟವೂ ಮುಗಿದಿರಲಿ. ಕಿಟಕಿಗಳಿಂದ ಬೆಳಕು ಒಳಬಾರದಂತೆ ಗಾಢ ಬಣ್ಣದ ಪರದೆಳನ್ನು ಬಳಸಿ. ರೂಮಿಗೊಂದು ನಿದ್ದೆಯ ಮೂಡ್‌ ತನ್ನಿ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಿ.

೬. ಪ್ರಕೃತಿಯ ಜೊತೆಗೆ ಅರ್ಧ ಗಂಟೆ ಒಡನಾಡಿ. ಪ್ರತಿನಿತ್ಯ ಅರ್ಧ ಗಂಟೆ ಗಿಡಮರ ಪಕ್ಷಿಗಳಿಂಚರ ಇರುವಲ್ಲಿ ಕೊಂಚ ರಿಲ್ಯಾಕ್ಸ್‌ ಆಗಿ ನಡೆದಾಡಿ. ಇದು ಇಡೀ ದಿನಕ್ಕೆ ಚೈತನ್ಯ ಕೊಡಬಲ್ಲದು. ಇಡೀ ದಿನದ ಸುಸ್ತನ್ನು ಮಾಯ ಮಾಡಿ ಬಿಡುವ ಶಕ್ತಿಯೂ ಇದಕ್ಕಿದೆ. ಖುಷಿಯನ್ನು ಹೆಚ್ಚಿಸುವ ಕೀಲಿಕೈ ಇಲ್ಲಿದೆ.

೭. ಎಷ್ಟೇ ಡಿಜಿಟಲ್‌ ಪ್ರಭಾವ ನಿಮ್ಮ ಮೇಲಾಗಿದ್ದರೂ ಪುಸ್ತಕ ಓದುವ ಅಭ್ಯಾಸ ಬಿಡಬೇಡಿ. ದಿನವೂ ಯಾವುದಾದರೊಂದು ಪುಸ್ತಕದ ಕನಿಷ್ಟ ೨೦ ಪುಟಗಳನ್ನಾದರೂ ಓದುವ ಅಭ್ಯಾಸ ಇಟ್ಟುಕೊಳ್ಳಿ. ಇದು ನಿಮ್ಮ ಜ್ಞಾನವೃದ್ಧಿ ಮಾಡುವುದರ ಜೊತೆಗೆ ನಿಮ್ಮ ಗುರಿಯೆಡೆಗಿನ ಫೋಕಸ್‌ ಹೆಚ್ಚಿಸುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಇದು ನಿಮ್ಮ ಜೀವನದ ಬಹುದೊಡ್ಡ ಆಸ್ತಿಯಾಗಬಲ್ಲುದು.

ಇದನ್ನೂ ಓದಿ: Long life secret | ಹೆಚ್ಚು ಕಾಲ ಬದುಕಿರೋಕೆ ಏನಿರಬೇಕು? ಸಂಶೋಧನೆ ತಿಳಿಸಿದ ರಹಸ್ಯ

Exit mobile version