ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು, ಶಿಕ್ಷಕರು ನಮ್ಮ ಭವಿಷ್ಯದ ಕನಸುಗಳಿಗೆ, ಗುರಿಗಳಿಗೆ ಸದಾ ಪ್ರೇರನೆಯಾಗಿ, ಮಾರ್ಗದರ್ಶನ ಮಾಡುತ್ತಾರೆ. ಅದರಲ್ಲೂ ಕೆಲವೇ ಕೆಲವರಿಗೆ ಶಿಕ್ಷಣದ ಸಮಯದಲ್ಲೇ ಅತ್ಯದ್ಭುತ ಶಿಕ್ಷಕರು ದಕ್ಕಿ, ಅವರಿಂದಾಗಿ ಬದುಕು ಒಂದು ಅತ್ಯದ್ಭುತ ಸಾಧ್ಯತೆಯನ್ನು ಪಡೆದುಕೊಳ್ಳುತ್ತದೆ. ಇಂತಹ ಗುರುಗಳು ಜೀವನ ಪರ್ಯಂತ ತಮ್ಮ ಮೆಚ್ಚಿನ ಶಿಷ್ಯನನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸುತ್ತಾರೆ. ಕೆಲವರು ಆಯಾ ಕಾಲಘಟ್ಟದಲ್ಲಿ ನಮ್ಮ ಜೀವನದಲ್ಲಿ ಬಂದು ಹೋಗುತ್ತಾರೆ. ಆದರೆ, ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಗುರಿಯಿರುವಾತನಿಗೆ ಅತ್ಯದ್ಭುತ ಮೆಂಟರ್ (ಮಾರ್ಗದರ್ಶಕ)ನೊಬ್ಬನ ಅವಶ್ಯಕತೆ ನಿಜವಾಗಿಯೂ ಇರುತ್ತದೆ. ಸದಾ ಎಚ್ಚರಿಸುವ, ಹಾದಿ ತಪ್ಪದಂತೆ ಮುನ್ನಡೆಸುವ, ಸರಿಯಾದ ಸಮಯಕ್ಕೆ ಗೈಡ್ ಮಾಡುವ ಹಾಗೂ ಆ ಬಗ್ಗೆ ದೃಢವಾದ ನಿಶ್ಚಯದೊಂದಿಗೆ ಮುಂದುವರಿಯುವಂತೆ ಪ್ರೇರೇಪಿಸುವ ಮಾಗದರ್ಶಕನೊಬ್ಬನ ಪಾತ್ರ ಪ್ರತಿಯೊಬ್ಬನ ಜೀವನದಲ್ಲೂ ಬಹಳ ಮುಖ್ಯವಾಗುತ್ತದೆ.
ಇಂಥ ಮಾರ್ಗದರ್ಶಕರಲ್ಲಿಯೂ ಹಲವು ವಿಧಗಳಿವೆ. ಬಹಳ ಸಾರಿ ನಿಮ್ಮ ಮೆಂಟರ್ ನಿಮ್ಮ ಸ್ನೇಹಿತನೂ ಆಗಿರಬಹುದು. ಆತ ನಿಮ್ಮ ಪ್ರೊಫೆಸರೋ, ಅಥವಾ ಹಳೇ ಆಫೀಸಿನ ಬಾಸೋ ಅಗಿರಬೇಕಾಗಿಲ್ಲ. ನಿಮ್ಮದೇ ವಯಸ್ಸಿನ ನಿಮ್ಮ ಗೆಳೆಯನೂ ಕೆಲವೊಮ್ಮೆ ವೃತ್ತಿ, ಕನಸು, ಗುರಿಗಳ ವಿಷಯ ಬಂದಾಗ ಸಾಕ್ಷಾತ್ ಮೆಂಟರ್‌ನ ರೂಪ ಧರಿಸಬಹುದು. ಹಾಗೆ ನೋಡಿದರೆ, ಪ್ರತಿಯೊಬ್ಬರ ಜೀವನದಲ್ಲಿ ಇತರರ ಮಾರ್ಗದರ್ಶನ, ಸಲಹೆ ಸೂಚನೆಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಸದಾ ಗುರಿ ಕನಸುಗಳ ಬೆನ್ನತ್ತಿ ಅದಕ್ಕೆ ತುಡಿಯುವಂತೆ ಹಾಗೂ ಆ ನಿಟ್ಟಿನಲ್ಲಿ ಮುಂದುವರಿಯಲು ಬೆನ್ನಿಗೆ ನಿಲ್ಲುವ ಮೆಂಟರುಗಳ ಪೈಕಿ ನಿಮ್ಮ ಜೊತೆ ಎಂಥವರಿದ್ದಾರೆ ಎಂದೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ.
ಇದನ್ನೂ ಓದಿ | Office life | ಕಚೇರಿಯಲ್ಲಿ ಯಶಸ್ವಿಯಾಗಲು ಸೂತ್ರ ಬೇಕೆ? 7 ಶಾರ್ಟ್‌ಕಟ್ ಇಲ್ಲಿವೆ ನೋಡಿ
೧. ಕ್ರಿಯಾಶೀಲ ಮಾರ್ಗದರ್ಶಕ: ಇಂಥ ಮಾರ್ಗದರ್ಶಕರು ಸದಾ ನಿಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಬಡಿದೆಬ್ಬಿಸುತ್ತಿರುತ್ತಾರೆ. ನೀವು ಸುಮ್ಮನೆ ಕೂರಲು ಬಿಡುವುದಿಲ್ಲ. ಒತ್ತಾಯಪೂರ್ವಕವಾಗಿಯಾದರೂ ನಿಮ್ಮಲ್ಲಿರುವ ಸಾಮರ್ಥ್ಯವನ್ನು ನೀವು ಬಳಸುವಂತೆ, ಹೊರಗೆ ತರುವಂತೆ, ಆ ನಿಟ್ಟಿನಲ್ಲಿ ಪ್ರಯತ್ನಪಡುವಂತೆ ಪ್ರೇರೇಪಿಸುತ್ತಾರೆ. ಅವರು ಬೆನ್ನು ಬಿದ್ದದ್ದಕ್ಕಾಗಿಯೇ ಅಂಥದ್ದೊಂದು ಸಾಧನೆ ನಿಮ್ಮಿಂದ ಸಾಧ್ಯವಾಗುತ್ತದೆ ಅಲ್ಲದೆ, ಅಂಥದ್ದೊಂದು ಸಾಧನೆ ನೀವು ಮಾಡಬಹುದೆಂಬ ಕಲ್ಪನೆಯೂ ನಿಮ್ಮಲ್ಲಿರುವುದಿಲ್ಲ. ಅಷ್ಟಾಗಿ ಜಿದ್ದಿಗೆ ಬಿದ್ದು ಹಠ ಸಾಧಿಸಿ ಕೆಲಸ ಮಾಡುವ ಗುಣವಿಲ್ಲದ ಮಂದಿಗೆ ಇಂಥ ಮಾರ್ಗದರ್ಶಕರು ಸಿಕ್ಕರೆ ಅವರಷ್ಟು ಅದೃಷ್ಟವಂತರು ಇನ್ನೊಬರಿಲ್ಲ.
೨. ಹೊಗಳುಭಟ ಮಾರ್ಗದರ್ಶಕ: ಇಂಥ ಮಾರ್ಗದರ್ಶಕರು ಸದಾ ನಿಮ್ಮ ಬೆನ್ನು ತಟ್ಟುವವರು. ಹೋದಲ್ಲಿ, ಬಂದಲ್ಲಿ, ಎಲ್ಲರೆದುರು ನಿಮ್ಮ ಗುಣಗಾನ ಮಾಡುತ್ತಿರುತ್ತಾರೆ. ನಿಮ್ಮ ಶಕ್ತಿ ಸಾಮರ್ಥ್ಯದ ವಿವರಣೆಯನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಮುಟ್ಟಿಸಲು ಪ್ರಯತ್ನಪಡುತ್ತಾರೆ. ಇಂಥ ಮಾರ್ಗದರ್ಶಕರಿಂದಲೂ ನಿಮಗೆ ಬದುಕಿನಲ್ಲಿ ಒಳ್ಳೆಯದೇ ಆಗುತ್ತದೆ.
೩. ಜೊತೆಗಾರ ಮಾರ್ಗದರ್ಶಕ: ಏನೇ ಆಗಲಿ, ನಿಮ್ಮ ಏಳುಬೀಳುಗಳಲ್ಲಿ ಜೊತೆಗೆ ನಿಲ್ಲುವ ಮಾರ್ಗದರ್ಶಕರೂ ಇರುತ್ತಾರೆ. ಇಂಥ ಮಾರ್ಗದರ್ಶಕರನ್ನು ಜೊತೆಗೆ ಪಡೆದವರೇ ಧನ್ಯ. ಯಾಕೆಂದರೆ, ಇವರು ನಿಮ್ಮ ಕಷ್ಟದ ದಿನಗಳಲ್ಲಿಯೂ, ಸುಖದ ದಿನಗಳಲ್ಲಿಯೂ ಜೊತೆಗೇ ಇರುತ್ತಾರೆ. ಫ್ರೆಂಡ್, ಗೈಡ್ ಆಗಿ ನಮಗೆ ನಿಮ್ಮೆಲ್ಲ ಕೆಲಸಗಳಿಗೆ ಸಾಥ್ ನೀಡಿ ನೀವು ಕಷ್ಟಪಡುತ್ತಿದ್ದ ಸಮಸ್ಯೆಯಿಂದ ಹೊರಗೆ ಬರಲು ಸಹಾಯ ಮಾಡುತ್ತಾರೆ. ಇವರು ನಿಮ್ಮನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ನಿಮಗೆ ಅರ್ಥವಾಗದ್ದನ್ನು ತಾಳ್ಮೆಯಿಂದ ವಿವರಿಸುವ ಹಾಗೂ ನೀವು ಅದರಲ್ಲಿ ಪಕ್ವವಾಗುವವರೆಗೂ ನಿಮಗೆ ಸಹಾಯ ಮಾಡುತ್ತಲೇ ಇರುವ ಮನಸ್ಸುಳ್ಳವರು ಇವರು.
೪. ಮಾನಸಿಕ ಮಾರ್ಗದರ್ಶಕರು: ಇಂಥವರು ಜೊತೆಗಿದ್ದು ಸಹಾಯ ಮಾಡಲಾಗದಿದ್ದರೂ, ಯಾವುದೇ ಸಹಕಾರ ಕೊಡಲಾಗದಿದ್ದರೂ, ದೂರವಿದ್ದುಕೊಂಡೇ ಮಾನಸಿಕವಾಗಿ ಸದಾ ನಿಮ್ಮ ಅಭಿವೃದ್ಧಿ ಬಯಸುವವರು. ನೀವು ತೊಂದರೆಯಲ್ಲಿದ್ದಾಗ, ಮಾಡಲಾಗದಿದ್ದಾಗ ಧೈರ್ಯ ತುಂಬಿ, ಮುಂದುವರಿಯುವಂತೆ ಬೆನ್ನು ಬೀಳುವವರು ಹಾಗೂ ಧೈರ್ಯ ತುಂಬುವವರು. ದೂರದಲ್ಲಿದ್ದರೂ ಸದಾ ನಿಮ್ಮ ಅಭಿವೃದ್ಧಿ ಬಯಸುವವರು.
ಇದನ್ನೂ ಓದಿ | ʼನೀನಂದ್ರೆ ನಂಗಿಷ್ಟʼ ಅಂತ ಆಗಾಗ ಹೇಳಬೇಕು ಕಣ್ರೀ!