Site icon Vistara News

Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

happy life

ಏನಾದರೂ ಸಾಧಿಸಲು ಆಸೆಯಿದೆ, ಆದರೆ ಸಾಧ್ಯವಾಗುತ್ತಿಲ್ಲ. ಗೊತ್ತುಗುರಿಯಿಲ್ಲದಂತೆ ದೇಶ ಸುತ್ತುವುದು, ತನ್ನದೇ ಒಂದು ಬ್ಯುಸಿನೆಸ್‌ಆರಂಭಿಸುವುದು, ಹೊಸ ಹೇರ್‌ಸ್ಟೈಲೊಂದನ್ನು ಟ್ರೈ ಮಾಡುವುದು, ತೀರಾ ತೊಂದರೆ ಕೊಡುತ್ತಿರುವ ಒಂದು ಕೆಟ್ಟ ಸಂಬಂಧದಿಂದ ಎದ್ದು ಹೊರ ನಡೆಯುವುದು… ಹೀಗೆ ಹತ್ತು ಹಲವು ಮಾಡಬೇಕೆಂದುಕೊಳ್ಳುವ ಕಾರ್ಯಗಳು ಪ್ರತಿಯೊಬ್ಬರ ಮನದಲ್ಲೂ ಇದ್ದೇ ಇರುತ್ತದೆ. ಆದರೆ, ಕೊನೆಯವರೆಗೂ ಮನಸ್ಸು ಮಾಡುವುದೇ ಇಲ್ಲ. ಕಷ್ಟವಾದರೂ ಹೊಂದಿಕೊಂಡು ಜೀವನ ನಡೆಸುವುದು, ಸುತ್ತಾಡಬೇಕೆಂದರೂ ಅದುಮಿಟ್ಟುಕೊಂಡು ಏಕತಾನತೆಯಲ್ಲಿ ದಿನದೂಡುವುದು, ಯಾವುದೇ ಹೊಸತನ್ನು ಪ್ರಯತ್ನಿಸಲು ಯೋಚಿಸಿದರೂ ʻಅರೆ, ವಯಸ್ಸಾಯ್ತು, ಜನ ಏನೆಂದುಕೊಂಡಾರುʼ ಎಂದು ತಳ್ಳಿಹಾಕುವುದು ಬಹುತೇಕರಿಗೆ ಅಭ್ಯಾಸವಾಗಿಬಿಟ್ಟಿರುತ್ತದೆ.

1.. ಎಂಟು ಗಂಟೆಗಳಷ್ಟು ಚಂದ ನಿದ್ದೆ ಮಾಡಿದರೂ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರದಿದ್ದರೂ, ಮಧ್ಯಾಹ್ನವಾಗುವ ಮೊದಲೇ ಸುಸ್ತಾಗಿಬಿಡುವುದು ಅಥವಾ ಕೆಲಸದಲ್ಲಿ ಉತ್ಸಾಹವೇ ನಿಂತು ಹೋಗಿದೆ ಅಂತ ನಿಮಗನಿಸಿದರೆ, ಖಂಡಿತ ನಿಮಗೇನೋ ಹೊಸತನದ ಅಗತ್ಯವಿದೆ ಎಂದರ್ಥ. ನಿಮಗೆ ಬದುಕಿನಲ್ಲಿ ಉತ್ಸಾಹ ತುಂಬುವ ಲವಲವಿಕೆಯಿಂದಿರುವ ಹೊಸ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.

2. ನೀವು ನಿಮ್ಮ ಕನಸನ್ನು ನನಸಾಗಿಸುವ ಕಡೆ ಪ್ರಯತ್ನ ಮಾಡುತ್ತಿಲ್ಲವಾದರೆ, ಪ್ರತಿ ಬಾರಿಯೂ ಅಂದುಕೊಂಡದ್ದನ್ನು ಮಾಡುವ ಯೋಚನೆಯನ್ನು ಮುಂದೂಡುತ್ತಲೇ ಇದ್ದರೆ ನಿಮಗೆ ನೀವು ಸೋತು ಹೋಗುವ ಭಯವಿದೆ ಎಂದೇ ಅರ್ಥ. ಅಂದುಕೊಂಡದ್ದನ್ನು ಮಾಡದೇ ಇದ್ದರೆ ಸೋಲುವ ಭಯವೇ ಇಲ್ಲ ಎಂಬುದು ನಿಜವೇ ಆದರೂ ಅಂದುಕೊಂಡದ್ದನ್ನು ಮಾಡದೇ ಇರುವುದು ನೀವು ನಿಮಗೇ ಮಾಡಿಕೊಳ್ಳುವ ಮೋಸ. ಸರಿಯಾದ ಸಮಯ ಬರಲಿ ಎಂದು ಕಾಯುವುದೂ ಪಲಾಯನವಾದವೇ.

3. ತಾನು ಅಂದುಕೊಂಡದ್ದನ್ನು ಸಾಧಿಸಲಾಗದೇ ಇದ್ದುದಕ್ಕೆ ಇತರರನ್ನು ದೂಷಿಸುವುದು. ಪ್ರತಿ ಸಾಧಕನೂ ತನ್ನ ಸಾಧನೆಯ ಹಾದಿಯಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ನೋಡಿರುತ್ತಾನೆ/ಳೆ. ಹಲವಾರು ಅವಮಾನಗಳನ್ನು ಸಹಿಸಿರುತ್ತಾನೆ/ಳೆ. ಆದರೆ ಇವೆಲ್ಲ ಅವರನ್ನು ವಿಚಲಿತಗೊಳಿಸಿರುವುದಿಲ್ಲ. ಕಷ್ಟದ ದಿನಗಳು ಸುಖದ ಹಾದಿಯನ್ನು ತೋರಿಸಿಯೇ ತೋರಿಸುತ್ತದೆ. ಮಾಡಲೇಬೇಕೆಂಬ ಛಲ ಎಲ್ಲ ಕಷ್ಟಗಳನ್ನು ಮೀರಿ ನಿಲ್ಲುವಂತೆ ಮಾಡುತ್ತದೆ. ಆದರೆ, ತನ್ನ ಕೈಲಾಗದೇ ಇದ್ದುದಕ್ಕೆ ಪರಿಸ್ಥಿತಿಯನ್ನು ದೂರುವುದೂ ಕೂಡಾ ಪಲಾಯನವಾದವೇ.

4. ನಿಮಗೆ ನಿಮ್ಮ ಮೇಲೆಯೇ ಧೈರ್ಯವಿರುವುದಿಲ್ಲ. ಬೇರೆಯವರು ಮಾಡಿದ್ದು ಸುಲಭವಾಗಿ ಕಾಣುತ್ತದೆ. ನಮಗೆ ನಮ್ಮ ಸಾಧನೆಯ ಹಾದಿ ಮಾತ್ರ ಕಷ್ಟವಾಗಿ ಕಾಣುತ್ತದೆ. ನಿಜವಾಗಿ ನೋಡಿದರೆ, ಮಾಡಿಯೇ ತೀರುತ್ತೇನೆ ಎಂಬ ಧೈರ್ಯ ನಿಮಗಿರುವುದಿಲ್ಲ. ನಾನು ಮಾಡಬಲ್ಲೆ ಎಂಬ ಏಕಾಗ್ರ ಧ್ಯಾನವಷ್ಟೇ ಮುಂದೆ ಕೊಂಡೊಯ್ಯಬಲ್ಲದು.

5. ಯೋಚನೆ ಬಹಳ ಮಾಡುತ್ತೀರಿ, ಆದರೆ ಕೆಲಸ ಮಾಡುವುದು ಸ್ವಲ್ಪವೇ. ಮಾಡಬೇಕೆಂದುಕೊಂಡ ಕಾರ್ಯಗಳ ಕಲ್ಪನೆಯಲ್ಲೇ ಸಮಯ ದೂಡುವುದು, ಸರಿಯಾದ ಸಮಯ ಬಂದೇ ಇಲ್ಲವೆಂಬಂತೆ ಸ್ವಲ್ಪವೇ ಮಾಡುವುದು ಕೂಡಾ ನೀವು ಸಾಧಿಸಲಾಗದೇ ಇರುವುದಕ್ಕೆ ಮೂಲ ಕಾರಣ.

6. ಒಂದಲ್ಲ ಒಂದು ದಿನ ಮಾಡುತ್ತೇನೆ ಅಂದುಕೊಳ್ಳುವುದು. ಆದರೆ, ಬಾಲ್‌ನಿಮ್ಮ ಕಾಲ ಬಳಿಯೇ ಇದ್ದರೂ ಸ್ವಪ್ರಯತ್ನದಿಂದ ಶಕ್ತಿಯನ್ನೆಲ್ಲ ಹಾಕಿ ಒದೆಯದೇ ಇರುವುದು!

ಇದನ್ನೂ ಓದಿ: World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

7. ಇತರರನ್ನು ದ್ವೇಷಿಸುವುದು. ಇತರರ ಮನೆ, ಅವರ ಜೀವನ ಶೈಲಿ, ಅವರ ಸಾಧನೆ, ಅವರ ಹಣ, ಸಂಬಂಧಗಳು ಎಲ್ಲವೂ ನಿಮಗೆ ಅಸೂಯೆ ಹುಟ್ಟಿಸುವುದು. ಅವರಿಗೆ ಇದೆಲ್ಲ ಸಾಧ್ಯವಾಗಿದ್ದು ಅವರ ಅದೃಷ್ಟದಿಂದ, ಅತಿಯಾದ ಆಸೆಬುರುಕುತನದಿಂದ ಎಂದು ಸಮಜಾಯಿಶಿ ಕೊಟ್ಟುಕೊಳ್ಳುವುದು. ಅವರಲ್ಲಿರುವ ಯಾವುದೂ ನಿಮ್ಮಲ್ಲಿ ಇಲ್ಲ ಎಂದಾದಾಗ ಯಶಸ್ಸು ನಿಮ್ಮಲ್ಲಿಲ್ಲ ಎಂಬುದೇ ಇಂತಹ ಯೋಚನೆಗೆ ಕಾರಣವಾಗುತ್ತದೆ. ಇತರರ ಯಶಸ್ಸನ್ನೂ ಖುಷಿಯಿಂದಲೇ ಸಂಭ್ರಮಿಸಿ.

8. ಬದುಕಿಗೆ ಇಷ್ಟು ಸಾಕು ಎಂಬ ನಿರಾಶಾವಾದಿತನ. ಸೇಫ್‌ಆಗಿ ಬದುಕಿನ ಆಟ ಆಡಿ ಮುಗಿಸುವುದು ಬೇಕೋ, ಹಠದಿಂದ ವಿಜಯಮಾಲೆ ಬೇಕೇ ಬೇಕು ಎಂದು ಆಡುವುದು ಬೇಕೋ ನಿರ್ಧರಿಸಿಕೊಳ್ಳಿ. ಆಟದಲ್ಲಿ ಸೋಲೂ ಇರಬಹುದು, ಆದರೆ, ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬೇಡಿ.

9. ತನ್ನೊಂದಿಗೇ ಹಿಂದಿನ ಬೆಂಚ್‌ನಲ್ಲಿ ಕೂತು ಓದಿದ ಹುಡುಗ ಕೋಟ್ಯಾಧೀಶನಾದನೆಂದೋ, ಸಾಧಾರಣ ರೂಪಿನ ಹುಡುಗಿಗೆ ಅಸಾಮಾನ್ಯ ಹುಡುಗ ಸಿಕ್ಕನೆಂದೋ ಅಸೂಯೆ ಪಡುವುದು. ನಿಮಗೆ ಸಿಕ್ಕಿದ ಖುಷಿಗಳನ್ನು ಆಸ್ವಾದಿಸುತ್ತಾ ಇತರರ ಖುಷಿಯಲ್ಲೂ ಪಾಲ್ಗೊಳ್ಳುವ ಮನಸ್ಥಿತಿ ಬೆಳೆಸಿಕೊಂಡು ಅದನ್ನು ಸ್ಪೂರ್ತಿಯಾಗಿ ಬದಲಾಯಿಸಿಕೊಳ್ಳಬೇಕು.

10. ಒಳ್ಳೆಯ ಊಟ, ಗುಂಡು ಪಾರ್ಟಿ, ಟಿವಿ… ಇವಿಷ್ಟೇ ಪ್ರತಿದಿನದ ಖುಷಿಯ ಕ್ಷಣಗಳು ಎಂಬಲ್ಲಿಗೆ ನೀವು ಸೀಮಿತರಾದಿರಿ ಎಂದಾದರೆ ನೀವು ಬೆಳವಣಿಗೆಯತ್ತ ಮನಸ್ಸು ಮಾಡುತ್ತಿಲ್ಲ ಎಂದಷ್ಟೇ ಅರ್ಥ. ಯಾವಾಗಲಾದರೊಮ್ಮೆ ಇವೆಲ್ಲ ಖುಷಿಯೇ ನಿಜವಾದರೂ, ಇವಿಷ್ಟನ್ನೇ ನಿಮ್ಮನ್ನು ಆಳಲು ಬಿಟ್ಟರೆ ನಿಮಗೆ ನಿಜವಾಗಿ ಬೇಕಾಗಿರುವುದಾದರೂ ಏನು ಎಂಬ ಪ್ರಶ್ನೆ ಅಂತಿಮವಾಗಿ ಹಾಗೆಯೇ ಉಳಿದುಬಿಡುತ್ತದೆ.

ಇದನ್ನೂ ಓದಿ: Happiness: ಈ ಪುಟ್ಟ ದ್ವೀಪದ ಜನ ಸದಾ ಸಂತೋಷವಾಗಿರ್ತಾರೆ, ಯಾಕೆ ಗೊತ್ತೆ?

Exit mobile version