Site icon Vistara News

Lifestyle Tips: ನಲ್ವತ್ತರ ನಂತರವೂ ಕಳೆಕಳೆಯಾಗಿ ಕಂಗೊಳಿಸಬೇಕಾದರೆ ಈ 8 ಸೂತ್ರಗಳು ನೆನಪಿರಲಿ!

enjoying

ವರ್ಷ ನಲುವತ್ತಾದರೂ (forty age) ಮುಖದ ಹೊಳಪು ಮಾಸಿಲ್ಲ, ಕಳೆಕಳೆಯಾಗಿದೆ ಎಂದು ಕೆಲವರನ್ನು ನೋಡಿ ನಿಮಗೆ ಅನಿಸಬಹುದು. ಅಥವಾ ಕೆಲವರಿಗೆ ನಲುವತ್ತಕ್ಕೆ ಕಾಲಿಡುತ್ತಿದ್ದ ಹಾಗೆಯೇ, ಬಂಗು, ಕಪ್ಪು ಕಲೆ, ಸುಕ್ಕುಗಟ್ಟುವ ಚರ್ಮ ಇತ್ಯಾದಿಗಳ ಸಮಸ್ಯೆ ಇದ್ದಕ್ಕಿದ್ದಂತೆ ಬಾಧಿಸಬಹುದು. ಇವೆಲ್ಲವಕ್ಕೂ ಪರಿಹಾರವೇ ಇಲ್ಲವೇ ಎಂದೂ ನಿಮಗೆ ಅನಿಸಬಹುದು. ಖಂಡಿತಾ (Lifestyle Tips) ಪರಿಹಾರಗಳಿವೆ. ಆದರೆ, ಸಮಸ್ಯೆ ಆರಂಭವಾಗುವ ಮೊದಲೇ ನಮ್ಮ ಜೀವನಶೈಲಿಯಿಂದಲೇ (lifestyle guide) ಈ ಎಲ್ಲ ಸಮಸ್ಯೆಗಳೇ ಬರದಂತೆ ಕಾಪಾಡಿಕೊಳ್ಳಬಹುದು. ನಲ್ವತ್ತರ ನಂತರವೂ ನಿಮ್ಮ ಚರ್ಮ ಒಳಗಿನಿಂದಲೇ ಹೊಳೆಯಬೇಕಾದರೆ ಈ ಕೆಳಗಿನ ಶಿಸ್ತನ್ನು (lifestyle changes) ನಿಮ್ಮ ಜೀವನದಲ್ಲಿ ಕಾಪಾಡಿಕೊಳ್ಳಿ.

1. ನೀರು ಕುಡಿಯಿರಿ (Drink water). ನಮ್ಮ ದೇಹದ ಅರುವರತ್ತರಷ್ಟು ಪ್ರಮಾಣ ನೀರಿನಿಂದಲೇ ಕೂಡಿದೆ. ಹಾಗಾಗಿ ನೀರಿನಲ್ಲಿಯೇ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಮುಖದ ಚರ್ಮ ನುಣುಪಾಗಿ, ಮೃದುವಾಗಿ ಸುಕ್ಕಾಗದಂತೆ ಇರಬೇಕಾದರೆ, ಚರ್ಮಕ್ಕೆ ಸರಿಯಾದ ನೀರಿನ ಪೂರೈಕೆ ಆಗಬೇಕು.

2. ನಾವು ಏನು ತಿನ್ನುತ್ತೇವೋ ಅದು ನಮ್ಮ ಚರ್ಮದ (skin health) ಮೂಲಕ ಪ್ರತಿಫಲಿಸುತ್ತದೆ. ತರಕಾರಿ, ಹಣ್ಣುಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನು, ವಿಟಮಿನ್ನು, ಉತ್ತಮ ಕೊಬ್ಬು, ಕಾರ್ಬೋಹೈಡ್ರೇಟು ಎಲ್ಲವೂ ಸಮತಲನದಲ್ಲಿರಬೇಕಾದ ಅಗತ್ಯವಿದೆ. ಹಾಗಾಗಿ ತಿನ್ನುವ ಆಹಾರದ ಮೇಲೆ ಗಮನವಿರಲಿ.

3. ಮುಖದ ಸ್ವಚ್ಛತೆ ಬಗೆಗೆ (Face health) ಗಮನವಿರಲಿ. ಮುಖವನ್ನು ಕನಿಷ್ಟ ಎರಡು ಬಾರಿ ಚೆನ್ನಾಗಿ ಕ್ಲೆನ್ಸ್‌ ಮಾಡಿಕೊಳ್ಳಿ. ಇದು ಮುಖದಲ್ಲಿರುವ ಕೊಳೆಯನ್ನು ಕಿತ್ತೆಸೆಯುತ್ತದೆ. ಉತ್ತಮ ಗುಣಮಟ್ಟದ ಹಾಗೂ ನಿಮ್ಮ ಚರ್ಮಕ್ಕೆ ಸರಿಹೊಂದುವ ಮಾಯ್‌ಶ್ಚರೈಸರ್‌ ಅನ್ನು ಹಚ್ಚಿಕೊಳ್ಳಿ. ಮುಖದಲ್ಲಿರುವ ನೈಸರ್ಗಿಕ ಎಣ್ಣೆಯಂಶವನ್ನು ಇದು ಹಾಗೆಯೇ ಇರಗೊಡುತ್ತದೆ.

4. ವಾರಕ್ಕೊಮ್ಮೆ ಮುಖವನ್ನು ಎಕ್ಸ್‌ಫಾಲಿಯೇಟ್‌ ಮಾಡಿ. ಅಂದರೆ, ಮುಖವ್ನ್ನು ವಾರದಲ್ಲೊಮ್ಮೆ ಚೆನ್ನಾಗಿ ಸ್ಕ್ರಬ್‌ ಮಾಡಿ. ಮುಖದಲ್ಲಿರುವ ಸತ್ತ ಚರ್ಮ, ರಂಧ್ರಗಳೊಳಗೆ ಹೂತುಹೋಗಿರುವ ಕೊಳೆ, ಬ್ಲ್ಯಾಕ್‌ಹೆಡ್ಸ್‌, ವೈಟ್‌ಹೆಡ್ಸ್‌ ಇತ್ಯಾದಿಗಳನ್ನು ಇದು ತೊಡೆದುಹಾಕಿ, ಚರ್ಮವನ್ನು ಹೊಳಪಾಗಿಸುತ್ತದೆ.

5. ಸುಕ್ಕಾಗಿದ್ದರೆ, ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಹೊಂದುವ ಆಂಟಿ ಏಜಿಂಗ್‌ ಕ್ರೀಂ ಬಳಸಬಹುದು. ಇದು ಸುಕ್ಕುಗಳನ್ನು ಕಡಿಮೆ ಮಾಡಿ, ಚರ್ಮವನ್ನು ಬಿಗುಗೊಳಿಸುತ್ತದೆ. ರೆಟಿನಾಯ್ಡ್‌ ಹಾಗೂ ಹೈಲ್ಯುರಾನಿಕ್‌ ಆಸಿಡ್‌ಗಳೀರುವ ಆಂಟಿ ಏಜಿಂಗ್‌ ಕ್ರೀಂಗಳು ಚರ್ಮದ ಸುಕ್ಕನ್ನು ಕಡಿಮೆ ಮಾಡುವಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ. ಹಗಲಿನ ಹೊತ್ತಿನಲ್ಲಿ ಈ ಎಲ್ಲ ಕ್ರೀಂಗಳನ್ನು ಹಚ್ಚಿಕೊಂಡರೂ, ಸನ್‌ಸ್ಕ್ರೀನ್‌ ಲೋಶನ್‌ ಹಚ್ಚುವುದನ್ನು ಮರೆಯದಿರಿ.

6. ಎಲ್ಲಕ್ಕಿಂತ ಮುಖ್ಯವಾದದ್ದು ನಿದ್ದೆ. ಮಲಗುವ ಒಂದೆರಡು ಗಂಟೆಗಳಿಗೆ ಮೊದಲೇ ಫೋನ್‌ ಮೊದಲಾದ ಗ್ಯಾಜೆಟ್‌ಗಳನ್ನು ದೂರವಿಡಿ. ಅತಿಯಾಗಿ ಉಣ್ಣದೆ, ಮಲಗುವ ಎರಡರಿಂದ ಮೂರು ಗಂಟೆಗಳಿಗೆ ಮೊದಲೇ ಲಘುವಾಗಿ ಉಣ್ಣಿ. ನಿದ್ದೆಯಿಂದ ನೀವು ತಪ್ಪಿಸಿಕೊಂಡು ಏನೇ ಮಾಡಿದರೂ ಅದು ನಿಮ್ಮ ಮುಖದ ಚರ್ಮದ ಮೂಲಕ ಕಾಣುತ್ತದೆ. ನಿಮ್ಮ ಸುಸ್ತು ಆಯಾಸವನ್ನೆಲ್ಲ ಕನ್ನಡಿ ಹಿಡಿದು ಜಗತ್ತಿಗೆ ತೋರಿಸುವುದು ನಿಮ್ಮ ಚರ್ಮ. ಹಾಗಾಗಿ, ಚೆನ್ನಾಗಿ ಅಂದರೆ ೭ರಿಂದ ೯ ಗಂಟೆಗಳ ನಿದ್ದೆ ಖಂಡಿತವಾಗಿ ಮಾಡಿ.

7. ನಿಮ್ಮ ಚರ್ಮದ ಹೊಳಪು, ಕಾಂತಿ ಮುಖದಲ್ಲಿ ಪ್ರತಿಫಲಿಸಬೇಕಾದರೆ, ಅದೆಲ್ಲವಕ್ಕೂ ಮೂಲ ಕಾರಣ ನೆಮ್ಮದಿ, ಶಾಂತಿ, ಬದುಕಿನ ಮೇಲಿನ ಪ್ರೀತಿ. ನಿತ್ಯವೂ ಶಿಸ್ತುಬದ್ಧ ಆಹಾರದ ಜೊತೆಗೆ ನಿಮಗಾಗಿ ಅಂದರೆ ಕೇವಲ ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ (mental wellness) ದಿನಕ್ಕೊಂದು ಗಂಟೆ ಮೀಸಲಿಡಿ. ನಿಮ್ಮ ಆಸಕ್ತಿಗೆ, ನಿಮಗೆ ಖುಷಿ ನೀಡುವ ಸಂಗತಿಗೆ ಈ ಸಮಯ ಮೀಸಲಿರಲಿ.

8. ವ್ಯಾಯಾಮ (exercise) ಬಹಳ ಮುಖ್ಯ. ನಿಮಗಿಷ್ಟವಾದ ಯಾವುದೇ ಬಗೆಯ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಮಾಡಿ. ಯೋಗವೂ (yoga practice) ಆದೀತು, ನಡಿಗೆಯೂ (walking) ಆದೀತು. ಒಂದಿಷ್ಟು ಹೊತ್ತು ಅದಕ್ಕೆ ಮೀಸಲಿಡಿ. ಎಷ್ಟೇ ಧಾವಂತದ ಬ್ಯುಸಿ ಜೀವನವಿರಲಿ, ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಒಂದೆಡೆ ಕೂತು ಧ್ಯಾನ ಮಾಡಿ. ಮನಸ್ಸಿನ ಶಾಂತಿ ನೆಮ್ಮದಿಯೂ ಕೂಡಾ ಸೌಂದರ್ಯವೆಂಬ ಖಜಾನೆಯ ಕೀಲಿಕೈ. ನೆನಪಿರಲಿ!

ಇದನ್ನೂ ಓದಿ: Lifestyle Tips: ನೀವು ನಲುವತ್ತು ವಯಸ್ಸಿಗೆ ಕಾಲಿಟ್ಟಿರುವಿರೇ? ಹಾಗಾದರೆ ಇವಿಷ್ಟು ನೆನಪಿಡಿ!

Exit mobile version