Site icon Vistara News

Lifestyle Tips: ನೀವು ನಲುವತ್ತು ವಯಸ್ಸಿಗೆ ಕಾಲಿಟ್ಟಿರುವಿರೇ? ಹಾಗಾದರೆ ಇವಿಷ್ಟು ನೆನಪಿಡಿ!

age forty

ನಲುವತ್ತು ಅಥವಾ ಚಾಲೀಸ್ ಎಂಬುದು ಪ್ರತಿ ವ್ಯಕ್ತಿಯ ಜೀವನದಲ್ಲೊಂದು ನಿರ್ಣಾಯಕ ಘಟ್ಟ. ಜವಾಬ್ದಾರಿಯುತ ವಯಸ್ಸು. ಆರೋಗ್ಯವೂ ಮೊದಲಿನ ಹಾಗೆ 20ರ ಆಸುಪಾಸಿನಲ್ಲಿದ್ದಂತೆ ಇರುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಒಂದೊಂದಾಗಿ ಅವತರಿಸುವ ವಯಸ್ಸು ಇದು. ಒಟ್ಟಾರೆ, ಆರೋಗ್ಯದ (health conscious) ಬಗ್ಗೆ ಗಂಭೀರವಾಗಿ ಕಾಳಜಿ ವಹಿಸಲು ಇನ್ನಾದರೂ ಮನಸ್ಸು ಮಾಡಬೇಕು ಎಂದು ನಮ್ಮನ್ನು ಎಚ್ಚರಿಸುವ ಘಟ್ಟ ಇದು ಎಂದರೂ ತಪ್ಪಿಲ್ಲ.

ಹಾಗಾಗಿ ಬಹಳಷ್ಟು ಮಂದಿ ನಲವತ್ತರ ಆಸುಪಾಸಿನಲ್ಲಿಯಾದರೂ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಇಷ್ಟರವರೆಗೆ ಇದ್ದ ಹುಡುಗು ಬುದ್ದಿ, ಆಹಾರ ಸೇವನೆಯ ಬಗ್ಗೆ ಇದ್ದ ಅಶಿಸ್ತು, ಸಿಕ್ಕಾಪಟ್ಟೆ ಏನಾದರೊಂದು ತಿನ್ನುವುದು, ಹೊತ್ತುಗೊತ್ತಿಲ್ಲದ ಜೀವನ ಇತ್ಯಾದಿ ಅಭ್ಯಾಸಗಳು ನಿಮಗಿದ್ದರೆ, ಅದಕ್ಕೆಲ್ಲ ಪೂರ್ಣವಿರಾಮ ಹಾಕಿ, ಕೊಂಚ ಶಿಸ್ತುಬದ್ಧ ಜೀವನದೆಡೆಗೆ, ಆರೋಗ್ಯಕರ ಅಭ್ಯಾಸಗಳೆಡೆಗೆ (healthy practices) ಇನ್ನಾದರೂ ಗಮನ ಹರಿಸಬೇಕಾದ ವಯಸ್ಸಿದು. ಮೊದಲೇ ಈ ಶಿಸ್ತು ಇದ್ದವರಿಗೆ ತೊಂದರೆಯೇನಿಲ್ಲ. ಆದರೆ, ಇಲ್ಲದವರು, ಇನ್ನಾದರೂ ಕೆಲವು ಉತ್ತಮ ಆರೋಗ್ಯಕರ ಜೀವನಕ್ರಮಗಳನ್ನು (lifestyle tips) ಅನುಸರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಆಯುಸ್ಸು ವೃದ್ಧಿಯಾಗಬಹುದಂತೆ.

ಹಾಗಾದರೆ ಬನ್ನಿ, ನೀವೂ 40ರ ಆಸುಪಾಸಿಗೆ ತಲುಪಿದ್ದೀರೆಂದಾದಲ್ಲಿ ಈ ಕೆಲವು ಸುಲಭ ಹಾಗೂ ಸರಳವಾದ ಆರೋಗ್ಯಕರ ಅಭ್ಯಾಸಗಳನ್ನು (health tips) ಬೆಳೆಸಿಕೊಳ್ಳುವುದನ್ನು ಮರೆಯಬೇಡಿ.

1. ಸಾಕಷ್ಟು ನೀರು ಕುಡಿಯಿರಿ: ನಿತ್ಯವೂ ಎರಡು ಲೀಟರ್‌ಗಳಷ್ಟಾದರೂ ನೀರು ಕುಡಿಯುವುದನ್ನು (drink water) ಮರೆಯಬೇಡಿ. ಉತ್ತಮ ಆರೋಗ್ಯಕ್ಕೆ ದೇಹಕ್ಕೆ ಸರಿಯಾದ ನೀರು ಪೂರೈಕೆಯಾಗಬೇಕು. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊಡೆದೋಡಿಸುತ್ತದೆ. ಹಾಗಾಗಿ, ನಿತ್ಯವೂ ಎದ್ದ ತಕ್ಷಣ ನೀರು ಕುಡಿವ ಅಭ್ಯಾಸ ಮಾಡಿಕೊಳ್ಳಿ. ನಂತರವೂ ಆಗಾಗ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುತ್ತಿರಿ.

2. ಮಿತಾಹಾರವಿರಲಿ: ದೇಹದಲ್ಲಿ ಪಚನಕ್ರಿಯೆ ಸರಿಯಾಗಿ ಆಗಲು ಮಿತವಾಗಿ ಉಣ್ಣಬೇಡಿ. ಆಹಾ, ಇಂದಿನ ಊಟ ಚೆನ್ನಾಗಿದೆ ಎಂದು ಹೊಟ್ಟೆ ಬಿರಿದು ಹೋಗುವಷ್ಟು ಉಣ್ಣಬಾರದು. ಅಂಥ ಅಭ್ಯಾಸವಿದ್ದರೆ ಖಂಡಿತಾ ಬಿಡಿ. ನಿಮ್ಮ ತಿನ್ನುವ ಹೊಟ್ಟೆಯ ಸಾಮರ್ಥ್ಯದ ನಾಲ್ಕನೇ ಮೂರು ಪಾಲು ಉಣ್ಣಿ. ಒಂದು ಪಾಲು ಜಾಗ ಬಿಡಿ. ಇದರಿಂದ ಜೀರ್ಣ ಚೆನ್ನಾಗಿ ಆಗುತ್ತದೆ. ತೂಕವೂ ಹಿಡಿತದಲ್ಲಿರುತ್ತದೆ.

3. ನಿಧಾನವಾಗಿ ಉಣ್ಣಿ: ಗಬಗಬನೆ ಉಂಡು ಮುಗಿಸಿ ಓಡುವ ಅಭ್ಯಾಸವಿದ್ದರೆ ದಯವಿಟ್ಟು ನಿಲ್ಲಿಸಿ. ಊಟಕ್ಕೆ ಸರಿಯಾದ ಸಮಯ ಕೊಡಿ. ನಿಧಾನವಾಗಿ ಒಂದೊಂದು ತುತ್ತನ್ನೂ ಅನುಭವಿಸಿಕೊಂಡು ಖುಷಿಯಿಂದ ಪ್ರೀತಿಯಿಂದ ಸಾರ್ಥಕತೆಯಿಂದ ಉಣ್ಣಿ. ಇದು ನೀವು ಅತಿಯಾಗಿ ಉಣ್ಣುವುದನ್ನು ತಡೆಯುತ್ತದೆ. ಉಂಡ ಸಂತೃಪ್ತಿ ಭಾವವೂ ನಿಮ್ಮದಾಗುತ್ತದೆ. ೩೨ ಹಲ್ಲುಗಳಲ್ಲಿ ೩೨ ಸಾರಿ ಜಗಿದು ಉಣ್ಣಬೇಕು ಎಂದು ಹೇಳುವುದು ಇದಕ್ಕೇ!

4. ಸಮತೋಲಿತ ಆಹಾರ ತಿನ್ನಿ: ಉಣ್ಣುವ ಊಟದ ಬಗೆಗೆ ನಿಮಗೆ ತಿಳಿದಿರಲಿ. ಆರೋಗ್ಯಕರ ಆಹಾರ (balanced diet) ಸೇವಿಸಿ. ನಿಮ್ಮ ಆಹಾರದಲ್ಲಿ, ಎಲ್ಲ ಪೋಷಕಾಂಶಗಳೂ ಇರಲಿ. ಕಾರ್ಬೋಹೈಡ್ರೇಟು, ಪ್ರೊಟೀನ್‌, ಖನಿಜಾಂಶಗಳು, ಕೊಬ್ಬು ಇತ್ಯಾದಿಗಳು ಬೇಕು. ಹಣ್ಣು, ತರಕಾರಿಗಳು, ಬೇಳೆ ಕಾಳುಗಳು, ಧಾನ್ಯಗಳು ಹೀಗೆ ಎಲ್ಲವೂ ಆಹಾರದಲ್ಲಿರಲಿ.

ಇದನ್ನೂ ಓದಿ: Relationship Tips: ಸಂಗಾತಿಯ ಜೊತೆಗೆ ಈ ಎಂಟು ತಪ್ಪುಗಳನ್ನು ಮಾಡಬೇಡಿ!

5. ವ್ಯಾಯಾಮ ಮಾಡಿ: ನಿತ್ಯವೂ ವ್ಯಾಯಾಮ ಮಾಡಿ. ನಡಿಗೆ, ಜಾಗಿಂಗ್‌, ಮನೆಯಲ್ಲೇ ಯೋಗಾಭ್ಯಾಸ ಇತ್ಯಾದಿ ಯಾವುದೂ ಆದೀತು. ಜಿಮ್‌ಗೇ ಹೋಗಬೇಖು ಎಂದೇನಿಲ್ಲ. ಆದರೆ ಶಿಸ್ತುಬದ್ಧವಾದ, ನಿಮ್ಮ ದೇಹಕ್ಕೆ ಸಾಮರ್ಥ್ಯವಿರುವಷ್ಟು ಮಾತ್ರ ಹಿತಮಿತ ವ್ಯಾಯಾಮಕ್ಕೆ ನಿತ್ಯವೂ ಅವಕಾಶ ಇರಲಿ. ವಾರಕ್ಕೆ ಕನಿಷ್ಟ ಎರಡುವರೆ ಗಂಟೆಗಳ ವ್ಯಾವಾಮ ನಿಮ್ಮ ಜೀವನದಲ್ಲಿರಲಿ.

6. ಸ್ಕ್ರೀನ್‌ಟೈಮ್‌ ಕಡಿಮೆ ಮಾಡಿ: 40ರ ವಯಸ್ಸು ಕಣ್ಣಿನ ಆರೋಗ್ಯದ ಮುಖ್ಯ ಘಟ್ಟ. ಹಾಗಾಗಿ ನಿಮ್ಮ ಕಣ್ಣಿನ ಆರೋಗ್ಯದ ಕಾಳಜಿ ವಹಿಸಿ. ಸ್ಕ್ರೀನ್‌ಟೈಮ್‌ (screen time) ಕಡಿಮೆ ಮಾಡಿ. ಮಲಗುವ ಒಂದೆರಡು ಗಂಟೆಗೂ ಮೊದಲೇ, ಮೊಬೈಲ್‌ ವೀಕ್ಷಣೆ, ಟಿವಿ, ಲ್ಯಾಪ್‌ಟಾಪ್‌ ಇತ್ಯಾದಿಗಳ ಬಳಕೆ ನಿಲ್ಲಿಸಿ.

7. ನಕ್ಕುಬಿಡಿ: ದಿನಕ್ಕೆ ಐದು ನಿಮಿಷವಾದರೂ ಹೊಟ್ಟೆ ತುಂಬ ನಕ್ಕುಇಡಿ! ಹೌದು. ನಗು ಆರೋಗ್ಯದ ಕೀಲಿ ಕೈ. ಒಂದಿಷ್ಟು ಹೊತ್ತು ಎಲ್ಲ ಒತ್ತಡ, ಕೆಲಸಗಳನ್ನು ಬದಿಗಿಟ್ಟು, ಪ್ರೀತಿಪಾತ್ರರ ಗೆಳೆಯರ ಜೊತೆಗೆ ಹರಟಿ, ನಿರಾಯಾಸವಾಗಿ ಹೊಟ್ಟೆ ಹಗುರಾಗುವಂತೆ ನಗಲು ಸಮಯ ಮೀಸಲಿಡಿ. ಯಾಕೆಂದರೆ ಇರುವುದೊಂದೇ ಜೀವನ! ನಿಮ್ಮ ಆಯುಸ್ಸು ನಿಮಗೂ, ನಿಮ್ಮನ್ನು ಪ್ರೀತಿಸುವವರಿಗೂ ಅಮೂಲ್ಯ!

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

Exit mobile version