ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಹಾಸಿಗೆ ತೀರಾ ಚಿಕ್ಕದಾದರೆ ಹೊಸದು ಖರೀದಿಸಬೇಕು. ಆದರೆ ಯಾವ ರೀತಿಯ ಹಾಸಿಗೆ ಬೇಕು? ಖರೀದಿಗೆಂದು ಅಂಗಡಿಗೆ ಹೋದರೆ ತಲೆ ಕದಡಿಹೋಗುವಷ್ಟು ಆಯ್ಕೆಗಳಿರುತ್ತವೆ. ಆಲ್‌ಲೈನ್ ಮಳಿಗೆಗಳನ್ನು ತೆರೆದು ಕೂತರೆ ಗೊಂದಲ ಇನ್ನಷ್ಟು ಹೆಚ್ಚುತ್ತದೆ. ಪ್ರತಿಯೊಬ್ಬರ ಆದ್ಯತೆಗಳೂ ಭಿನ್ನ. ಕೆಲವರಿಗೆ ಬೆಳಗ್ಗೆ ಏಳುತ್ತಿದ್ದಂತೆ ಕುತ್ತಿಗೆ ಹಿಡಿದಂತೆ ಭಾಸವಾಗಿ, ಸರಿಯಾದ ದಿಂಬು ಅಗತ್ಯವಿರಬಹುದು. ಇನ್ನು ಕೆಲವರಿಗೆ ಬೆನ್ನೆಲ್ಲಾ ನೋವಾದಂತಿರಬಹುದು. ಅಂತೂ ಮೈ-ಕೈ ನೋವೆಲ್ಲ ಕಾಡದೆ, ರಾತ್ರಿ ಕಣ್ತುಂಬ ನಿದ್ದೆ ತರುವಂಥ ಹಾಸಿಗೆ ಬೇಕು. ಸ್ಪ್ರಿಂಗ್ ಹಾಸಿಗೆ, ಫೋಮ್ ಹಾಸಿಗೆ, ಹಳೆಯ ಕಾಲದ ಹತ್ತಿ ಹಾಸಿಗೆ… ಯಾವುದು (Mattress Buying Guide) ಸೂಕ್ತ?
ಹಾಸಿಗೆಗಳ ಬಗ್ಗೆ ಗೊತ್ತೇ?
ಮೊದಲೆಲ್ಲ ಹಾಸಿಗೆ ಎಂದರೆ ಹತ್ತಿಯದ್ದು ಮಾತ್ರ. ಅದಿಲ್ಲದಿದ್ದರೆ ಚಾಪೆ! ಆದರೆ ಈಗ ಹಾಗಲ್ಲ. ಸ್ಪ್ರಿಂಗ್, ಫೋಮ್, ಲೇಟೆಕ್ಸ್, ಹೈಬ್ರಿಡ್ ರೀತಿಯ ಹಾಸಿಗೆಗಳು ಪ್ರಧಾನವಾಗಿ ದೊರೆಯುತ್ತವೆ. ಅವುಗಳ ಗುಣಾವಗುಣಗಳನ್ನು ಅರಿತರೆ, ನಮ್ಮ ಆದ್ಯತೆಗೆ ಯಾವುದು ಸೂಕ್ತ ಎಂಬುದರನ್ನು ನಿರ್ಧರಿಸುವುದಕ್ಕೆ ಸುಲಭ. ಬೆಳಗ್ಗೆ ಏಳುತ್ತಿದ್ದಂತೆ ಬಿಗಿದ ಬೆನ್ನು, ಹಿಡಿದ ಕುತ್ತಿಗೆಯೊಂದಿಗೆ ದಿನ ಕಳೆಯುವ ಅವಸ್ಥೆ ಬರುವುದಿಲ್ಲ ಆಗ.
ಹತ್ತಿಯ ಹಾಸಿಗೆ
ಪರಂಪರಾಗತವಾದ ಹತ್ತಿಯ ಹಾಸಿಗೆ ಈಗಲೂ ಜನಪ್ರಿಯವಾದ ಆಯ್ಕೆ. ಸುಲಭಕ್ಕೆ, ಕಡಿಮೆ ಖರ್ಚಿನಲ್ಲಿ ಖರೀದಿಸಲೂಬಹುದು. ಜನ ಸಿಕ್ಕರೆ ಬೇಕಾದಂತೆ ಮಾಡಿಸಿಕೊಳ್ಳಲೂ ಬಹುದು. ಆದರೆ ಆರೆಂಟು ವರ್ಷಗಳಲ್ಲಿ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ಅದಿಲ್ಲದಿದ್ದರೆ ಹಾಸಿಗೆಯೆಲ್ಲ ಗಂಟಾಗಿ, ಮೈ-ಕೈಯೆಲ್ಲ ನೋವಾಗಿ, ನಿದ್ದೆ ದೂರವಾಗುತ್ತದೆ.
ಸ್ಪ್ರಿಂಗ್ ಹಾಸಿಗೆ
ಇದೂ ಸಹ ಹಳೆಯ ಕಾಲದ ಹಾಸಿಗೆಯೇ. ಲೋಹದ ಸ್ಪ್ರಿಂಗ್‌ನಂಥ ಸುರುಳಿಗಳನ್ನು ಒಳಗಿರಿಸಿ, ಅದರ ಮೇಲೆ ಹತ್ತಿ, ಫೋಮ್ ಮುಂತಾದ ಹಲವು ವಸ್ತುಗಳ ಮಿಶ್ರಣವನ್ನು ತುಂಬಿಸಿ, ಹಾಸಿಗೆಯನ್ನಾಗಿ ಭರ್ತಿ ಮಾಡಲಾಗುತ್ತದೆ. ಇದರಲ್ಲೂ ಒಪೆನ್ ಕಾಯಿಲ್ ಮತ್ತು ಪಾಕೆಟ್ ಸ್ಪ್ರಿಂಗ್ ಎಂಬ ಎರಡು ಬಗೆಗಳಿವೆ. ಇವುಗಳ ಪೈಕಿ ಪಾಕೆಟ್ ಸ್ಪ್ರಿಂಗ್ ಮಾದರಿಯವು ಹೆಚ್ಚು ಆರಾಮ ನೀಡುವಂಥವು. ಇವುಗಳಲ್ಲಿ ಒಳಗಿನ ಕಾಯಿಲ್‌ಗಳ ಸಂಖ್ಯೆ ಹೆಚ್ಚಿದ್ದಷ್ಟೂ ದೇಹಕ್ಕೆ ಹೆಚ್ಚಿನ ಆಧಾರವನ್ನು ಹಾಸಿಗೆ ನೀಡುತ್ತದೆ. ಮಲಗಿದವರು ಮೇಲೆ ಪುಟಿಯುವಂತೆ ಮಾಡುವ ಈ ಮೋಜಿನ ಹಾಸಿಗೆಗಳು, ಹಳೆಯದಾದಂತೆ ಶಬ್ದ ಮಾಡುತ್ತವೆ. ಆಗ ಬದಲಾಯಿಸುವುದು ಅಗತ್ಯವಾಗಬಹುದು.
ಮೆಮೊರಿ ಫೋಮ್
ಹಾಸಿಗೆಯ ಮೇಲೆ ಮೈ ಚೆಲ್ಲುತ್ತಿದ್ದಂತೆ ಒಳಗೆ ಇಳಿಯುವಂಥ ಅನುಭವ ಬೇಕೆ? ಇಂಥ ಹಾಸಿಗೆಗಳಲ್ಲಿ ಹಾಗಾಗುತ್ತದೆ. ಹಲವು ಪದರಗಳಲ್ಲಿ ಫೋಮ್‌ಗಳನ್ನು ಹೊಂದಿರುವ ಇವು, ಅಡಿಗೆ ಹೋಗುತ್ತಿದ್ದಂತೆ ಹೆಚ್ಚು ದೃಢವಾದ ಫೋಮ್‌ಗಳನ್ನು ಹೊಂದಿರುತ್ತವೆ. ಆದರೆ ಮೇಲ್ಮೈ ಮಾತ್ರ ಮೃದುವಾಗಿ, ದೇಹಕ್ಕೆ ಆಕಾರಕ್ಕೆ ತಕ್ಕಂತೆ ಒಳಗೆ ಹೋಗುತ್ತವೆ. ಬೆನ್ನು, ಭುಜಗಳಲ್ಲಿ ನೋವಿದ್ದವರು ಇಂಥವುಗಳಿಂದ ಹೆಚ್ಚಿನ ಆರಾಮ ಪಡೆಯಬಹುದು. ಅದರಲ್ಲೂ, ಹೆಚ್ಚು ಮಗ್ಗುಲಾಗಿ ಮಲಗುವವರಿಗೆ ಹೇಳಿ ಮಾಡಿಸಿದ ಹಾಸಿಗೆಯಿದು.
ಲೇಟೆಕ್ಸ್ ಹಾಸಿಗೆ
ನೈಸರ್ಗಿಕವಾದ ರಬ್ಬರ್‌ನಂಥ ವಸ್ತುವಿನಿಂದ ಇದನ್ನು ತಯಾರಿಸಲಾಗುತ್ತದೆ. ಹಾಗಾಗಿ ಪರಿಸರ ಸ್ನೇಹಿ ಆಯ್ಕೆಯೂ ಹೌದು. ಮೆಮರಿ ಫೋಮ್‌ನಂತೆ ಇದು ಕೈಯಿಟ್ಟರೆ ಕೆಳಗೆ ಇಳಿಯುವಂಥ ಮೇಲ್ಮೈ ಹೊಂದಿರುವುದಿಲ್ಲ. ಕೀಲುಗಳಲ್ಲಿ ನೋವಿರುವವರಿಗೆ ಇದು ಹೆಚ್ಚು ಆರಾಮ ನೀಡಬಹುದು. ಇವುಗಳಲ್ಲೂ ನಾನಾ ಬಗೆಗಳಿದ್ದು, ಕೆಲವು ಹೆಚ್ಚು ಸಾಂದ್ರವಾಗಿರುತ್ತವೆ. ಹಾಸಿಗೆಯ ಧೂಳಿಗೆ ಅಲರ್ಜಿಯಾಗಿ ಒದ್ದಾಡುವವರಿಗೆ ಇದು ಹೆಚ್ಚಿನ ಸಮಾಧಾನ ನೀಡಬಹುದು.
ಇದನ್ನೂ ಓದಿ: Tulsi Tea Benefits: ನಿತ್ಯವೂ ತುಳಸಿ ಚಹಾ ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?
ಹೈಬ್ರಿಡ್
ಇದರಲ್ಲಿ ಸ್ಪ್ರಿಂಗ್ ಮತ್ತು ಫೋಮ್ ಪದರಗಳನ್ನು ಮಿಶ್ರ ಮಾಡಲಾಗುತ್ತದೆ. ಹಾಗಾಗಿ ಹೆಚ್ಚಿನ ಆಧಾರ ಮತ್ತು ಆರಾಮ- ಎರಡೂ ದೊರೆಯುತ್ತದೆ. ಪುಟಿದೇಳುವ ಮತ್ತು ಒಳಗಿಳಿಯುವ- ಎರಡೂ ಅನುಭವವನ್ನು ನೀಡುವ ಹಿನ್ನೆಲೆಯಲ್ಲಿ ಕಿಸೆಯನ್ನೂ ಹದವಾಗಿಯೇ ಕತ್ತರಿಸುತ್ತವೆ ಇವು. ಯಾವುದೇ ರೀತಿಯ ನೋವಿಗೆ, ಆದ್ಯತೆಗಳಿಗೆ ಹೊಂದುವಂಥ ಹಾಸಿಗೆಗಳಿವು. ಮಗ್ಗುಲಾಗಿ, ಹೊಟ್ಟೆಯ ಮೇಲೆ, ಬೆನ್ನಿನ ಮೇಲೆ- ಹೇಗೆ ಮಲಗುವವರಿಗೂ ಇದು ಹೊಂದಿಕೆಯಾದೀತು.