Site icon Vistara News

ಬೊಕ್ಕ ತಲೆ ಮೂಲಕಾರಣ ಪತ್ತೆ: ಮನಸಿನಲ್ಲಿ ಚಿಗುರಿದ ತಲೆಕೂದಲು!

bald head

ಜಗತ್ತಿನ ಪುರುಷರು ಹಾಗೂ ಮಹಿಳೆಯರ ಪ್ರಮುಖ ಸೌಂದರ್ಯ ಸಮಸ್ಯೆಗಳಲ್ಲಿ ಮಿಲಿಯಗಟ್ಟಲೆ ಜನರನ್ನು ಕಾಡುವ ಪ್ರಮುಖ ಸಮಸ್ಯೆ ಎಂದರೆ ಬೊಕ್ಕ ತಲೆ. ಮಹಿಳೆಯರಿಗಿಂತಲೂ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಮಸ್ಯೆಗೆ ಈವರೆಗೆ ಲಭ್ಯವಿದ್ದ ಏಕೈಕ ಪರಿಹಾರವೆಂದರೆ ಹೇರ್‌ ಇಂಪ್ಲಾಂಟ್‌. ಬೊಕ್ಕ ತಲೆ ಸಮಸ್ಯೆಯ ಮೂಲಕಾರಣವನ್ನು ನಿಖರವಾಗಿ ಈವರೆಗೆ ಹೇಳಲು ಸಾಧ್ಯವಾಗದಿದ್ದರೂ, ಇದೀಗ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಈ ಸಮಸ್ಯೆಯ ಮೂಲಕಾರಣವನ್ನು ಇದೀಗ ಪತ್ತೆ ಹಚ್ಚಿದ್ದಾರೆ. ಈ ಹೊಸ ಸಂಶೋಧನೆ ವೈದ್ಯಜಗತ್ತಿನಲ್ಲಿ ಹೊಸತೊಂದು ಆಶಾಕಿರಣ ಮೂಡಿಸಿದೆ.

ಈಗ ವಿಜ್ಞಾನಿಗಳು ಬೊಕ್ಕ ತಲೆಗೆ ನಿಜವಾದ ಕಾರಣವನ್ನು ಪತ್ತೆ ಹಚ್ಚಿದ್ದಾರಂತೆ. ಕೂದಲು ಉದುರಿ ಬೊಕ್ಕ ತಲೆಯಾಗುವುದಕ್ಕೆ ಏಕಮಾತ್ರ ಕಾರಣ ಒಂದು ರಾಸಾಯನಿಕ ಎಂದು ಅವರು ಹೇಳಿದ್ದಾರೆ. ಕೂದಲ ಕಾಂಡಕೋಶವೂ ಒಳಗೊಂಡಂತೆ ಪ್ರತಿಯೊಂದು ಎಳೆಯೂ ಸಾಯುವುದಕ್ಕೆ ಹಾಗೂ ಮರುಹುಟ್ಟು ಪಡೆಯುವುದಕ್ಕೆ ಕಾರಣವಾಗುವುದು ಟಿಜಿಎಫ್-ಬೀಟಾ ಎಂಬ ಪ್ರೊಟೀನ್‌. ಇದು ಈ ಇಡೀ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ ಎಂಬ ಸತ್ಯವನ್ನೀಗ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ನಮ್ಮ ದೇಹದ ಪ್ರತಿಯೊಂದು ಭಾಗವೂ ಗಾಯಗಳಾದರೆ ತಾನೇ ತಾನಾಗಿ ಮೊದಲಿನ ಸ್ಥಿತಿಗೆ ಬರುವ ಗುಣವನ್ನು ಹೊಂದಿದ್ದು, ಇದೂ ಕೂಡಾ ಅಂಥದ್ದೇ ಪ್ರಕ್ರಿಯೆಯ ಭಾಗವಾಗಿದೆ. ಈ ಅನ್ವೇಷಣೆಯ ಆಧಾರದಲ್ಲಿ ಬೊಕ್ಕ ತಲೆಯ ಮೇಲೆ ಹೊಸ ಕೂದಲು ಚಿಗುರಿಸುವ ಆಶಾವಾದವನ್ನು ಇನ್ನು ಹೊಂದಬಹುದು. ಇದು ಮುಂದೆ ಕೇವಲ ಬೊಕ್ಕತಲೆಯ ಸಮಸ್ಯೆ ಮಾತ್ರವಲ್ಲ, ನಮ್ಮ ದೇಹ ಯಾವುದೇ ಗಾಯದಿಂದ ಗುಣಮುಖವಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಹೊಸ ವೈದ್ಯಕೀಯ ಸಂಶೋಧನೆಯ ಭಾಗವೂ ಆಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೂದಲ ಎಳೆಯ ಮರುಹುಟ್ಟಿಗೆ ಪ್ರಚೋದಿಸುವ ಔಷಧಿಯ ಅನ್ವೇಷಣೆ ಇನ್ನು ನಡೆಯಬೇಕಿದ್ದು, ಈಗಾಗಲೇ ಮೂಲ ಕಾರಣ ಕಂಡು ಹುಡುಕಿದ್ದರಿಂದ ಈ ಪ್ರಕ್ರಿಯೆಯ ಹಾದಿ ಸುಗಮವಾಗಿದೆ ಎಂದು ಸಂಶೋದಕರು ಅಭಿಪ್ರಾಯ ಪಟ್ಟಿದಾರೆ.

ಅತೀ ಹೆಚ್ಚು ಪುರುಷರನ್ನು ಕಾಡುವ ಈ ಬೊಕ್ಕತಲೆ ಎಂಬ ಸಮಸ್ಯೆ ಮೇಲ್ನೋಟಕ್ಕೆ ಗಂಭೀರವಾಗಿ ಕಾಣದಿದ್ದರೂ ಮಾನಸಿಕವಾಗಿ ಅವರನ್ನು ಅಧೀರರನ್ನಾಗಿಸುವ ಸಮಸ್ಯೆಯೇ ಆಗಿದೆ. ಕಡಿಮೆ ಗುಣಮಟ್ಟದ ಶಾಂಪೂ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ರಾಸಾಯನಿಕಯುಕ್ತ ಹೇರ್‌ ಸ್ಟೈಲಿಂಗ್‌ ಕ್ರೀಮ್‌ ಮತ್ತಿತರ ವಸ್ತುಗಳ ಬಳಕೆಯಿಂದ ಈ ಸಮಸ್ಯೆ ಉಲ್ಬಣಿಸುತ್ತದೆ. ಪ್ರತಿಯೊಂದು ರಾಸಾಯನಿಕಯುಕ್ತ ಸ್ಟೈಲಿಂಗ್‌ ಕ್ರೀಮ್‌ಗಳಲ್ಲೂ ಹದಿನೈದರಿಂದ ಇಪ್ಪತ್ತು ಬಗೆಯ ರಾಸಾಯನಿಕಗಳಿದ್ದು ಇದು ಕೇವಲ ಕೂದಲಿಗಷ್ಟೇ ಅಲ್ಲ, ನೆತ್ತಿಯ ಚರ್ಮಕ್ಕೂ ಹಾನಿ ಮಾಡುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಉಲ್ಬಣಿಸಿ, ಕೂದಲುದುರುವಿಕೆ, ತುರಿಕೆ, ಕಜ್ಜಿಗಳಂತಹ ಸಮಸ್ಯೆಗಳೂ ಹೆಚ್ಚಾಗುತ್ತದೆ. ಅಂತಿಮವಾಗಿ ಬೊಕ್ಕತಲೆಯಂತಹ ತೊಂದರೆಯನ್ನೂ ತಂದೊಡ್ಡುತ್ತದೆ.

ಇದನ್ನೂ ಓದಿ: Monsoon diet | ಮಳೆಗಾಲದಲ್ಲಿ ಈ ತರಕಾರಿಗಳನ್ನು ತ್ಯಜಿಸಿದರೆ ಆರೋಗ್ಯ

ಐಸೋಪ್ರೊಪೈಲ್‌ ಆಲ್ಕೋಹಾಲ್‌, ಪ್ರೊಪೈಲಿನ್‌ ಗ್ಲೈಕಾಲ್‌ ಮತ್ತಿತರ ರಾಸಾಯನಿಕಗಳಿರುವ ಸ್ಟೈಲಿಂಗ್‌ ಕ್ರೀಂಗಳು ತಲೆಗೂದಲಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತವೆ. ಆಗಾಗ ಶಾಂಪೂ ಹಾಗೂ ಕ್ರೀಂ, ಜೆಲ್‌ಗಳನ್ನು ಬದಲಾಯಿಸುವ ಮೂಲಕ ರಾಸಾಯನಿಕಗಳ ಪ್ರಯೋಗ ತಲೆಯ ಮೇಲೆ ಹೆಚ್ಚುವುದರಿಂದ ತೊಂದರೆಯನ್ನು ಆಹ್ವಾನಿಸಿಕೊಳ್ಳುತ್ತೇವೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಕೂದಲುದುರುವಿಕೆ ಸಮಸ್ಯೆ ಹೆಚ್ಚಾಗಿದ್ದು, ಇದು ಕೋವಿಡ್‌ನ ಅಡ್ಡ ಪರಿಣಾಮವಾಗಿದೆ ಎನ್ನಲಾಗಿದೆ.

ಕೂದಲುದುರುವುದು ಆರಂಭವಾಗುವ ಸಂದರ್ಭ ಸಿಕ್ಕ ಸಿಕ್ಕ ರಾಸಾಯನಿಕಯುಕ್ತ ಶಾಂಪೂಗಳು, ಕ್ರೀಂ, ಸೀರಂ, ಜೆಲ್‌ಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ವೈದ್ಯರನ್ನು ಸಂಪರ್ಕಿಸಿ, ಚರ್ಚಿಸಿ ಅವರು ತಿಳಿಸಿದ ವಸ್ತುಗಳನ್ನೇ ಬಳಕೆ ಮಾಡಬೇಕು. ಹಿಂದಿನ ಕಾಲದಿಂದ ಅನುಸರಿಸುತ್ತಲೇ ಬಂದಿರುವ ಎಣ್ಣೆ ಮಸಾಜು ಮತ್ತಿತರ ಪ್ರಕ್ರಿಯೆಗಳನ್ನೂ ಮುಂದುವರಿಸಬಹುದು. ಹರಳೆಣ್ಣೆ, ಈರುಳ್ಳಿ ಎಣ್ಣೆಗಳ ನಿಯಮಿತ ಉಪಯೋಗದಿಂದಲೂ, ಹಾಗೂ ಕೂದಲ ಬೆಳವಣಿಗೆಗೆ ಪೂರಕವಾದ ಜೀವಸತ್ವಗಳ ಸೇವನೆಯಿಂದಲೂ ಈ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಕೂದಲು ಸಂಪೂರ್ಣ ಉದುರಿ ಬೊಕ್ಕತಲೆಯಾದರೆ, ಅಂತಿಮವಾಗಿ ಹೇರ್‌ ಇಂಪ್ಲ್ಯಾಂಟ್‌ ಅಥವಾ ವಿಗ್‌ ಹಾಕಿಕೊಳ್ಳುವ ಮೂಲಕ ಹಳೆಯ ಲುಕ್‌ ಪಡೆಯಬಹುದಾಗಿತ್ತು. ಈಗ ಈ ಹೊಸ ಸಂಶೋಧನೆ ಈ ತೊಂದರೆ ಅನುಭವಿಸುತ್ತಿರುವ ಮಿಲಿಯಗಟ್ಟಲೆ ಜನರಿಗೆ ಆಶಾಕಿರಣವಾಗಿದೆ.

ಇದನ್ನೂ ಓದಿ: Chromotherapy | ಬಣ್ಣದ ಔಷಧಿಯಲ್ಲ, ಬಣ್ಣವೇ ಔಷಧಿ!

Exit mobile version