Site icon Vistara News

Memory Tips: ಮಿದುಳನ್ನು ಚುರುಕಾಗಿಸಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಗೊತ್ತೇ?

golden memory

ನಮ್ಮ ಆರೋಗ್ಯದಲ್ಲಿ ಮಿದುಳಿನ ಆರೋಗ್ಯ (brain health) ಬಹಳ ಮಹತ್ವದ್ದು. ಮಿದುಳಿಗೂ ಆರೋಗ್ಯವಾಗಿರಲು, ಚುರುಕಾಗಿ ಇಡಲು ನಾವು ಆಗಾಗ ಮಿದುಳಿಗೆ ಸಾಮಗ್ರಿ ಒದಗಿಸುತ್ತಲೇ ಇರಬೇಕು. ಅದನ್ನು ಖುಷಿಯಾಗಿಡಲು, ನೆಮ್ಮದಿಯಾಗಿಡಲು ನಾವು ಪ್ರಯತ್ನ ಪಡುತ್ತಲೇ ಇರಬೇಕು. ವಯಸ್ಸಾಯ್ತು ಯಾಕಿನ್ನು ಎಂದು ಮಿದುಳಿನ ಬಗ್ಗೆ ಗಮನ ಕೊಡದಿದ್ದರೆ ಅದೂ ಕೂಡಾ ಸೊರಗುತ್ತದೆ. ಯಾಕೆಂದರೆ, ಮಿದುಳು ಚುರುಕಾಗಿದ್ದರೆ ನಾವೂ ಚುರುಕಾಗಿರುತ್ತೇವೆ. ವಯಸ್ಸಾದರೂ, ವಯಸ್ಸಿನ ಹಂಗಿಲ್ಲದೆ ಸದಾ ಕಿರಿಯರ ನಡುವೆ ಕಿರಿಯರ ಹಾಗೆ, ಹಿರಿಯರ ಜೊತೆಗೆ ಹಿರಿಯರ ಹಾಗೆ ಉಲ್ಲಾಸದಿಂದ ಉತ್ಸಾಹದಿಂದ ಇರಬಹುದು. ಹಾಗಾದರೆ, ಮಿದುಳನ್ನು ಚುರುಕಾಗಿಡಲು (memory tips, memory guide) ಏನು ಮಾಡಬೇಕು ಬನ್ನಿ ನೋಡೋಣ.

1. ಮಿದುಳಿಗೆ ಕೆಲಸ ಕೊಡುವ ವಿಚಾರಗಳಲ್ಲಿ ತೊಡಗಿಸಿಕೊಳ್ಳಿ. ಅದು ಆಟ ಇರಬಹುದು, ಕೆಲಸ ಇರಬಹುದು. ಏನೇ ಆಗಿರಬಹುದು. ಉದಾಹರಣೆಗೆ, ಅಯ್ಯೋ ಇಷ್ಟೆಲ್ಲ ಯೋಚಿಸಿ ಕಲಿತು ಈ ಕೆಲಸ ಮಾಡಲು ಮನಸ್ಸಿಲ್ಲ ಎಂದು ಉದಾಸೀನ ಮಾಡಬೇಡಿ. ಸುಮ್ಮನೆ ಕುಳಿತಿರುವಾಗ, ಕ್ರಾಸ್‌ವರ್ಡ್‌ ಪಝಲ್‌ ಇರಬಹುದು, ಸುಡೊಕು ಇರಬಹುದು, ಮಕ್ಕಳ ಜೊತೆಗೆ ಪಝಲ್‌ ಬಿಡಿಸುವುದಿರಬಹುದು, ಏನಾದರೊಂದು ಗೇಮ್‌ ಇರಬಹುದು ಅಥವಾ ಯೋಚಿಸಿ ಮಾಡುವ ಕೆಲಸವಿರಬಹುದು, ಸಮಸ್ಯೆಯನ್ನು ನಾವೇ ಬಿಡಿಸಿಕೊಳ್ಳಲು ಪ್ರಯತ್ನಿಸುವುದಿರಬಹುದು. ಹೀಗೆ ವಯಸ್ಸಾಯಿತು ನನಗೇಕೆ ಇವು ಎಂದು ಕೂರದೆ, ನಮ್ಮ ಪ್ರಯತ್ನವನ್ನು ನಾವು ಮಾಡುವುದರಿಂದ, ಮಿದುಳಿಗೆ ಕೆಲಸ ಕೊಡುವುದರಿಂದ ಮಿದುಳಿನ ಸಾಮರ್ಥ್ಯ ಹೆಚ್ಚುತ್ತದೆ. ನೆನಪಿನ ಶಕ್ತಿ ಚುರುಕುಗೊಳ್ಳುತ್ತದೆ.

2. ಹೊಸದೇನಾದರೂ ಕಲಿಯುವುದು ಕೂಡಾ ಮಿದುಳಿಗೆ ಒಳ್ಳೆಯದು. ಹೊಸ ಕಲಿಕೆ ಹೊಸ ಭಾಷೆ ಕಲಿಯುವುದಿರಬಹುದು, ಅಥವಾ ಹೊಸ ಕೌಶಲ್ಯವನ್ನು ಕಲಿತುಕೊಳ್ಳುವುದಿರಬಹುದು ಅಥವಾ ಸಂಗೀತ/ ನೃತ್ಯ ಇತ್ಯಾದಿ ಕಲೆಗಳನ್ನು ಕಲಿಯುವುದಿರಬಹುದು ಅಥವಾ ಹೊಸದೇನಾದರೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದಿರಬಹುದು. ʻಅಯ್ಯೋ ವಯಸ್ಸಾಯ್ತು ಬಿಡಿ, ಇನ್ನು ಇದನ್ನೆಲ್ಲ ಯಾರು ಕಲೀತಾರೆ? ಇನ್ನು ಇದನ್ನು ಕಲಿತು ಸಾಧಿಸೋದಾದರೂ ಏನನ್ನು? ಈ ವಯಸ್ಸಿಗೆ ಇದೆಲ್ಲ ಯಾಕೆ?” ಇತ್ಯಾದಿ ಇತ್ಯಾದಿ ಮಾತುಗಳನ್ನು ಸಾಮಾನ್ಯವಾಗಿ ಒಂದು ವಯಸ್ಸಿನ ನಂತರ ಜನರು ಮಾತಾಡುವುದನ್ನು ಕೇಳಿರಬಹುದು. ಬಹುತೇಕರು ಇಂಥ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ಬದುಕಿನಲ್ಲಿ ಲವಲವಿಕೆ, ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಇವುಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಮಿದುಳು ಚುರುಕಾಗುತ್ತದೆ.

3. ವ್ಯಾಯಾಮ ಮಾಡುವುದರಿಂದಲೂ ಕೂಡಾ ಮಿದುಳು ಚುರುಕಾಗುತ್ತದೆ. ವ್ಯಾಯಾಮಕ್ಕೂ ಮಿದುಳಿಗೂ ಏನು ಸಂಬಂಧ ಎಂದು ಹುಬ್ಬೇರಿಸಬಹುದು. ಆದರೆ, ಬಹಳಷ್ಟು ಸಂಶೋಧನೆಗಳು, ನಿಯಮಿತ ನಡಿಗೆ, ವ್ಯಾಯಾಮ ಇತ್ಯಾದಿ ದೈಹಿಕವಾಗಿ ಕ್ರಿಯಾಶೀಲರಾಗಿ ಇರುವುದರಿಂದ ಮಿದುಳಿನಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಪ್ರಚೋದನೆ ನೀಡುತ್ತವೆ. ಅಷ್ಟೇ ಅಲ್ಲ, ಮಿದುಳಿಗೆ ಸರಿಯಾಗಿ ರಕ್ತಪೂರಣವಾಗಲೂ ಕೂಡಾ ಇವು ಉತ್ತೇಜಿಸುತ್ತವೆ.

4. ಸಮತೋಲಿತ ಆಹಾರ (balanced diet) ಕೂಡಾ ಅಷ್ಟೇ ಮುಖ್ಯ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಪೂರೈಕೆಯೂ ಕೂಡಾ ಮಿದುಳು ಚುರುಕಾಗಿಡುವುದಕ್ಕೆ ಮುಖ್ಯ. ವಿಟಮಿನ್‌ಗಳು, ಒಮೆಗಾ ೩ ಫ್ಯಾಟಿ ಆಸಿಡ್‌ಗಳು, ಆಂಟಿ ಆಕ್ಸಿಡೆಂಟ್‌ಗಳು ಮಿದುಳನ್ನು ಕ್ರಿಯಾಶೀಲವಾಗಿಡುವುದಕ್ಕೆ ಸಹಕರಿಸುತ್ತದೆ.

5. ಮಿದುಳಿನ ಆರೋಗ್ಯಕ್ಕೆ ಕ್ರಿಯಾಶೀಲತೆಗೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ನಿದ್ದೆ. ಮಿದುಳಿಗೆ ಬೇಕಾದಷ್ಟು ಅಂದರೆ ಕನಿಷ್ಟ ಏಳೆಂಟು ಗಂಟೆಗಳ ವಿಶ್ರಾಂತಿ ನಾವು ಪ್ರತಿನಿತ್ಯ ರಾತ್ರಿ ನೀಡಲೇಬೇಕು. ಮಿದುಳಿಗೆ ಈ ವಿಶ್ರಾಂತಿ ನೀಡಿದರಷ್ಟೇ ಅದು ಸರಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಸಾಮರ್ಥ್ಯ ಪಡೆಯುತ್ತದೆ.

6. ನಮ್ಮ ಮನಸ್ಸಿನ ಒತ್ತಡ, ಉದ್ವೇಗ (stress free mind) ಇತ್ಯಾದಿಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಲೇ ಇರಬೇಕು. ಇದಕ್ಕಾಗಿ ಧ್ಯಾನ ಮತ್ತಿತರ ಮನಸ್ಸಿಗೆ ಶಾಂತಿ ನೀಡುವ ವಿಚಾರಗಳತ್ತ ಗಮನ ಹರಿಸಬಹುದು. ಇದರಿಂದ ಮಿದುಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

7. ಪರಸ್ಪರ ಸ್ನೇಹ- ಮಾತುಕತೆ- ಸಂವಹನವೂ ಮನುಷ್ಯರಿಗೆ ಬಹಳ ಮುಖ್ಯ. ಸ್ನೇಹಿತರು, ಬಂಧು ಬಳಗ ಇತ್ಯಾದಿ ಪ್ರತಿಯೊಬ್ಬರಿಗೂ ಅಗತ್ಯ. ಆಗಾಗ ಸಮಾನಾಸಕ್ತರ ಜೊತೆಗೆ ಮಾತುಕತೆ, ಬೆರೆಯುವಿಕೆ ಮಿದುಳಿನ ಆರೋಗ್ಯಕ್ಕೆ ಚುರುಕುತನಕ್ಕೆ ಬೇಕೇ ಬೇಕು. ಇಲ್ಲವಾದಲ್ಲಿ, ಏಕತಾನತೆ, ಏಕಾಂಗಿತನ ಮಿದುಳಿನ ಆರೋಗ್ಯವನ್ನೂ ಹದಗೆಡಿಸುತ್ತದೆ.

ಇದನ್ನೂ ಓದಿ: Memory Food: ಮಕ್ಕಳ ಜ್ಞಾಪಕ ಶಕ್ತಿ ಚುರುಕುಗೊಳಿಸಬೇಕೇ? ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ಕೊಡಿ!

Exit mobile version