ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುವಕರು ಟ್ರೆಂಡಿ ಹೇರ್‌ಸ್ಟೈಲ್ ಮಾಡಿದರೆ ಸಾಲದು, ಅದನ್ನು ಕಾಪಾಡಿಕೊಳ್ಳುವುದು ಅಗತ್ಯ. ಆಗಾಗ ಬದಲಾಗುವ ಹವಾಮಾನ ಹಾಗೂ ನಿರ್ಲಕ್ಞ್ಯತನದಿಂದಾಗಿ ಕೂದಲ ಸಮಸ್ಯೆಗಳು ಹೆಚ್ಚಾಗುತ್ತವೆ. ಪರಿಣಾಮ, ಹೇರ್‌ಸ್ಟೈಲ್ ಹೆಚ್ಚು ಕಾಲ ಉಳಿಯುವುದಿಲ್ಲ. ಇದಕ್ಕೆ ಪರಿಹಾರವೂ ಇದೆ. ಕೆಲವೊಂದು ಕ್ರಮಗಳನ್ನು ದಿನಚರಿಯಲ್ಲಿ ಅನುಸರಿಸಿದಲ್ಲಿ ತಮ್ಮಿಷ್ಟದಂತೆ ಹೇರ್‌ಸ್ಟೈಲ್ ಸೆಟ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಹೇರ್‌ಎಕ್ಸ್‌ಪರ್ಟ್ ಜಾಯ್. ಈ ಕುರಿತು ಅವರು 5 ಸುಲಭೋಪಾಯ ಪಾಲಿಸಿ ನೋಡಿ ಎನ್ನುತ್ತಾರೆ.
- ಕೂದಲಿಗೆ ಜೆಲ್ ಕಡಿಮೆ ಬಳಸಿ
ಯುವಕರು ಸಾಧ್ಯವಾದಷ್ಟು ಕೂದಲಿಗೆ ಕಡಿಮೆ ಹೇರ್‌ಜೆಲ್ ಬಳಸಬೇಕು. ಜೆಲ್ ಬಳಕೆ ಕೂದಲನ್ನು ಒರಟಾಗಿಸುತ್ತದೆ. ಸಮಾರಂಭಗಳಿದ್ದಾಗ ಹಾಗೂ ಅನಿವಾರ್ಯತೆ ಎನಿಸಿದಾಗ ಮಾತ್ರ ಜೆಲ್ ಬಳಸುವುದು ಉತ್ತಮ. ಪ್ರತಿನಿತ್ಯ ಬಳಸುವುದನ್ನು ಕಡಿಮೆ ಮಾಡಬೇಕು.
- ವಾರಕ್ಕೊಮ್ಮೆ ತಲೆಗೂದಲಿಗೆ ತೈಲ ಹಚ್ಚಿ
ಹುಡುಗಿಯರು ಮಾತ್ರವಲ್ಲ, ಹುಡುಗರೂ ಕೂಡ ಕೂದಲ ಆರೈಕೆ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಕೂದಲಿನ ಆರೋಗ್ಯ ಚೆನ್ನಾಗಿರುವುದು. ಆಗ ಅವರಿಗೆ ಬೇಕಾದ ಹೇರ್‌ಸ್ಟೈಲನ್ನು ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಕೊಬ್ಬರಿ ಅಥವಾ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿಕೊಂಡು ಆಯಿಲ್ ಮಸಾಜ್ ಮಾಡಿಕೊಳ್ಳಬೇಕು. ಇದರಿಂದ ದೇಹ ಕೂಡ ತಂಪಾಗುತ್ತದೆ. ಅಲ್ಲದೇ ಕೂದಲು ಗಾಢ ಕಪ್ಪು ವರ್ಣವಾಗುತ್ತದೆ. ಬೆಳೆಯುತ್ತದೆ. ಸದಾ ಆರೋಗ್ಯಯುತವಾಗಿರುತ್ತದೆ.
- ಹೆಲ್ಮೆಟ್ ಧರಿಸುವಾಗ ಹೀಗೆ ಮಾಡಿ…
ಪ್ರತಿನಿತ್ಯ ಹೆಲ್ಮೆಟ್ ಧರಿಸುವವರಿಗೆ ಕೂದಲ ಸಮಸ್ಯೆ ಹೆಚ್ಚು ಕಾಡುತ್ತದೆ. ಅಂತಹವರು ಯಾವುದೇ ಹೇರ್‌ಸ್ಟೈಲ್ ಮಾಡಿಕೊಂಡರೂ ಹಾಳಾಗಿ ಹೋಗುತ್ತದೆ. ಅಲ್ಲದೇ ಕೂದಲು ಉದುರುತ್ತದೆ. ಡೈರೆಕ್ಟ್ ಆಗಿ ಹೆಲ್ಮೆಟ್ ಧರಿಸುವ ಬದಲು ಕಾಟನ್ ಸ್ಕಾರ್ಫನ್ನು ತಲೆಯ ಸುತ್ತ ಕಟ್ಟಿ, ನಂತರ ಹೆಲ್ಮೇಟ್ ಧರಿಸಿ. ಹೀಗೆ ಮಾಡುವುದರಿಂದ ಕೂದಲು ಉದುರುವುದಿಲ್ಲ.
- ದಿನಚರಿಯಲ್ಲಿ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ
ಇಂದಿನ ಬಿಜಿ ಲೈಫ್‌ನಲ್ಲಿ ಟೆನ್ಷನ್ ಹೆಚ್ಚು. ಇದರಿಂದಾಗಿ ಬಹುತೇಕ ಯುವಕರ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚು ಉದುರುತ್ತದೆ. ಇದನ್ನು ತಡೆಯಲು ದಿನಚರಿಯಲ್ಲಿ ಹದಿನೈದು ನಿಮಿಷವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೂದಲ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುತ್ತದೆ.
- ಹರ್ಬಲ್ ಹೇರ್‌ಪ್ಯಾಕ್
ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಕಾಂತಿಯತವಾಗಿ ಬೆಳೆಯುತ್ತದೆ. ತಿಂಗಳಿಗೆ ಎರಡು ಬಾರಿಯಾದರೂ ಸರಿಯೇ ದಾಸವಾಳದ ಪ್ಯಾಕ್ ಹಾಕಿ. (ದಾಸವಾಳದ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿದ ಹೇರ್‌ಪ್ಯಾಕ್)ಒಂದರ್ಧ ಗಂಟೆಯ ನಂತರ ತಲೆಸ್ನಾನ ಮಾಡಿ. ಈ ಪ್ಯಾಕ್ ಹಾಕುವುದರಿಂದ ತಲೆಗೂದಲು ಬೇಕಾದ ರೀತಿಯಲ್ಲಿ ಸೆಟ್ ಮಾಡುವಷ್ಟರ ಮಟ್ಟಿಗೆ ಸಾಫ್ಟ್ ಆಗುತ್ತದೆ. ಇದೇ ಕಾರಣಕ್ಕಾಗಿ ದಾಸವಾಳವನ್ನು ಆಯುರ್ವೇದ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.
ಲೇಖಕಿ ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ | Hair care: ಬ್ಯುಸಿಯಾಗಿರೋ ಮಹಿಳೆಯರಿಗೆ ಫಟಾಫಟ್ ಸ್ಟೈಲಿಶ್ ಹೇರ್‌ಕಟ್‌ಗಳು!