2023 ಮುಗಿಯಿತು, 2024 ಬಂತು. ಹೊಸವರ್ಷ. ಈ ವರ್ಷವಾದರೂ ನಾನು ಹೀಗಿರಬೇಕು ಎಂಬ ಒಂದಿಷ್ಟು ಯೋಚನೆ- ಯೋಜನೆಗಳನ್ನು ರೂಪಿಸಿಕೊಳ್ಳುವವರು ಬಹಳ. ಹೊಸ ವರ್ಷ ಬಂದಾಕ್ಷಣ ಆಹಾರದ ವಿಚಾರದಲ್ಲಿ, ಗುರಿ ಕನಸುಗಳ ವಿಚಾರದಲ್ಲಿ ಹಲವರು ಏನೇನೋ ಕನಸು ಕಾಣುತ್ತಾರೆ. ನ್ಯೂ ಈಯರ್ ರೆಸೊಲ್ಯುಶನ್ (New year Resolutions) ಮಾಡಿಕೊಂಡರೆ, ಬಹುತೇಕರಿಗೆ ಎಲ್ಲ ಯೋಜನೆಗಳು ತಲೆಕೆಳಗಾಗುವುದು ನಿಜ. ಮುಖ್ಯವಾಗಿ ಆಹಾರ ಪ್ರಿಯರು ಮಾಡುವ ಹೊಸವರ್ಷದ ಪ್ರತಿಜ್ಞೆಗಳ ಪೈಕಿ ಅತ್ಯಂತ ಪ್ರಸಿದ್ಧವಾದ, ಆದರೆ ಬಹುತೇಕರು ಹೊಸವರ್ಷ ಆರಂಭವಾಗಿ ವಾರವಾಗುವಷ್ಟರಲ್ಲಿ ಅದನ್ನು ಮುರಿದು ಯಥಾಸ್ಥಿತಿಗೆ ಮರಳುವ ಘಟನೆಗಳು ಬೇಕಾದಷ್ಟು ನಡೆಯುತ್ತವೆ. ಬನ್ನಿ, ತಮಾಷೆಗಾಗಿ, ಬಹುತೇಕರು ಮಾಡುವ ಪ್ರತಿಜ್ಞೆಗಳನ್ನು ಯಾವುವು ಎಂಬುದನ್ನು ನೋಡೋಣ.
1. ನಾನಿನ್ನು ಜಂಕ್ ಫುಡ್ ತಿನ್ನುವುದಿಲ್ಲ!: ಹೌದು. ಡಿಸೆಂಬರ್ ಕೊನೆಯಲ್ಲಿ ಯರ್ರಾಬಿರ್ರಿ ಬೇಕಾದ್ದನ್ನೆಲ್ಲ ತಿಂದು ಪಾರ್ಟಿ ಮಾಡಿ ಕೊನೆಗೆ ಇನ್ನು ಎಲ್ಲ ಬಿಡುತ್ತೇನೆ, ಬಿಡುವ ಮೊದಲು ಕೊನೆಯದಾಗಿ ತಿನ್ನುತ್ತೇನೆ ಎಂದು ಹೊಟ್ಟೆ ತುಂಬಿಸಿಕೊಂಡು ಹೊಸ ವರ್ಷದಿಂದ ಜಂಕ್‌ಫುಡ್‌ಗೆ (Junk Food) ಬೈಬೈ ಎನ್ನುವವರು ಇದ್ದಾರೆ. ನೋ ಪಿಜ್ಜಾ, ನೋ ಬರ್ಗರ್, ನೋ ಸ್ಟ್ರೀಟ್‌ಫುಡ್, ಇನ್ನೇನಿದ್ದರೂ ಆರೋಗ್ಯಪೂರ್ಣ ಮನೆಯ ಆಹಾರ ಎಂದ ಮಂದಿ ಒಂದು ವಾರವಾಗುವಷ್ಟರಲ್ಲಿ ಬಸವಳಿದು ಮತ್ತೆ ಮನೆಮುಂದಿನ ಪಾನಿಪುರಿ ಅಡ್ಡಾಕ್ಕೆ ಹೋಗಿಯೋ, ಪಿಜ್ಜಾಹಟ್‌ಗೆಗೆಳೆಯರ ಜೊತೆಗೋ ಎಡತಾಕುತ್ತಾರೆ!
2. ಚಹಾ ಕಾಫಿ ಬಿಡುತ್ತೇನೆ!: ಚಹಾ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎಂದುಕೊಂಡು, ಅದೇನೇ ಆಗಲಿ, ಈ ಬಾರಿ ನಾನು ಚಹಾ ಕಾಫಿ ಸಂಪೂರ್ಣವಾಗಿ ತ್ಯಜಿಸುತ್ತೇನೆ ಎಂದ ಮಂದಿ ಕೆಲವು ದಿನಗಳಾಗುವಷ್ಟರಲ್ಲಿ, ಏನು ಬೇಕಾದರೂ ಬಿಡಬಹುದಪ್ಪ, ಚಹಾ ಕಾಫಿ ಬಿಡುವುದು ಕಷ್ಟ ಕಣ್ಲಾ ಎನ್ನುತ್ತಾ, ಸುತ್ತಮುತ್ತಲ ನೋಡುವ ಕಣ್ಣುಗಳಿಗೆ ತಲೆನೋವು ಎಂದು ಸಬೂಬು ಹೇಳಿ ಕಾಫಿ ಕೈಗೆತ್ತಿಕೊಳ್ಳುತ್ತಾರೆ!
3. ರಾತ್ರಿಯೂಟದ ಮೇಲೆ ಏನೂ ತಿನ್ನುವುದಿಲ್ಲ!: ರಾತ್ರಿಯೂಟ ಬೇಗ ಮುಗಿಸಿ, ಆಮೇಲೆ ಏನೂ ತಿನ್ನುವುದಿಲ್ಲ ಎಂದುಕೊಳ್ಳುವ ಮಂದಿ ಬಹಳ. ಹೊಸ ವರ್ಷ ಬಂದೊಡನೆ ಇಂತ ಯೋಚನೆಗಳಿಗೆ ಮತ್ತೆ ಜೀವ ಬಂದು ನಾಲ್ಕೈದು ದಿನ ಮಾಡುತ್ತೇವೆ ಕೂಡಾ. ರಾತ್ರಿಯೂಟ ತಡವಾಗಿ ಮಾಡುವುದು ತೂಕ ಹೆಚ್ಚಳಕ್ಕೆ ದಾರಿ, ಊಟದ ನಂತರ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಿಯಮಗಳೆಲ್ಲ ಗಾಳಿಗೆ ತೂರಿ, ಇವತ್ತು ಒಂದೇ ಒಂದು ದಿನ, ಸ್ವಲ್ಪ ತಿನ್ನುತ್ತೇನೆ ಎಂದು ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ರಾತ್ರಿ ಸಿನಿಮಾ ನೋಡುತ್ತಾ ಖಾಲಿಯಾಗುತ್ತದೆ!
4. ಸಕ್ಕರೆ ಬಿಡುತ್ತೇನೆ!: ಸಕ್ಕರೆ ನಮ್ಮ ಆರೋಗ್ಯದ ಶತ್ರು ಎಂದು ಹೇಳುತ್ತಾ, ಈ ಬಾರಿ ಸಕ್ಕರೆ ಮಾತ್ರ ಏನೇ ಆದರೂ ತಿನ್ನುವುದಿಲ್ಲ ಎಂದು ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡುವವರು ಅನೇಕ. ಕೆಲವೇ ದಿನ, ಸಂಕ್ರಾಂತಿ ಬಂದರೆ ಸಾಕು, ಹಬ್ಬವೆಂದ ಮೇಲೆ ಸಿಹಿ ತಿನ್ನದೆ ಇರೋದಕ್ಕಾಗುತ್ತಾ ಹೇಳಿ ಎಂದು ಸಿಹಿತಿಂಡಿ ಪ್ಯಾಕೆಟ್ಟು ಕಣ್ಣೆದುರಲ್ಲೇ ಖಾಲಿಯಾಗುತ್ತದೆ! ಸಕ್ಕರೆ ಹಾಕದ ಕಾಫಿ ಚಹಾ ಎಂಬ ನರಕದ ಶಿಕ್ಷೆ ಯಾಕಪ್ಪಾ ಎನ್ನುತ್ತಾ, ಚಹಾ ಕಾಫಿಗೆ ಸಕ್ಕರೆ ಸುರಿಯುತ್ತೇವೆ!
5. ದಿನಕ್ಕೆಂಟು ಲೋಟ ನೀರು ಕುಡಿಯುತ್ತೇನೆ!: ಏನೇ ಆಗಲಿ, ನೀರು ದೇಹಕ್ಕೆ ಅತ್ಯಂತ ಮುಖ್ಯ ಸಾಕಷ್ಟು ನೀರು ಕುಡಿಯದೆ ಇರುವುದೇ ನನ್ನ ಸಮಸ್ಯೆ ಎಂದುಕೊಂಡು, ಈ ಬಾರಿ ದಿನಕ್ಕೆ ಎಂಟು ಲೋಟ ನೀರು ಕುಡಿಯುವುದು ಗ್ಯಾರೆಂಟಿ ಎಂಬ ಹೊಸ ರೆಸೊಲ್ಯುಶನ್ ಸಿದ್ಧವಾಗುತ್ತದೆ. ನೀರು ಕುಡಿಯಲೆಂದೇ ದಿನಕ್ಕೆ ಎಂಟು ಅಲರಾಂಗಳು ಸಿದ್ಧವಾಗುತ್ತದೆ. ಒಂದೆರಡು ದಿನ ಎಲ್ಲವೂ ಸರಿಯಾಗಿ ಮುಂದೆ ಸಾಗುತ್ತದೆ. ನಾಲ್ಕನೇ ದಿನ ಕಳೆದು ಐದಾಗುವಷ್ಟರಲ್ಲಿ, ಅಲರಾಂ ತನ್ನ ಪಾಡಿಗೆ ತಾನು ಹೊಡೆಕೊಳ್ಳುತ್ತದೆ. ನೀರು ಹೊಟ್ಟೆ ಸೇರುವುದೇ ಇಲ್ಲ!
ಇವೆಲ್ಲ ಬಹುತೇಕರು ಸಾಮಾನ್ಯವಾಗಿ ಮಾಡುವ ರೆಸೊಲ್ಯುಶನ್‌ಗಳು. ಆದರೆ, ಅವು ಅಷ್ಟೇ ಸುಲಭವಾಗಿ ಮಣ್ಣೂ ಪಾಲಾಗುತ್ತವೆ. ಇದನ್ನು ಓದಿ ನಿಮಗೂ ಅರೆ, ನಾವೂ ಹೀಗೆ ಎಂದು ಅನಿಸದಿದ್ದರೆ ಕೇಳಿ! ಕೆಲವು ಮಂದಿ ಮಾತ್ರ ಇದಕ್ಕೆ ಹೊರತಾಗಿರಬಹುದು ಎಂಬುದು ಬಿಟ್ಟರೆ, ಎಲ್ಲರೆ ಮನೆಯ ದೋಸೆಯೂ ತೂತೇ!
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…