ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಮಿಸ್ ಯೂನಿವರ್ಸ್ ಪೇಜೆಂಟ್ ಇದೀಗ ಥಾಯ್ಲೆಂಡ್ ಯಶಸ್ವಿ ಮಹಿಳಾ ಉದ್ಯಮಿ, ಎರಡು ಮಕ್ಕಳ ಸಿಂಗಲ್ ಮದರ್ ಹಾಗೂ ಟ್ರಾನ್ಸ್‌ಜೆಂಡರ್ ಹಕ್ಕುಗಳಿಗಾಗಿ ಹೋರಾಡುವ ಆ್ಯನೆ ಜಕ್ರಾಜುಟಾಟಿಪ್ (Anne Jakrajutatip)ರ ಜೆಕೆಎನ್ ಗ್ಲೋಬಲ್ ಗ್ರೂಪ್ ತೆಕ್ಕೆಗೆ ಸೇರಿದೆ.
ಪರಿಣಾಮ, ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಈ ಸೌಂದರ್ಯ ಸ್ಪರ್ಧೆಯ ಯೋಜನೆಗಳು ಹೊಸ ರೂಪ ಪಡೆಯಲಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಹೌದು. ೭೧ ವರ್ಷದ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಥಾಯ್ಲೆಂಡ್ ಮೂಲದ ಜೆಕೆಎನ್ ಗ್ಲೋಬಲ್ ಗ್ರೂಪ್‌ನ ಸಿಇಓ ಆ್ಯನೆ, ಮಿಸ್ ಯೂನಿವರ್ಸ್ ಪೇಜೆಂಟ್ ಕಂಪನಿಯನ್ನು ೨೦ ಮಿಲಿಯನ್ ಡಾಲರ್‌ಗೆ ತಮ್ಮದಾಗಿಸಿಕೊಂಡಿದ್ದಾರೆ.
ಏಷ್ಯಾದಲ್ಲೂ ವಿಸ್ತರಿಸಲಿರುವ ಮಿಸ್ ಯೂನಿವರ್ಸ್ ಯೋಜನೆಗಳು
ಅಂದಹಾಗೆ, ಆ್ಯನೆ ಮೊದಲಿನಿಂದಲೂ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಇದ್ದವರು. ನಟಿ ಹಾಗೂ ಮಾಡೆಲ್ ಕೂಡ. ಜೆಕೆಎನ್ ಗ್ಲೋಬಲ್ ಗ್ರೂಪ್ (ಜೆಕೆಎನ್.ಬಿಕೆ) ಗ್ರೂಪ್‌ನ ಸಿಇಓ ಆಗಿರುವ ಇವರು ಥಾಯ್ಲೆಂಡ್‌ನ ಫೌಂಡೇಷನ್ ಹಾಗೂ ಟ್ರಾನ್ಸ್‌ಜೆಂಡರ್ ವುಮೆನ್ ಹಕ್ಕುಗಳಿಗಾಗಿ ದನಿ ಎತ್ತಿದವರು. ಅಷ್ಟು ಮಾತ್ರವಲ್ಲ, ಯಶಸ್ವಿ ಉದ್ಯಮಿಯಾಗಿ ಬೆಳೆದವರು. ನನ್ನನ್ನು ಶ್ರೀಮಂತ ಮಹಿಳೆ ಎಂದು ಕರೆಯಬೇಡಿ! ಬದಲಿಗೆ ಟ್ರಾನ್ಸ್‌ಜೆಂಡರ್ ಬಿಲೇನಿಯರ್ ಎಂದು ಕರೆಯಿರಿ ಎಂದು ಅವರೇ ಸಾಕಷ್ಟು ಬಾರಿ ಸ್ಟೇಟಸ್‌ನಲ್ಲಿ ಹಾಕಿದ್ದುಂಟು. ಹೀಗೆ ಕರೆದರೇ ಅವರಿಗೆ ಇಷ್ಟವಂತೆ ಕೂಡ.
“ಜಾಗತಿಕ ಮಟ್ಟದಲ್ಲಿ ಮಹಿಳೆಯರಿಗೆ ಅದರಲ್ಲೂ ಟ್ರಾನ್ಸ್‌ಜೆಂಡರ್ ವರ್ಗಕ್ಕೆ ಮತ್ತಷ್ಟು ಅವಕಾಶ ಕಲ್ಪಿಸುವ ಉದ್ದೇಶ ನನಗಿದೆ. ಅದರಲ್ಲೂ ಏಷ್ಯಾದಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ನಾನಾ ರೂಪದಲ್ಲಿ ವಿಸ್ತರಿಸುವ ಗುರಿ ಹೊಂದಲಾಗಿದೆ” ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಆ್ಯನೆಯವರ ಜೆಕೆಎನ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಶೋ ಹಾಗೂ ರಿಯಾಲಿಟಿ ಶೋಗಳನ್ನು ಆಯೋಜಿಸುತ್ತಿದ್ದು, ಎಂಟರ್‌ಟೈನ್‌ಮೆಂಟ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಕಳೆದ ೧೯೯೬ರಿಂದ ೨೦೦೨ರವರೆಗೂ ಮಿಸ್ ಯೂನಿವರ್ಸ್ ಆರ್ಗನೈಸೇಷನ್‌ಗೆ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹ-ಭಾಗಿತ್ವ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಆ್ಯನೆ ಲೈಫ್‌ಸ್ಟೈಲ್ :
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಆ್ಯನೆ , ಎರಡು ಮಕ್ಕಳ ತಾಯಿ, ಮಕ್ಕಳನ್ನು ಅತಿ ಹೆಚ್ಚಾಗಿ ಪ್ರೀತಿಸುವ ಇವರ ಪ್ರೊಫೈಲ್ ಫೋಟೊ ಕೂಡ ಮಕ್ಕಳೊಂದಿಗೆ ಇದೆ ಎಂದರೇ ನಂಬಲೇಬೇಕು. ಬಿಸಿನೆಸ್ ಸಲುವಾಗಿ ಪ್ರಪಂಚದೆಲ್ಲೆಡೆ ಸುತ್ತುವ ಆ್ಯನೆಗೆ ಮೊದಲಿನಿಂದಲೂ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ ಎಂದರೇ ಪ್ರೀತಿ ಎಂದು ಅವರೇ ಖುದ್ದು ಹೇಳಿಕೊಂಡಿದ್ದಾರೆ.
ಇಂಡಿಯಾ ಜತೆಗೂ ನಂಟು
ಆ್ಯನೆಗೆ ಭಾರತವೆಂದರೇ ಬಲು ಪ್ರೀತಿ. ಆಲ್ಬಂವೊಂದರ ಕಾರ್ಯ ನಿಮಿತ್ತ ಭಾರತಕ್ಕೂ ಬಂದಿದ್ದ ಅವರು ಬಾಲಿವುಡ್‌ನ ನಾಗಿಣಿ ೩ ಖ್ಯಾತಿಯ ನಟ ಪರ್ಲ್ ವಿ ಪುರಿ ಅವರೊಂದಿಗೂ ಕಾಣಿಸಿಕೊಂಡಿದ್ದರು. ಅವರೊಂದಿಗೆ ನಟಿಸಿದ್ದ ಸಮಯದಲ್ಲಿ ತೆಗೆದ ಫೋಟೋವೊಂದನ್ನು ಕೂಡ ಖುಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ತಮಗೆ ಭಾರತದ ಬಗ್ಗೆ ಇರುವ ಪ್ರೀತಿ ಹಾಗೂ ಬಾಲಿವುಡ್ ಪ್ರೇಮವನ್ನು ವ್ಯಕ್ತಪಡಿಸಿದ್ದರು. ಜತೆಗೆ ಇಲ್ಲಿಯೇ ಒಂದಿಷ್ಟು ಫೋಟೋ ಶೂಟ್ ಕೂಡ ಮಾಡಿಸಿದ್ದರು.
ಆ್ಯನೆ, ಮಿಸ್ ಯೂನಿವರ್ಸ್ ಆರ್ಗನೈಸೇಷನ್ ತಮ್ಮ ತೆಕ್ಕೆಗೆ ಬಿದ್ದ ಮೇಲೆ ಯಾವ ರೀತಿ ಬದಲಾವಣೆಗಳನ್ನು ತರುತ್ತಾರೆ ಹಾಗೂ ಯೋಜನೆಗಳನ್ನು ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion News: ಯಶಸ್ವಿಯಾದ ಸೂಪರ್ ಮಾಡೆಲ್ ಆಫ್ ಇಂಡಿಯಾ ರ‍್ಯಾಂಪ್ ಶೋ