Site icon Vistara News

Modi Birthday | ಬಂಡಿ ಕೋಟ್‌ಗೆ ನರೇಂದ್ರ ಮೋದಿ ಹೆಸರು ಸೇರಿದ್ದು ಹೇಗೆ?

ಮಾನ್ಯ ಪ್ರಧಾನ ಮಂತ್ರಿ ಮೋದಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದೇಸಿ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ ಒಂದಾಗಿ ಸೇರಿರುವ ಮೋದಿ ಜಾಕೆಟ್‌/ಬಂಡಿ ಕೋಟ್‌ ಇಂದಿಗೂ ಎಥ್ನಿಕ್‌ ದೇಸಿ ಫ್ಯಾಷನ್‌ನ ಟಾಪ್‌ನಲ್ಲೆ ಇದೆ. ಶ್ರೀಮಂತರಿಗೆ ಮಾತ್ರವಲ್ಲ, ಸಾಮಾನ್ಯರಿಗೂ ಪ್ರೀತಿ ಪಾತ್ರವಾಗಿರುವ ಈ ಮೋದಿ ಜಾಕೆಟ್‌ಗೆ ಪ್ರಾಮುಖ್ಯತೆ ಸಿಕ್ಕಲು ಕಾರಣ ಯಾರೂ ಎಂದುಕೊಂಡಿದ್ದೀರಾ? ನಮ್ಮ ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು! ಇವರು ಈ ದಿರಸನ್ನು ಧರಿಸಲಾರಂಭಿಸಿದ ನಂತರ ಈ ಬಂಡಿ ಕೋಟ್‌ಗೆ ಮೊದಲಿಗಿಂತ ಆದ್ಯತೆ ಹೆಚ್ಚಾಗಿದೆ. ನೇರವಾಗಿ ಹೇಳುವುದಾದರೇ ಮೋದಿಯವರ ಸಿಗ್ನೇಚರ್‌ ಸ್ಟೈಲ್‌ಗೆ ಇದು ಸೇರಿ ಹೋಗಿದೆ.

ಮೋದಿ ಜಾಕೆಟ್‌ ಆಗಿದ್ದು ಹೇಗೆ?

ಸೆಲೆಬ್ರಿಟಿ ಫ್ಯಾಷನ್‌ ಡಿಸೈನರ್ ಹರ್ಷ್ ಬೇಡಿ ಹೇಳುವಂತೆ, ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕುರ್ತಾ ಮೇಲೆ ಬಂಡಿ ಕೋಟ್‌ ಧರಿಸುವುದು ಅವರ ಸಿಗ್ನೇಚರ್‌ ಸ್ಟೈಲ್‌ನಲ್ಲಿ ಸೇರಿಕೊಂಡಿತು. ದಿಲ್ಲಿಯ ವಾತಾವರಣಕ್ಕೆ ಹೊಂದುವುದರೊಂದಿಗೆ ಕಾಟನ್‌, ಖಾದಿ, ಲೆನಿನ್‌ ಹಾಗೂ ಜ್ಯೂಟ್‌ನಂತಹ ಪರಿಸರ ಸ್ನೇಹಿ ಫ್ಯಾಬ್ರಿಕ್‌ನ ಬಂಡಿ ಕೋಟ್‌, ಕುರ್ತಾದೊಂದಿಗೆ ಧರಿಸಿದಾಗ ದೊರೆಯುವ ಎಲಿಗೆಂಟ್‌ ಲುಕ್‌ ಹಾಗೂ ಜವಾಬ್ದಾರಿಯುತ ಹುದ್ದೆಗೆ ಮ್ಯಾಚ್‌ ಆಗುವ ದೇಸಿ ಸ್ಟೈಲ್‌ ಅವರ ಫೇವರೇಟ್‌ ವಾರ್ಡ್ರೋಬ್‌ಗೆ ಸೇರಿತು. ಎಲ್ಲದಕ್ಕಿಂತ ಹೆಚ್ಚಾಗಿ ಇದು ಅವರನ್ನು ಪ್ರಬುದ್ಧ ನಾಯಕರಂತೆ ಬಿಂಬಿಸಿತು. ಇದನ್ನೇ ಮುಂದುವರಿಸುವಂತೆಯೂ ಮಾಡಿತು. ಅಲ್ಲದೇ ಗೌರವಯುತವಾದ ಸ್ಥಾನಕ್ಕೆ ಸಾಥ್‌ ನೀಡುವಂತಹ ಈ ಜಾಕೆಟ್‌ ಅವರ ರೆಗ್ಯುಲರ್‌ ಡ್ರೆಸ್‌ಕೋಡ್‌ನಲ್ಲಿ ಸೇರಿತು. ಕ್ರಮೇಣ ಪ್ರತಿಬಾರಿ ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಾಗ ಅವರು ಧರಿಸುವ ಬಂಡಿ ಕೋಟ್‌ ಯಾವ ಮಟ್ಟಿಗೆ ಪಾಪ್ಯುಲರ್‌ ಆಯಿತೆಂದರೆ ಫ್ಯಾಷನ್‌ ದಿಗ್ಗಜರು ಕೂಡ ಮೋದಿ ಜಾಕೆಟ್‌ ಎಂದು ಕರೆಯಲಾರಂಭಿಸಿದರು. ಇದೀಗ ಈ ಅನ್ವರ್ಥನಾಮವೇ ಕಾಮನ್‌ ಆಗಿ ಬಳಕೆಗೆ ಬಂದಿದೆ.

ನೆಹರು ಜಾಕೆಟ್‌ ವರ್ಸಸ್ ಮೋದಿ ಜಾಕೆಟ್‌

ಡಿಸೈನರ್‌ ಮೀರಜ್‌ ಪ್ರಕಾರ, ನೆಹರು ಜಾಕೆಟ್‌ ಎಂಬ ಹೆಸರನ್ನು ಮರೆಸಿ ಅವರದ್ದೇ ಆದ ಬ್ರಾಂಡ್‌ ಹೆಸರು ಹುಟ್ಟು ಹಾಕಿದ್ದೇ ಮೋದಿಯವರು. ಹಾಗೆಂದು ಮೋದಿಜೀ ಇತರೆ ಉಡುಪುಗಳನ್ನು ಧರಿಸುವುದಿಲ್ಲ ಎಂದಲ್ಲ. ಅತಿ ಹೆಚ್ಚಾಗಿ ಧರಿಸುವ ಲಿಸ್ಟ್‌ನಲ್ಲಿ ಬಂಡಿ ಕೋಟ್‌ ಸೇರಿದೆಯಷ್ಟೇ!

ವೆರೈಟಿ ಮೋದಿ ಜಾಕೆಟ್‌

ಇನ್ನು ಡಿಸೈನರ್‌ ಗಿರೀಶ್‌ ಹೇಳುವಂತೆ, ಮೋದಿಜೀಯವರ ಕಲೆಕ್ಷನ್‌ನಲ್ಲಿ ಪ್ರಯೋಗಾತ್ಮಕವಾಗಿ ನಾನಾ ಬಗೆಯ ವರ್ಣದ ಬಂಡಿ ಕೋಟ್‌ಗಳನ್ನು ಕಾಣಬಹುದು. ಉದಾಹರಣೆಗೆ ಮಾನೋಕ್ರೋಮ್‌ ಕುರ್ತಾ ಸೆಟ್‌ಗೆ ಸೂಟ್‌ ಆಗುವಂತಹ ಕಾಂಟ್ರಸ್ಟ್‌ ವರ್ಣದ್ದು, ಕೆಲವೊಮ್ಮೆ ಪಕ್ಕಾ ಕೇಸರಿ ವರ್ಣದ್ದು, ಅದು ಹೊರತುಪಡಿಸಿದಲ್ಲಿ ಸ್ಟ್ರೈಪ್ಸ್‌, ಚೆಕ್ಸ್‌, ಕಾಲರ್‌ಲೆಸ್‌, ಲೂಸ್‌ ಫಿಟ್ಟಿಂಗ್‌ನ ಬಂದಗಲಾ ಶೈಲಿಯದ್ದು. ಇನ್ನು ಕೆಲವು ಸ್ಟೈಲಿಸ್ಟ್‌ಗಳ ಪ್ರಕಾರ, ಗುಜರಾತ್‌ನಲ್ಲಿ ಕೋಟಿ ಎನ್ನಲಾಗುವ ಜಾಕೆಟ್‌ಗಳ ಶೈಲಿಯನ್ನು ಇತರೇ ಡಿಸೈನ್‌ನೊಂದಿಗೆ ಬೆರೆಸಿ ಹೊಸ ರೂಪ ನೀಡಿದ್ದಾರೆ ಎನ್ನುತ್ತಾರೆ.

ನಿಮಗೆ ಗೊತ್ತೇ?

· ಕಳೆದ ೨೦೧೫ರಲ್ಲಿ ಜಪಾನಿನ ಪ್ರಧಾನಮಂತ್ರಿ ಶಿನ್ಜೋರವರು ಮೋದಿಯವರನ್ನು ಭೇಟಿ ಮಾಡಿದಾಗ ಅವರು ಧರಿಸಿದ್ದ ಜಾಕೆಟ್‌ಗೆ ಇಂಪ್ರೆಸ್‌ ಆಗಿ ತಾವೂ ಕೂಡ ಒಮ್ಮೆ ಬಂಡಿ ಕೋಟ್‌ ಧರಿಸಿದ್ದರಂತೆ.

· ಸಮೀಕ್ಷೆಯೊಂದರ ಪ್ರಕಾರ ಮೋದಿ ಜಾಕೆಟ್‌, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ಬ್ರಾಂಡ್‌ನಲ್ಲಿ ಬಿಡುಗಡೆಗೊಂಡ ಮೆನ್ಸ್ ಎಥ್ನಿಕ್‌ ಡ್ರೆಸ್‌ಕೋಡ್‌ ಎನ್ನಲಾಗಿದೆ.

· ಕೇಸರಿ, ಯೆಲ್ಲೊ, ಬ್ಲ್ಯೂನಂತಹ ಕ್ಯಾಂಡಿ ಕಲರ್ಸ್‌ನ ಬಂಡಿ ಕೋಟ್‌ಗಳನ್ನು ಮೋದಿಜೀ ಧರಿಸುತ್ತಾರೆ.

· ಒಮ್ಮೆ ಕಾಣಿಸಿಕೊಂಡ ಜಾಕೆಟ್‌ ಮತ್ತೊಮ್ಮೆ ಬಹುತೇಕ ರಿಪೀಟ್‌ ಆಗುವುದಿಲ್ಲ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version