ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಯಾ ಸಂದರ್ಭ ಹಾಗೂ ಸಮಾರಂಭಗಳಿಗೆ ತಕ್ಕಂತೆ ಬದಲಾಗುವ ಕ್ಲಾಸಿ ಫ್ಯಾಷನ್ ಸ್ಟೇಟ್‌ಮೆಂಟ್ ಪ್ರಧಾನಿ ಮೋದಿ ಅವರದು. ನೋಡಲು ಆಕರ್ಷಕವಾಗಿ ಕಾಣುವ ಅವರ ಒಂದೊಂದು ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಉನ್ನತ ಹುದ್ದೆಗೆ ಗೌರವ ಸೂಚಿಸುವಂತೆ ಕಾಣುತ್ತವೆ. ಇದರ ಪರಿಣಾಮವಾಗಿ ಮೋದಿ ಅವರ ಕ್ಲಾಸಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಂದರ್ಭಕ್ಕೆ ತಕ್ಕಂತೆ ಡ್ರೆಸ್‌ಕೋಡ್
ಖ್ಯಾತ ಸ್ಟೈಲಿಸ್ಟ್ ಅಮಿತ್ ಪಾಂಡ್ಯಾ ಪ್ರಕಾರ: ಮೋದಿ ಜಾಕೆಟ್ ಹೊರತು ಪಡಿಸಿದರೇ, ಅವರು ಧರಿಸುವ ಒಂದೊಂದು ದಿರಸುಗಳು ಕೂಡ ವಿಭಿನ್ನ ಹಾಗೂ ಸಮಯೋಚಿತವಾಗಿರುತ್ತವೆ. ಸಭೆ-ಸಮಾರಂಭಗಳು, ಕಾನ್ಫರೆನ್ಸ್, ಉನ್ನತ ಅಧಿಕಾರಿಗಳೊಂದಿಗಿನ ಮಾತುಕತೆ ಸಂದರ್ಭ, ವಿದೇಶಗಳಿಗೆ ಭೇಟಿ, ನಾನಾ ಸಮುದಾಯಗಳ ಜೊತೆ ಆಚರಣೆಯಲ್ಲಿ ಭಾಗಿ, ಮಿಲಿಟರಿ ಟೀಮ್ ಜತೆ ವೀಕ್ಷಣೆ, ಅಷ್ಟೇ ಏಕೆ? ಬೇರ್‌ಗ್ರಿಲ್ಸ್‌ರ ಮ್ಯಾನ್ ವರ್ಸಸ್ ವೈಲ್ಡ್‌ನಂತಹ ಟಿವಿ ಶೋನಲ್ಲಿ ಪಾಲ್ಗೊಳ್ಳುವಿಕೆ ಹೀಗೆ ಲೆಕ್ಕವಿಲ್ಲದಷ್ಟು ಶೆಡ್ಯೂಲ್‌ಗಳಲ್ಲಿ ಭಾಗವಹಿಸುವ ಮೋದಿಯವರ ಡ್ರೆಸ್‌ಕೋಡ್ ಎಂದಿಗೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತವೆ. ಆಯಾ ಸಂದರ್ಭ ಹಾಗೂ ಸನ್ನಿವೇಶಗಳಿಗೆ ಪೂರಕವಾಗಿರುತ್ತವೆ ಎನ್ನುತ್ತಾರೆ.
ಫ್ಯಾಷನಿಸ್ಟ್ ರಾಜ್ ಹೇಳುವಂತೆ: ಸಾಮಾನ್ಯವಾಗಿ ಪೊಲಿಟೀಶಿಯನ್‌ಗಳ ಡ್ರೆಸ್‌ಕೋಡ್ ಒಂದೇ ರೀತಿಯಾಗಿರುತ್ತವೆ. ಶ್ವೇತ ವರ್ಣ ಹೊರತುಪಡಿಸಿದರೇ, ಕುರ್ತಾ –ಪೈಜಾಮ ಇಲ್ಲವೇ ಬಂದಗಲಾದಂತಹ ಉಡುಪುಗಳಲ್ಲೆ ಕೊನೆ ಕಾಣುತ್ತವೆ. ಆದರೆ ಪ್ರಧಾನಮಂತ್ರಿ ಮೋದಿಯವರ ಡ್ರೆಸ್‌ಕೋಡ್ ವಿಷಯಕ್ಕೆ ಬಂದಲ್ಲಿ ಇದು ಕಂಪ್ಲೀಟ್ ಡಿಫರೆಂಟ್.
ಕೇಸರಿ ಹಾಗೂ ಲೆಮನ್ ಯೆಲ್ಲೋ, ರಾಯಲ್ ಬ್ಲ್ಯೂ, ಪೀಚ್ ಪಿಂಕ್‌ನಂತಹ ಕ್ಯಾಂಡಿ ಫ್ಯಾಷೆನಬಲ್ ಶೇಡ್‌ಗಳು ಕೂಡ ಅವರ ಡ್ರೆಸ್‌ಕೋಡ್‌ನಲ್ಲೂ ಎಂಟ್ರಿ ಪಡೆದಿವೆ. ಹಾಗಾಗಿ ಅವರು ತಮ್ಮ ಜವಾಬ್ದಾರಿಯುತ ಹುದ್ದೆಯೊಂದಿಗೆ ಆಕರ್ಷಕವಾಗಿ ಕಾಣಿಸುವ ಫ್ಯಾಷನ್ ಸೆನ್ಸ್ ಹೊಂದಿದ್ದಾರೆ ಎಂಬುದನ್ನು ಖಡಾಖಂಡಿತವಾಗಿ ಹೇಳಬಹುದು.
ವಿಭಿನ್ನ ಫ್ಯಾಷನ್ ಅಭಿರುಚಿ ಕುರಿತಂತೆ ಒಂದಿಷ್ಟು ಉದಾಹರಣೆಗಳು
· ಅಮೆರಿಕಾಕ್ಕೆ ಭೇಟಿ ನೀಡಿದಾಗ ಧರಿಸಿದ್ಧ ನೇವಿ ಬ್ಲ್ಯೂ ಸೂಟ್ ಹಾಗೂ ಭಾರತಕ್ಕೆ ಒಬಾಮಾ ಅವರು ಬಂದಾಗ ಧರಿಸಿದ್ಧ ಸ್ಥಳೀಯ ಸ್ಟೈಲ್‌ನ ಕುರ್ತಾ, ಕೇಸರಿ ಶಾಲು. ಈ ಎರಡೂ ಆಯಾ ಸಂದರ್ಭಕ್ಕೆ ಹೊಂದುವಂತಿತ್ತು. ವಿದೇಶಿ ಉನ್ನತಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.
· ಮಂಗೋಲಿಯಾ ಹಾಗೂ ಕೈರ್ಜಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿನ ಟ್ರೆಡಿಷನಲ್ ಉಡುಪು ಧರಿಸಿದ್ದು, ಪ್ರಪಂಚಾದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
· ನಾಗಾಲ್ಯಾಂಡ್‌ಗೆ ಹೋಗಿದ್ದಾಗ ಕೇವಲ ಉಡುಪು ಮಾತ್ರವಲ್ಲ, ತಲೆಗೆ ಕೊಂಬಿರುವ ಹೆಡ್‌ಗೇರ್, ಜತೆಗೆ ಕೈಯಲ್ಲಿ ಖಡ್ಗ ಹಿಡಿದು ನೀಡಿದ್ದ ಪೋಸ್ ಸಖತ್ ಸುದ್ದಿಯಾಗಿತ್ತು.
· ಕಳೆದ 2015ರ ಚೈನಾ ಪ್ರವಾಸದಲ್ಲಿ ಕ್ಸಿಯಾನ್ಸ್ ಮ್ಯೂಸಿಯಂನಲ್ಲಿ ಕಾಲಾ ಚಷ್ಮಾ ಧರಿಸಿದ್ದು ಮರೆಯುವ ಹಾಗಿಲ್ಲ!
· ಕೊರೋನಾ ಸಮಯದಲ್ಲಿ ಬಿಟ್ಟಿದ್ದ ಉದ್ದದ ಗಡ್ಡ ಹಾಗೂ ಕೂದಲು ಅವರನ್ನು ಹ್ಯಾರಿ ಪಾಟರ್ಸ್ ಸೀರೀಸ್‌ನಲ್ಲಿ ಬರುವ ನಟ ಆಲ್ಬರ್ಸ್ ಡಂಬಲ್ ಡೋರ್‌ಗೆ ನೆಟ್ಟಿಗರು ಹೋಲಿಸಿದ್ದರು.
· ಪೋರ್ಟ್ ಆಫ್ ಬ್ಲೇರ್‌ಗೆ ಭೇಟಿ ಇತ್ತಾಗ ಸಾಂಪ್ರದಾಯಿಕ ಪಂಚೆಯಲ್ಲಿ ಕಾಣಿಸಿಕೊಂಡದ್ದು ಎಲ್ಲರಿಗೂ ಪ್ರಿಯವಾಗಿತ್ತು.
· ನೇಪಾಳದ ಭೇಟಿ ವೇಳೆ ಸಂಪೂರ್ಣ ಕೇಸರಿಮಯ ಉಡುಪು ಪಕ್ಕಾ ಹಿಂದೂ ನಾಯಕರಂತೆ ಅವರನ್ನು ಬಿಂಬಿಸಿತ್ತು.
· ರಾಜಸ್ಥಾನದ ಲಾಂಜೇವಾಲಾ ಪ್ರದೇಶದಲ್ಲಿ ಸೈನಿಕರೊಂದಿಗೆ ಸೈನಿಕರಾಗಿ ಕಾಣುವಂತಹ ಉಡುಪು ಧರಿಸಿದ್ದು ವಿಶೇಷವಾಗಿ ಗಮನ ಸೆಳೆದಿತ್ತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನನ್ನೂ ಓದಿ| Celebrity Fashion corner | ಮಾಜಿ ಸಚಿವೆ ರಾಣಿ ಸತೀಶ್ ಡಿಸೈನಿಂಗ್ ಪ್ರಪಂಚ!