ಕೆಲವು ಮಂದಿಗೆ ಬೆಳಗ್ಗೆ ಬೇಗನೆ ಏಳುವುದು ಅಂದರೆ ಅಲರ್ಜಿ. ರಾತ್ರಿ ಎಷ್ಟು ಹೊತ್ತಾದರೂ ಕೂತು ಏನು ಕೆಲಸ ಮಾಡಲೂ ತಯಾರು, ಆದರೆ, ಬೆಳಗ್ಗೆ ಬೇಗ ಏಳುವುದೆಂದರೆ ಆಗಿ ಬರುವುದಿಲ್ಲ ಎಂದು ಹೇಳುವ ಮಂದಿ ಅನೇಕರು. ಬೆಳಗ್ಗಿನ ಪ್ರಖರ ಬಿಸಿಲು ಕಿಟಕಿಯಿಂದ ತೂರಿ ಹಾಸಿಗೆಗೆ ಬಿದ್ದರಷ್ಟೇ ಏಳುವುದು ಎಂಬ ದಿನಚರಿ ಮಂದಿಯೂ ಇದ್ದಾರೆ. ಇಂತಹ ಮಂದಿಗೆ ಬೆಳಗ್ಗಿನ ವಾಕಿಂಗ್ (Morning walk), ವ್ಯಾಯಾಮ (Exercise) ಇತ್ಯಾದಿಗಳನ್ನೆಲ್ಲ ತಮ್ಮ ಬದುಕಿನ ಇತರ ಕೆಲಸ ಕಾರ್ಯಗಳ ಜೊತೆಗೆ ಬೆಳಗ್ಗೆ ಮಾಡುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ, ಸಂಜೆಯ ಹೊತ್ತನ್ನು ಅಥವಾ ರಾತ್ರಿಗೆ ಈ ಕೆಲಸಗಳನ್ನೆಲ್ಲ ಶಿಫ್ಟ್ ಮಾಡಿ ಬಿಡುತ್ತಾರೆ. ರಾತ್ರಿ ಊಟದ ನಂತರದ ವಾಕಿಂಗ್, ಸಂಜೆ ಮೇಲೆ ಜಿಮ್ ಸೆಶನ್ ಇತ್ಯಾದಿ ಇತ್ಯಾದಿ ಮಾಡುತ್ತಾ ಜೀವನವನ್ನು ಬ್ಯಾಲೆನ್ಸ್ ಮಾಡಲು ನೋಡುತ್ತಾರೆ. ಆದರೂ, ಬೆಳಗ್ಗೆ ಬೇಗ ಏಳುವ ರುಚಿ ಕಂಡವರು ಮಾತ್ರ ಆ ಸುಖವನ್ನು ಅನುಭವಿಸಿಯಾರು. ಮೆಲ್ಲಮೆಲ್ಲನೆ ಕತ್ತಲನ್ನು ಸೀಳಿಕೊಂಡು ಬರುವ ಸೂರ್ಯನ ಹೊಂಬೆಳಕು, ತಂಪು ಗಾಳಿ, ತೊನೆದಾಡುವ ಗಿಡಮರಗಳು, ಹಕ್ಕಿಗಳಿಂಚರ ಎಲ್ಲವೂ ಪ್ರಕೃತಿ ಎಂತಹ ಮಾಯೆ ಎಂಬ ಸತ್ಯವನ್ನು ನಮಗೆ ಹೇಳುತ್ತವೆ. ಇಂತಹ ಬೆಳಗಿನಲ್ಲೊಮ್ಮೆ ಒಂದರ್ಧ ಗಂಟೆ ದಿನವೂ ವಾಕ್ ಮಾಡಿ ಬಂದರೆ (Health tips) ಇಡೀ ದಿನಕ್ಕೆ ಬೇಕಾದಷ್ಟು ಚೈತನ್ಯ, ಸಕಾರಾತ್ಮಕ ಯೋಚನೆ ಸಿಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬನ್ನಿ, ಬೆಳಗಿನ ವಾಕಿಂಗ್‌ನಿಂದ (Morning walk benefits) ಆಗುವ ಲಾಭಗಳೇನು ಎಂಬುದನ್ನು ನೋಡೋಣ.
1. ಬೆಳಗ್ಗೆ ಬೇಗ ಎದ್ದು ನಡೆಯುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಬೆಳವಣಿಗೆ ಆಗುತ್ತದೆ. ನಿಸರ್ಗದತ್ತವಾದ ಶಕ್ತಿ ಇದು. ಬೆಳಗಿನ ವಾತಾವರಣಕ್ಕೆ ನಮ್ಮ ದೇಹ ತೆರೆದುಕೊಂಡ ತಕ್ಷಣ ದೇಹ ಉಲ್ಲಸಿತವಾಗುತ್ತದೆ. ನಿದ್ದೆ ಹಾರಿ ಹೋಗುತ್ತವೆ. ಖುಷಿ ಮೈಮನ ತುಂಬುತ್ತದೆ. ನಿಸರ್ಗದ ಚಮತ್ಕಾರವೇ ಇದು.
2. ನಡೆಯುವುದರಿಂದ ನಿಮ್ಮ ಆಯುಸ್ಸು ವೃದ್ಧಿಯಾಗುತ್ತದೆ ಎಂದರೆ ನಂಬುತ್ತೀರಾ? ಹೌದು. ನಂಬಲೇಬೇಕು. ಯಾಕೆಂದರೆ, ನಿತ್ಯವೂ ನಡೆಯುವುದರಿಂದ ಆಗುವ ಮಾನಸಿಕ ಹಾಗೂ ದೈಹಿಕ ಆರೋಗ್ಯದಿಂದಾಗಿ ಆಯುಸ್ಸು ವೃದ್ಧಿಯಾಗುತ್ತದೆ. ಸಂತೋಷವಾಗಿ ಚುರುಕಾಗಿ ಇರುವುದರಿಂದ ಸಹಜವಾಗಿಯೇ ಸಮಸ್ಯೆಗಳು ದೂರವಾಗಿ ಜೀವನಪ್ರೀತಿ ಮೊಳೆಯುತ್ತದೆ.
3. ಬೆಳಗಿನ ನಡಿಗೆಗೂ ಏಕಾಗ್ರತೆಗೂ ಏನು ಸಂಬಂಧವಿದೆ ಎಂದು ನೀವು ಕೇಳಬಹುದು. ಆದರೆ, ಬೆಳಗ್ಗಿನ ಆರಂಭ ನಡಿಗೆಯಿಂದ ಶುರುವಾದರೆ ಖಂಡಿತವಾಗಿಯೂ ನಿಮ್ಮ ಏಕಾಗ್ರತೆಯಲ್ಲಿ ವೃದ್ಧಿ ನಿಮಗೆ ಕಾಣುತ್ತದೆ. ನಿಮ್ಮ ಶಕ್ತಿಯನ್ನು ಒಂದೇ ಕಡೆಗೆ ಕೇಂದ್ರೀಕರಿಸಿ ಒಂದು ಶಿಸ್ತುಬದ್ಧ ಬೆಳಗನ್ನು ನಿತ್ಯವೂ ಆರಂಭಿಸಿದಿರೆಂದಾದಲ್ಲಿ ಖಂಡಿತವಾಗಿಯೂ ಏಕಾಗ್ರತೆ ಹೆಚ್ಚಾಗುತ್ತದೆ. ದಿನವಿಡೀ ಅಂದುಕೊಂಡ ಕೆಲಸಗಳೆಲ್ಲ ಚಕಚಕನೆ ಮುಗಿಯುತ್ತದೆ. ಚುರುಕುತನದಿಂದ ಎಲ್ಲವನ್ನೂ ಒಂದೇ ಏಕಾಗ್ರತೆಯಿಂದ ಮಾಡಿ ಮುಗಿಸುವ ಶ್ರದ್ಧೆ ನಿಮ್ಮಲ್ಲಿ ಹೆಚ್ಚುತ್ತದೆ.
4. ಕ್ರಿಯಾಶೀಲ ಮನಸ್ಸುಗಳು ಖಂಡಿತವಾಗಿ ಬೆಳಗನ್ನು, ಸಂಜೆಯನ್ನು ಇಷ್ಟಪಡುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಬೆಳಗ್ಗೆ ಎದ್ದು ಒಂದು ವಾಕ್ ಮಾಡಿ ಬಂದರೆ ಕ್ರಿಯಾಶೀಲ ಮನಸ್ಸುಗಳು ಇನ್ನೂ ಚುರುಕಾಗುತ್ತವೆ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಾಗುತ್ತದೆ. ಮನಸ್ಸು ಪ್ರಫುಲ್ಲವಾಗಿದ್ದಾಗ, ಹೊಸ ಹೊಸ ಐಡಿಯಾಗಳೂ, ಕ್ರಿಯಾತ್ಮಕ ಯೋಚನೆಗಳೂ ಬರುತ್ತವೆ.
ಇದನ್ನೂ ಓದಿ: Health Tips: ಇತ್ತೀಚೆಗೆ ಸಾಮಾನ್ಯವಾದ ಅಸ್ಥಿರಂಧ್ರತೆ ಅಥವಾ ಆಸ್ಟಿಯೋಪೋರೋಸಿಸ್ ಸಮಸ್ಯೆಗೆ ಪರಿಹಾರವೇ ಇಲ್ಲವೇ?
5. ಮುಖ್ಯವಾಗಿ ಬೆಳಗಿನ ವಾಕಿಂಗ್ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಮಿದುಳನ್ನು ಚುರುಕಾಗಿಸುತ್ತದೆ. ಬೆಳಗಿನ ಸೂರ್ಯನ ಕಿರಣಗಳಿಗೆ ಮನಸ್ಸು, ದೇಹ ತೆರೆದುಕೊಂಡ ತಕ್ಷಣ ದೇಹದ ಎಲ್ಲ ಚಟುವಟಿಕೆಗಳು ಚುರುಕಾಗುತ್ತವೆ. ಮೈಮನಸ್ಸುಗಳು ಜಡತ್ವದಿಂದ ಹೊರಗೆ ಬರುತ್ತವೆ. ಮನಸ್ಸು ಹೊಸತನ್ನು ಸ್ವತಂತ್ರವಾಗಿ ಆಲೋಚಿಸುತ್ತದೆ.
6. ದೇಹಕ್ಕೆ ಬೇಕಾದ ವಿಟಮಿನ್ ಡಿ ಸೂರ್ಯನಿಂದ ಲಭ್ಯವಾಗುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸರಿಯಾದ ರೀತಿಯಲ್ಲಿ ದೇಹಕ್ಕೆ ಸೇರುತ್ತದೆ. ರಕ್ತಪರಿಚಲನೆ ಸರಿಯಾಗಿ ಆಗಿ, ಹೃದಯದ ಆರೋಗ್ಯವೂ ವೃದ್ಧಿಸುತ್ತದೆ. ಮಾಂಸಖಂಡಗಳು ಹಾಗೂ ಸ್ನಾಯುಗಳು ಚುರುಕಾಗಿ ಬಲಗೊಳ್ಳುತ್ತವೆ. ದೇಹದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ರಾತ್ರಿ ಒಳ್ಳೆಯ ನಿದ್ದೆಯೂ ಬರುತ್ತದೆ.
ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?