ಬೆಂಗಳೂರು: ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಯಾಕೆಂದರೆ ಸೊಳ್ಳೆಗಳಿಗೆ (Mosquito) ಬೆಚ್ಚಗಿರುವ ವಾತಾವರಣ ಬೇಕಾಗಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಿ ಬೆಳೆಯುತ್ತದೆ. ಆದ್ದರಿಂದ ಸಂಜೆಯ ವೇಳೆ ಮನೆಯೊಳಗೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಇವುಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಮುಂತಾದ ಕಾಯಿಲೆಗಳು ಕಾಡುತ್ತದೆ. ಇವುಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಾಗಬಹುದು. ಜಗತ್ತಿನಲ್ಲಿ ಕೆಲವು ಜನರು ಸೊಳ್ಳೆಗಳಿಂದ ಹರಡುವ ಕಾಯಿಲೆಗಳಿಂದ ಜೀವ ಕಳೆದುಕೊಂಡಿದ್ದಾರೆ.
ಹಾಗಾಗಿ ಕೆಲವರು ಸೊಳ್ಳೆಗಳನ್ನು ಓಡಿಸಲು ರಾಸಾಯನಿಕಯುಕ್ತ ಸೊಳ್ಳೆ ಬತ್ತಿ, ಲಿಕ್ವಿಡ್ ಗಳನ್ನು ಬಳಸುತ್ತಾರೆ. ಆದರೆ ಇದರ ಗಾಳಿ ಮನೆಯೊಳಗೆ ಹರಡಿಕೊಳ್ಳುತ್ತದೆ. ಈ ಗಾಳಿಯನ್ನು ನಾವು ಉಸಿರಾಡಿದಾಗ ಇದು ನಮ್ಮ ಶ್ವಾಸಕೋಶಕ್ಕೆ ಸೇರಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ.
ನೀಲಗಿರಿ ಎಣ್ಣೆ
ಇದು ಸೊಳ್ಳೆಗಳನ್ನು ಓಡಿಸಲು ಬಹಳ ಸಹಕಾರಿ. ಇದರ ವಾಸನೆಗೆ ಸೊಳ್ಳೆಗಳು ಮನೆಯ ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ನೀಲಗಿರಿ ಎಣ್ಣೆಗೆ ಸೂರ್ಯಕಾಂತಿ ಅಥವಾ ಇತರ ಎಣ್ಣೆಗಳನ್ನು ಮಿಕ್ಸ್ ಮಾಡಿ ಮನೆಯೊಳಗೆ ಸ್ಪ್ರೇ ಮಾಡಿ. ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ಲ್ಯಾವೆಂಡರ್ ಆಯಿಲ್
ಇದರ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ. ಹಾಗಾಗಿ ಈ ಎಣ್ಣೆಯನ್ನು ಮನೆಯ ಸುತ್ತಮುತ್ತಲು ಮತ್ತು ನಿಮ್ಮ ಬಟ್ಟೆಗಳಿಗೆ ಸ್ಪ್ರೇ ಮಾಡಿ. ಇದರಿಂದ ಸೊಳ್ಳೆ ಮನೆಯೊಳಗೆ ಬರುವುದಿಲ್ಲ ಮತ್ತು ನೀವು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು.
ದಾಲ್ಚಿನ್ನಿ ಎಣ್ಣೆ
ಇದನ್ನು ದಾಲ್ಚಿನ್ನಿ ತೊಗಟೆಯಿಂದ ತಯಾರಿಸಲಾಗುತ್ತದೆ. ಇದು ಸೊಳ್ಳೆ ನಿವಾರಕ ಗುಣವನ್ನು ಹೊಂದಿದೆ. ಇದು ಉತ್ತಮ ಪರಿಮಳವನ್ನು ಹೊಂದಿದ್ದು, ಹಾನಿಕಾರಕ ಕೀಟಗಳನ್ನು ನಾಶ ಮಾಡುತ್ತದೆ. ಇದು ಸೊಳ್ಳೆಗಳ ಮೊಟ್ಟೆಗಳನ್ನು ನಾಶ ಮಾಡಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.
ಥೈಮ್ ಎಣ್ಣೆ
ಮಲೇರಿಯಾ ಕಾಯಿಲೆಗೆ ಕಾರಣವಾಗುವಂತಹ ಸೊಳ್ಳೆಗಳನ್ನು ನಾಶ ಮಾಡಲು ಇದು ಸಹಕಾರಿಯಾಗಿದೆ. ಹಾಗಾಗಿ ಈ ಎಣ್ಣೆಯ ಜೊತೆಗೆ ಕೆಲವು ಹನಿ ಆಲಿವ್ ಆಯಿಲ್ ಅಥವಾ ಜೊಜೊಬಾ ಆಯಿಲ್ ಅನ್ನು ಬೆರೆಸಿ ನಂತರ ಇದಕ್ಕೆ ನೀರನ್ನು ಮಿಕ್ಸ್ ಮಾಡಿ ಮನೆಯೊಳಗೆ ಮತ್ತು ಮನೆಯ ಸುತ್ತಮುತ್ತಲೂ ಸ್ಪ್ರೇ ಮಾಡಿ. ಇದರಿಂದ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬಹುದು.
ಇದನ್ನೂ ಓದಿ: Lok Sabha Election 2024: ಮೋದಿ ನೇತೃತ್ವದಲ್ಲಿ ಭಾರತ ವಿಶ್ವದ ಹಿರಿಯಣ್ಣ ಆಗಲಿದೆ: ಪ್ರಲ್ಹಾದ್ ಜೋಶಿ
ಬೇ ಎಲೆಗಳು
ಬೇ ಎಲೆಗಳು ಅಡಿಗೆಗೆ ಮಾತ್ರವಲ್ಲ ಸೊಳ್ಳೆಗಳು ಮನೆಯೊಳಗೆ ಬಂದು ಕಾಟ ಕೊಡುವುದನ್ನು ತಡೆಯಲು ಬಳಸಬಹುದು. ಅದಕ್ಕಾಗಿ ಬೇ ಎಲೆಗಳನ್ನು ಮನೆಯೊಳಗೆ ಸುಟ್ಟು ಹಾಕಿ. ಇದರ ವಾಸನೆ ಮನೆಯೊಳಗೆ ಹರಡುವಂತೆ ಮಾಡಿ. ಇದರಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ಆದರೆ ಬೇ ಎಲೆಗಳನ್ನು ಸುಡುವಾಗ ಮನೆಯ ಕಿಟಕಿಗಳನ್ನು ತೆರೆದಿಡಿ. ಇಲ್ಲವಾದರೆ ಆಮ್ಲಜನಕದ ಕೊರತೆಯಿಂದ ಸಮಸ್ಯೆಯಾಗಬಹುದು.