ವೃತ್ತಿಪರತೆ ಎಂಬುದು ಪ್ರತಿಯೊಬ್ಬರೂ ಮೈಗೂಡಿಸಬೇಕಾದ ಗುಣ. ಕಚೇರಿಯಲ್ಲಿ ನಡೆದುಕೊಳ್ಳುವ ವಿಧಾನದಲ್ಲಿ ನಮ್ಮ ಗುಣನಡತೆಯನ್ನು ಸುಲಭವಾಗಿ ಅಂದಾಜಿಸಬಹುದು. ಕೇವಲ ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಲದು. ಕೆಲವೊಂದು ವೃತ್ತಿಪರ ಗುಣಗಳನ್ನು ನಾವು ಬೆಳೆಯುತ್ತಾ ಮೈಗೂಡಿಸಿಕೊಳ್ಳಬೇಕು. ಆಗಷ್ಟೇ ವೃತ್ತಿಜೀವನದಲ್ಲಿ ಮೇಲೇರಬಹುದು.
ಹಾಗಾದರೆ ಒಂದು ಕಚೇರಿಗೆ ಕೆಲಸಕ್ಕೆ ಸೇರಿದರೆ ಏನನ್ನೆಲ್ಲ ಮಾಡಬಾರದು? ಹೇಗಿರುವುದು ಬಹಳ ಅಗತ್ಯ ಎಂಬ ಪ್ರೊಫೆಷನಲ್ ಸೀಕ್ರೆಟ್‌ಗಳನ್ನು ನೋಡೋಣ
೧. ನೀವು ಕೆಲಸ ಮಾಡುವ ಕಚೇರಿ ನಿಮ್ಮ ಕಚೇರಿ ಸಮಯದ ನಂತರ ನೀವು ಎಲ್ಲಿ ಹೋಗಿದ್ದೀರಿ, ಏನು ಮಾಡಿದ್ದೀರಿ ಎಂದು ತಲೆಕೆಡಿಸಿಕೊಳ್ಳುವುದಿಲ್ಲ. ಕಚೇರಿ ಸಮಯದಲ್ಲಿ ಸರಿಯಾಗಿ ಕೆಲಸ ಮಾಡುವುದೊಂದೇ ಅದು ಗಮನಿಸುವ ಅಂಶ. ಹಾಗಾಗಿ, ಕಚೇರಿ ಮುಗಿಸಿ ನೀವು ಗೆಳೆಯರ ಜೊತೆ ರಾತ್ರಿಪೂರ್ತಿ ಕುಡಿದು, ಕುಣಿದು ಕುಪ್ಪಳಿಸಿದ್ದರೂ, ಮರುದಿನ ಕಚೇರಿಯಲ್ಲಿ ಸರಿಯಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ನೀವಿರಬೇಕು. ಆ ಸ್ಥಿತಿಯಲ್ಲಿ ನೀವಿಲ್ಲ ಎಂದಾದರೆ ರಜೆ ಹಾಕುವುದೇ ಬೆಸ್ಟ್. ಹೋಗಿ, ವಿಚಿತ್ರ ಸ್ಥಿತಿಯಲ್ಲಿ ನೀವಿದ್ದು ಕೆಲಸ ಮಾಡುವುದರಿಂದ ಬೇಜವಾಬ್ದಾರಿ ಮಂದಿ ಎಂಬ ಹಣೆಪಟ್ಟಿ ಹೊರಬೇಕಾದೀತು.
೨. ಕದಿಯುವುದು ಒಳ್ಳೆಯದಲ್ಲ. ಅದು ಯಾರೋ ತಮ್ಮ ಮನೆಯಿಂದ ತಂದಿಟ್ಟ ಊಟದ ಡಬ್ಬಿಯಿರಬಹುದು, ಕದಿಯುವುದು ಶೋಭೆ ತರುವುದಿಲ್ಲ. ಅಥವಾ ಇನ್ನೊಬ್ಬರು ಮೊದಲೇ ಆಲೋಚಿಸಿಕೊಂಡ ಐಡಿಯಾ ಕದ್ದು ತಾನೇ ಮಾಡಿದ್ದೆಂದು ಬಣ್ಣ ಹಚ್ಚಬೇಡಿ. ನಿಮ್ಮ ಮೇಲಧಿಕಾರಿಯಿಂದ ಗುಡ್ ಅನ್ನಿಸಿಕೊಳ್ಳುವ ತೆವಲಿಗೆ ಇಂಥದ್ದನ್ನು ಮಾಡಬೇಡಿ. ಬೇರೆಯವರ ಶ್ರಮಕ್ಕೂ ಬೆಲೆ ಕೊಡಿ.
೩. ನಿಮ್ಮ ಖಾಸಗಿ ವಿಚಾರಗಳಲ್ಲಿ ಇತರ ಸಹೋದ್ಯೋಗಿಗಳನ್ನು ಎಳೆಯಬೇಡಿ. ಸಹೋದ್ಯೋಗಿಗಳು ನಿಮ್ಮ ಆಪ್ತಮಿತ್ರರೇ ಇರಬಹುದು. ಆದರೂ ಅವರೆದುರು ನಿಮ್ಮ ಸಂಗಾತಿಯ ಜೊತೆ ಇದ್ದಾಗ ನಿಮ್ಮ ಸಂಗಾತಿಯ ಜೊತೆಗೆ ಫೋನಿನಲ್ಲಿ ಜಗಳವಾಡುವುದು ಇತ್ಯಾದಿ ಮಾಡಬೇಡಿ. ಕಚೇರಿಯಲ್ಲಿ ಕಚೇರಿಯ ಸಭ್ಯತೆ ಪಾಲಿಸಿ. ಪ್ರೋಫೆಷನಲ್ ಆಗಿರಿ.
ಇದನ್ನೂ ಓದಿ | ಅನಾಮಿಕ ಹಿರಿಯರ ಸ್ವಗತಗಳು: ಹೆತ್ತವರಾಗಿ ನಾವಂದು ಹಾಗೆ ಮಾಡಬಾರದಿತ್ತು!
೪. ಏನೋ ಗಂಭೀರವಾದ ಪ್ರಾಜೆಕ್ಟ್ ನಡುವೆ ಕೆಲಸದ ಸಮಯದಲ್ಲಿ ಇದ್ದಕ್ಕಿದ್ದಂತೆ ಡೆಸ್ಕಿನಿಂದ ಮಾಯವಾಗುವುದು, ನಿಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸದೇ ಹೊರಟು ಬಿಡುವುದು ತುಂಬ ಕೆಟ್ಟ ಅಭ್ಯಾಸ. ನಿಮಗೆ ನಿಜವಾಗಿಯೂ ತೊಂದರೆಯಿದ್ದರೆ, ಅಗತ್ಯವಾಗಿ ಹೋಗಲೇಬೇಕಿದ್ದರೆ, ಮೊದಲೇ ತಿಳಿಸಿ ಹೋಗುವುದು ಸಭ್ಯತೆ.
೫. ಗಾಸಿಪ್ ಹರಡುವುದು ಕೂಡಾ ಒಳ್ಳೆಯ ಅಭ್ಯಾಸವಲ್ಲ. ಹೊಟ್ಟೆಕಿಚ್ಚು, ಹತಾಶೆಯಿಂದ ಸಹೋದ್ಯೋಗಿಯ ಬಗ್ಗೆ ತಮ್ಮ ಗುಂಪಿನಲ್ಲಿ ವೃಥಾ ಗಾಸಿಪ್ ಮಾಡುವುದು ನಿಜವಾಗಿಯೂ ನಿಮಗೆ ಶೋಭೆ ತರುವುದಿಲ್ಲ. ನೀವು ಇನ್ನೊಬ್ಬರೊಂದಿಗೆ ಚೆನ್ನಾಗಿದ್ದರೆ ಅವರೂ ನಿಮ್ಮೊಂದಿಗೆ ಚೆನ್ನಾಗಿರುತ್ತಾರೆ, ನೆನಪಿಡಿ.
೬. ಇನ್ನೊಬ್ಬರನ್ನು ದೂರುವುದು ಕೂಡಾ ಕೆಟ್ಟದ್ದೇ. ಒಂದೇ ಟೀಮ್‌ನಲ್ಲಿ ಕೆಲಸ ಮಾಡುವಾಗ, ನಿಮ್ಮದೇನೂ ತಪ್ಪಿಲ್ಲವೆಂದಾದರೂ, ಬೇರೆಯವರ ತಪ್ಪೇ ಇದ್ದರೂ, ಒಬ್ಬರನ್ನೇ ಗುರಿಯಾಗಿಸಿ ದೂರುವುದು ಒಳ್ಳೆಯ ಲಕ್ಷಣವಲ್ಲ. ಟೀಮ್‌ನಿಂದಾದ ತಪ್ಪು ಎಂದು ಒಪ್ಪಿಕೊಳ್ಳುವುದನ್ನು ಕಲಿಯಿರಿ. ಸಮಸ್ಯೆಯಿಂದ ಎಸ್ಕೇಪ್ ಆಗುವುದನ್ನಲ್ಲ. ತಪ್ಪನ್ನು ಸರಿಪಡಿಸಲು ಒಂದು ಟೀಂ ಆಗಿ ದುಡಿಯುವುದನ್ನು ಕಲಿಯಿರಿ. ಆಗ ತಪ್ಪು ಮಾಡಿದವರಿಗೂ ನಿಮ್ಮ ಮೇಲೆ ಗೌರವ ಮೂಡುತ್ತದೆ.
ಇದನ್ನೂ ಓದಿ | Real men | ಒಳ್ಳೆಯ ಪುರುಷರು ಈ 10 ಕೆಲಸಗಳನ್ನು ಯಾವತ್ತಿಗೂ ಮಾಡುವುದಿಲ್ಲ!
೭. ಇನ್ನೊಬ್ಬರನ್ನು ನೋಯಿಸುವುದು ಕೂಡಾ ಒಳ್ಳೆಯದಲ್ಲ. ದೈಹಿಕವಾಗಿ ಅಥವಾ ಮಾನಸಿಕವಾಗಿ ಇರಬಹುದು. ಒಂದು ಟೀಮ್‌ನಲ್ಲಿ ಕೆಲಸ ಮಾಡುವಾಗ ತಪ್ಪಿರಲಿ ಇಲ್ಲದಿರಲಿ, ಟೀಮ್ ಮಂದಿಯ ಮೇಲೆ ಹರಿಹಾಯುವುದು, ಕಿರುಚಾಡುವುದು, ಹೊಡೆಯುವುದು ಒಳ್ಳೆಯದಲ್ಲ. ಹೇಳಬೇಕಾದುದನ್ನು ಕಿರುಚಾಡದೆ ನೇರವಾಗಿ, ಸ್ಪಷ್ಟವಾಗಿ ಹೇಳಬಹುದು ಎಂಬುದು ನೆನಪಿನಲ್ಲಿರಲಿ. ಅಂತಹ ಕ್ಷಮತೆಯನ್ನು ರೂಢಿಸಿಕೊಳ್ಳಿ. ತಾಳ್ಮೆ ಇರಲಿ. ನಿಮ್ಮ ಕೆಳಗಿನ ಕೆಲಸಗಾರರಿಗೂ ಆತ್ಮಗೌರವ ಇದೆ ಎಂಬುದನ್ನು ಮರೆಯಬೇಡಿ. ಇಂತಹ ಸಾಮಾನ್ಯ ತಿಳುವಳಿಕೆಗಳು ನಿಮಗಿದ್ದರೆ ನೀವು ನಿಮ್ಮ ವೃತ್ತಿಜೀವನದಲ್ಲಿ ಮುಂದಕ್ಕೆ ಹೋಗುತ್ತೀರಿ.