Site icon Vistara News

Orange Peel Benefits: ಕಿತ್ತಳೆ ಸಿಪ್ಪೆ ಎಸೆಯದಿರಿ, ನಿಮ್ಮ ಸೌಂದರ್ಯವರ್ಧಕ ನೀವೇ ತಯಾರಿಸಿ!

orange peel

ಚಳಿಗಾಲ ಬಂದೊಡನೆ ಮಾರುಕಟ್ಟೆಯ ತುಂಬ ಕಿತ್ತಳೆಯೂ ರಾಶಿ ಬೀಳುತ್ತದೆ. ಸಿ ವಿಟಮಿನ್‌ (Vitamin C) ಹಾಗೂ ಭರಪೂರ ಪೋಷಕಾಂಶಗಳಿಂದ (Nutrients) ಸಮೃದ್ಧವಾಗಿರುವ ಈ ಕಿತ್ತಳೆ ಹಣ್ಣು (Orange fruit) ರೋಗ ನಿರೋಧಕ (immunity) ಶಕ್ತಿಯನ್ನೂ ಹೆಚ್ಚು ಮಾಡುತ್ತದೆ. ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು (winter health problems) ಹತ್ತಿರ ಸುಳಿಯದಂತೆ ಕಾಫಾಡುವ ಶಕ್ತಿಯೂ ಈ ಕಿತ್ತಳೆಯಲ್ಲಿದೆ. ಇಂತಹ ಕಿತ್ತಳೆ ಹಣ್ಣನ್ನು ತಿಂದು ತಿಂದು ಸಿಪ್ಪೆಯನ್ನು ಮಾತ್ರ ಕಸದ ಬುಟ್ಟಿಗೆ ಎಸೆಯುತ್ತಿದ್ದೀರಾ? ಹಾಗಾದರೆ, ಮತ್ತೆ ಎಸೆಯುವ ಮೊದಲು ಒಮ್ಮೆ ಯೋಚಿಸಿ. ಅಂಗೈಯಲ್ಲಿ ಬಂಗಾರವನ್ನಿಟ್ಟು ಅದಕ್ಕಾಗಿ ಊರೆಲ್ಲ ಹುಡುಕಿದ ಹಾಗಾಯಿತು ನಿಮ್ಮ ಸ್ಥಿತಿ. ಯಾಕೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಸೌಂದರ್ಯವರ್ಧಕಗಳಿಗಿಂತಲೂ (Cosmetics) ಒಳ್ಳೆಯ ಫಲ ನೀಡುವ ಕಿತ್ತಳೆ ಸಿಪ್ಪೆಯೇ (Orange Peel Benefits) ನಿಮ್ಮ ಕೈಯಲ್ಲಿರುವಾಗ ವೃಥಾ ಅದನ್ನು ನಿರ್ಲಕ್ಷಿಸುವುದು ಸರಿಯೇ ಹೇಳಿ. ಕೊಂಚ ತಾಳ್ಮೆಯಿದ್ದರೆ, ನಿಮ್ಮ ಸೌಂದರ್ಯವರ್ಧಕವನ್ನು ನೀವೇ ತಯಾರಿ ಮಾಡಿಕೊಳ್ಳಬಹುದು!

1. ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಂಡರೆ, ಮಾರುಕಟ್ಟೆಯಿಂದ ಸ್ಕ್ರಬ್‌ಗೆ ದುಡ್ಡು ಕೊಡಬೇಕಾಗಿಲ್ಲ. ಒಣಗಿಸಿಟ್ಟುಕೊಂಡ ಕಿತ್ತಳೆಯ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಪುಡಿ ಮಾಡಿಕೊಂಡು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡರೆ ಆಗಾಗ ವಾರಕ್ಕೊಮ್ಮೆ ಈ ಕಿತ್ತಳೆ ಸಿಪ್ಪೆಯ ಪುಡಿಗೆ ನೀರು ಹಾಗೂ ಮೊಸರು ಸೇರಿ ಮುಖಕ್ಕೆ ಸ್ಕ್ರಬ್‌ ಮಾಡಿಕೊಳ್ಳಬಹುದು. ನೈಸರ್ಗಿಕವಾದ ಈ ಸ್ಕ್ರಬ್‌ ಸಾಮಾನ್ಯವಾದ ಮಾರುಕಟ್ಟೆಯ ರಾಸಾಯನಿಕಯುಕ್ತ ಸ್ಕ್ರಬ್‌ಗಳಿಗಿಂತಲೂ ಚೆನ್ನಾಗಿ ಫಲ ನೀಡುತ್ತದೆ. ಚರ್ಮದ ಒಣ ಸತ್ತ ಪದರಗಳು ಬಿದ್ದು ಹೋಗಿ ನಿಮ್ಮ ಮುಖದ ಚರ್ಮ ನಳನಳಿಸುತ್ತದೆ.

2. ಕಿತ್ತಳೆ ಸಿಪ್ಪೆಯನ್ನು ಹಾಗೆಯೇ ಕಸದ ಬುಟ್ಟಿಗೆ ಹಾಕುವ ಮೊದಲು ಒಂದಿಷ್ಟು ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಮೇಲೆ ನೀರನ್ನು ಸೋಸಿಕೊಂಡು ತಣಿಸಿ ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿಡಿ. ಆಗಾಗ ಮುಖಕ್ಕೆ ಇದನ್ನು ಟೋನರ್‌ನಂತೆ ಬಳಸಿಕೊಳ್ಳಬಹುದು. ಇದು ಮುಖದ ರಂಧ್ರಗಳನ್ನು ಬಿಗಿಗೊಳಿಸಿ ನೈಸರ್ಗಿಕ ಕಾಂತಿಯನ್ನು ಚಿಮ್ಮಿಸಿ ಯೌವನವನ್ನು ತುಳುಕಿಸುತ್ತದೆ. ಈ ನೀರನ್ನು 10ರಿಂದ 15 ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ನಿತ್ಯವೂ ಬಳಸಬಹುದು.

3. ಒಣಗಿಸಿ ಪುಡಿ ಮಾಡಿಟ್ಟುಕೊಂಡ ಕಿತ್ತಳೆ ಪುಡಿಯನ್ನು ಜೇನಿನ ಜೊತೆಗೆ ಮಿಕ್ಸ್‌ ಮಾಡಿ ಮುಖಕ್ಕೆ ಪ್ಯಾಕ್‌ ಹಚ್ಚಿಕೊಳ್ಳಬಹುದು. ಈ ಫೇಸ್‌ ಪ್ಯಾಕ್‌ ಮುಖವನ್ನು ಇನ್ನಷ್ಟು ಹೊಳಪಾಗಿಸುತ್ತದೆ. 15-20 ನಿಮಿಷಗಳ ಕಾಳ ಇಟ್ಟುಕೊಂಡು ತೊಳೆಯಿರಿ.

4. ಕಿತ್ತಳೆಯ ಸಿಪ್ಪೆಯ ಒಳಭಾಗವನ್ನು ಅಂದರೆ ಬಿಳಿಯ ಭಾಗವನ್ನು ಚರ್ಮಕ್ಕೆ ಉಜ್ಜಿ. ಇದು ಹೆಚ್ಚುವರಿ ಎಣ್ಣೆಯಂಶ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ಮೊಡವೆಯನ್ನು ತಡೆಯುತ್ತದೆ.

5. ಕಿತ್ತಳೆ ಸಿಪ್ಪೆಯನ್ನು ಎಸೆಯದೆ, ಅದನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಡಿ. ಈ ನೀರು ಕೇವಲ ಒಳ್ಳೆಯ ಪರಿಮಳವನ್ನಷ್ಟೇ ಅಲ್ಲ, ನೀರಿಗೆ ಸಿಟ್ರಸ್‌ ತೈಲದಂಶವನ್ನೂ ಸೇರಿಸುವ ಮೂಲಕ ಚರ್ಮವನ್ನು ಹೊಳಪಾಗಿಸುತ್ತದೆ.

ಇದನ್ನೂ ಓದಿ: Dinner time: ಸೂರ್ಯಾಸ್ತಕ್ಕೂ ಮೊದಲೇ ರಾತ್ರಿಯೂಟ ಮಾಡುವ ಅಭ್ಯಾಸದ ಲಾಭಗಳೇನು ಗೊತ್ತೇ?

6. ಕಿತ್ತಳೆ ಸಿಪ್ಪೆಗೆ ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಕೊಂಚ ಆಲಿವ್‌ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣದಿಂದ ದೇಹದ ಚರ್ಮಕ್ಕೆ ಮಸಾಜ್‌ ಮಾಡಿ. ಬಾಡಿ ಸ್ಕ್ರಬ್‌ ಆಗಿ ಬಳಸಿ. ಇದು ಒಣ, ಸತ್ತ ಚರ್ಮವನ್ನು ತೆಗೆದು ಚರ್ಮವನ್ನು ಹೊಳಪಾಗಿ, ನುಣುಪಾಗಿಸುತ್ತದೆ.

7. ಕಣ್ಣಿನ ಅಡಿಭಾಗದಲ್ಲಿ ಕಪ್ಪಾಗಿಬಿಡುವುದು ಹಾಗೂ ಊದಿಕೊಳ್ಳುವುದು ಇತ್ಯಾದಿ ಸಮಸ್ಯೆಗಳಿಗೂ ಕಿತ್ತಳೆ ಸಿಪ್ಪೆ ಒಳ್ಳೆಯದು. ಕಿತ್ತಳೆ ಸಿಪ್ಪೆಯನ್ನು ಫ್ರಿಡ್ಜ್‌ನಲ್ಲಿಟ್ಟು ನಂತರ ತಣ್ಣಗಿನ ಸಿಪ್ಪೆಯನ್ನು ಕಣ್ಣ ಕೆಳಗಿನ ವರ್ತುಲದ ಮೇಲೆ ಸ್ವಲ್ಪ ಹೊತ್ತು ಇಡಬಹುದು.

8. ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಂಗಿನೆಣ್ಣೆಯ ಜೊತೆಗೆ ಬೆರೆಸಿದರೆ ಅದನ್ನು ಲಿಪ್‌ ಬಾಮ್‌ವಂತೆಯೂ ಬಳಸಬಹುದು.

ಇದನ್ನೂ ಓದಿ: Ragi malt Benefits: ಮುಂಜಾನೆ ರಾಗಿ ಅಂಬಲಿ ಸೇವಿಸಿ, ಆರೋಗ್ಯದ ಚಿಂತೆ ಮರೆತುಬಿಡಿ!

Exit mobile version