Site icon Vistara News

Parenting Tips: ಪ್ರತಿ ಬ್ಯುಸಿ ತಾಯಿಯೂ ಮಕ್ಕಳಿಗೆ ಮಾಡಿಕೊಡಲೇಬೇಕಾದ ದಿಢೀರ್‌ ಪರಾಠಾಗಳಿವು!

paratha

ಮಕ್ಕಳಿಗೆ ಆರೋಗ್ಯಕರ ಅಡುಗೆ ಮಾಡಿ ಬಡಿಸುವುದು ತಾಯಂದಿರಿಗೆ ಇರುವ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದು. ದಿನವೂ ಶಾಲೆಗೆ ಊಟಕ್ಕೆ ಏನು ಮಾಡಿ ಕೊಡಲಿ ಎಂದು ಎಷ್ಟೇ ಬ್ಯುಸಿ ಅಮ್ಮನೂ ರಾತ್ರಿ ಕೂತು ಒಮ್ಮೆ ಯೋಚಿಸುತ್ತಾಳೆ. ತನ್ನ ಗಡಿಬಿಡಿಯಲ್ಲಿ, ಕೆಲಸದ ಒತ್ತಡದಲ್ಲಿ ಬೆಳೆಯುವ ಮಕ್ಕಳಿಗೆ ಸರಿಯಾದ ಪೋಷಕಾಂಶಗಳು ಸಿಗದಂತೆ ಆಗದಿರಲಿ ಎಂದು ಪ್ರತಿ ತಾಯಿಯೂ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ. ಇಂದಿನ ಫಾಸ್ಟ್‌ಫುಡ್‌ ಯುಗದಲ್ಲಿ ಥರಹೇವಾರಿ ರುಚಿಯನ್ನು ಎಳವೆಯಲ್ಲಿಯೇ ಕಂಡ ಪುಟ್ಟ ಮಕ್ಕಳ ನಾಲಿಗೆಗೆ ಸಂತೃಪ್ತಿಯನ್ನು ನೀಡುವ ಜೊತೆಗೆ ದೇಹಕ್ಕೆ ಬೇಕಾದ ಸಕಲ ಪೋಷಕಾಂಶಗಳನ್ನು ಒದಗಿಸುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತ ಅಮ್ಮಂದಿರ ಈ ಕೆಲಸ ಸುಲಭವೇನಲ್ಲ. ದಿನವೂ ವೆರೈಟಿಯಾಗಿ ಮಕ್ಕಳಿಗೆ ತಿನ್ನಿಸಲು ಟೊಂಕಕಟ್ಟಿ ನಿಂತ ಅಮ್ಮಂದಿರು ಪೋಷಕಾಂಶಗಳ ಜೊತೆ ರಾಜಿ ಮಾಡಿಕೊಳ್ಳದೆ ದಿಡೀರ್‌ ಮಾಡಬಹುದಾದ ಕೆಲವು ಆಸಕ್ತಿಕರ ಪರಾಠಾಗಳು ಇಲ್ಲಿವೆ.

೧. ಮೆಂತ್ಯಸೊಪ್ಪಿನ ಪರಾಠಾ: ಚಳಿಗಾಲದಲ್ಲಿ ಮಾರುಕಟ್ಟೆ ತುಂಬಾ ಕಟ್ಟುಕಟ್ಟಾಗಿ ಸಿಗುವ ಮೆಂತ್ಯಸೊಪ್ಪನ್ನು ತಂದು ನೀವಷ್ಟೇ ಅಡುಗೆ ಮಾಡಿ ತಿನ್ನುತ್ತಿದ್ದೀರಾ? ಮಕ್ಕಳು ಮೆಂತ್ಯಸೊಪ್ಪೆಂದರೆ ಮೂಗು ಮುರಿಯುತ್ತಾರಾ? ಹಾಗಿದ್ದರೆ ಈದನ್ನು ಟ್ರೈ ಮಾಡಲೇಬೇಕು. ಮಕ್ಕಳಿಗೆ ಗೊತ್ತೇ ಆಗದಂತೆ ಅವರಿಗಿಷ್ಟವಾಗದ ತರಕಾರಿ ಸೊಪ್ಪುಗಳನ್ನು ಹೊಟ್ಟೆ ಸೇರುವಂತೆ ಮಾಡಲು ತಾಯಂದಿರು ಹೀಗೆ ತಲೆ ಖರ್ಚು ಮಾಡದಿದ್ದರೆ ಅವರಿಗೆ ಉಳಿಗಾಲವಿಲ್ಲ. ಸಣ್ಣದಾಗಿ ಹೆಚ್ಚಿದ ಮೆಂತ್ಯಸೊಪ್ಪನ್ನು ಹಿಟ್ಟಿನ ಜೊತೆ ಸೇರಿಸಿ, ಕೊಂಚ ಜೀರಿಗೆ ಪುಡಿ, ಉಪ್ಪು, ಮೆಣಸಿನ ಪುಡಿ, ಕೊಂಚ ಮೊಸರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಚಪಾತಿಯಂತೆ ಲಟ್ಟಿಸಿ ಕಾವಲಿಯಲ್ಲಿ ಬೇಯಿಸಿ. ರುಚಿಯಾದ ಪೋಷಕಾಂಶಯುಕ್ತ ಮೆಂತ್ಯಸೊಪ್ಪಿನ ಪರಾಠಾ ರೆಡಿ. ಮೊಸರಿನ ಜೊತೆ ತಿನ್ನಲು ಬಹಳ ರುಚಿ.

೨. ಬೀಟ್‌ರೂಟ್‌ ಪರಾಠಾ: ಚಳಿಗಾಲದಲ್ಲಿ ತಾಜಾ ಬೀಟ್‌ರೂಟ್‌ ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಬೀಟ್‌ರೂಟ್‌ ಸವಿಯಲು ಇದು ಸಕಾಲ. ಮಕ್ಕಳ ಆಹಾಋದಲ್ಲಿ ಅವಶ್ಯವಾಗಿ ಸೇರಿಸಲೇಬೇಕಾದ ಬೀಟ್‌ರೂಟನ್ನೂ ಚಂದನೆಯ ಪಿಂಕ್‌ ಪರಾಠಾ ಮಾಡಿ ಮಕ್ಕಳಿಗೆ ಸವಿಯಲು ಕೊಡಬಹುದು. ಬೀಟ್‌ರೂಟ್‌ ಪಲ್ಯ ಮಾಡಿದಾಗ ಬಾಯಿ ಹೊಲಿದು ಕೂರುವ ಮಕ್ಕಳು, ನಿಮಗೆ ಯಾವ ಟೆನ್ಶನ್‌ ಕೊಡೆ ಪರಾಠಾವನ್ನು ಸವಿಯುತ್ತಾರೆ. ಬೀಟ್‌ರೂಟ್‌ ತುರಿದು ಅದಕ್ಕೆ ಕೊಂಚ ಉಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಸ್ವಲ್ಪ ಗರಂ ಮಸಾಲ ಹಾಕಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್‌ ಮಾಡಿಟ್ಟುಕೊಳ್ಳಿ. ಚಪಾತಿ ಹಿಟ್ಟು ಕಲಸುವಾಗ ಈ ಪೇಸ್ಟನ್ನೂ ಸೇರಿಸಿ ಹಿಟ್ಟು ಕಲಸಿ ಉಂಡೆ ಕಟ್ಟಿ ಲಟ್ಟಿಸಿ ಬೇಯಿಸಿ. ಚಂದನೆಯ ಪಿಂಕ್‌ ಬಣ್ಣದ ಪರಾಠಾವನ್ನು ಮಕ್ಕಳಿಗೆ ಊಟದ ಡಬ್ಬಿಯಲ್ಲಿ ಹಾಕಿ ಕೊಡಿ.

ಇದನ್ನೂ ಓದಿ: Parenting tips | ಅಮ್ಮಂದಿರೇ, ನಿಮ್ಮ ಗಂಡುಮಕ್ಕಳು ಹೇಗಿರಬೇಕು, ಈಗಲೇ ಡಿಸೈಡ್‌ ಮಾಡಿ!

೩. ಪಾಲಕ್‌ ಪರಾಠಾ: ಪಾಲಕ್‌ ಸೊಪ್ಪನ್ನು ಮಕ್ಕಳಿಗೆ ಆಗಾಗ ನೀಡುತ್ತಿದ್ದರೆ ಅವರಿಗೆ ಅಗತ್ಯ ಬೇಕಾಗುವ ವಿಟಮಿನ್‌ ಎ, ಸಿ, ಇ, ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳೂ ದೊರೆಯುವುದರಿಂದ ಬೆಳವಣಿಗೆಯ ಹಾದಿಯಲ್ಲಿರುವ ಮಕ್ಕಳ ಕಣ್ಣಿನ ಆರೋಗ್ಯಕ್ಕೆ, ರಕ್ತಶುದ್ಧಿಗೆ, ಮೂಳೆಗಳು ಬಲಗೊಳ್ಳುವುದು ಸೇರಿದಂತೆ ಹಲವು ಆರೋಗ್ಯಕರ ಲಾಭಗಳಿವೆ. ಪಾಲಕ್/‌ ಬಸಳೆ ಸೊಪ್ಪನ್ನು ಆಗಾಗ ಆಹಾರದಲ್ಲಿ ಹೇಗೆ ಸೇರಿಸಬಹುದು ಎಂದು ತಾಯಂದಿರು ಮಾರ್ಗಗಳನ್ನು ಕಂಡುಕೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ. ಪಾಲಕ್‌ ಸೊಪ್ಪನ್ನು ಕೊಂಚ ಜೀರಿಗೆ ಹಾಗೂ ಓಂಕಾಳಿನ ಜೊತೆ ತುಪ್ಪದಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ರುಬ್ಬಿ, ಕೊಂಚ ಗರಂ ಮಸಾಲೆ, ಉಪ್ಪು ಹಾಕಿ ಚಪಾತಿ ಹಿಟ್ಟು ಕಲಸುವಾಗ ಸೇರಿಸಿಕೊಂಡು ಉಂಡೆ ಕಟ್ಟಿ ಲಟ್ಟಿಸಿ ಬೇಯಿಸಿದರೆ ಮುಗಿಯಿತು. ಇದನ್ನು ರೋಲ್‌ ಮಾಡಿ ಒಳಗಡೆ ಮಕ್ಕಳಿಗೆ ಬೇಕಾದ ತರಕಾರಿಯ ಪಲ್ಯವನ್ನೋ, ತುರಿದ ಚೀಸನ್ನೋ, ಪನೀರನ್ನೋ ಸೇರಿಸಿ ಆಕರ್ಷಕವಾಗಿಸಿ ಪ್ಯಾಕ್‌ ಮಾಡಿ ಕೊಟ್ಟರೆ ಪಾಲಕ್‌ ನೆಮ್ಮದಿಯಿಂದ ಮಕ್ಕಳ ಹೊಟ್ಟೆ ಸೇರುತ್ತದೆ.

ಇವಿಷ್ಟೇ ಅಲ್ಲದೆ, ಕ್ಯಾರೆಟ್‌, ಮೂಲಂಗಿ, ಸೋರೆಕಾಯಿ ಸೇರಿದಂತೆ ಹಲವು ತರಕಾರಿಗಳನ್ನು ಇದೇ ರೀತಿ ತುರಿದೋ, ರುಬ್ಬಿಯೋ ಚಪಾತಿ ಹಿಟ್ಟಿನ ಜೊತೆ ಸೇರಿಸಿ ಮಕ್ಕಳಿಗೆ ಪರಾಠಾ ಮಾಡಿಕೊಡಬಹುದು.

ಇದನ್ನೂ ಓದಿ: Parenting Tips: ಮಕ್ಕಳನ್ನು ಸಮಾಧಾನಗೊಳಿಸುವ ವೇದ ವಾಕ್ಯಗಳು!

Exit mobile version