ಸಣ್ಣ ವಯಸ್ಸಿನಲ್ಲಿ ಮೂಳೆ ಹಾಗೂ ಹಲ್ಲುಗಳು ಗಟ್ಟಿಯಾಗಿ ಬೆಳೆಯಲು, ಉತ್ತಮ ಆರೋಗ್ಯವಂತ ದೇಹ ಪಡೆಯಲು ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳ ಪೈಕಿ ಕ್ಯಾಲ್ಶಿಯಂ ಪಾತ್ರ ಮಹತ್ವದ್ದು. ದೇಹದ ಬಹುತೇಕ ಅಂದರೆ ಶೇ.೯೯ರಷ್ಟು ಕ್ಯಾಲ್ಶಿಯಂ ನಮ್ಮ ಮೂಳೆಗಳಲ್ಲೇ ಸಂಗ್ರಹವಾಗುತ್ತದೆ. ದುರ್ಬಲ ಮೂಳೆಯನ್ನು ಹೊಂದಿದವರು ಆಗಾಗ ಮೂಳೆ ಮುರಿತದಂತಹ ತೊಂದರೆಗಳಿಗೆ ಈಡಾಗುತ್ತಾರೆ. ಹಾಗಾಗಿ ಮಕ್ಕಳಾಗಿದ್ದಾಗ ಬೆಳೆಯುವ ವಯಸ್ಸಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ನಮ್ಮ ದೇಹಕ್ಕೆ ನೀಡುವ ಕರ್ತವ್ಯ ಪ್ರತಿಯೊಬ್ಬರದ್ದೂ ಆಗಿದೆ. ಅದರಲ್ಲೂ ಮಕ್ಕಳಿಗೆ ಸರಿಯಾದ ಪ್ರಮಾಣದ ಕ್ಯಾಲ್ಶಿಯಂ ನೀಡುವ ಬಹುದೊಡ್ಡ ಜವಾಬ್ದಾರಿ ಹೆತ್ತವರ ಮೇಲಿದೆ.
ವಯಸ್ಸಾದಂತೆ ಕ್ಯಾಲ್ಶಿಯಂ ಶೇಖರಿಸಿಡುವ ನಮ್ಮ ದೇಹದ ಶಕ್ತಿ ಕ್ಷೀಣಿಸುತ್ತಾ ಬರುತ್ತದೆ. ಅದಕ್ಕಾಗಿಯೇ ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾಗಿ ಕ್ಯಾಲ್ಶಿಯಂನಿಂದ ಶ್ರೀಮಂತ ಆಹಾರವನ್ನು ನೀಡಲೇಬೇಕು. ಈ ಸಂದರ್ಭ ಆರೋಗ್ಯವಂತರಾಗಿ ಬೆಳೆದ ಮಕ್ಕಳಲ್ಲಿ ವಯಸ್ಸಾದಂತೆ ಮೂಳೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ. ಕೇವಲ ಹಾಲು ಕುಡಿಸಿ ಮಕ್ಕಳ ಕ್ಯಾಲ್ಶಿಯಂ ಅಗತ್ಯತೆಯನ್ನು ನಾವು ಪೂರೈಸಿದ್ದಾಯಿತು ಎಂದು ಹೆತ್ತವರು ಕೈತೊಳೆದರೆ ಜವಾಬ್ದಾರಿ ಮುಗಿಯುವುದಿಲ್ಲ. ಹಾಲಿನ ಹೊರತಾಗಿಯೂ ಹಲವಾರು ಆಹಾರಗಳ ಮೂಲಕ ನಾವು ಮಕ್ಕಳ ದೇಹಕ್ಕೆ ಕ್ಯಾಲ್ಶಿಯಂ ನೀಡಬಹುದು. ಹಾಲು ಕುಡಿಯದ ಮಕ್ಕಳ ತಾಯಂದಿರೂ ಕೂಡಾ ಈ ಬಗ್ಗೆ ತಲೆಕೆಡಿಸುವ ಅಗತ್ಯವಿಲ್ಲ. ಈ ಎಲ್ಲ ಆಹಾರಗಳ ಮೂಲಕ ನಾವು ನಮ್ಮ ಹಾಗೂ ಮಕ್ಕಳ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಿಕೊಳ್ಳಬಹುದು.
೧. ಕಪ್ಪು ಎಳ್ಳು: ಕ್ಯಾಲ್ಶಿಯಂ ಹಾಗೂ ಬಿ ಕಾಂಪ್ಲೆಕ್ಸ್ ಪ್ರೊಟೀನಿನಿಂದ ಸಮೃದ್ಧವಾಗಿರುವ ಆಹಾರವೆಂದರೆ ಅದು ಕಪ್ಪು ಎಳ್ಳು. ಮಕ್ಕಳಿಗೆ ಎಳ್ಳಿನ ಚಿಕ್ಕಿ ತಿನ್ನಲು ಕೊಡುವ ಮೂಲಕ ಅವರ ದೇಹಕ್ಕೆ ಕ್ಯಾಲ್ಶಿಯಂ ಒದಗುವಂತೆ ಮಾಡಬಹುದು.
೨. ಮೊಸರು: ಶೀತ, ನೆಗಡಿ ಎಂದು ಮೊಸರನ್ನು ಮಕ್ಕಳಿಗೆ ಕೊಡದೇ ಇರುತ್ತೀರಾ? ಆದರೆ, ಮೊಸರು ಎಂಬ ಕ್ಯಾಲ್ಶಿಯಂನಿಂದ ಸಮೃದ್ಧ ಆಹಾರಕ್ಕೆ ರೋಗ ನಿರೋಧಕತೆಯನ್ನೂ ಹೆಚ್ಚಿಸುವ ತಾಕತ್ತಿದೆ. ಮಕ್ಕಳಿಗೆ ಮೊಸರನ್ನ ತಿನ್ನಿಸುವ ಮೂಲಕ ಕ್ಯಾಲ್ಶಿಯಂ ಸೇರುವಂತೆ ಮಾಡಬಹುದು.
ಇದನ್ನೂ ಓದಿ: Parenting Tips: ಮಕ್ಕಳು ಹೀಗೆಲ್ಲ ನಡೆದುಕೊಂಡರೆ ನಿಮ್ಮ ಹಾಗೂ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂದರ್ಥ!
೩. ಬೇಳೆಕಾಳುಗಳು: ಬೇಳೆಕಾಳುಗಳಾದ ರಾಜ್ಮಾ, ಕಾಬೂಲಿ ಚೆನ್ನಾ, ಕಡಲೆಕಾಳು, ಕಪ್ಪು ಚೆನ್ನ, ಇತ್ಯಾದಿಗಳು ಮಕ್ಕಳಿಗೆ ಅತ್ಯಂತ ಒಳ್ಳೆಯದು. ಆಹಾರದಲ್ಲಿ ಆಗಾಗ ಇವುಗಳನ್ನೂ ಬಳಸುವ ಮೂಲಕ ಮಕ್ಕಳಿಗೆ ಎಲ್ಲ ಬಗೆಯ ಪೋಷಕಾಂಶಗಳೂ ಅವರ ದೇಹ ಸೇರುವಂತೆ ಮಾಡಬಹುದು. ಚಪಾತಿಯ ಜೊತೆಗೆ ಮಾಡುವ ಸಬ್ಜಿಗೆ ಇವನ್ನು ಸೇರಿಸಬಹುದು.
೪. ಒಣಹಣ್ಣು ಹಾಗೂ ಬೀಜಗಳು: ವಾಲ್ನಟ್, ಅಂಜೂರ, ಖರ್ಜೂರ, ಆಪ್ರಿಕಾಟ್ ಇತ್ಯಾದಿಗಳಲ್ಲಿ ಹೇರಳವಾಗಿ ಕ್ಯಾಲ್ಶಿಯಂ ಇರುವುದಷ್ಟೇ ಅಲ್ಲ, ಪ್ರೊಟೀನ್ ಕೂಡಾ ಇದೆ. ಎಳವೆಯಲ್ಲಿ ಮಕ್ಕಳಿಗೆ ಇವೆಲ್ಲ ಸಿಕ್ಕರೆ, ಅವರ ಆರೋಗ್ಯದಲ್ಲಿ ಖಂಡಿತವಾಗಿಯೂ ಸಮಸ್ಯೆಗಳು ಬರದು.
೫. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಕೇವಲ ವಿಟಮಿನ್‌ಗಳಿವೆ ಎಂದುಕೊಳ್ಳಬೇಡಿ. ಮೆಂತೆ ಸೊಪ್ಪು, ಬ್ರೊಕೋಲಿ, ಬಸಳೆ, ಮೂಲಂಗಿ ಸೊಪ್ಪು ಇತ್ಯಾದಿ ಹಸಿರು ಸೊಪ್ಪುಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಶಿಯಂ ಇದೆ. ಹಾಗಾಗಿ, ಇವುಗಳ ಚಟ್ನಿ ಸಬ್ರಿ ಅಥವಾ ಈ ಸೊಪ್ಪುಗಳನ್ನು ಉಪಾಯವಾಗಿ ಚಪಾತಿಯಾಗಿ ಮಾಡುವ ಮೂಲಕ ಮಕ್ಕಳ ದೇಹಕ್ಕೆ ಇವು ಸಿಗುವಂತೆ ಮಾಡಬಹುದು. ಸ್ಯಾಂಡ್‌ವಿಚ್‌ಗಳಲ್ಲೂ, ಇಂತಹ ಸೊಪ್ಪುಗಳನ್ನು ಉಪಾಯವಾಗಿ ಬಳಸುವ ವಿಧಾನವನ್ನು ಇಂದಿನ ಸ್ಮಾರ್ಟ್ ಅಮ್ಮಂದಿರು ಕಲಿತುಕೊಂಡು ಮಕ್ಕಳ ದೇಹಕ್ಕೆ ನೈಸರ್ಗಿವ ವಿಧಾನಗಳಿಂದ ಕ್ಯಾಲ್ಶಿಯಂ ಸಹಜವಾಗಿ ಸೇರುವಂತೆ ಮಾಡಬಹುದು. ಅದನ್ನು ಕಲಿತರೆ ಇಂದಿನ ಅಮ್ಮಂದಿರು ಗೆದ್ದಂತೆ!
ಇದನ್ನೂ ಓದಿ: Parenting Tips: ಹೆತ್ತವರ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಸಂಬಂಧ ಬೆಳೆಯಲು ಸರಳ ಸೂತ್ರಗಳು!