ನಿಮಗೆ ವಯಸ್ಸಾದಾಗ ನಿಮ್ಮ ಮಕ್ಕಳು ನಿಮ್ಮನ್ನು ಗೌರವ, ಪ್ರೀತಿಯಿಂದ ನಡೆಸಿಕೊಳ್ಳಬೇಕಿದ್ದರೆ, ನೀವು ನಿಮ್ಮ ಹೆತ್ತವರನ್ನೂ ಅಷ್ಟೇ ಪ್ರೀತಿ ಗೌರವದಿಂದ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಆ ಮಕ್ಕಳು ನಿಮ್ಮ ನಡವಳಿಕೆಯನ್ನೇ ಗಮನಿಸುತ್ತಿರುತ್ತವೆ. ಯಾವತ್ತಾದರೂ ನೀವು ನಿಮ್ಮ ಹೆತ್ತವರ ಕಡೆಗೆ ಇರುವ ಜವಾವ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಯೋಚಿಸಿದ್ದೀರಾ? ಇಳಿ ವಯಸ್ಸಿನಲ್ಲಿ ನಾವು ಅವರಿಗೆ ಊರುಗೋಲಾಗಿ ನಿಲ್ಲಬೇಕಾದ ಸಮಯದ ಬಗ್ಗೆ ಮಕ್ಕಳಾಗಿ ಮಾಡಬೇಕಾದ ಕರ್ತವ್ಯಗಳ ಅರಿವು ನಮಗಿದ್ದರೆ ಅವರಿಗೂ ನೆಮ್ಮದಿಯ ಬದುಕು ದಕ್ಕೀತು.
ನಮ್ಮ ಹೆತ್ತವರು ನಮ್ಮನ್ನು ದೊಡ್ಡವರನ್ನಾಗಿ ಮಾಡಲು ಪಟ್ಟಿರುವ ಕಷ್ಟಗಳ ಬಗೆಗೆ ನಮಗಿಂತಲೂ ಹೆಚ್ಚಾಗಿ ಅವರಿಗೇ ಗೊತ್ತು. ಆಗ ನಾವು ಮಕ್ಕಳಾಗಿ ಕೊಟ್ಟ ಸುಖವನ್ನು, ಖುಷಿಯ ಗಳಿಗೆಯನ್ನು ಅವರ ಇಳಿವಯಸ್ಸಿನಲ್ಲಿ ಕೊಡಬೇಕು. ನಮ್ಮನ್ನು ಕಾಳಜಿಯಿಂದ ನೋಡಿಕೊಂಡ ಜೀವಗಳನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವುದು ಬಹಳ ಗೌರವದ ಕೆಲಸ. ಹಾಗಾಗಿ ನಿಮ್ಮ ಹೆತ್ತವರ ಕಡೆಗಾಲದಲ್ಲಿ ಇವಿಷ್ಟು ನೆನಪಿರಲಿ.
1. ಹೆತ್ತವರನ್ನು ಗೌರವದಿಂದ ನಡೆಸಿಕೊಳ್ಳಿ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಗೌರವದ ಹಕ್ಕಿದೆ. ಸಣ್ಣ ಮಗುವಿನಿಂದ ಹಿಡಿದು ವಯಸ್ಸಾದ ಮಂದಿಯವರೆಗೆ ಎಲ್ಲರನ್ನೂ ಗೌರವಯುತವಾಗಿ ನಡೆಸಬೇಕು. ಅವರು ನಮ್ಮ ಹೆತ್ತವರಾಗಿ ಸಂಪಾದಿಸಿರುವ ಗೌರವವನ್ನಾದರೂ ನಾವು ನೀಡದಿದ್ದರೆ ಅದು ಅಮಾನವೀಯವೇ ಸರಿ.
2. ಹಿರಿಯರನ್ನು, ಹೆತ್ತವರನ್ನು ಮಕ್ಕಳ ಹಾಗೆ ನಡೆಸಿಕೊಳ್ಳಬೇಡಿ. ನಮ್ಮ ಸಮಾಜದಲ್ಲಿ ಒಂದು ವಯಸ್ಸಿನ ನಂತರ ಹಿರಿಯರನ್ನು ಮಕ್ಕಳಂತೆ ನಡೆಸಿಕೊಳ್ಳುತ್ತಾರೆ. ಅವರ ಜೊತೆ ಮಾತನಾಡುವ ಶೈಲಿಗೂ ಮಕ್ಕಳ ಜೊತೆಗೆ ವ್ಯವಹರಿಸುವ ಶೈಲಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಹಾಗಾಗಿ, ನೀವು ವ್ಯವಹರಿಸುವ ಶೈಲಿಯನ್ನೊಮ್ಮೆ ನೀವೇ ಗಮನಿಸಿ. ನೀವೇ ಅವರ ಸ್ಥಾನದಲ್ಲಿದ್ದಂತೆ ಊಹಿಸಿ. ಆಗ ಅವರ ಪರಿಸ್ಥಿತಿ ನಿಮಗೆ ಹೆಚ್ಚು ಅರ್ಥವಾದೀತು.
3. ಅವರ ಮಾತಿಗೆ ಕಿವಿ ಕೊಡಿ. ಅವರು ನಿಮ್ಮ ಮಾತುಗಳಿಗೆಲ್ಲ ಕಡಿಮೆ ಎಂದರೂ ೧೮ ವರ್ಷಗಳ ಕಾಲ ಕಿವಿಯಾಗಿದ್ದರು ಎಂಬುದನ್ನು ನೆನಪಿಡಿ. ಈಗಲೂ ನಿಮ್ಮ ಮಾತಿಗೆ ಅವರು ಕಿವಿಯಾಗುತ್ತಾರೆ ಎಂಬುದೂ ನೆನಪಿರಲಿ. ನಿಮ್ಮ ಲೆಕ್ಕವಿಲ್ಲದಷ್ಟು ಸಿಲ್ಲಿ ಪ್ರಶ್ನೆಗಳಿಗೆಲ್ಲ ಅವರು ಬೇಸರಿಸದೆ, ಕೇಳಿದ್ದನ್ನೇ ಕೇಳಿದ್ದರೂ ಕೋಪ ಮಾಡದೆ ಉತ್ತರಿಸಿದ್ದರು ಎಂಬುದು ಗೊತ್ತಿರಲಿ. ನಿಮ್ಮ ಶಾಲೆಯಿಂದ ಹಿಡಿದು ಆಟದ ಮೈದಾನದವರೆಗಿನ ಎಲ್ಲ ದೂರುಗಳನ್ನು ಅವರು ತಾಳ್ಮೆಯಿಂದ ಕೇಳುತ್ತಿದ್ದರು ಎಂಬುದೂ ಅಷ್ಟೇ ನಿಜ. ಹಾಗಾಗಿ, ನೀವೆಷ್ಟೇ ಬ್ಯುಸಿ ಇದ್ದರೂ ಈಗ ಅವರಿಗೆ ಕಿವಿಯಾಗುವ ಸರದಿ ನಿಮ್ಮದು ಎಂಬುದು ತಿಳಿದಿರಲಿ.
4. ಅವರಿಗಾಗಿ ಸಮಯ ಮಾಡಿಕೊಳ್ಳಿ. ಎಷ್ಟೇ ಬ್ಯುಸಿ ಜೀವನವಿದ್ದರೂ, ಹೆತ್ತವರಿಗಾಗಿಯೂ ಸಮಯ ಹೊಂದಿಸಬೇಕು. ಹೆತ್ತವರಿಂದ ದೂರ ಇರುವವರಾದಾರೆ ಪ್ರತಿದಿನ ಅವರಿಗೆ ಕರೆ ಮಾಡಿ ಮಾತನಾಡುವಷ್ಟು ತಾಳ್ಮೆ, ಪ್ರೀತಿ ಇಟ್ಟುಕೊಳ್ಳಿ. ತಮ್ಮ ಮಕ್ಕಳು ಬ್ಯುಸಿಯಾಗಿದ್ದಾರೆ ಎಂದು ಅವರಿಗೆ ಗೊತ್ತಿದ್ದರೂ, ಒಂದಿಷ್ಟು ಹೊತ್ತು ಮಕ್ಕಳ ಕಷ್ಟ ಸುಖ ಕೇಳಬೇಕೆಂಬ ಆಸೆ ಅವರಿಗೂ ಇರುತ್ತದೆ.
5. ಹೆತ್ತವರ ಪರವಾಗಿ ನಿಲ್ಲಿ. ವೈದ್ಯರು ಗದರಿದರೆಂದು ನೀವೂ ಅದನ್ನೇ ಮಾಡಬೇಡಿ. ನೆನಪಿಡಿ, ನೀವು ಟೀಚರು ಬೈದರೆಂದೋ, ಗೆಳೆಯ ಮೋಸ ಮಾಡಿದನೆಂದೋ ಅತ್ತಾಗ ಅವರು ನಿಮ್ಮಜೊತೆಗಿದ್ದರು!
6. ಅವರಿಂದ ಕಲಿಯಿರಿ. ಹೆತ್ತವರಿಗೆ ಯಾವಾಗಲೂ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದೆಂದರೆ ಇಷ್ಟ. ಇದನ್ನು ಸದುಪಯೋಗ ಪಡಿಸಿಕೊಳ್ಳಿ. ಅವರ ಬಳಿಯಿಂದ ಕಲಿಯುವುದು ಬಹಳಷ್ಟಿರುತ್ತದೆ. ಎಷ್ಟೋ ವರ್ಷಗಳಿಂದ ಅಮ್ಮ ಮಾಡುತ್ತಲೇ ಬಂದ ರುಚಿಕರ ಚಟ್ನಿಯ ರೆಸಿಪಿಯೋ, ಸಾಂಬಾರಿನ ಘಮವನ್ನೋ ಅವರು ಈ ಲೋಕ ಬಿಟ್ಟು ಹೋದ ಮೇಲೆ ನೆನೆಸಿಕೊಂಡು ಕಣ್ಣೀರಾಗಬೇಡಿ. ಅವರ ಬಳಿಯಿಂದ ಕಲಿಯಿರಿ. ಅವರು ಖುಷಿ ಪಡುತ್ತಾರೆ!
ಇದನ್ನೂ ಓದಿ: Parenting Tips: ತಾಯಂದಿರೇ, ಮಕ್ಕಳ ದೇಹಕ್ಕೆ ಕ್ಯಾಲ್ಶಿಯಂ ಈ ಎಲ್ಲ ಆಹಾರಗಳಿಂದಲೂ ಸಿಗುತ್ತವೆ!
7. ಅವರಿಗೂ ಕಲಿಸಿ: ಹಳಬರು ಹೊಸತನ್ನು ಕಲಿಯುವುದಿಲ್ಲ, ಅವರಿಗೆ ತಲೆಗೆ ಹತ್ತಲಾರದು ಎಂಬ ತಪ್ಪು ತಿಳುವಳಿಕೆ ಯುವಜನರಿಗೆ ಸಾಮಾನ್ಯ. ಆದರೆ, ಇಂತಹ ಉಡಾಫೆ ಮಿಶ್ರಿತ ನಿರ್ಲಕ್ಷ್ಯ ಅವರೆಡೆಗೆ ತೋರದೆ, ಹೊಸ ಫೋನು ಬಳಕೆಯೋ, ಕ್ಯಾಮೆರಾ ಬಳಕೆಯನ್ನೋ ಕಲಿಸಿಕೊಡಿ. ಹತ್ತಿರದ ಅಂಗಡಿಯಲ್ಲಿ ಅವರ ಕೈಯಲ್ಲೇ ಪೇಟಿಯಂ ಮಾಡಿಸಿ ಅವರ ಕಣ್ಣಲ್ಲಿ ಖುಷಿಯನ್ನು ಕಾಣಿ.
8. ಅವರದೇ ಮನೆಯಲ್ಲಿ ಅವರಿಗೆ ಸ್ವಾತಂತ್ರ್ಯವಿರಲಿ. ಮನೆ ಎಂಬುದು ಕೇವಲ ತಲೆಯ ಮೇಲಿನ ಸೂರಲ್ಲ. ಅವರಿಗೆ ನಿಮ್ಮ ಜೊತೆ ಇರಲು ಇಚ್ಛೆಯಿದ್ದರೆ ಅದನ್ನು ಪೂರೈಸಿ. ಅವರನ್ನು ಮನೆಯಿಲ್ಲದವರನ್ನಾಗಿ ಮಾಡಬೇಡಿ. ಅವರಾಗಿಯೇ ವೃದ್ಧಾಶ್ರಮ ಬಯಸಿದರೂ, ಅಲ್ಲಿಗೆ ನಿಮ್ಮ ಜವಾಬ್ದಾರಿ ಮುಗಿಯಲಿಲ್ಲ ಎಂದು ನೆನಪಿಡಿ.
9. ಅವರಿಗೆ ಕೊನೆಗಾಲದಲ್ಲಿ ಆಸೆಗಳೇನಾದರೂ ಇದ್ದರೆ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅವರ ಜೊತೆ ಕೂತು ಮಾತಾಡಿ. ಕಷ್ಟವೇ ಇರಬಹುದು. ಆದರೆ, ಅವರು ನಿಮಗೆ ಕಷ್ಟ ಕೊಟ್ಟು ಯಾವುದನ್ನೂ ಬಯಸಲಾರರು ಎಂಬುದು ತಿಳಿದಿರಲಿ.
10. ನೀವು ಅವರಿಗಾಗಿ ಮಾಡಿದ ತ್ಯಾಗಗಳನ್ನು ನೆನಪಿಸುತ್ತಲೇ ಇರಬೇಡಿ. ನಿಮ್ಮನ್ನು ಮನೆಯಲ್ಲಿಟ್ಟುಕೊಂಡು ತಾನು ಕಷ್ಟಪಡುತ್ತಿದ್ದೇನೆ ಎಂಬರ್ಥದ ಮಾತುಗಳನ್ನು ಹೇಳಬೇಡಿ. ಅವರು ನಿಮಗೆ ಭಾರ ಅನ್ನಿಸುವಂತ ಮಾತುಗಳು ಹಿರಿಯ ಜೀವಗಳನ್ನು ಅತೀವ ದುಃಖಕ್ಕೀಡು ಮಾಡಬಹುದು. ಮಕ್ಕಳಿಗೆ ಭಾರವಾಗಿರಲು ಯಾವ ಹೆತ್ತವರೂ ಬಯಸುವುದಿಲ್ಲ.
ಇದನ್ನೂ ಓದಿ: Parenting Tips: ನೀವು ಆಲಸಿಗಳೇ? ನಿಮ್ಮ ಮಕ್ಕಳು ಬುದ್ಧಿವಂತರಾದಾರು!