Site icon Vistara News

Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

parenting skills

ಇಂದು ಸಣ್ಣ ಕುಟುಂಬ ಪದ್ಧತಿಯಿಂದಾಗಿ (nuclear family) ಮಕ್ಕಳ ಮೇಲೆ ಹೆತ್ತವರಿಗೆ ಮುದ್ದು ಜಾಸ್ತಿ. ಹೀಗಾಗಿ ಮಕ್ಕಳು ತಮ್ಮ ವಯಸ್ಸಿಗೆ ಸರಿಯಾಗಿ ಕಲಿತುಕೊಳ್ಳಬೇಕಾದ ಎಷ್ಟೋ ವಿಚಾರಗಳಿಂದ, ಜೀವನ ಕೌಶಲ್ಯಗಳಿಂದ (Life skills) ವಂಚಿತರಾಗುತ್ತಾರೆ. ಹೆತ್ತವರಿಗೂ ಈ ಸಮಸ್ಯೆ ಅರ್ಥವಾಗುವುದಿಲ್ಲ. ಜೀವನದಲ್ಲಿ ಏರಬೇಕಾದ ಒಂದೊಂದೇ ಮೆಟ್ಟಿಲನ್ನು ಏರಲು ಕೆಲವು ಸಾಮಾನ್ಯ ಕೌಶಲ್ಯಗಳನ್ನು ಮಕ್ಕಳು 10 ವಯಸ್ಸಿನೊಳಗೇ ಕಲಿಯಬೇಕು. ಬನ್ನಿ, ಮಕ್ಕಳು ಈ ವಯಸ್ಸಿನೊಳಗೆ ತಿಳಿಯಲೇಬೇಕಾದ ಕೌಶಲ್ಯಗಳಾವುವು, ಅವುಗಳನ್ನು ಹೆತ್ತವರು ಸೂಕ್ತ ಪೋಷಣೆಯಿಂದ ಹೇಗೆ ತಿಳಿಸಿಕೊಡಬಹುದು (parenting tips, parenting guide) ಎಂಬುದನ್ನು ನೋಡೋಣ.

1. ಮಕ್ಕಳಿಗೆ ಸರಿಯಾಗಿ ಸಂವಹನ (clear communication) ಮಾಡುವ ಕಲೆ ಸಾಮಾನ್ಯವಾಗಿ ಈ ವಯಸ್ಸಿನೊಳಗೆ ಬರಬೇಕು. ಅಂದರೆ, ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ವಿಚಾರಗಳ ಜೊತೆಗೆ ಭಾವನೆಗಳನ್ನು ಸ್ಪಷ್ಠವಾಗಿ, ಸರಳವಾಗಿ ಮತ್ತೊಬ್ಬರಿಗೆ ದಾಟಿಸುವುದು ಹೇಗೆ ಎಂಬುದು ಹತ್ತು ವಯಸ್ಸಿನೊಳಗೆ ಸಾಮಾನ್ಯವಾಗಿ ಮಕ್ಕಳಿಗೆ ಅರ್ಥವಾಗಬೇಕು. ಹೆತ್ತವರು ಇದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

2. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ (problem solving) ಕಲೆ, ಅವರ ಸಮಸ್ಯೆಗಳನ್ನು ಆದಷ್ಟೂ ಅವರೇ ಪರಿಹಾರ ಮಾಡಿಕೊಳ್ಳುವ ಚಾಕಚಕ್ಯತೆ ಇತ್ಯಾದಿಗಳು ಮಕ್ಕಳಿಗೆ ಈ ವಯಸ್ಸಿನೊಳಗೆ ಬಂದುಬಿಡುತ್ತದೆ. ಅವುಗಳು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಸರಿಯಾದ ರೀತಿಯಲ್ಲಿ ಗೈಡ್‌ ಮಾಡುವುದು ಹೆತ್ತವರ ಕರ್ತವ್ಯ.

3. ಮಕ್ಕಳು ಸೋಲನ್ನು ಸಹಜವಾಗಿ ತೆಗೆದುಕೊಳ್ಳುವುದನ್ನು, ಹಾಗೂ ಸೋಲು ಬದುಕಿನಲ್ಲಿ ಸಾಮಾನ್ಯ ಎಂಬುದನ್ನು ಈ ವಯಸ್ಸಿನೊಳಗೆ ಅರ್ಥ ಮಾಡಿಕೊಳ್ಳಬೇಕು. ಅಂದರೆ, ಎಲ್ಲದರಲ್ಲೂ ತಾನೇ ಗೆಲ್ಲಬೇಕು ಎಂಬಿತ್ಯಾದಿ ಭಾವನೆಗಳಿದ್ದರೆ, ನಿಧಾನವಾಗಿ ಅದರಿಂದ ಹೊರಗೆ ಬಂದು ಸೋಲಿನ ಸಂದರ್ಭ ಅದನ್ನು ನಿಭಾಯಿಸುವುದು ಹೇಗೆ ಹಾಗೂ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಹೇಗೆ ಸ್ವೀಕರಿಸುವುದು ಎಂಬಿತ್ಯಾದಿ ಜೀವನ ಪಾಠಗಳನ್ನು ಕಲಿಯುವ ಕಾಲ.

4. ಮಕ್ಕಳಿಗೆ ಸಣ್ಣ ಸಣ್ಣ ತಮ್ಮ ಜವಾಬ್ದಾರಿಗಳನ್ನು ಹೊರುವ ಕಾಲಘಟ್ಟವಿದು. ಮಕ್ಕಳು ತಮ್ಮ ಶಾಲೆ ವಸ್ತುಗಳನ್ನು, ಆಟಿಕೆಗಳನ್ನು ಸರಿಯಾದ ಜಾಗದಲ್ಲಿಡುವುದು, ತನ್ನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟೀಚರು ಕೊಟ್ಟ ಕೆಲಸಗಳನ್ನು ತಾನೇ ತಾನಾಗಿ ಪೂರ್ತಿ ಮಾಡುವ, ಹಾಗೂ ತಾನು ಮಾಡಬೇಕಾದ ಕೆಲಸ ಹಾಗೂ ಜವಾಬುದಾರಿಗಳ್ನು ಪಟ್ಟಾಗಿ ಕೂತು ಸಮಯದೊಳಗೆ ಮಾಡಿ ಮುಗಿಸುವುದು ಇತ್ಯಾದಿಗಳನ್ನು ಕಲಿಯುವ ವಯಸ್ಸಿದು. ಹತ್ತರೊಳಗೆ ಮಕ್ಕಳು ಇಷ್ಟಾದರೂ ಕಲಿಯಬೇಕು.

5. ಸಮಯ ಪಾಲನೆ (time management) ಕೂಡಾ ಮಕ್ಕಳು ಕಲಿಯಬೇಕು. ಸಮಯಕ್ಕೆ ಸರಿಯಾಗಿ ಎದ್ದು, ತಮ್ಮ ಕೆಲಸಗಳನ್ನು ಮಾಡಿಕೊಳ್ಳುವುದು, ನಿಗದಿತ ಸಮಯದೊಳಗೆ ಕೆಲಸಗಳನ್ನು ಮುಗಿಸುವುದು, ಒಂದು ನಿರ್ದಿಷ್ಟ ಸಮಯದಲ್ಲಿ ಆಟವಾಡಲು ಹೋಗಿ ಬರುವುದು ಇತ್ಯಾದಿ ಮಕ್ಕಳು ಸಮಯ ಪಾಲನೆಯನ್ನು ಎಳವೆಯಲ್ಲಿಯೇ ರೂಢಿಸಿಕೊಳ್ಳಬಹುದು.

6. ತಮ್ಮ ಅಣ್ಣ ತಮ್ಮ ಅಕ್ಕ ತಂಗಿ ಜೊತೆ, ಬಂಧು ಬಳಗದ ಜೊತೆ ಪ್ರೀತಿಯಿಂದ ಇರುವುದು, ಕಾಳಜಿ ಮಾಡುವುದು (care taking) ಕೂಡಾ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬೇಕು.

7. ಅಡುಗೆ ಎಂಬುದು ಜೀವನಕ್ಕೆ ಅತ್ಯಂತ ಅಗತ್ಯವಾದ ಸ್ಕಿಲ್ (cooking skill).‌ ಮನೆಯಲ್ಲಿ ಅಮ್ಮನೋ, ಅಪ್ಪನೋ, ಅಡುಗೆಯವಳೋ ಮಾಡಿ ಕೊಡುವ ಊಟವನ್ನೇ ಜೀವನಪರ್ಯಂತ ತಿನ್ನುತ್ತಿದ್ದರೆ, ಅಡುಗೆ ಮಾಡಿ ಕೊಡುವವರಲ್ಲಿರುವ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಬಹಳ ಸರಳವಾದ ಅಡುಗೆಗಳಾದ ಸ್ಯಾಂಡ್‌ವಿಚ್‌, ಮೊಟ್ಟೆ ಬೇಯಿಸುವುದು, ಜ್ಯೂಸ್‌, ಚೋಕೋಲೇಟ್‌ ಶೇಕ್‌ ಮಾಡಿಕೊಳ್ಳುವುದು ಇತ್ಯಾದಿ ಸರಳ ಪಟಾಪಟ್‌ ಅಡುಗೆಗಳನ್ನಾದರೂ ಮಕ್ಕಳು ಈ ವಯಸ್ಸಿನಲ್ಲಿ ಸ್ವಲ್ಪ ಕಲಿಯಬಹುದು.

8. ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿಕೊಡುವುದು (money management) ಬಹಳ ಅಗತ್ಯ. ಈ ವಯಸ್ಸಿನಲ್ಲಿ ಮಕ್ಕಳಿಗೆ ಹಣದ ಮೌಲ್ಯದ ಬಗೆಗೆ ತಿಳುವಳಿಕೆ ಮೂಡಬೇಕು. ತಮ್ಮದೇ ಪಿಗ್ಗಿ ಬ್ಯಾಕಿನಲ್ಲಿ ಹಣ ಶೇಖರಣೆ ಮಾಡುವುದು, ಹಣ ಉಳಿಕೆ ಮಾಡುವುದು ಇತ್ಯಾದಿ ಮಕ್ಕಳು ಈ ವಯಸ್ಸಿನಲ್ಲಿ ಕಲಿಯಬಹುದು.

9. ಆರೋಗ್ಯದ ಕಾಳಜಿಯನ್ನೂ ಮಕ್ಕಳು ತಮ್ಮ ಹತ್ತು ವಯಸ್ಸಿನೊಳಗೆ ಕಲಿತುಕೊಳ್ಳಬೇಕು. ಗಾಯವಾದರೆ ಏನು ಮಾಡಬೇಕು, ಫಸ್ಟ್‌ ಏಯ್ಡ್‌ ಬಳಸುವುದು ಹೇಗೆ, ತುರ್ತು ಘಟಕವನ್ನು ಸಂಪರ್ಕಿಸುವುದು ಹೇಗೆ ಇತ್ಯಾದಿ ಸಾಮಾನ್ಯ ಜ್ಞಾನ ಮಕ್ಕಳಿಗೆ ಈ ವಯಸ್ಸಿನೊಳಗೆ ಹೇಳಿ ಕೊಡಬೇಕು.

ಇದನ್ನೂ ಓದಿ: Parenting Guide: ಮಕ್ಕಳ ಮೇಲೆ ಎಲ್ಲದಕ್ಕೂ ಹರಿಹಾಯುವ ಮುನ್ನ ಈ ಸೂತ್ರಗಳತ್ತ ಒಮ್ಮೆ ಕಣ್ಣಾಡಿಸಿ!

Exit mobile version