Site icon Vistara News

ಅನಾಮಿಕ ಹಿರಿಯರ ಸ್ವಗತಗಳು: ಹೆತ್ತವರಾಗಿ ನಾವಂದು ಹಾಗೆ ಮಾಡಬಾರದಿತ್ತು!

parenting

ತಮ್ಮದೇ ಲೋಕದಲ್ಲಿ ಹಾಯಾಗಿರುವ ಜೋಡಿ ಇದ್ದಕ್ಕಿದ್ದಂತೆ ಅಪ್ಪ ಅಮ್ಮನಾಗಿ ಬಡ್ತಿ ಪಡೆಯುವುದು ಎಷ್ಟು ಖುಷಿಯ ಸಂಗತಿಯೋ ಅಷ್ಟೇ ಜವಾಬ್ದಾರಿಯುತ ಹಾಗೂ ಕಷ್ಟದ ಕೆಲಸವೂ ಹೌದು. ಪೋಷಕರಾಗಿ ತಪ್ಪುಗಳನ್ನು ಮಾಡುತ್ತಾ, ಎಡವುತ್ತಾ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಮಕ್ಕಳನ್ನು ಉತ್ತಮ ಪ್ರಜೆಗಳಾಗುವಂತೆ ಮಕ್ಕಳನ್ನು ಬೆಳೆಸುವುದೇ ಒಂದು ದೊಡ್ಡ ಟಾಸ್ಕ್‌. ಮಕ್ಕಳು ಬೆಳೆದು ದೊಡ್ಡವರಾದಾಗ, ಛೇ ನಾನಂದು ಹೀಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು ಎಂದೆಲ್ಲ ಅನಿಸುವುದು ಎಲ್ಲ ಹೆತ್ತವರಿಗೂ ಸಹಜವೇ. ಇಂತಹ ಗಿಲ್ಟ್‌ಗಳಿಂದ ಹೊರಬರಲು ಇರುವ ಏಕೈಕ ದಾರಿಯೆಂದರೆ, ತಮ್ಮ ಮಕ್ಕಳು ಅವರ ಮಕ್ಕಳಿಗೆ ಹೀಗೆ ಮಾಡದಿರಲಿ, ಅವರಿಗಾದರೂ ತಮ್ಮ ಜ್ಞಾನೋದಯಗಳು ಸಹಾಯವಾಗಲಿ ಎಂದು ಅವರನ್ನು ಮೊದಲೇ ಎಚ್ಚರಿಸುವುದು. ತಾನು ಅಂದು ಹೀಗೆ ಮಾಡಬಾರದು ಎಂದು ಅನಿಸಿ ಹೇಳಿಕೊಂಡ ಅನಾಮಿಕ ಹಿರಿಯರ ಇಂತಹ ಕೆಲವು ಸ್ವಗತಗಳು ಇಲ್ಲಿವೆ. ಇದು ಹೊಸ ಹೆತ್ತವರಿಗೆ ಪಾಠ.

೧. ಸಣ್ಣ ವಯಸ್ಸಿನಲ್ಲಿ ಪೋಷಕರಾದಾಗ ಅರಿವಿಗೆ ಬಾರದ ಕೆಲವು ಸತ್ಯಗಳು ವಯಸ್ಸಾದಾಗ ಅರಿವಿಗೆ ಬರುತ್ತದೆ. ಛೇ, ನಾನು ಹಾಗೆ ಮಾಡಬಾರದಿತ್ತು. ನೀನು ಸಣ್ಣವನಿದ್ದಾಗಲೂ ನಿನ್ನ ಅಭಿಪ್ರಾಯಗಳನ್ನು ಕೇಳಬಹುದಾಗಿತ್ತು. ನಿನ್ನ ಮಾತುಗಳನ್ನು ಸುಮ್ಮನೆ ಕೂತು ಕೇಳಿಸಬಹುದಾಗಿತ್ತು. ಅಂದು ಹಾಗೆ ಮಾಡಿದ್ದರೆ ಇಂದಿನ ನಮ್ಮಿಬ್ಬರ ಸಂಬಂಧ, ಹೊಂದಾಣಿಕೆ ಇನ್ನೂ ಉತ್ತಮವಾಗಿರುತ್ತೇನೋ ಎಂದು ಹಿರಿಯ ಜೀವಗಳಿಗೆ ಅನಿಸುವುದುಂಟು.

೨. ʻಮೊದಲ ಮಗು ಎಂಬ ಕಾರಣ ಹೆಚ್ಚೇ ಕಾಳಜಿ ಮಾಡಿದ್ದೇ ತಪ್ಪಾಯಿತು. ಅದರಿಂದಲೇ ಅವಕಾಶಗಳು ನಿನ್ನ ಕೈತಪ್ಪಿದವು.  ನಿನ್ನ ಸಾಹಸೀ ಪ್ರವೃತ್ತಿಗೆ ಆಗ ನಾವು ಬೇಡ ಎಂದು ಹೇಳುವ ಬದಲು, ʻಮಾಡು, ಆದರೆ ಹುಷಾರುʼ ಎಂದಾದರೂ ಹೇಳಬಹುದಿತ್ತೇನೋ. ಅದು ನಿನ್ನ ಕುತೂಹಲಗಳನ್ನು, ಹೊಸತನ್ನು ಕಲಿಯುವ ಆಸಕ್ತಿಗಳನ್ನು ಹೊಸಕಿ ಹಾಕುತ್ತಿರಲಿಲ್ಲವೇನೋ. ಆಗ ಹಾಗೆ ಮಾಡಿದ್ದರೆ ನೀನು ಇನ್ನೂ ಹೆಚ್ಚು ಜವಾಬ್ದಾರಿಯುತ ಆತ್ಮವಿಶ್ವಾಸಿಯಾಗಿ ಬೆಳೆಯುತ್ತಿದ್ದೀಯೇನೋ!ʼ ಎಂಬುದು ಇನ್ನೊಬ್ಬ ಅನಾಮಿಕ ಹೆತ್ತವರೊಬ್ಬರ ಅಳಲು.

೩. ʻನಾನು ಹೆಚ್ಚು ಚಿಂತೆ ಮಾಡುತ್ತೇನೆ. ಹಾಗಾಗಿ ನನ್ನ ಹೆಂಡತಿಯೂ. ಜೀವನದಲ್ಲಿ ಹೆಚ್ಚು ಚಿಂತೆ ಮಾಡುತ್ತಲೇ ಕಾಲ ಕಳೆದೆವು. ಹೀಗಾದರೆ, ಹಾಗಾದರೆ ಎಂಬ ಊಹೆಗಳಲ್ಲೇ ಕಾಲ ಮುಂದೆ ಹೋಯಿತು. ಆದರೆ ನಮ್ಮ ಯಾವ ಚಿಂತೆಯೂ ನಿಜವಾಗಲಿಲ್ಲ. ನಮ್ಮ ಮಕ್ಕಳೂ ನಮ್ಮಂತೆ ಬೆಳೆದರು. ಅವರಿಗೂ ಚಿಂತೆ ಜಾಸ್ತಿ. ಈಗ ನಮ್ಮನ್ನೇ ನಾವು ಕನ್ನಡಿಯಲ್ಲಿ ನೋಡಿದಂತೆ ನಮ್ಮ ಮಕ್ಕಳಿದ್ದಾರೆ. ಬಹುಶಃ ನಾವು ನಮ್ಮ ಮಕ್ಕಳಿಗೆ ಅತಿರೇಕದ ಚಿಂತೆಗೂ ಹುಷಾರಾಗಿರುವುದಕ್ಕೂ ಆಗಲೇ ವ್ಯತ್ಯಾಸ ಹೇಳಿಕೊಟ್ಟರೆ ಒಳ್ಳೆಯದಿತ್ತು ಅನಿಸುತ್ತದೆ. ನಾವು ತಪ್ಪು ಮಾಡಿದೆವು!ʼ ಮತ್ತೊಬ್ಬರ ಸ್ವಗತವಿದು.

೪. ʻಹೆತ್ತವರಿಗೆ ಎಲ್ಲ ಗೊತ್ತಿರಬೇಕು ಎಂದೇನಿಲ್ಲ. ನನಗೆ ಗೊತ್ತಿಲ್ಲ ಎಂದೂ ಮಕ್ಕಳಲ್ಲಿ ಹೇಳಬಹುದು. ಹೆಚ್ಚು ಮಂದಿ ಗೊತ್ತಿಲ್ಲದಿದ್ದರೂ ಗೊತ್ತಿರುವವರಂತೆ ಹೊರಗಿನ ಮಂದಿಯೆದುರು ನಮ್ಮದೇ ಮಕ್ಕಳೆದುರು ಇರುತ್ತಾರೆ. ಎಷ್ಟೋ ಸಲ ಮಕ್ಕಳು, ನನ್ನ ಬಳಿ ಪ್ರಶ್ನೆಗಳೊಂದಿಗೆ ಬಂದಾಗ ಗೊತ್ತಿಲ್ಲ ಎಂದು ನೇರವಾಗಿ ಹೇಳಿಬಿಟ್ಟಿದ್ದೇನೆ. ಫೇಕ್‌ ಮಾಡುವುದು ಒಳ್ಳೆಯದಲ್ಲ. ನನ್ನ ಮಕ್ಕಳೂ ಅದನ್ನೇ ಕಲಿಯಲಿʼ ಹಿರಿಯರೊಬ್ಬರ ಕಿವಿಮಾತಿದು.

ಇದನ್ನೂ ಓದಿ | Motivational story | ಮಗನ ಮದುವೆಯ ದಿನ ಅಪ್ಪ ಹೇಳಿದ ಆ ಮಾತು ನೀವೂ ಕೇಳಿಸಿಕೊಳ್ಳಬೇಕು!

೫. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳೆದುರು ನಾವು ಕ್ಷಮಿಸು ಎಂದು ಹೇಳುವುದಿಲ್ಲ. ಹೆತ್ತವರಿಂದಲೂ ತಪ್ಪಾಗುತ್ತದೆ. ಮಕ್ಕಳ ಬಳಿ ನಮ್ಮದು ತಪ್ಪಾಯಿತು ಎಂದು ಒಪ್ಪಿಕೊಂಡು ಮುಂದುವರಿದರೆ ಸಂಬಂಧ ಇನ್ನೂ ಚೆನ್ನಾಗಿರುತ್ತದೆ. ಆದರೆ, ಒಮ್ಮತಕ್ಕೆ ಬಂದು ಕ್ಷಮಿಸು ಎಂದು ಹೇಳದೆ ಮುಂದುವರಿಯುವುದರಿಂದಲೇ ಸಮಸ್ಯೆಗಳು ಉದ್ಭವಿಸುತ್ತದೆ.

೬. ಇತ್ತೀಚೆಗೆ ತುಂಬ ಆಪ್ತರೊಬ್ಬರ ಸಾವು ನೊಂದ ಹಿರಿಯರೊಬ್ಬರ ಅನಿಸಿಕೆ ಹೀಗಿದೆ. ʻನನ್ನ ಗೆಳೆಯ ನನ್ನ ಬಿಟ್ಟು ಹೋದ ಮೇಲೆ ನಾನು ಯೋಚಿಸುತ್ತಾ ಕೂತಿದ್ದೆ. ಈ ವಯಸ್ಸಿನವರೆಗೆ ನಾನೇನು ಮಾಡುತ್ತಿದ್ದೆ, ಏನು ಸಾಧಿಸಿದೆ ಅರ್ಥವಾಗಲಿಲ್ಲ. ನನ್ನ ಮಕ್ಕಳು ಸಣ್ಣವರಾಗಿದ್ದಾಗ, ಎಷ್ಟೋ ದಿನಗಳನ್ನು ಹೀಗೆ ಸುಮ್ಮನೆ ಕೂತು ಕಳೆದಿದ್ದೇವೆ. ಆಗೆಲ್ಲ ಅದನ್ನು ಹೆಚ್ಚು ಅರ್ಥಯುತವಾಗಿ ಕಳೆದಿದ್ದರೆ ಒಳ್ಳೆಯದಿತ್ತು ಅನಿಸುತ್ತಿದೆ. ನನ್ನ ಮಕ್ಕಳ ಜೀವನ ಈಗ ಅತ್ಯಂತ ಬ್ಯುಸಿ. ಯಾವುದಕ್ಕೂ ಅವರಿಗೆ ಸಮಯವಿಲ್ಲ. ಆಗ ನಾನು ಅವರಿಗೆ ಬದುಕಿನಲ್ಲಿ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸುವ ಪಾಠ ಕಲಿಸಿದ್ದಿದ್ದರೆ ಅವರು ಈಗ ಹೀಗಿರುತ್ತಿರಲಿಲ್ಲವೇನೋ!

೭. ಮತ್ತೊಬ್ಬರ ಅಳಲು ಇದು. ʻನಾನು ಸಣ್ಣವನಿದ್ದಾಗ ನನ್ನ ಅಮ್ಮ ಯಾವಾಗಲೂ, ಅಪ್ಪ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರೆ, ಹೋಗಿ ಸಹಾಯ ಮಾಡು ಎನ್ನುತ್ತಿದ್ದಳು. ನಾನು ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಆಗ ನಾನೇನಾದರೂ ಹೋಗಿದ್ದಿದ್ದರೆ ಏನಾದರೂ ಕಲಿಯುತ್ತಿದ್ದೆನೇನೋ. ಈಗ ನನ್ನ ಮಕ್ಕಳನ್ನು ನಾನು ಸಹಾಯಕ್ಕೆ ಕರೆದಿದ್ದರೆ ಒಳ್ಳೆಯದಿತ್ತು ಅನಿಸುತ್ತದೆ.ʼ

೮. ನಾವು ಸರಿಪಡಿಸೋಣ: ಏನೇ ವಿಚಾರವಿರಲಿ, ಯಾರಿಗೆ ಏನೇ ತೊಂದರೆಗಳಾಗಲಿ ಎಲ್ಲರ ಮನೆಯಲ್ಲೂ ಅಮ್ಮ ಸರಿಪಡಿಸಲು ಇದ್ದೇ ಇರುತ್ತಾಳೆ. ಅಮ್ಮ ಬಂದರೆ ಆಕೆ ಸರಿಪಡಿಸುತ್ತಾಳೆ ಎಂಬ ಭಾವನೆ. ಆದರೆ, ನಾನು ಸರಿಪಡಿಸುತ್ತೇನೆ ಎಂದು ಸಮಸ್ಯೆಯನ್ನು ಪೂರ್ಣ ನನ್ನ ಹೆಗಲಿಗೆ ಹಾಕಿಕೊಳ್ಳುವ ಬದಲು ನಾವು ಸರಿಪಡಿಸೋಣ ಎಂದಿದ್ದರೆ ಎಷ್ಟು ಒಳ್ಳೆಯದಿತ್ತು! ಎಲ್ಲರೂ ಒಟ್ಟಾಗಿ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಆಸ್ಪದ ನೀಡಿದ್ದರೆ, ಮಕ್ಕಳೂ ಎಷ್ಟೊಂದು ವಿಚಾರ ಕಲಿಯುತ್ತಿದ್ದರು! ಇದೂ ಕೂಡಾ ಹಿರಿಯರೊಬ್ಬರ ಜ್ಞಾನೋದಯವೇ.

ಇದನ್ನೂ ಓದಿ | No marriage movement | ಮದುವೆ, ಮಕ್ಕಳು ಯಾವುದೂ ಬೇಡ: ಯುವತಿಯರಲ್ಲೀಗ ಹೊಸ ಟ್ರೆಂಡ್‌!

೯. ʻನನ್ನ ಮಕ್ಕಳು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲೇ ಬಿದ್ದಿರುತ್ತಾರೆ. ಯಾವುದೋ ಪಾರ್ಟಿ, ಯಾವುದೋ ಔಟಿಂಗ್‌ ಎಂದುಕೊಂಡು ನೂರಾರು ಫೋಟೋ, ಸಿಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇಂಟರ್ನೆಟ್‌ ಎಂಬುದು ಯಾವಾಗಲೂ ಇದ್ದೇ ಇರುತ್ತದೆ. ಅದಕ್ಕೆ ಒಂದಿಷ್ಟು ಸಮಯ ಮಾತ್ರ ಕೊಡಲು ನಾನು ಹೇಳಿಕೊಡಬೇಕಾಗಿತ್ತು. ಹಾಗೆ ಮಾಡಿದ್ದರೆ ಈಗ ಅವರು ಹೀಗೆ ಮಾಡುವುದನ್ನು ತಪ್ಪಿಸಬಹುದಿತ್ತೇನೋʼ ನೊಂದ ಹಿರಿಯ ನಾಗರಿಕರೊಬ್ಬರು ಹೇಳಿದ್ದು ಹೀಗೆ.

೧೦. ಕೇವಲ ಹಣ ಮಾತ್ರ ಹೂಡಿಕೆ ಮಾಡುವುದಲ್ಲ. ಪ್ರತಿಯೊಂದರಲ್ಲೂ. ನಮ್ಮ ವೈಯಕ್ತಿಕ ಅಭಿವೃದ್ಧಿಯಿಂದ ಹಿಡಿದು ಅರ್ಥಪೂರ್ಣ ಸಂಬಂಧದವರೆಗೆ ಎಲ್ಲವಕ್ಕೂ ಸಮಯದ, ಪರಿಶ್ರಮದ ಹೂಡಿಕೆ ಅತ್ಯಗತ್ಯ. ತಪ್ಪುಗಳಾದರೆ, ಸಂಬಂಧದಲ್ಲಿ ತೊಂದರೆಗಳಾದರೆ ಮತ್ತೆ ಸಮಯ ಹೊಂದಿಸಿ ಸರಿಪಡಿಸುವುದೂ ಅಗತ್ಯ. ಈಗಿನ ಕಾಲದ ಮಕ್ಕಳಲ್ಲಿ ಇದರಲ್ಲೇ ಕೊರತೆ ಕಾಣಿಸುತ್ತಿದೆ. ಮಕ್ಕಳಿಗೆ ಇದನ್ನು ಕಲಿಸಬೇಕಿದೆ.

Exit mobile version