Site icon Vistara News

Teenage | ಹದಿಹರೆಯದ ಮಕ್ಕಳ ಪೋಷಕರಿಗೆ ಎಂಟು ಗುಟ್ಟುಗಳು!

teenage

ಪೋಷಕರಿಗೆ ಮಕ್ಕಳ ಬೆಳವಣಿಗೆಯ ಹಾದಿಯಲ್ಲಿ ಒಂದೊಂದು ವರ್ಷವೂ ಚಾಲೆಂಜೇ. ಪುಟ್ಟ ಮಗುವನ್ನು ಸದಾ ಕಾಲ ಎತ್ತಿಕೊಳ್ಳಬೇಕಾದಾಗ, ಮಗು ನಡೆಯುವಷ್ಟು ದೊಡ್ಡದಾದರೆ ಒಳ್ಳೆಯದಿತ್ತು ಎನಿಸುತ್ತದೆ. ಅದೇ ಮಗು ನಡೆಯಲು ಶುರು ಮಾಡಿದ ಮೇಲೆ ಎತ್ತಿಕೊಳ್ಳೋದರಲ್ಲೇ ಸುಖವಿತ್ತು ಅನಿಸುತ್ತದೆ. ಪುಟ್ಟ ಮಗು ಮೊದಲ ಹೆಜ್ಜೆ ಇಡುವಾಗಿನಿಂದ ಮೊದಲ ದಿನ ಶಾಲೆಯ ಮೆಟ್ಟಿಲು ಹತ್ತುವವರೆಗೆ, ʻಅಬ್ಬ ಇನ್ನು ಚಿಂತೆಯಿಲ್ಲ, ಮಗು ಒಂದು ಹಂತಕ್ಕೆ ಬಂತುʼ ಅಂತ ನಿಟ್ಟುಸಿರು ಬಿಡುವ ಹಾಗಿಲ್ಲ. ಆಯಾ ವಯಸ್ಸಿಗೆ ತಕ್ಕಂತೆ ಮಕ್ಕಳ ವಿಷಯದಲ್ಲಿ ಸವಾಲುಗಳು ಇದ್ದೇ ಇರುತ್ತದೆ.

ಇನ್ನು ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟರೆ ಪೋಷಕರು ಮೈಯೆಲ್ಲ ಕಣ್ಣಾಗಬೇಕಾಗುವುದೂ ನಿಜವೇ. ಇಂಥ ಸಮಯ ಮಕ್ಕಳನ್ನು ಪೋಷಕರಾಗಿ ಕಾಯುವುದಕ್ಕಿಂತಲೂ ಗೆಳೆಯರಾಗಿ ಇರುವುದು ಒಳ್ಳೆಯದು ಎಂಬುದು ಹಲವು ಅನುಭವಿಗಳ ಮಾತು. ಮನೆತುಂಬ ತಂಟೆ ಮಾಡುತ್ತಾ, ಹಿಂದೆಮುಂದೆ ಸುತ್ತಾಡುತ್ತಿದ್ದ ಮಕ್ಕಳು ಕಿಶೋರಾವಸ್ಥೆಗೆ ಕಾಲಿಟ್ಟಾಗ ಇದ್ದಕ್ಕಿದ್ದಂತೆ ಮೌನಿಗಳಾಗುವುದು, ಪೋಷಕರ ಗಮನ ಕಡಿಮೆಯಾಗುವುದು ಕೆಲವೊಮ್ಮೆ ಎಂಥ ಸಂದಿಗ್ಧಗಳನ್ನೂ ಸಮಸ್ಯೆಯನ್ನೂ ತಂದೊಡ್ಡಬಹುದು. ಹಾಗಾಗಿ ಬಹಳ ಸೂಕ್ಷ್ಮ ವಯಸ್ಸಾದ ಹದಿಹರೆಯದಲ್ಲಿ ಮಕ್ಕಳ ಜೊತೆ ಪೋಷಕರ ವರ್ತನೆ ಹೇಗಿರಬೇಕು, ಹೇಗಿರುವ ಮೂಲಕ ಮಕ್ಕಳನ್ನು ಸರಿ ಹಾದಿಯಲ್ಲೇ ನಡೆಯುವಂತೆ ಮಾಡಬಹುದು ಎಂಬ ಕೆಲವು ಸೂಕ್ಷ್ಮಗಳು ಇಲ್ಲಿವೆ.

೧. ಸಂಬಂಧ ಚೆನ್ನಾಗಿರಲಿ: ಹದಿಹರೆಯ ಒಂದು ಸೂಕ್ಷ್ಮವಾದ ಕಾಲ. ಹೀಗಾಗಿ ಮಕ್ಕಳ ಜೊತೆಗೆ ಪೋಷಕರು ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮಕ್ಕಳಿಗೆ ಯಾವುದು ಮುಖ್ಯವೋ ಆ ಬಗ್ಗೆ ಗಮನ ಕೊಡಿ. ನಿಮ್ಮ ಬಗ್ಗೆಯೂ ಮಕ್ಕಳಿಗೆ ವಿವರಿಸಿ. ಅವರಿಗೆ ವಿಷಯವನ್ನು ಮನದಟ್ಟು ಮಾಡುವ ಸಂದರ್ಭ ಅದು ಉಪದೇಶವಾಗದೆ, ನೀವು ಅನುಭವಿಸಿದ್ದನ್ನು ಮನಬಿಚ್ಚಿ ಹೇಳಿಕೊಳ್ಳಿ. ಆಗ ಮಕ್ಕಳು ತಮ್ಮ ಬಗ್ಗೆಯೂ ನಿಮ್ಮಲ್ಲಿ ಮನಬಿಚ್ಚಿ ಹೇಳಿಕೊಳ್ಳುವ ಆತ್ಮೀಯತೆ ಸಾಧ್ಯವಾಗುತ್ತದೆ. ಮಕ್ಕಳಿಗೆ ಅವರ ಅಭಿಪ್ರಾಯಗಳ, ಆಯ್ಕೆಗಳ, ಆಲೋಚನೆಗಳ ಹಾಗೂ ನಿರ್ಧಾರದ ಬಗ್ಗೆ ಹೇಳಿಕೊಳ್ಳುವ ಸ್ವಾತಂತ್ರ್ಯ ಹಾಘೂ ಸಮಯ ಎರಡನ್ನೂ ಕೊಡಿ. ನಿಮ್ಮ ಅಭಿಪ್ರಾಯಗಳನ್ನೂ ಹೇಳಿಕೊಳ್ಳಿ. ಅವರು ಚಿಕ್ಕವರಾಗಿದ್ದಾಗ ನೀವು ಅವರ ಜೊತೆ ಚೆನ್ನಾಗಿ ಬಾಂಧವ್ಯ ರೂಪುಗೊಳಿಸಿದ್ದೀರೆಂದಾದಲ್ಲಿ, ಅದನ್ನು ಕಿಶೋರಾವಸ್ಥೆಯಲ್ಲಿ ವಯಸ್ಸಿಗೆ ತಕ್ಕಂತೆ ಮುಂದುವರಿಸುವುದರಲ್ಲಿ ಕಷ್ಟವಾಗುವುದಿಲ್ಲ.

೨. ಉತ್ತಮ ಕೇಳುಗರಾಗಿ: ಮಕ್ಕಳೊಂದಿಗೆ ಮಾತನಾಡುವಾಗ ಅವರ ಮಾತುಗಳನ್ನೂ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಅವರ ಅಭಿಪ್ರಾಯಗಳಿಗೂ ನಿಮ್ಮದಕ್ಕೂ ವ್ಯತ್ಯಾಸವಿರಬಹುದು, ಆದರೆ, ನಿಮ್ಮ ಅಭಿಪ್ರಾಯವನ್ನು ಅವರ ಮೇಲೆ ಹೇರಲು ಹೋಗದಿರಿ. ಮೊದಲು ಅವರ ಮಾತುಗಳನ್ನು ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಇದು ಇಬ್ಬರ ನಡುವಿನ ಬಾಂಧವ್ಯದ ಕೊಂಡಿ. ಅವರೂ ನಿಮ್ಮ ಅಭಿಪ್ರಾಯಗಳಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳುವುದೇ ಇಲ್ಲಿಂದ ಎಂಬುದನ್ನು ನೆನಪಿಡಿ. ಇಂಥ ವಯಸ್ಸಿನಲ್ಲಿ ನೀವು ಅವರ ಮಾತಿಗೆ ಗೌರವ ಕೊಡದಿದ್ದರೆ, ಸಂಬಂಧದ ನಡುವೆ ಅಂತರ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ | Parenting tips | ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲು 6 ವೈಜ್ಞಾನಿಕ ದಾರಿಗಳು!

೩. ಸಂಪೂರ್ಣ ಗಮನವಿರಲಿ: ಮಕ್ಕಳು ಮಾತನಾಡುವಾಗ, ಅವರ ಮಾತುಗಳನ್ನು ಕೇಳಿಸಿಕೊಳ್ಳುವಾಗ ಸಂಪೂರ್ಣ ಗಮನ ಅವರಿಗೆ ನೀಡಿ. ಅಂದರೆ, ನಿಮ್ಮ ದೇಹಭಾಷೆಯೂ ಅದಕ್ಕೆ ಪೂರಕವಾಗಿರಲಿ. ಅವರ ಕಣ್ಣನ್ನು ನೋಡಿ. ಅವರಿಗೆ ನೀವು ಅವರ ಮೇಳೆ ಸಂಪೂರ್ಣ ಗಮನ ಕೊಡುತ್ತಿದ್ದೀರೆಂಬುದು ಮನವರಿಕೆಯಾಗಲಿ. ಒಂದು ಮಾತನಾಡದೆಯೂ ನೀವು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೀರಿ ಎಂಬುದು ಅವರಿಗೆ ತಿಳಿಯುವಂತಿರಲಿ.

೬. ಪ್ರಶ್ನೆ ಕೇಳಿ: ಅವರ ಅಭಿಪ್ರಾಯ, ಮಾತಿನ ಸಂದರ್ಭ ಪ್ರಶ್ನೆ ಕೇಳಿ. ಅವರಿಂದ ಆ ವಿಷಯಕ್ಕೆ ಸಂಬಂಧಿಸಿ ಆಳವಾದ ಅಭಿಪ್ರಾಯ ಹೊರಬರಲಿ. ಆ ಮೂಲಕ ವಿಷಯದ ಆಳಕ್ಕೆ ಹೋಗುವುದು ಹಾಗೂ ಅದರ ಸಾಧಕ ಭಾದಕಗಳು ಅವರಿಗೇ ತಿಳಿಯಲಿ. ಅಥವಾ ಸರಿಯಾಗಿ ವಿವರಿಸಿ ಹೇಳು ಎನ್ನಬಹುದು. ಕೊನೆಗೆ ನೀನು ಹೇಳಿದ್ದು ಹೀಗೆ, ನಾನು ಅರ್ಥ ಮಾಡಿಕೊಂಡದ್ದು ಸರಿಯಾಗಿದೆಯೇ ಎಂದು ಅದನ್ನು ಮತ್ತೆ ಹೇಳಬಹುದು.

೭. ಪಾಸಿಟಿವ್‌ ಪ್ರತಿಕ್ರಿಯೆ ನೀಡಿ: ಮಕ್ಕಳು ಉತ್ತಮ ಕೆಲಸ ಮಾಡಿದಾಗ, ಅವರ ನಿರ್ಧಾರಗಳು ಸರಿಯೆನಿಸಿದಾಗ, ಶ್ರಮದಿಂದ ಸಾಧಿಸಿದಾಗ ಬೆನ್ನು ತಟ್ಟಿ. ಪುಟ್ಟದಾದರೂ ಸರಿ, ದೊಡ್ಡದಾದರೂ ಸರಿ. ಇದು ಅವರಲ್ಲಿ, ಆತ್ಮವಿಶ್ವಾಸ, ಧೈರ್ಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Parenting tips: ನಿಮ್ಮ ಮಕ್ಕಳು ದೊಡ್ಡವರಾಗಿಬಿಡುವ ಮೊದಲೇ ನೀವು ಮಕ್ಕಳಾಗಿಬಿಡಿ!

೮. ಮಾತನಾಡಿ: ಮಕ್ಕಳ ಜೊತೆ ಮಾತನಾಡುವುದು ಬಹಳ ಮುಖ್ಯ. ಕೇವಲ ವಿಷಯವಿದ್ದಾಗ ಮಾತ್ರವಲ್ಲ. ಪ್ರತಿನಿತ್ಯ ಇಬ್ಬರ ನಡುವೆ ಸಂವಹನವಿರಲಿ. ಬಹಳಷ್ಟು ಸಾರಿ ಮಕ್ಕಳು ಯಾವ ವಿಷಯಕ್ಕ ಕೊರಗುತ್ತಿದ್ದಾರೆ, ಯಾವುದು ಅವರನ್ನು ಕೀಳರಿಮೆಯಾಗಿ ಕಾಡುತ್ತಿದೆ ಎಂದು ಹದಿಹರೆಯದಲ್ಲಿ ಪೋಷಕರು ಕಂಡು ಹಿಡಿವಲ್ಲಿ ಸೋಲುತ್ತಾರೆ. ಮೌನಕ್ಕೆ ಶರಣಾದ ಮಕ್ಕಳನ್ನು ಮನಬಿಚ್ಚಿ ಮಾತನಾಡಿಸಲು ಪ್ರಯತ್ನಿಸುವುದು ಬಹಳ ಕಷ್ಟ. ಇವುಗಳ ಬಗ್ಗೆ ಗಮನ ಇರಲಿ. ಅದಕ್ಕಾಗಿ ಅವರ ಜೊತೆಗೊಂದು ಶಾಂತವಾದ, ಅವರು ಹೇಳಿದ್ದನ್ನು ಶಾಂತವಾಗಿ ಕೇಳುವ ಸಂಬಂಧವನ್ನು ಬೆಳೆಸಿಕೊಳ್ಳಿ. ʻಇಬ್ಬರೂ ಸೇರಿ ಈ ಸಮಸ್ಯೆಗೆ ಪರಿಹಾರ ಹುಡುಕೋಣ, ನಾನು ನಿನ್ನೊಂದಿಗಿದ್ದೇನೆʼ ಮಾತುಗಳು ಮಕ್ಕಳಲ್ಲಿ ಧೈರ್ಯ ತುಂಬಬಹುದು. ಬಹಳ ಜಾಗರೂಕತೆ ಇಲ್ಲಿ ಮುಖ್ಯ ಎಂಬುದು ನೆನಪಿಡಿ.

Exit mobile version