Site icon Vistara News

Positive Mood: ಹತಾಶಾ ಭಾವ ಕಾಡುತ್ತಿದ್ದರೆ, ಮೂಡು ಬದಲಾವಣೆಗೆ ಹೀಗೆ ಮಾಡಿ!

positive attitude

ಯಾವಾಗಲೂ ಒಂದೇ ಮೂಡು (mood changes) ನಮ್ಮದಾಗಿರುವುದಿಲ್ಲ. ಒಮ್ಮೊಮ್ಮೆ ಅತ್ಯಂತ ಖುಷಿಯಾಗಿಯೂ, ಒಮ್ಮೊಮ್ಮೆ ತುಂಬ ಹತಾಶ ಭಾವ (depressive mood) ನಿಮ್ಮನ್ನು ಕಾಡಿದೆಯಾ? ಆಗಾಗ ಮೂಡು ಬದಲಾಗುವುದು ಅಂದರೆ, ಕೆಲವೊಮ್ಮೆ, ಯಾವುದೂ ಬೇಡ ಎಂಬ ಭಾವ ನಿಮ್ಮನ್ನು ಕಾಡಿದೆಯಾ? ನಿಮ್ಮ ಬಗ್ಗೆ ನಿಮಗೇ ಒಂದು ಬಗೆಯ ನಿರಾಸಕ್ತಿ, ತಾನೇನೂ ಮಾಡುತ್ತಿಲ್ಲ ಎಂಬ ಭಾವ ಅಥವಾ ಇನ್ನೇನೋ ಹೇಳಲಾಗದ ನಕಾರಾತ್ಮಕ ಭಾವ (negative thoughts) ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ, ಹಾಳಾದ ಮೂಡನ್ನು ಮತ್ತೆ ಸರಿಪಡಿಸಿ ಸಕಾರಾತ್ಮಕತೆಯತ್ತ (Positive mood) ತರುವುದು ಹೇಗೆ ಎಂದು ತಿಳಿಯಲಾರದೆ ಒದ್ದಾಡಿದ್ದರೆ, ನೀವು ಹೀಗೆ ಮಾಡಬಹುದು.

1. ದಿನದಲ್ಲಿ ಸ್ವಲ್ಪ ಸಮಯ ನಿಮಗಾಗಿ ನೀವು ತೆಗೆದಿಡಿ. ಅಂದರೆ, ನಿಮಗೆ ದಕ್ಕಿದ ಒಳ್ಳೆಯ ವಿಚಾರಗಳನ್ನು ಯೋಚಿಸಲು ಈ ಸಮಯ ತೆಗೆದಿಡಿ. ನಿಮ್ಮ ಬದುಕಿನಲ್ಲಿ ನಡೆದ ಅಂಥ ವಿಚಾರಗಳಿಗೆ ನೀವು ಮನಸ್ಸಿನಲ್ಲೇ ಆ ದೇವನಿಗೆ ಅಥವಾ ನಮ್ಮ ಕಲ್ಪನೆಗೂ ಮೀರಿದ ಆ ಒಂದು ಶಕ್ತಿಗೆ ನಮಿಸಿ. ಕೆಲವು ಕಷ್ಟಗಳು ಹಠಾತ್‌ ದೂರವಾದ ಕ್ಷಣಗಳು, ಆ ಕ್ಷಣದಲ್ಲಿ ನಿಮಗೆ ನೆರವಾದ ವ್ಯಕ್ತಿಗಳು, ಇದ್ದಕ್ಕಿದ್ದಂತೆ ನೆರವು ಬಂದ ಗಳಿಗೆ ಇತ್ಯಾದಿಗಳನ್ನು ನೆನೆಸಿ ಅದಕ್ಕೇ ಮನಸ್ಸಿನಲ್ಲಿಯೇ ಧನ್ಯವಾದ ಅರ್ಪಿಸಿ. ನಿಮ್ಮ ನಕಾರಾತ್ಮಕ ಭಾವನೆಗಳು ಮರೆಯಾಗಿ, ಆ ದಿನವನ್ನು ನೀವು ಸೊಗಸಾಗಿ ಆರಂಭಿಸುತ್ತೀರಿ.

2. ನಿಮ್ಮ ಮೂಡು ಬದಲಾವಣೆಗೆ ಆಹಾರವೂ ಕಾರಣವಾಗಿರಬಹುದು ನೆನಪಿಡಿ. ಮೂಡು ಹಾಳಾಗಿದೆ ಎಂದುಕೊಂಡು ಏನೇನೋ ಹೊಟ್ಟೆಗಿಳಿಸಬೇಡಿ. ಬಕಬಕನೆ, ಸಿಕ್ಕಸಿಕ್ಕ ಜಂಕನ್ನೆಲ್ಲಾ ಹೊಟ್ಟೆಗೆ ಬಾಯಿಗೆ ತುರುಕಬೇಡಿ. ಇದು ಒಂದು ಮಟ್ಟಿಗೆ ಆ ಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದೇನೋ, ಆದರೆ, ಮೂಡಿನ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತದೆ. ತಾಜಾ ಹಣ್ಣುಗಳು, ತರಕಾರಿಗಳು, ಒಳ್ಳೆಯ ಕೊಬ್ಬು ಹಾಗೂ ಪ್ರೊಟೀನ್‌ ಇರುವ ಆಹಾರವನ್ನು ಸೇವಿಸಿ.

3. ಮೂಡು ಹಾಳಾಗಿದ್ದರೆ, ದೈಹಿಕ ಕೆಲಸದ ಕಡೆ ಗಮನ ಹರಿಸಿ. ಒಂದು ಸಣ್ಣ ವಾಕ್‌ ಮಾಡಿ ಬನ್ನಿ, ಅಥವಾ ಯೋಗ ಮಾಡಿ, ಅದೂ ಸಾಧ್ಯವಿಲ್ಲವೆಂದಾದರೆ, ಮನೆಯಲ್ಲೇ ಏನಾದರೊಂದು ಕೆಲಸ ಮಾಡಿ. ಮನೆಯನ್ನು ಒಪ್ಪ ಓರಣ ಮಾಡಿ ನೋಡಿ. ಕೆಲಸ ಮಾಡಿ ಮುಗಿಸುವಷ್ಟರಲ್ಲಿ ನಿಮ್ಮ ಮೂಡು ಕೂಡಾ ಸರಿಯಾಗಿರುತ್ತದೆ.

4. ಮೂಡು ಸರಿಯಾಗುತ್ತಿಲ್ಲವೇ? ಹಾಗಾದರೆ ಒಂದು ಸೊಂಪಾದ ನಿದ್ದೆ ಮಾಡಿ! ಹೌದು. ನಿದ್ದೆಗೆ ಮೂಡು ಮದಲಾಯಿಸುವ ಶಕ್ತಿ ಇದೆ. ರಾತ್ರಿ ಸರಿಯಾಗಿ ನಿದ್ದೆ ಆಗದ ಕಾರಣದಿಂದಲೂ ಹೀಗೆ ಮೂಡ್‌ ಆಫ್‌ ಆಗಿರುತ್ತದೆ. ಹಾಗಾಗಿ ಪ್ರತಿನಿತ್ಯ ೭-೯ ಗಂಟೆಗಳ ನಿದ್ದೆ ಮಾಡುವುದು ಅತ್ಯಗತ್ಯ.

5. ಸಾಮಾಜಿಕ ಸಂಬಂಧಗಳೂ ಕೂಡಾ ನಿಮ್ಮ ಮೂಡನ್ನು ಸರಿ ಮಾಡುತ್ತವೆ. ಗೆಳೆಯರನ್ನು ಭೇಟಿಯಾಗಿ, ಒಂದು ಚಹಾಕ್ಕಾಗಿ ಸಮಾನ ಮನಸ್ಕರೆಲ್ಲ ಸೇರಿ. ಮಾತನಾಡಿ, ಹರಟಿ. ನಿಮ್ಮ ಮೂಡು ಸರಿಯಾಗುತ್ತದೆ.

ಇದನ್ನೂ ಓದಿ: Be Positive | ಬೇಡದ ಆಲೋಚನೆಗಳೇ? ಹೀಗೆ ದೂರಮಾಡಿ

6. ನಿಮ್ಮ ಹವ್ಯಾಸಗಳಿಗೆ ಗಮನ ಕೊಡಿ. ನೀವು ಚಿತ್ರ ಬಿಡಿಸುವಲ್ಲಿ ಖುಷಿ ಕಾಣುತ್ತಿದ್ದರೆ ಆ ಕೆಲಸ ಮಾಡಿ. ಹಾಡುಗಾರರಾಗಿದ್ದರೆ ಹಾಡಿ. ನೃತ್ಯ ನಿಮಗಿಷ್ಟವೋ, ಹಾಗಿದ್ದರೆ ಡ್ಯಾನ್ಸ್‌ ಮಾಡಿ. ಓದುವುದು ನಿಮಗೆ ನೆಮ್ಮದಿ ಕೊಡುತ್ತದೆ ಎಂದಾದಲ್ಲಿ ಅದನ್ನು ಮಾಡಿ. ಗಿಡಗಳ ಲಾಲನೆ ಪಾಲನೆ ನಿಮಗೆ ಸಂತಸ ನೀಡುವುದಿದ್ದರೆ ಗಾರ್ಡನಿಂಗ್‌ ಕಡೆ ಗಮನ ಹರಿಸಿ. ನಿಮ್ಮಿಷ್ಟದ ಚಟುವಟಿಕೆಗಳತ್ತ ಮನಸ್ಸು ಹರಿಸುವುದರಿಂದ ಮೂಡು ಬದಲಾಗುತ್ತದೆ. ಬೇಸರ, ಏಕತಾನತೆ ಮಾಯವಾಗುತ್ತದೆ.

7. ಮೂಡು ಬದಲಾಯಿಸಲು, ಒಳ್ಳೆಯ ಭಾವನೆ ತುಂಬಿಕೊಳ್ಳಲು ಯೋಗ, ಧ್ಯಾನವೂ ಸಹಾಯ ಮಾಡುತ್ತದೆ. ಒಂದೆಡೆ ನೆಟ್ಟಗೆ ಕೂತು ಆಳವಾಗಿ ಉಸಿರಾಡಿ. ಪ್ರಾಣಾಯಾಮ, ಯೋಗ ಗೊತ್ತಿದ್ದರೆ ಮಾಡಬಹುದು. ಸ್ವಲ್ಪ ಹೊತ್ತು ಧ್ಯಾನ ಮಾಡಿ. ಮನಸ್ಸು ಪ್ರಫುಲ್ಲವಾಗುತ್ತದೆ.

8. ಮೂಡು ಏನೇ ಮಾಡಿದರೂ ಸರಿಯಾಗುತ್ತಿಲ್ಲ, ದಿನಗಟ್ಟಲೆ ಹಾಗೆಯೇ ಇದೆ, ಯಾವ ಕೆಲಸಗಳಿಗೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಸ್ಥಿತಿಯಲ್ಲಿದೆ ಎಂದಾದರೆ, ಖಂಡಿತವಾಗಿಯೂ ಮನೋವೈದ್ಯರನ್ನು ಕಾಣಿ.

ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!

Exit mobile version