ಬೆಂಗಳೂರು: ಮುಂಗಾರು ಮಳೆ ಪ್ರವೇಶವಾಗಲು ಕೆಲವೇ ಕೆಲವು ದಿನ ಅಷ್ಟೇ ಉಳಿದಿವೆ. ಮೊದಲ ಮಳೆಯ ಮಣ್ಣಿನ ವಾಸನೆ ಸವಿಯಲು ತುಂಬ ಜನ ತಯಾರಾಗಿದ್ದಾರೆ. ಮಳೆಯಲ್ಲಿ ನೆನೆದು ಮೈಯ ಜತೆಗೆ ಮನಸ್ಸನ್ನೂ ಹಗುರ ಮಾಡಿಕೊಳ್ಳಲು ಒಂದಷ್ಟು ಮಂದಿ ಸಿದ್ಧರಾಗಿದ್ದಾರೆ. ಇನ್ನು, ಬೇಸಿಗೆಯಲ್ಲೇ ಹಪ್ಪಳ, ಸಂಡಿಗೆ ಮಾಡಿ ಒಣಗಿಸಿಟ್ಟಿರುವ ಅಮ್ಮ ಮಳೆ ಬರುತ್ತಲೇ ನಮಗೆಲ್ಲ ಕರಿದು ಕೊಡಲು ತುದಿಗಾಲ ಮೇಲೆ ನಿಂತಿರುತ್ತಾಳೆ. ಛತ್ರಿ, ರೇನ್‌ಕೋಟ್, ಜಾಕೆಟ್‌ಗಳೆಲ್ಲ ಕಬೋರ್ಡ್‌ನಿಂದ ಎದ್ದು ಬಂದು ಕುಂತಿವೆ. ಆದರೆ, ಮಳೆಗಾಲಕ್ಕೆ ಇಷ್ಟು ಸಿದ್ಧವಾದರೆ ಸಾಲದು. ಮನೆಯನ್ನೂ ಮಳೆಗಾಲಕ್ಕೆ ಅಣಿಗೊಳಿಸಬೇಕು (Monsoon Home Care Tips) ಎಂಬುದನ್ನು ಮರೆಯದಿರಿ.
ಹೌದು, ಮಳೆಗಾಲದಲ್ಲಿ ಜೋರು ಮಳೆ ಬಂದರೆ ತುಸು ಹಳೆಯ ಮನೆಗಳು ಸೋರುತ್ತವೆ. ಇನ್ನು, ಮಧ್ಯಾಹ್ನ ಮಳೆ ಬಂದು ನಿಂತರೆ ಧಗೆ ಧಗೆ ಎನಿಸುತ್ತದೆ. ಜೂನ್ ಹಾಗೂ ಜುಲೈನಲ್ಲಂತೂ ಮಳೆ ಬಂದರೂ ಧಗೆ ಕಡಿಮೆ ಆಗುವುದಿಲ್ಲ. ಹಾಗಾಗಿ, ಜೋರು ಮಳೆಯಾದರೆ ಸೋರದ ಹಾಗೂ ಮಳೆ ಬಂದು ಕೂಡಲೇ ಧಗೆಯಾಗದ ರೀತಿ ಮನೆಯನ್ನು ಸಜ್ಜುಗೊಳಿಸುವ ಅವಶ್ಯಕತೆ ಇದೆ. ಅದರಲ್ಲೂ, ಹಳೆಯದಾದ ಮನೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾದುದು ಅವಶ್ಯ. ಅದು ಹೇಗೆ ಎಂಬುದರ ಮಾಹಿತಿ ಹೀಗಿದೆ…
ಸೋರಬಾರದು ಮನೆಯ ಮಾಳಿಗೆ…
ಮಳೆಗಾಲಕ್ಕೆ ಕೆಲವೇ ದಿನ ಬಾಕಿ ಇರುವ ಕಾರಣ ಕೂಡಲೇ ಚಾವಣಿ ಎಷ್ಟು ದುರಸ್ತಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಚಾವಣಿ, ಗೋಡೆ, ಕಿಟಕಿ ಅಕ್ಕಪಕ್ಕದಲ್ಲಿ ಬಿರುಕು ಬಿಟ್ಟಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ. ಸಣ್ಣ ಬಿರುಕು ಬಿಟ್ಟರೂ ಈಗಲೇ ಸರಿಪಡಿಸಿಕೊಳ್ಳಿ. ಇನ್ನು ನದಿ, ಸಮುದ್ರದ ಪಕ್ಕ ಇರುವವರು ಪೀಠೋಪಕರಣಗಳನ್ನು ಈಗಲೇ ಮೇಲಿನ ಮಹಡಿಗೆ ಇಟ್ಟುಬಿಡಿ. ಅಗತ್ಯ ದಾಖಲೆಗಳನ್ನು ಸುರಕ್ಷಿತವಾಗಿ ಇಡಿ. ಯಾವುದೇ ಕಾರಣಕ್ಕೂ ಮಳೆಯ ಹನಿಗಳು ಮನೆ ಪ್ರವೇಶಿಸದಂತೆ ಮುಂಜಾಗ್ರತೆ ತೆಗೆದುಕೊಳ್ಳಿ.
ಮುಖ್ಯವಾಗಿ, ಹಳೆಯ ಮನೆಗಳ ಬಗ್ಗೆ ವಿಶೇಷ ಗಮನ ಇಡಿ. ಗೋಡೆಗಳು ಮಳೆ ನೀರಿನಿಂದ ನೆನೆಯದಂತೆ ಎಚ್ಚರ ವಹಿಸಿ. ಗೋಡೆ ನೆನೆಯುತ್ತ ಹೋದರೆ ಕುಸಿದು ಭಾರಿ ಅಪಾಯ ಸಂಭವಿಸಬಹುದು. ತೀರ ಹಳೆಯ ಮನೆಯಲ್ಲಿ ಭಾರಿ ಮಳೆ ಸಂದರ್ಭದಲ್ಲಿ ಮಲಗಬೇಡಿ.
ಧಗೆ ಹೆಚ್ಚಾದರೆ ಏನು ಮಾಡಬೇಕು?
ಜೋರಾಗಿ ಮಳೆ ಬಂದು ನಿಂತರೆ ಧಗೆ ಹೆಚ್ಚಾಗುತ್ತದೆ. ಆಗ ಬೇಸಿಗೆಗಿಂತ ಕೆಟ್ಟ ಅನುಭವವಾಗುತ್ತದೆ. ವಿದ್ಯುತ್ ಬೇರೆ ಕೈಕೊಡುತ್ತಿರುತ್ತದೆ. ಇದಕ್ಕಾಗಿ ಮನೆಯಲ್ಲಿ ಹೆಚ್ಚಿನ ಕಿಟಕಿಗಳು ಇರಲಿ. ಕಿಟಕಿಗಳು ಹೆಚ್ಚಿದ್ದಷ್ಟು ಹೊರಗಿನಿಂದ ಗಾಳಿ ಬಂದು ಧಗೆಯ ಪ್ರಮಾಣ ಕಡಿಮೆಯಾಗುತ್ತದೆ. ಇನ್ನು ಮಳೆಗಾಲದ ಧಗೆಯಿಂದಾಗಿ ತೇವದ ಪ್ರಮಾಣ ಜಾಸ್ತಿಯಾಗುತ್ತದೆ. ಹಾಗೆಯೇ, ಶಿಲೀಂಧ್ರ (Fungal) ಬೆಳವಣಿಗೆಯನ್ನು ತಡೆಯಲು ಗೋಡೆಗಳಿಗೆ ತೇವಾಂಶ ನಿರೋಧಕ ಬಣ್ಣ ಬಳಿಯುವುದು ಒಳಿತು.
ಒಳಚರಂಡಿ ಸರಿಪಡಿಸಿ
ಮಳೆಗಾಲ ಪರಾಕಾಷ್ಠೆ ತಲುಪುವ ಮೊದಲು ಒಳಚರಂಡಿ ವ್ಯವಸ್ಥೆ ಸರಿಯಾಗಿದೆಯಾ ಎಂಬುದನ್ನು ಪರಿಶೀಲಿಸಿ. ನಿಯಮಿತವಾಗಿ ಒಳಚರಂಡಿ ಹಾಗೂ ಗಟಾರ್‌ಗಳನ್ನು ಸ್ವಚ್ಛಗೊಳಿಸಿ. ನೀರು ಸರಾಗವಾಗಿ ಹರಿಯುತ್ತಿದೆಯೇ ಎಂಬುದನ್ನು ಖಚಿಪಡಿಸಿಕೊಳ್ಳಿ. ಹಾಗೆಯೇ, ಸೊಳ್ಳೆಗಳು ಹೆಚ್ಚಾಗದಿರಲು ಮನೆಯ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಿ.
ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ
ಸುದೀರ್ಘ ಮಳೆ, ದಿನಗಟ್ಟಲೆ ಆವರಿಸುವ ಮೋಡಗಳು ಮನೆಯಲ್ಲಿ ಬೆಳಕೇ ಇಲ್ಲದಂತೆ ಮಾಡುತ್ತವೆ. ಹೊರಗೆ ಜೋರು ಮಳೆ, ಕವಿದಿರುವ ಮೋಡದಿಂದ ಮನೆಯಲ್ಲಿ ಆವರಿಸುವ ಮಂದ ಬೆಳಕು ಉತ್ಸಾಹ ಇಲ್ಲದಂತೆ ಮಾಡುತ್ತದೆ. ಹಾಗಾಗಿ, ಹೆಚ್ಚು ಪ್ರಕಾಶಮಾನವಾದ ಬಲ್ಬ್‌ಗಳನ್ನು ತಂದಿಟ್ಟುಕೊಂಡುಬಿಡಿ. ಕರೆಂಟ್ ಕೈಕೊಟ್ಟಾಗ ತೀರ ಕತ್ತಲು ಇರುವ, ಕಿಟಕಿಗಳೇ ಇರದ ಕೋಣೆಗಳಲ್ಲಿ ದೀಪ ಹಚ್ಚುವ ವ್ಯವಸ್ಥೆ ಮಾಡಿಕೊಳ್ಳಿ.
ಇದನ್ನೂ ಓದಿ: Monsoon: ಮಳೆ ಶುರುವಾಗೋದಕ್ಕೆ ಇನ್ನು ನಾಲ್ಕೇ ದಿನ ಬಾಕಿ, ಈಗ್ಲೇ ನಿಮ್ಮ ಎಲ್ಲಾ ಕೆಲ್ಸಾ ಮುಗಿಸಿಕೊಂಡು ಬಿಡಿ
ಇವುಗಳ ಖರೀದಿ ಮರೆಯದಿರಿ
ಮುಂಗಾರು ಮಳೆಯು ಯಾವಾಗ ಬೇಕಾದರೂ ಜೋರಾಗಿ ಸುರಿಯಬಹುದು, ಸಣ್ಣಪುಟ್ಟ ಅವಘಡಗಳು ಸಂಭವಿಸಬಹುದು. ಹಾಗಾಗಿ, ಮನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದಷ್ಟು ಉಪಕರಣಗಳನ್ನು ಇಟ್ಟುಕೊಳ್ಳುವುದು ಒಳಿತು. ಫ್ಲ್ಯಾಶ್‌ಲೈಟ್, ಬ್ಯಾಟರಿ, ಪ್ರಥಮ ಚಿಕಿತ್ಸೆ ಕಿಟ್, ಪೋರ್ಟೆಬಲ್ ಚಾರ್ಜರ್, ಯುಪಿಎಸ್ ವ್ಯವಸ್ಥೆ ಮಾಡಿಕೊಂಡರೆ, ತುರ್ತು ಸಂದರ್ಭಗಳಲ್ಲಿ ಪರದಾಡುವುದು ತಪ್ಪುತ್ತದೆ.