Site icon Vistara News

Genetic Cause | ಮಕ್ಕಳಲ್ಲಿ ಮಾನಸಿಕ ವಿಕಲ್ಪಕ್ಕೆ ವಂಶವಾಹಿ ದೋಷ ಕಾರಣವೇ? ಏನು ಹೇಳುತ್ತದೆ ಸಂಶೋಧನೆ?

Child Health

ಬೆಂಗಳೂರು: ಮಕ್ಕಳು ಕೆಲವೊಮ್ಮೆ ಏನೇನೋ ಮಾತಾಡಿದರೆ, ʻಈ ಮಗುವಿಗೊಂದು ಭ್ರಮೆʼ ಎಂದು ನಕ್ಕು ಬಿಡುತ್ತೇವೆ. ಇನ್ನೂ ಮುಂದುವರಿದು, ಗೋಡೆಯಿಂದ ಧ್ವನಿ ಕೇಳುತ್ತಿದೆ, ಮರದ ಮೇಲೆ ಭೂತ ಕಾಣುತ್ತಿದೆ ಎಂದೆಲ್ಲ ಹೇಳಿದರೆ, ʻಟಿವಿ ನೋಡಿದ್ದು, ಗೇಮ್‌ ಆಡಿದ್ದು ಹೆಚ್ಚಾಯ್ತು ನಿಂಗೆʼ ಎಂದು ಮಗುವಿಗೆ ಗದರುತ್ತೇವೆ. ಆದರೆ ಮಕ್ಕಳಲ್ಲಿ ಈ ರೀತಿಯ ಭ್ರಮೆ ಅಥವಾ ವಿಕಲ್ಪಗಳು ಕಾಣಿಸಿಕೊಳ್ಳುವುದಕ್ಕೆ ಅವರ ವಂಶವಾಹಿಗಳೂ (Genetic Cause) ಕಾರಣವಾಗುತ್ತವೆ ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ.

ಸೈಕೋಸಿಸ್‌ (Psychosis) ಹೊಂದಿರುವ ಮಕ್ಕಳಲ್ಲಿ ವಂಶವಾಹಿ ತಪಾಸಣೆ ಕುರಿತಂತೆ ಅಮೆರಿಕದ ಬಾಸ್ಟನ್‌ ಮಕ್ಕಳ ಆಸ್ಪತ್ರೆಯಲ್ಲಿ ತಜ್ಞರ ತಂಡ ಸಂಶೋಧನೆಗೆ ನಡೆಸಿದೆ. ಬಹಳಷ್ಟು ಮಕ್ಕಳು ತಮ್ಮ ಕಲ್ಪನೆಯಲ್ಲೇ ಗೆಳೆಯರನ್ನು ಸೃಷ್ಟಿಸಿಕೊಂಡು, ಅವರೊಂದಿಗೆ ನಿಜವಾಗಿ ಒಡನಾಡುತ್ತ ಪಾಲಕರನ್ನು ಕೆಲವೊಮ್ಮೆ ಆತಂಕಕ್ಕೆ ದೂಡುತಾರೆ. ಇದೇನು ಸಮಸ್ಯೆಯಲ್ಲ. ಆದರೆ ನಿಜವಾಗಿ ಸೈಕೋಸಿಸ್‌ (ಭ್ರಮೆ ಮತ್ತು ವಾಸ್ತವದ ನಡುವೆ ವ್ಯತ್ಯಾಸ ತಿಳಿಯದಂಥ ಮಾನಸಿಕ ಸ್ಥಿತಿ) ಹೊಂದಿರುವ ಮಕ್ಕಳ ವರ್ತನೆ ಅವರ ನಿಯಂತ್ರಣಕ್ಕೇ ಸಿಗದೆ, ಪುಟ್ಟ ಮನಸ್ಸುಗಳನ್ನು ಸಂಕಷ್ಟಕ್ಕೆ ದೂಡುತ್ತದೆ. ಜೋಸೆಫ್‌ ಗೋನ್ಸಾಲೆಜ್‌-ಹೇಡ್ರಿಚ್‌ ಮತ್ತು ತಂಡವು ಮಕ್ಕಳು ಮತ್ತು ಹದಿಹರೆಯದವರಲ್ಲಿನ ಈ ಮಾನಸಿಕ ಅವಸ್ಥೆಯ ಬಗ್ಗೆ ವಿವರ ಅಧ್ಯಯನ ನಡೆಸಿದೆ.

ಶೇ.೪೦ರಷ್ಟು ಮಕ್ಕಳಲ್ಲಿ ದೋಷ

ಹದಿನೆಂಟು ವರ್ಷಕ್ಕೂ ಮುನ್ನವೇ ಸೈಕೋಸಿಸ್‌ ಲಕ್ಷಣಗಳು ಕಾಣಿಸಿಕೊಂಡಂಥ ೧೩೭ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಶೇ. ೭೦ರಷ್ಟು ಮಕ್ಕಳಲ್ಲಿ ೧೩ ವರ್ಷಕ್ಕೂ ಮುನ್ನವೇ ಮಾನಸಿಕ ವಿಕಲ್ಪದ ಲಕ್ಷಣಗಳು ಗೋಚರಿಸಿದ್ದವು. ಶೇ. ೨೮ರಷ್ಟು ಮಕ್ಕಳು ಸ್ಕೀಜೋಫ್ರೀನಿಯಾ ಲಕ್ಷಣಗಳನ್ನು ಹೊಂದಿದ್ದರು. ಈ ಎಲ್ಲ ಮಕ್ಕಳನ್ನೂ ವಂಶವಾಹಿ ತಪಾಸಣೆಗೆ, ಅಂದರೆ ಡಿಎನ್‌ಎಗಳಲ್ಲಿ ದ್ವಿಪ್ರತಿಗಳು ಅಥವಾ ಅಳಿಸಿಹೋದವು ಇವೆಯೇ ಎಂಬ ಪರೀಕ್ಷೆಗೆ ಒಳಪಡಿಸಿದಾಗ, ಶೇ.೪೦ರಷ್ಟು ಮಕ್ಕಳಲ್ಲಿ ಈ ದೋಷ ಕಂಡುಬಂದಿದೆ. ʻಆಟಿಸಂ ಇರುವ ಮಕ್ಕಳನ್ನು ಈ ಪರೀಕ್ಷೆಗೆ ಸಾಮಾನ್ಯವಾಗಿ ಒಳಪಡಿಸಲಾಗುತ್ತದೆ. ಅವರಲ್ಲಿ ಈ ದೋಷ ಇರುವುದೂ ಸಾಮಾನ್ಯವೇ. ಇದಲ್ಲದೆ ಇನ್ನೂ ಹಲವು ಮಾನಸಿಕ ಮತ್ತು ನರಸಂಬಂಧಿ ದೋಷಗಳಲ್ಲಿ ಈ ವಂಶವಾಹಿಯ ಸಮಸ್ಯೆ ಕಂಡುಬಂದಿದೆʼ ಎಂಬುದು ಸಂಶೋಧಕರ ವಿವರಣೆ.

ʻತಮ್ಮ ಮಕ್ಕಳ ಇಂಥ ಮಾನಸಿಕ ಸ್ಥಿತಿಗೆ ಅವರ ವಂಶವಾಹಿಗಳು ಕಾರಣ ಎಂಬುದನ್ನು ಒಪ್ಪಲು ಪಾಲಕರಿಗೆ ಕೆಲವೊಮ್ಮೆ ಕಷ್ಟವಾಗುತ್ತದೆ. ಅವರ ಈ ಸ್ಥಿತಿ ತಮ್ಮಿಂದಲೇ ಆಯಿತು ಎಂಬ ಭಾವವೂ ಅವರಲ್ಲಿ ಕಾಣಬಹುದು. ಈಗೊಂದು ದಶಕದ ಹಿಂದೆ ಆಟಿಸಂ ಇರುವ ಮಕ್ಕಳ ಪಾಲಕರಲ್ಲಿ ಇಂಥದ್ದೇ ಮನಸ್ಥಿತಿ ಕಂಡುಬರುತ್ತಿತ್ತುʼ ಎಂದು ಗೋನ್ಸಾಲೆಜ್‌-ಹೇಡ್ರಿಚ್‌ ಹೇಳುತ್ತಾರೆ. ಕೆಲವು ಮಕ್ಕಳಲ್ಲಿ ಸೈಕೋಸಿಸ್‌ ಲಕ್ಷಣಗಳು ಸದಾ ಇರುವುದಿಲ್ಲ. ಮಾನಸಿಕ ಒತ್ತಡ, ಕೋಪ, ದುಃಖ ಮತ್ತಿತರ ಸಂದರ್ಭಗಳಲ್ಲಿ ವಿಕಲ್ಪದ ಲಕ್ಷಣಗಳನ್ನು ತೋರಿಸುತ್ತಾರೆ. ಆದರೆ ಸ್ಕೀಜೋಫ್ರಿನಿಯಾ ಇರುವ ಮಕ್ಕಳಲ್ಲಿ ವಿಕಲ್ಪಗಳು ಅವರ ಬದುಕಿನ ಜೊತೆಗೇ ಇರುತ್ತವೆ.

ಲಕ್ಷಣಗಳು ಯಾವವು?

ಸೈಕೋಸಿಸ್‌ ಇರುವ ಮಕ್ಕಳಲ್ಲಿ ಲಕ್ಷಣಗಳು ತೀರಾ ಭಿನ್ನವಾಗಿ ಕಾಣದೇ ಇರಬಹುದು. ಏಕಾಂಗಿಯಾಗಿ ಇರುವುದು, ಯಾರೊಂದಿಗೆ ಬೆರೆಯಲೂ ಕಷ್ಟ ಪಡುವುದು, ನಿತ್ಯದ ಕೆಲಸಗಳಲ್ಲೂ ತೊಡಕಾಗಬಹುದು, ಶಾಲೆಯಲ್ಲಿ ಹೊಂದಿಕೊಳ್ಳಲಾಗದೇ ಇರುವುದು, ಖಾಸಗಿ ಬದುಕಿನಲ್ಲಿ ಕೋಪ-ತಾಪಗಳು ಕಾಣಬಹುದು. ಸೈಕೋಸಿಸ್‌ ಲಕ್ಷಣಗಳಿಗೆ ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಉಲ್ಬಣಾವಸ್ಥೆಯಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗದು ಎಂಬುದು ತಜ್ಞರ ಅಭಿಮತ.

ಇದನ್ನೂ ಓದಿ | ಗಲ್ಲು ಶಿಕ್ಷೆಗೆ ಅಪರಾಧವೊಂದೇ ಮಾನದಂಡ ಅಲ್ಲ, ಮಾನಸಿಕ ಆರೋಗ್ಯ ವರದಿ ಫೈನಲ್‌

Exit mobile version