ಪ್ರೀತಿಯಲ್ಲಿ ಬಿದ್ದ ಎಲ್ಲ ಮಹಿಳೆಯರೂ ತಮ್ಮ ಸಂಗಾತಿಯ ಕೆಡುಕುಗಳನ್ನು ಸಹಿಸಿಕೊಂಡು ಜೊತೆಯಾಗಿ ಮುಂದೆ ಸಾಗಲು ಪ್ರಯತ್ನಿಸುತ್ತಾರೆ. ಎಷ್ಟೋ ಬಾರಿ ಸಹಿಸಲಾಗದ ಸಂದರ್ಭಗಳನ್ನೂ ಸಹಿಸಿಕೊಳ್ಳುತ್ತಾರೆ. ಕಾರಣ ಪ್ರೀತಿ. ಸಂಸಾರವೆಂದರೆ ಇದೆಲ್ಲ ಇರುತ್ತದೆ ಎಂದು ಹಿರಿಯರೂ ಕಿವಿಮಾತು ಹೇಳುತ್ತಾರೆ. ಅಥವಾ ಇನ್ನಾವುದೋ ಒತ್ತಡ, ಸಮಾಜದ ದೃಷ್ಟಿಗೆ ಹೆದರಿ ಬಾಯಿ ಮುಚ್ಚಿಕೊಂಡು ಸಹಿಸುವುದು ರೂಢಿಯಾಗಿಬಿಟ್ಟಿರುತ್ತದೆ. ಕೆಲವೊಮ್ಮೆ ಆತ ಏನೇ ಮಾಡಲಿ, ಆತನಿಗೆ ನನ್ನಲ್ಲಿ ಪ್ರೀತಿಯಿದೆ ಎಂದು ಸುಮ್ಮನಿರುತ್ತಾರೆ ಕೂಡಾ. ಗೌರವವಿಲ್ಲದ ಸಂಬಂಧದಲ್ಲಿ ಇರುವುದರಿಂದ ಏನು ದಕ್ಕೀತು!
ಒಳ್ಳೆಯ ಗಂಡಸರು ಹೀಗೆಯೇ ವರ್ತಿಸುತ್ತಾರೆ ಎಂಬುದಕ್ಕೆ ಖಂಡಿತವಾಗಿಯೂ ಚೌಕಟ್ಟಿಲ್ಲ ನಿಜ. ಅದು ನಿಮ್ಮ ನಡತೆಯ ಮೇಲೂ ಹೊಂದಿಕೊಂಡಿದೆ ಎಂಬುದೂ ಅಷ್ಟೇ ನಿಜ. ಆದರೆ, ನಿಮ್ಮಿಬ್ಬರ ನಡುವೆ ಪ್ರೀತಿ ಇದ್ದರೆ ನಿಮ್ಮೆಡೆಗೆ ಆತನ ನಡತೆ ಖಂಡಿತವಾಗಿ ಮಧುರವಾಗಿಯೇ ಇರಬೇಕು. ಪ್ರೀತಿಯಿರುವ ಗಂಡಸು ಯಾವತ್ತಿಗೂ ಈ ಹತ್ತು ಕೆಲಸಗಳನ್ನು ನಿಮ್ಮ ಜೊತೆ ಮಾಡುವುದಿಲ್ಲ ಎಂಬುದನ್ನು ನೀವು ಪ್ರೀತಿಯಲ್ಲಿ ಮೊದಲು ಅರ್ಥ ಮಾಡಿಕೊಳ್ಳಬೇಕು.
೧. ʻನಿನ್ನ ಕೂದಲು ಸ್ವಲ್ಪ ಉದ್ದವಿದ್ದಿದ್ದರೆ, ನೀನು ಇನ್ನೂ ಒಂದಿಷ್ಟು ತೂಕ ಇಳಿಸಿಕೊಂಡರೆ, ನೀನು ಇನ್ನೂ ಸ್ವಲ್ಪ ಸರಿಯಾಗಿ ಮೇಕಪ್ ಮಾಡಿಕೊಂಡಿದ್ದಿದ್ದರೆ, ನಿನ್ನ ಮೂಗು ಸ್ವಲ್ಪ ಉದ್ದವಿದ್ದಿದ್ದರೆ,…ಹೀಗೆ ʻರೆʼಗಳನ್ನು ಒಳ್ಳೆಯ ಗಂಡಸರು ಹೇಳುವುದಿಲ್ಲ, ನೆನಪಿಡಿ. ಹೀಗೆ ಪದೇ ಪದೇ ಹೇಳುತ್ತಿದ್ದರೆ ಅವರು ಖಂಡಿತವಾಗಿ ನಿಮ್ಮ ಆತ್ಮಸ್ಥೈರ್ಯಕ್ಕೇ ಪೆಟ್ಟು ಕೊಡುತ್ತಿದ್ದಾರೆಂದು ಅರ್ಥ. ನೀವು ಆತ್ಮವಿಶ್ವಾಸಿಯಾಗಿ ಕಾಣುವುದು ಅವರನ್ನು ಕೆಣಕುತ್ತಿದೆಯಂದೇ ಅರ್ಥ. ಪ್ರೀತಿಯ ಸಂಬಂಧಗಳಲ್ಲಿ ಇಂಥವುಗಳು ಬರಬಾರದು.
೨. ಒಳ್ಳೆಯ ಸಂಬಂಧದಲ್ಲಿ ಗುಟ್ಟು ಮಾಡುವುದು ಏನೂ ಇರುವುದಿಲ್ಲ ಎಂಬುದು ನಿಜವೇ. ಫೋನ್, ವಾಟ್ಸಾಪ್, ಫೇಸ್‌ಬುಕ್, ಇಮೇಲ್ ಏನೇ ಇರಲಿ, ಇವುಗಳಲ್ಲಿ ಮುಚ್ಚುಮರೆಯಿರುವುದಿಲ್ಲ ನಿಜ. ಆದರೆ ಇಂಥದ್ದೇನೂ ಇಲ್ಲದಿದ್ದರೂ ನಿಮ್ಮ ಸಂಗಾತಿ ಇವೆಲ್ಲವುಗಳ ಮೇಲೆ ಕಣ್ಣಿಡುತ್ತಾರೆ, ಆಗಾಗ ತೆರೆದು ಪರೀಕ್ಷಿಸುತ್ತಿರುತ್ತಾರೆ ಎಂದಾದರೆ ಖಂಡಿತ ಇದು ಒಳ್ಳೆಯ ಗಂಡಸರು ಮಾಡುವ ಲಕ್ಷಣವಲ್ಲ. ಇಂತಹ ಸಂಶಯ ಸಂಬಂಧವನ್ನು ಹಾಳು ಮಾಡುತ್ತದೆ. ಪ್ರತಿಯೊಬ್ಬರ ಖಾಸಗಿತನ ಅನ್ನೋದು ಇದ್ದೇ ಇರುತ್ತದೆ. ಒಳ್ಳೆಯ ಗಂಡಸು ಅದನ್ನು ಅರ್ಥ ಮಾಡಿಕೊಂಡು ಗೌರವಿಸುತ್ತಾನೆ ಕೂಡಾ.
೩. ಒಳ್ಳೆಯ ಗಂಡಸು ಯಾವತ್ತಿಗೂ ನಿಮ್ಮನ್ನು ನಿಮ್ಮ ಗುರಿ ಆಸಕ್ತಿಗಳಿಗೆ ಸಂಬಂಧಿಸಿದಂತೆ ಧೈರ್ಯಗೆಡಿಸುವುದಿಲ್ಲ. ನಿಮ್ಮ ಏನೇ ಗುರಿ, ಆಸಕ್ತಿಗಳಿದ್ದರೂ ಅದಕ್ಕೆ ಪ್ರೋತ್ಸಾಹ ನೀಡುತ್ತಾನೆ.
೪. ಒಳ್ಳೆಯ ಗಂಡಸು ನಿಮ್ಮ ಮೌಲ್ಯವನ್ನು ಅರಿತಿರುತ್ತಾನೆ. ಅದನ್ನು ಆಗಾಗ ನೀವು ಅವರೆಡೆಗೆ ಪ್ರಕಟಪಡಿಸಬೇಕೆಂದು ಬಯಸುವುದಿಲ್ಲ. ನೀವೇನೋ ಅದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
೫. ಒಂದು ಉತ್ತಮ ಸಂಬಂಧ ಎಂದರೆ ಮತ್ತೊಬ್ಬರ ಎಲ್ಲವನ್ನೂ ಯಾವಾಗಲೂ ಬಯಸುವುದಲ್ಲ. ಅವರಿಗೂ ಅವರವರ ಸಾಮಾಜಿಕ ಜೀವನವಿದೆ ಎಂಬುದನ್ನು ಅರಿಯುವುದು ಬಹಳ ಮುಖ್ಯವಾಗುತ್ತದೆ. ಇದರಲ್ಲಿ ತಾಳಮೇಳ ತಪ್ಪಿದರೆ ಖಂಡಿತವಾಗಿಯೂ ಸಂಬಂಧ ಹದಗೆಡುತ್ತದೆ. ಒಳ್ಳೆಯ ಗಂಡಸು ಅಂಥದ್ದೊಂದು ಸ್ಪೇಸ್ ನಿಮಗೆ ನೀಡುತ್ತಾನೆ.
೬. ಒಳ್ಳೆಯ ಗಂಡಸು ಯಾವತ್ತಿಗೂ ಸಂಬಂಧವನ್ನು ಪಾರ್ಟ್ನರ್‌ಶಿಪ್ ಮಾದರಿಯಲ್ಲಿ ನೋಡುತ್ತಾನೆ. ನೀವೊಬ್ಬರು ಪ್ರತ್ಯೇಕ ಅಥವಾ ತನ್ನ ನಿರ್ಧಾರವೇ ಎಲ್ಲ ಎಂಬಂತೆ ನೋಡುವುದಿಲ್ಲ. ನಿಮ್ಮ ಮಾತುಗಳಿಗೂ ಅಲ್ಲಿ ಬೆಲೆಯಿರುತ್ತದೆ.
೭. ಒಳ್ಳೆಯ ಗಂಡಸು ಯಾವತ್ತಿಗೂ ಮೋಸ ಮಾಡುವುದಿಲ್ಲ. ʻಮನುಷ್ಯರು ಯಾವತ್ತಿಗೂ ಒಂದೇ ಸಂಗಾತಿಯ ಜೊತೆಗೇ ತನ್ನಿಡೀ ಬದುಕು ನಡೆಸಬೇಕು ಎಂಬುದು ಜೈವಿಕವಾಗಿ ಸಾಧ್ಯವಿಲ್ಲ, ಅದು ಮನುಷ್ಯನೇ ಹಾಕಿಕೊಂಡ ಬೇಲಿʼ ಎಂಬ ಪ್ರಸಿದ್ಧ ವಾದವಿದೆ. ವೈಜ್ಞಾನಿಕವಾಗಿ ಏನೇ ಇರಬಹುದು, ಆದರೆ ವ್ಯಕ್ತಿಯೊಬ್ಬ ತನ್ನ ಆಯ್ಕೆಯಾಗಿ ಇಂಥ ಒಬ್ಬ ಸಂಗಾತಿಯ ಜೊತೆಗೆ ಜೀವನಪರ್ಯಂತ ಇರುತ್ತೇನೆ ಎಂದು ಹೊರಟಾಗ ಅಂಥದ್ದೊಂದು ಸಂಬಂಧದಲ್ಲಿ ಪರಸ್ಪರ ಒಪ್ಪಿಗೆಯಿಂದ ಪ್ರೀತಿಯಲ್ಲಿ ಇರುವಾಗ ಇನ್ನೊಂದು ಸಂಬಂಧಕ್ಕೆ ಕೈ ಹಾಕುವುದು ಮೋಸವೆಂದೇ ಅನಿಸುತ್ತದೆ. ಒಪ್ಪಿತವಾಗಿ ಮುಂದುವರಿಯುವುದು ಬೇರೆ ಮಾತು.
ಇದನ್ನೂ ಓದಿ | Relationship tips | ಸ್ನೇಹಾನಾ? ಪ್ರೀತಿನಾ? ಗೊಂದಲಗಳ ಗೂಡಾದ ಹೃದಯಕ್ಕೆ 8 ಟಿಪ್ಸ್!
೮. ಒಳ್ಳೆಯ ಗಂಡಸು ಯಾವತ್ತಿಗೂ ನಿಮಗೆ ಅಗೌರವವಾಗಿ ನಡೆದುಕೊಳ್ಳುವುದಿಲ್ಲ. ಯಾವುದೇ ಹುದ್ದೆಯಲ್ಲಿರಲಿ, ಎಂಥದ್ದೇ ಸ್ತರದಲ್ಲಿರಲಿ, ಇನ್ನೊಬ್ಬರ ಜೊತೆಗೆ ಗೌರವಯುತವಾಗಿ ನಡೆಯುವುದು ಪ್ರತಿಯೊಬ್ಬರಲ್ಲಿಬೇಕಾದ ಗುಣ. ಉತ್ತಮ ಗಂಡಸು, ತನ್ನ ಸುತ್ತಮುತ್ತಲಿನವರಿಗೆ ಗೌರವ ಕೊಟ್ಟಂತೆಯೇ ತನ್ನ ಸಂಗಾತಿಯ ಬಳಿಯೂ ಗೌರವದಿಂದಲೇ ನಡೆದುಕೊಳ್ಳುತ್ತಾನೆ.
೯. ಒಳ್ಳೆಯ ಗಂಡಸು ಯಾವತ್ತಿಗೂ ಪ್ರಮುಖವಾದ ವಿಷಯಗಳಿಗೆ, ಮಾತುಗಳಿಗೆ ಬೆಲೆ ಕೊಡುತ್ತಾನೆ. ಎಂಥದ್ದೇ ಸನ್ನಿವೇಶವಿದ್ದರೂ ಇಂಥ ಸನ್ನಿವೇಶದಲ್ಲಿ ಜೊತೆಗಿರುತ್ತಾನೆ, ನಿರ್ಲಕ್ಷ್ಯ ಮಾಡುವುದಿಲ್ಲ.
೧೦. ಒಳ್ಳೆಯ ಗಂಡಸು ಯಾವತ್ತಿಗೂ ನಿಮಗೆ ಹಿಂಸೆ ಕೊಡುವುದಿಲ್ಲ. ಅದು ದೈಹಿಕವಾಗಿ ಇರಬಹುದು ಅಥವಾ ಮಾನಸಿಕವಾಗಿ ಇರಬಹುದು. ಎಷ್ಟೇ ಪ್ರೀತಿಯಿದೆಯೆಂದು ಹೇಳಿಕೊಂಡರೂ, ಹಿಂಸೆ ಎಂಬುದನ್ನು ಸಂಗಾತಿಯಿಂದ ಯಾರೂ ಬಯಸುವುದಿಲ್ಲ. ಅದನ್ನು ಕ್ಷಮಿಸಿಕೊಂಡು ಮುಂದೆ ಹೋಗುವುದೂ ಸಾಧ್ಯವಿಲ್ಲ ಎಂದು ನೆನಪಿಡಿ. ಸಂಬಂಧದಲ್ಲೇ ಸಮಸ್ಯೆಯಿರುವಾಗ ಜೊತೆಗೇ ಮುಂದೆ ಹೋಗಿ ಬದಲಾವಣೆ ನಿರೀಕ್ಷಿಸಿಬಹುದೇ ಹೇಳಿ!
ಇದನ್ನೂ ಓದಿ | ಇದು ಅಪ್ಪ ಮಗಳ ಕಥೆ | ಸಿಂಗಲ್ ಅಪ್ಪ ಮಗಳಿಗೆ ಅಡುಗೆ ಕಲಿಸಿದ್ದೇ ಈಗ ಸಮಸ್ಯೆ!