ಪ್ರೀತಿಯ ವಿಷಯದಲ್ಲಿ ಮಾಡುವ ಸಣ್ಣ ತಪ್ಪುಗಳೂ ಒಮ್ಮೊಮ್ಮೆ ದೊಡ್ಡದಾಗಿಬಿಡುತ್ತದೆ. ಹೌದು, ನಿಮ್ಮ ಸಂಗಾತಿ ಅರ್ಥಾತ್ ನಿಮ್ಮನ್ನು ಪ್ರೀತಿಸುವವರು ನಿಮಗೆ ಎಲ್ಲವೂ ಆಗಿದ್ದರೂ, ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಎಂದೆಲ್ಲ ನಿಸಿದರೂ, ಮನುಷ್ಯರಾಗಿ ಮತ್ತೊಬ್ಬ ಮನುಷ್ಯನಿಗೆ ಕೊಡಬೇಕಾದ ಗೌರವ, ಒಂದು ಪುಟ್ಟ ಅಂತರ ಎಲ್ಲವೂ ಇದ್ದರೇನೇ ಸಂಬಂಧ ಚೆನ್ನಾಗಿರಲು ಸಾಧ್ಯ. ನಮ್ಮ ನಡುವೆ ಹೇಳದ್ದು ಏನಿದೆ ಅಂತ ಅಂದುಕೊಂಡರೂ, ನನ್ನಲ್ಲಿ ಆತ/ಆಕೆ ಮುಚ್ಚಿಡುವಂಥದ್ದು ಏನಿದೆ ಅಂತ ಹೇಳಿಕೊಂಡರೂ ನಮ್ಮ ನಮ್ಮ ನಡುವಿನ ಒಂದು ಆರೋಗ್ಯಕರ ಅಂತರ, ಖಾಸಗಿತನಕ್ಕೆ ಬೆಲೆ ಕೊಟ್ಟರಷ್ಟೇ ಸಂಬಂಧ ಮಧುರವಾಗುವುದು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು.
ಬಹಳಷ್ಟು ಸಾರಿ, ತಪ್ಪುಗಳು, ಎಡವಟ್ಟುಗಳು ಆಗುವುದು ಇಲ್ಲಿಯೇ. ಇವರು ನಮ್ಮವರು ಎಂದುಕೊಳ್ಳುತ್ತೇವಲ್ಲ, ಆಗ ಸಂಬಂಧದ ನಡುವಿನ ಅತ್ಯಂತ ತೆಳುವಾದ ಪರಿಧಿಯನ್ನೂ ದಾಟಿಬಿಡುತ್ತೇವೆ. ಆಗಲೇ ಸಂಬಂಧದಲ್ಲಿ ಸಣ್ಣದಾಗಿ ಉಸಿರುಗಟ್ಟುವಿಕೆ ಶುರುವಾಗುತ್ತದೆ. ಒಮ್ಮೆ ಉಸಿರುಗಟ್ಟುವಿಕೆ ಆರಂಭವಾದರೆ, ಮತ್ತೆ ಅದನ್ನು ಸರಿದಾರಿಗೆ ತರಲು ಸಮಯ, ತಾಳ್ಮೆ ಎರಡೂ ಬೇಕಾಗುತ್ತದೆ. ಅದಕ್ಕಾಗಿ ಮೊದಲೇ ಕೆಲವು ಜಾಗರೂಕತೆಗಳನ್ನು, ಕೆಲವು ಸಾಮಾನ್ಯಜ್ಞಾನವನ್ನು ನಾವು ಅರಿತುಕೊಳ್ಳುವುದು ಮುಖ್ಯ. ಹಾಗಾಗಿ ಸಂಬಂಧದಲ್ಲಿ ಯಾವತ್ತಿಗೂ ಮಾಡಲೇಬಾರದ ಕೆಲವು ತಪ್ಪುಗಳ ವಿವರ ಇಲ್ಲಿದೆ.
೧. ಸಂಬಂಧದಲ್ಲಿ ಯಾವತ್ತಿಗೂ ನಿಮ್ಮ ಹಳೆಯ ಪ್ರೇಮಿಯ ಬಗ್ಗೆ, ಅಥವಾ ಭೂತಕಾಲದ ನೆನಪುಗಳನ್ನು ಹರವಿ ಕೂರಬೇಡಿ. ಬೇಡವೆಂದಾದ ಮೇಲೆ ಹಳೆಯ ನೆನಪುಗಳಿಗೆ ಮತ್ತೆ ಜಾಗ ಕೊಡಬೇಡಿ.
೨. ಯಾವತ್ತಿಗೂ, ನಿಮ್ಮ ಸಂಗಾತಿಗೆ ಇಷ್ಟವಾಗದ ಸಂಗತಿಗಳನ್ನು ಅವರ ಬಳಿ ಚರ್ಚಿಸಲು ಕೂರಬೇಡಿ. ಕೆಲವು ಖಾಸಗಿ ವಿಷಯಗಳನ್ನು ಪದೇ ಪದೇ ಕೆದಕುವುದು ಅವರಿಗೆ ಇಷ್ಟವಾಗದಿದ್ದರೆ, ಅದರ ಬಗ್ಗೆ ಮಾತನಾಡುವುದರಿಂದ ಅವರ ಮೂಡು ಹಾಳಾಗುತ್ತಿದ್ದರೆ, ಅಂತಹ ವಿಚಾರಗಳನ್ನು ಮಾತಾಡುವುದನ್ನು ಬಿಟ್ಟು ಬಿಡಿ.
೩. ಯಾವತ್ತಿಗೂ ಸಂಗಾತಿಯನ್ನು ಬಂಧಿಸಿಡಬೇಡಿ. ಅರ್ಥಾತ್ ಭಾವನೆಗಳಿಂದ ಕಟ್ಟಿಹಾಕಬೇಡಿ. ಒಮ್ಮೆ ಬಂಧಿಸಲು ಆರಂಭಿಸಿದಿರೆಂದಾದಲ್ಲಿ ಮತ್ತೆ ತೋಳುಗಳಿಂದ ಬಂಧಿಸುವುದೂ ಕಷ್ಟವೇ ಆದೀತು.
೪. ಯಾವತ್ತಿಗೂ ಸಂಶಯಪಡಬೇಡಿ. ಅವರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಅವರು ಖಂಡಿತವಾಗಿಯೂ ನಿಮಗೆ ಮೋಸ ಮಾಡುವುದಿಲ್ಲ. ಜೊತೆಗೆ ನಿಮಗೆ ಇಷ್ಟವಾಗದ ಸಂಗತಿಗಳನ್ನು ಮಾಡಲು ಇಚ್ಛಿಸುವುದಿಲ್ಲ.
೫. ಯಾವತ್ತಿಗೂ ಅವರು ಏನನ್ನಾದರೂ ಹಂಚಿಕೊಳ್ಳಲು ಸಾಧ್ಯವಾಗದಂತೆ ವರ್ತಿಸಬೇಡಿ. ಮೊದಲು ಒಳ್ಳೆಯ ಗೆಳೆಯರಾಗಲು ಪ್ರಯತ್ನಿಸಿ.
ಇದನ್ನೂ ಓದಿ: ರಾಜ ಮಾರ್ಗ | ಕೃಷ್ಣ ಮತ್ತು ಕೃಷ್ಣಾ ಅವರ ಮಧುರ ಸಂಬಂಧದಲ್ಲಿ ಮಿಂದೆದ್ದ ಮಹಾಭಾರತ!
೬. ಯಾವತ್ತಿಗೂ ಅವರನ್ನು ನಿಮ್ಮ ಹಳೆಯ ಪ್ರೇಮಿ ಅಥವಾ ಗೆಳೆಯ/ಗೆಳತಿಯೊಂದಿಗೆ ಹೋಲಿಸಬೇಡಿ. ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ವಿಶೇಷ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡು ಒಪ್ಪಿಕೊಳ್ಳಿ.
೭. ಆದಷ್ಟೂ ಅವರ ಮೇಲೆ ಕೋಪಿಸಿಕೊಳ್ಳದಿರಲು ಪ್ರಯತ್ನಿಸಿ. ಕೋಪ ಬಂದಾಗ ಆದಷ್ಟು ನಿಗ್ರಹಿಸಿಕೊಳ್ಳಲು ಕಲಿಯಿರಿ. ಕೋಪ ನಿಮ್ಮ ಕೈಯಿಂದ ಪರಿಸ್ಥಿತಿಗೂ ಮೀರಿದ ಭಾವನೆಯನ್ನು ಹೊರಗೆ ಬರುವಂತೆ ಮಾಡುತ್ತದೆ. ನಿಮ್ಮ ಕೈಮೀರಿದ ಘಟನೆಗಳು ಅನವಶ್ಯಕವಾಗಿ ನಡೆದು ಸಂಬಂಧದಲ್ಲಿ ಬಿರುಕಾಗಬಹುದು. ಮಾಸದ ಗಾಯಗಳಾಗಬಹುದು.
೮. ಯಾವತ್ತಿಗೂ ಕೆಟ್ಟ ಮಾತುಗಳಲ್ಲಿ ಬೈಯಬೇಡಿ. ʻಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತುʼ ಎಂಬ ಮಾತನ್ನು ಹಿಂದೆ ಹಿರಿಯರು ಸುಮ್ಮನೆ ಹೇಳಿಲ್ಲ. ಅದು ಕತ್ತಿಯ ಅಲಗಿನಂತೆ, ಅದು ಕತ್ತರಿಸುತ್ತಾ ಹೋಗುತ್ತದೆ. ಮತ್ತೆ ಜೋಡಿಸುವುದು ಕಷ್ಟ. ಸಿಟ್ಟು ಬಂದಾಗ ಸ್ವಲ್ಪ ಹೊತ್ತು ಮಾತಾಡದೆ, ಯೋಚಿಸಿ. ತಕ್ಷಣ ಪ್ರತಿಕ್ರಿಯಿಸುವ ಮೊದಲು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆದಷ್ಟೂ ನಿಮಗೆ ನೀವು ಈ ಸಮಯ ಕೊಟ್ಟರೆ, ಎಷ್ಟೋ ಕೆಟ್ಟ ಪದಗಳು ನಿಮ್ಮ ಬಾಯಿಂದ ಹೊರಬರುವುದನ್ನು ನೀವು ತಪ್ಪಿಸಬಹುದು. ಆದಷ್ಟೂ ಒಳ್ಳೆಯ ಮಾತಾಡುವುದನ್ನು ಅಭ್ಯಾಸ ಮಾಡಿ. ಕೆಟ್ಟ ಮಾತುಗಳನ್ನು ನುಂಗಿ ನೀರು ಕುಡಿಯಿರಿ.
ಇದನ್ನೂ ಓದಿ: Health tips: ನಮ್ಮ ಭಾವನೆಗಳಿಗೂ ದೇಹದ ಅಂಗಗಳಿಗೂ ನೇರಾನೇರ ಸಂಬಂಧ!