Site icon Vistara News

Happy Family: ಸಂಸಾರ ಸರಿಗಮದಲ್ಲಿ ಅಪಸ್ವರ ಬರೋದೇಕೆ?

happy family

ಈಗಷ್ಟೇ ಹಸೆಮಣೆಗೆ ಏರುವಾತನನ್ನು ಆತನ ಗೆಳೆಯರೆಲ್ಲ ಸೇರಿ ಇನ್ನು ನಿನ್ನ ಕಥೆ ಮುಗಿದಂತೆಯೇ, ಬಾವಿಗೆ ಬಿದ್ದಾಯಿತು, ಈಜಿದರೂ ಬಾವಿಯೊಳಗೇ ಎಂದು ಕಾಲೆಳೆಯುವುದುಂಟು. ಹುಡುಗಿಗೂ ಅಷ್ಟೇ, ಮದುವೆಯಾದರೆ, ಮೊದಲಿನಂತಿರುವುದಿಲ್ಲ, ತನ್ನ ಕನಸುಗಳಿಗೆಲ್ಲ ಇನ್ನು ಎಳ್ಳುನೀರು ಎಂಬ ಭಯ ಇದ್ದರೂ, ಇಬ್ಬರೂ ಮದುವೆಯೆಂಬ ಹೊಸ ಲೋಕಕ್ಕೆ ಖುಷಿಯಾಗಿಯೇ ಎಂಟ್ರಿ ಕೊಡುತ್ತಾರೆ. ಆದರೆ ʼಸುಖ ಸಂಸಾರʼ (Happy Family) ಎಂಬುದು ಎಲ್ಲರ ತುತ್ತಲ್ಲ. ಕೆಲವರಿಗೆ ಕೆಲಕಾಲ ಕಳೆದ ಮೇಲೆ, ಪ್ರತಿಯೊಬ್ಬರೂ ಹೇಳಿದ್ದು ಅಪ್ಪಟ ಸತ್ಯ ಅಂತ ಅನಿಸಿದರೆ, ಇನ್ನೂ ಕೆಲವರಿಗೆ ಸುಮ್ಮನೆ ಕಾಲೆಳೆಯುವುದಷ್ಟೇ, ಚಂದದ ಜೀವನವಿದು ಅನಿಸಬಹುದು. ಇರಲಾಗದೆ ಈ ಬಂಧದಿಂದಲೇ (relationship) ಹೊರಬರುವ ಒಂದಷ್ಟು ಮಂದಿಯೂ ಇದ್ದಾರೆ.

ಸಮಾನತೆ (equality) ಎಂಬುದು ಉತ್ತಮ ದಾಂಪತ್ಯದ (good family) ಲಕ್ಷಣ ಎಂಬುದು ನಿಜವೇ ಆದರೂ ಕೆಲವರು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಪ್ರತಿಯೊಂದನ್ನೂ ಇದೇ ಆಧಾರದಲ್ಲಿ ಅಳೆದು ತೂಗಿ ದಾಂಪತ್ಯದ ಅಂದಗೆಡಿಸುವರು. ಪ್ರತಿಯೊಂದನ್ನೂ ಹೀಗೇ ಆಗಬೇಕು ಎಂಬ ಒಡಂಬಡಿಕೆಯ ರೂಪದಲ್ಲಿ ದಾಂಪತ್ಯದಲ್ಲಿ ಮುನ್ನಡೆಯಲಿಚ್ಛಿಸಿದರೆ ಅಲ್ಲಿ ಖಂಡಿತ ಸಂಬಂಧವೊಂದು ಹಳಸಿಹೋಗುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ಇಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರೀತಿಯಿಂದಲೇ ಅವುಗಳನ್ನು ನಿರ್ವಹಿಸಬೇಕಾದ್ದು ಅಗತ್ಯ. ಪ್ರತಿಯೊಂದನ್ನೂ 50:50ರ ಆಧಾರದಲ್ಲಿ ಹಂಚಿಕೊಂಡು ತೀರಾ ಖಡಕ್‌ ಲೆಕ್ಕಾಚಾರದ ನಿರ್ವಹಣೆ ಇಲ್ಲಿ ಸಾಧ್ಯವಿಲ್ಲ.

ಇಬ್ಬರ ನಡುವೆ ಸ್ಪರ್ಧೆಯೇರ್ಪಟ್ಟರೆ ಉಳಿಗಾಲವಿಲ್ಲ. ಇದು ಕೊನೆಗೆ ಸರಿ ತಪ್ಪುಗಳ ದ್ವಂದ್ವದಲ್ಲೇ ಕೊನೆಯಾಗುತ್ತದೆ. ಪರಿಸ್ಥಿತಿಗಳು ಬದಲಾಗುತ್ತವೆ. ಇಬ್ಬರೂ ಪರಿಸ್ಥಿತಿಯ ಅನುಗುಣವಾಗಿ ಬದಲಾಗುವುದು, ತಮ್ಮ ಆದ್ಯತೆ ಜವಾಬ್ದಾರಿಗಳನ್ನರಿತು ಮುನ್ನಡೆಯುವುದಷ್ಟೆ ಮುಖ್ಯವಾಗುತ್ತದೆ.

ಸಂಗಾತಿ ಪ್ರತಿ ಬಾರಿಯೂ ತನ್ನನ್ನು ಅರಿತು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ, ಇದು ಇಬ್ಬರಲ್ಲೂ ಇರುವುದು ತಪ್ಪಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳು, ಒತ್ತಡಗಳು ಹೀಗಿರಲು ಬಿಡುವುದಿಲ್ಲ. ಪ್ರತಿ ಬಾರಿಯೂ ಸಂಗಾತಿ ಮನದಲ್ಲಿ ಏನಿದೆ ಅಂತ ಅರಿತುಕೊಳ್ಳುವುದೂ ಅಷ್ಟು ಸುಲಭವಲ್ಲ. ಏನನ್ನೂ ಹೇಳಿಕೊಳ್ಳದೆ ಇದ್ದರೆ ಇದು ಸುಲಭವೂ ಅಲ್ಲ. ಹಾಗಾಗಿ ಮನಸ್ಸು ಬಿಚ್ಚಿ ಮಾತಾಡುವುದು ಬಹಳ ಮುಖ್ಯ.

ಪರಿಸ್ಥಿತಿ ಬಿಗಡಾಯಿಸಿದರೆ, ಸಂಬಂಧ ಹಳಸುತ್ತಿದೆ ಎನಿಸಿದರೆ, ಅದನ್ನು ಹಾಗೆಯೇ ಬಿಡುವುದು ಒಳ್ಳೆಯದಲ್ಲ. ಇಬ್ಬರೂ ಇದನ್ನು ಸರಿಪಡಿಸಲು ಪ್ರಯತ್ನಿಸಬೇಕಾಗುತ್ತದೆ. ಅಗತ್ಯ ಬಿದ್ದರೆ, ಕೌನ್ಸೆಲಿಂಗ್‌ ಪಡೆದುಕೊಳ್ಳುವುದು ತಪ್ಪಲ್ಲ. ಸಂವಹನ ಸಂಸಾರದಲ್ಲಿ ಅತೀ ಅಗತ್ಯ. ಒಂದೊಳ್ಳೆ ಸಂಬಂಧ ವರ್ಕೌಟ್‌ ಆಗಬೇಕೆಂದರೆ, ಮಾತು ಕೀಲಿಕೈ. ಹಾಗಾಗಿ, ಇಬ್ಬರು ಕೂತು ಆಡಲಾಗದ ಮಾತುಗಳೂ ಕೂಡಾ ತಜ್ಙರ ಸಮ್ಮುಖದಲ್ಲಿ ಬಗೆಹರಿದು ಸಮಸ್ಯೆ ಬಗೆಹರಿದು ದಾರಿ ಸುಗಮವಾಗಬಹುದು.

ಯಾವುದೇ ವಿಚಾರದಲ್ಲಿ ವಾದ ಸಲ್ಲ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅವರಿರುವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸುವುದು ಆರೋಗ್ಯಕರ ಸಂಬಂಧವೊಂದು ಚಿರಸ್ಥಾಯಿಯಾಗಿ ಉಳಿಯಬಹುದು.

ಪ್ರತಿ ದಾಂಪತ್ಯದ ಮುಂದೆಯೂ ಒಂದು ಗುರಿಯಿರುತ್ತದೆ. ಒಂದು ಕುಟುಂಬವಾಗಿ ಹೇಗೆ ಮುಂದುವರಿಯಬೇಕು, ಏನನ್ನು ಸಾಧಿಸಬೇಕು, ಪಡೆಯಬೇಕು ಎಂಬುದರ ಬಗ್ಗೆ ಒಮ್ಮತವಿರಲಿ. ಇಬ್ಬರೂ ಪ್ರಾಮಾಣಿಕವಾಗಿ ಈ ನಿಟ್ಟಿನಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾದ ವಾತಾವರಣವಿರಲಿ. ಪರಿಸ್ಥಿತಿಗೆ ಅನುಗುಣವಾಗಿ ಇಬ್ಬರೂ ಮುಂದುವರಿವ ಗುಣವಿರಲಿ.

ನೀವು ಪ್ರೀತಿಸಿ ಮದುವೆಯಾಗಿದ್ದರೆ ಆರಂಭದಲ್ಲಿ ಅರಿತುಕೊಳ್ಳುವಲ್ಲಿ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ವಿವಾಹ ವೆಬ್‌ಸೈಟ್‌ಗಳ ಮೂಲಕವೋ ಮದುವೆಯಾಗಿದ್ದರೆ, ಆಸಕ್ತಿಗಳ ಆಧಾರದಲ್ಲಿ ರಚಿತವಾಗಿರುತ್ತದೆ. ಕೆಲವಾದರೂ ಆಸಕ್ತಿಗಳು ಇಬ್ಬರದ್ದೂ ಒಂದೇ ಆಗಿದ್ದಲ್ಲಿ, ಸಂಬಂಧ ಚೆನ್ನಾಗಿರುತ್ತದೆ ಎಂಬುದನ್ನು ಶೇ.60ರಷ್ಟು ಮಂದಿ ನಂಬುತ್ತಾರೆ. ಒಂದೇ ತರದ ಆಸಕ್ತಿಗಳು ಇಬ್ಬರಲ್ಲೂ ಇಲ್ಲದಿದ್ದಲ್ಲಿ ದಾಂಪತ್ಯ ಖಂಡಿತ ಏಕತಾನತೆಯನ್ನು ಹುಟ್ಟುಹಾಕುತ್ತದೆ. ಲವಲವಿಕೆ ಕಳೆದುಕೊಳ್ಳುತ್ತದೆ. ಆಸಕ್ತಿಗಳು ಬೇರೆ ಬೇರೆ ಇದ್ದರೂ ಇಬ್ಬರ ಆಸಕ್ತಿಗಳ ಮೇಲೂ ಒಬ್ಬರಿಗೊಬ್ಬರು ಗೌರವ ಹೊಂದಿರಬೇಕು. ತಮಾಷೆ, ಉಡಾಫೆ ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಸಂಗಾತಿ ತನ್ನಿಷ್ಟದ ಸಂಗತಿಗಳ ಬಗ್ಗೆ ಮಾತನಾಡುವಾಗ ಕಿವಿಗೊಡಿ. ಅವಕ್ಕೂ ಸಮಯ ನೀಡಿ. ಮಾತಿಗೆ ಕಿವಿಯಾಗುವುದೂ ಪ್ರೋತ್ಸಾಹವೇ. ಕುರುಡು ನಂಬಿಕೆಗಳಿಂದ ಸಂಗಾತಿಯ ಆಸಕ್ತಿಯನ್ನು  ಬಲಿಕೊಡಬೇಡಿ.

ಇದನ್ನೂ ಓದಿ: Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ

ಮಗು ಹುಟ್ಟಿದ ತಕ್ಷಣ ಎಲ್ಲ ಸರಿಯಾಗಿಬಿಡುತ್ತದೆ ಎಂಬುದೊಂದು ದೊಡ್ಡ ಸುಳ್ಳು ನಂಬಿಕೆ. ಮಗುವೊಂದರ ಆಗಮನ ಇಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆಯೆಂಬುದು ನಿಜವೇ. ಆದರೆ, ಇದು ಚೆನ್ನಾಗಿದ್ದ ಸಂಬಂಧಕ್ಕೆ ಮಾತ್ರ ಅನ್ವಯಿಸುತ್ತದೆ. ಚೆನ್ನಾಗಿದ್ದ ಸಂಬಂಧ ಮಗುವೊಂದರ ಆಗಮನದೊಂದಿಗೆ ಮತ್ತಷ್ಟು ಒಲವನ್ನು ಸುರಿದುಕೊಂಡು ಸಮೃದ್ಧವಾಗುತ್ತದೆ. ಆದರೆ, ಮೊದಲೇ ಸಂಸಾರ ಹದಗೆಟ್ಟಿದ್ದರೆ, ಮಗು ಮ್ಯಾಜಿಕ್‌ ಮಾಡಿ ಸರಿ ಮಾಡುವುದಿಲ್ಲ. ಇಲ್ಲಿ ಇಬ್ಬರ ಪ್ರಯತ್ನ, ಈ ಸಂದರ್ಭ ತಾವೇನು ಮಾಡಬೇಕು ಎಂಬುದನ್ನು ಅರಿತು ನಡೆಯುವುದರ ಮೇಲೆ ನಿಂತಿದೆ. ಇಬ್ಬರಿಗೂ ತಾವೆಷ್ಟು ಇಲ್ಲಿ ಸಮಯ ನೀಡಬೇಕು ಎಂಬುದೂ ಗೊತ್ತಿರಬೇಕು. ಇಲ್ಲದಿದ್ದಲ್ಲಿ, ಮಕ್ಕಳನ್ನು ಬೆಳೆಸುವ ಬಹು ದೊಡ್ಡ ಜವಾಬ್ದಾರಿಯನ್ನು ಕಾಲ್ಚೆಂಡಾಟದಂತೆ ಇಬ್ಬರೂ ಒಬ್ಬರಿಗೊಬ್ಬರು ಒದೆಯುತ್ತ, ಮತ್ತಷ್ಟು ದಿಕ್ಕೆಡಿಸುವುದರಲ್ಲಿ ಅನುಮಾನವಿಲ್ಲ. 

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

Exit mobile version