Site icon Vistara News

Parenting Tips: ಗಂಡುಮಕ್ಕಳು ಟಫ್‌ ಆಗಿರಬೇಕಾ? ಈ ಪೇರೆಂಟಿಂಗ್ ಮಿಥ್‌ಗಳಿಂದ ಹೊರಬನ್ನಿ!

mother and son

ಮಕ್ಕಳನ್ನು ಎಷ್ಟೇ ಚೆನ್ನಾಗಿ ಬೆಳೆಸಬೇಕು ಎಂದುಕೊಂಡರೂ ಹೆತ್ತವರಿಂದ ತಪ್ಪುಗಳು ಆಗುತ್ತವೆ. ಗೊತ್ತಾಗಿಯೋ, ಗೊತ್ತಾಗದೆಯೋ, ಸಮಾಜದ ಪಿಡುಗುಗಳಿಂದ ಮುಕ್ತಿಯೇ ಸಿಗದಿರಲು, ಇವುಗಳ ಪಾಲೂ ಇದೆ. ಯಾರೂ ಪರ್ಫೆಕ್ಟ್‌ ಹೆತ್ತವರಲ್ಲ. ಜಗತ್ತು ಎಷ್ಟೇ ಬದಲಾವಣೆ ಹೊಂದಿದೆ ಎಂದು ನಾವಂದುಕೊಂಡರೂ ಇಂದಿನ ಪುರುಷ ಪ್ರಧಾನ ಜಗತ್ತಿನಲ್ಲಿ ಎಷ್ಟೋ ಸಮಸ್ಯೆಗಳು ಹಾಗೆಯೇ ಇವೆ. ಮುಖ್ಯವಾಗಿ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು! ಹುಡುಗರೆಂದರೆ ಟಫ್‌ ಆಗಿರಬೇಕು, ಅಳಬಾರದು, ಹುಡುಗಿಯರು ಹೀಗಿದ್ದರೆ ಚೆನ್ನ ಎಂಬಿತ್ಯಾದಿ ಪೂರ್ವಗ್ರಹ ಪೀಡಿತ ಮನಸ್ಥಿತಿಗಳು ಹಾಗೆಯೇ ಇರುವುದರಿಂದಲೋ ಏನೋ, ಇದರಲ್ಲಿ ಮಾತ್ರ ಹೆಚ್ಚಿನ ಬದಲಾವಣೆ ಕಂಡಿಲ್ಲ. ಹಾಗಾದರೆ ಬದಲಾವಣೆಯಾಗಬೇಕಾದದ್ದು ಏನು? ಅಮ್ಮಂದಿರು- ಅಪ್ಪಂದಿರು ತಮ್ಮ ಗಂಡು ಮಕ್ಕಳನ್ನು ಸೂಕ್ಷ್ಮವಾಗಿ ಬೆಳೆಸುವ ಮನಸ್ಥಿತಿ ಮತ್ತು ತಾಳ್ಮೆ ಹೊಂದಿರದಿದ್ದರೆ, ಪರಿಸ್ಥಿತಿ ಎಂದೆಂದಿಗೂ ಹಾಗೆಯೇ ಇರುತ್ತದೆ! ಹಾಗಿದ್ದರೆ ಗಂಡು ಮಕ್ಕಳನ್ನು ಬೆಳೆಸಬೇಕಾದ ರೀತಿ (Parenting tips) ಹೇಗೆ?

1. ಗಂಡುಮಕ್ಕಳು ಮಾನಸಿಕವಾಗಿ ಸಧೃಢರು ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಗಂಡು ಮಕ್ಕಳು ನೋವಿನಿಂದ ಅತ್ತರೆ, ಬೇಸರದಿಂದ ಕಣ್ಣೀರು ಹಾಕಿದರೆ ಕಣ್ಣಿರು ಹಾಕಲಿ, ಸಮಸ್ಯೆ ಇಲ್ಲ. ʻನೀನು ಹುಡುಗನಾಗಿ ಅಳ್ತೀಯಾ, ಹುಡುಗರು ಅಳಬಾರದು, ಹುಡುಗನಾಗಿ ಹುಡುಗಿಯರ ಹಾಗೆ ಯಾಕಾಡ್ತಿ?ʼ ಎಂಬಿತ್ಯಾದಿ ಮಾತುಗಳು ಅಮ್ಮಂದಿರಾಗಿ ನೀವು ಹೇಳಬಾರದು ಎಂದು ನೆನಪಿಡಿ. ಮಕ್ಕಳು ಹೆಣ್ಣಾಗಲಿ, ಗಂಡಾಗಲಿ, ಅವರಿಗೂ ಭಾವನೆಗಳಿರುತ್ತವೆ. ನಗು, ತಮಾಷೆ, ತುಂಟತನ, ಕೀಟಲೆಗಳಂತೆಯೇ ಅಳು ಕೂಡಾ. ಅಳಲಿ ಬಿಡಿ. ಅತ್ತು ಹಗುರಾಗಲು ಅವರಿಗೂ ಹಕ್ಕಿದೆ!

2. ಆಟ ಒಳ್ಳೆಯದು. ಆದರೆ, ಹುಡುಗ ಎಂಬ ಕಾರಣಕ್ಕೆ ಅವರನ್ನು ಹುಡುಗರು ಆಡುವ ಆಟಗಳಲ್ಲಿ ಭಾಗವಹಿಸಲೇಬೇಕು ಎಂಬ ಒತ್ತಾಯ ಬೇಡ. ಅವರಿಷ್ಟ ಬರುವ ಆಟ ಆಡಲಿ. ಆಟದಲ್ಲಿ ಇಷ್ಟವಿಲ್ಲದಿದ್ದರೆ ಅವರ ಆಸಕ್ತಿ ಏನೆಂದು ತಿಳಿದು ಪ್ರೋತ್ಸಾಹಿಸಿ. ಆದರೆ, ಮನೆಯಿಂದ ಹೊರಗಿದ್ದು ಆಟ ಆಡಿದರಷ್ಟೆ ನಿಜವಾದ ಗಂಡಸು ಎಂಬರ್ಥದಲ್ಲಿ ಕಾಣಬೇಡಿ.

3. ಕೇವಲ ಹುಡುಗಿಯ ಮೇಲಷ್ಟೆ ಲೈಂಗಿಕ ದೌರ್ಜನ್ಯಗಳಾಗುತ್ತವೆ ಎಂದುಕೊಳ್ಳಬೇಡಿ. ಹುಡುಗರ ಮೇಲೂ ಆಗುತ್ತವೆ. ಹಾಗಾಗಿ ಪುಟ್ಟ ಹುಡುಗರಿಗೆ ಈ ವಿಚಾರದಲ್ಲಿ ಹುಡುಗಿಯರಂತೆಯೇ ಮೊದಲೇ ತಿಳುವಳಿಕೆ ನೀಡಿ. ದೇಹದ ಅಂಗಾಗಗಳ ಬಗ್ಗೆ, ಗುಡ್‌ ಟಚ್‌, ಬ್ಯಾಡ್‌ ಟಚ್‌ಗಳ ಬಗ್ಗೆ ಅವರಿಗೆ ಗೊತ್ತಿರಲಿ. ಹುಡುಗರೆಂದ ಮಾತ್ರಕ್ಕೆ ಇಂತಹ ವಿಷಯದ ಬಗ್ಗೆ ಗಮನ ಅಗತ್ಯವಿಲ್ಲ ಎಂಬ ನಿರ್ಲಕ್ಷ್ಯ ಸಲ್ಲದು.

4. ಅವರಿಗಿರುವ ಭಯಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಲಿ. ʻಹುಡುಗರಿಗೆ ಭಯವೇ ಇರುವುದಿಲ್ಲ. ಅವರು ಹುಟ್ಟಾ ಧೈರ್ಯಶಾಲಿಗಳುʼ ಎಂಬಿತ್ಯಾದಿ ಯೋಚನೆಗಳು ನಿಮ್ಮಲ್ಲಿದ್ದರೆ ಅದನ್ನು ಗಂಟುಮೂಟೆ ಕಟ್ಟಿ ಸೈಡಲ್ಲಿಡಿ. ಅವರಿಗೆ ಅವರ ಭಯದಿಂದ ಹೊರಬರಲು ನಿಮ್ಮ ಸಹಾಯ ನೀಡಿ.

5. ಹುಡುಗರನ್ನು ಉತ್ತಮ ಪ್ರಜೆಗಳಾಗಿ ಬೆಳೆಸುವ ಕರ್ತವ್ಯ ಹಾಗೂ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ನೆನಪಿಡಿ. ನಮ್ಮ ಗಂಡುಮಕ್ಕಳು ಸಮಾಜದಲ್ಲಿ ಯಾವುದೇ ಕೆಟ್ಟ ಕೆಲಸದಲ್ಲಿ ಭಾಗಿಯಾಗುವಂತಾಗಬಾರದು, ಯಾರಿಗೂ ಅವರು ತೊಂದರೆ ಕೊಡಬಾರದು ಎಂಬುದನ್ನು ಮೊದಲು ಅರಿತುಕೊಳ್ಳಿ. ಹಾಗಾಗಿ, ಎಳವೆಯಲ್ಲಿಯೇ ಅವರಿಗೆ ಈ ಗುಣಗಳನ್ನು ಬೆಳೆಸುವುದು ಅತ್ಯಗತ್ಯ. ಇತರರ ಜೊತೆ ಬೆರೆಯುವುದು, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವದು ಎಲ್ಲವೂ ಎಳವೆಯಲ್ಲಿಯೇ ಮೈಗೂಡಬೇಕು.

6. ಹುಡುಗರೆಂದ ಮಾತ್ರಕ್ಕೆ ಅವರ ಖಾಸಗಿ ಅಂಗಾಂಗಗಳ ಮೇಲೆ ಜೋಕ್‌ ಮಾಡಿ ನಗುವುದು ಸಲ್ಲದು. ಲೈಂಗಿಕವಾಗಿ ಸಮಾಜ ಪುರುಷನಿಂದ ಏನನ್ನು ಬಯಸುತ್ತದೆ ಎಂಬ ಒತ್ತಡವನ್ನು ನಿಧಾನವಾಗಿ ಅವೇ ಪಿಡುಗುಗಳ ಮೂಲಕ ಹೇರುವುದರಿಂದಲೇ, ಅವರಿಂದ ತಪ್ಪುಗಳಾಗಿ ಬಿಡುತ್ತದೆ, ನೆನಪಿಡಿ.

7. ಗಂಡು ಮಕ್ಕಳು ಹದಿಹರೆಯಕ್ಕೆ ಬಂದ ಕೂಡಲೇ ಇದ್ದಕ್ಕಿದ್ದಂತೆ ಅವರಿಗೆ ತೋರಿಸುವ/ತೋರಿಸುತ್ತಿದ್ದ ಪ್ರೀತಿಯಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಿ. ಹುಡುಗ ದೊಡ್ಡವನಾದ, ಇನ್ನು ಅಮ್ಮನಾಗಿ ತಾನು ಅಪ್ಪಿಕೊಳ್ಳುವುದು, ಮುದ್ದು ಮಾಡುವುದು ಮಾಡಬಾರದು ಎಂಬ ಯೋಚನೆ ಬಂದಿದ್ದರೆ ಅದನ್ನು ತೆಗೆದು ಹಾಕಿ. ಮನುಷ್ಯರಿಗೆ ಮನುಷ್ಯರ ಮಮತೆಯ/ ಕಾಳಜಿಯ ಸ್ಪರ್ಶ ಬಹಳ ಮುಖ್ಯ. ದೊಡ್ಡವರಾಗುತ್ತಿದ್ದಂತೆ, ಗಂಡುಜಗತ್ತಿನಲ್ಲಿ ಅವರಿಗೂ ಮಾನಸಿಕವಾಗಿ, ಸಾಮಾಜಿಕವಾಗಿ ಹಲವಾರು ಒತ್ತಡಗಳು, ಸಮಸ್ಯೆಗಳು ಎದುರಾಗುತ್ತವೆ. ಅವರಿಗೆ ಪ್ರೀತಿ ಬೇಕಾದಾಗ, ʻಒಂದು ಹಗ್‌, ನಾನಿದ್ದೇನೆʼ ಎಂಬ ಸಮಾಧಾನದ ನುಡಿ ಅವರನ್ನು ತಪ್ಪು ಹಾದಿಯಲ್ಲಿ ನಡೆಯದಂತೆ ಮಾಡುತ್ತವೆ. ಹಾಗಾಗಿ, ನಿಮ್ಮ ಗಂಡುಮಕ್ಕಳನ್ನು ಅಪ್ಪುಗೆ ವಂಚಿತರನ್ನಾಗಿ ಮಾಡಬೇಡಿ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳಿಂದ ಗೌರವ ಸಿಗಬೇಕಾದರೆ ನಿಮ್ಮ ಹೆತ್ತವರನ್ನು ಹೀಗೆ‌ ನಡೆಸಿಕೊಳ್ಳಿ!

8. ಗಂಡುಮಕ್ಕಳ ಮೇಲೆ ಮುಂದೊಂದು ದಿನ ನೀನು ದೊಡ್ಡವನಾದ ಮೇಲೆ ನಿನ್ನ ಹೆಂಡತಿ, ಮಕ್ಕಳು ಎಂಬೆಲ್ಲ ಮಾತುಗಳನ್ನು ಪದೇ ಪದೇ ಆಡಬೇಡಿ. ಲೈಂಗಿಕವಾಗಿ, ಸಾಮಾಜಿಕವಾಗಿ ಅವರಿಗೆ ಅವರದೇ ಆಯ್ಕೆಗಳಿರುತ್ತವೆ. ಇಂಥ ಮಾತುಗಳು ಸಮಾಜ ಅವರಿಂದ ಹೇಗಿರಲು ಬಯಸುತ್ತದೆ ಎಂಬ ಒತ್ತಡಗಳನ್ನು ಅವರ ಮೇಲೆ ಹಾಕಿದಂತಾಗುತ್ತದೆ ನೆನಪಿಡಿ. ಅವರ ಆಯ್ಕೆಗಳ ಮೇಲೆ ಅವರಿಗೆ ಧೈರ್ಯ ಬರದೇ, ನಿಮ್ಮ ಬಳಿ, ಅವರ ನಿಜವಾದ ಸಮಸ್ಯೆಗಳನ್ನು ಮನಬಿಚ್ಚಿ ಹಂಚಿಕೊಳ್ಳಲೂ ಕೂಡಾ ಸಾಧ್ಯವಾಗದು.

ಸಮಾಜದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯ, ಮಾನಸಿಕ ಲೈಂಗಿಕ ಹಿಂಸೆ, ಅತ್ಯಾಚಾರಗಳಿಂದ ಮುಕ್ತಿ ದೊರೆಯಬೇಕೆಂದರೆ ಉತ್ತಮ ಸ್ವಾಸ್ಥ್ಯ ಸಮಾಜ ಕಟ್ಟುವ ಅಗತ್ಯವಿದೆ. ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರ ಕೈಯಲ್ಲೂ ಇದೆ. ತಮ್ಮ ಹೆಣ್ಣುಮಕ್ಕಳಿಗೆ ಸ್ವರಕ್ಷಣೆಯ ತಂತ್ರಗಳನ್ನು ಕಲಿಸುವ ಜೊತೆಗೆ ಗಂಡುಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಸುವ ಜವಾಬ್ದಾರಿ ಎಲ್ಲ ಅಮ್ಮಂದಿರ ಕೈಯಲ್ಲೂ ಇದೆ ಎಂಬುದೂ ಅಷ್ಟೇ ಸತ್ಯ!

ಇದನ್ನೂ ಓದಿ: Parenting Tips: ಮಕ್ಕಳನ್ನು ಸಮಾಧಾನಗೊಳಿಸುವ ವೇದ ವಾಕ್ಯಗಳು!

Exit mobile version