ಬೆಂಗಳೂರು: ಮಗುವಿಗೆ ಜನ್ಮ ನೀಡುವುದಕ್ಕೆ (Pregnancy Age) ಯಾವುದು ಸರಿಯಾದ ವಯಸ್ಸು ಎನ್ನುವುದರ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಇದೇ ವಿಚಾರದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿರುವ ಸೆಮ್ಮೆಲ್‌ವೀಸ್ ವಿಶ್ವವಿದ್ಯಾನಿಲಯದ ಸಂಶೋಧಕರು ಸಮೀಕ್ಷೆ ನಡೆಸಿದ್ದು, ವರದಿಯೊಂದನ್ನು ತಯಾರಿಸಿದ್ದಾರೆ. ಅವರ ವರದಿಯ ಪ್ರಕಾರ 23ರಿಂದ 32ರೊಳಗಿನ ವಯಸ್ಸು ಮಗುವಿಗೆ ಜನ್ಮ ನೀಡುವುದಕ್ಕೆ ಸೂಕ್ತವಾದ (Pregnancy Age) ಸಮಯ.
ಈ ವಯಸ್ಸಿನಲ್ಲಿ ಮಕ್ಕಳಿಗೆ ಜನ್ಮ ನೀಡಿದರೆ ಆಗ ಮಕ್ಕಳಲ್ಲಿ ಜನ್ಮದೋಷಗಳು ಕಂಡುಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರು ಈ ವರದಿಯನ್ನು BJOG ಅಂತಾರಾಷ್ಟ್ರೀಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಂಶೋಧನೆಗಳ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ತಾಯಿ – ಮಗುವಿಗೆ ಜನ್ಮ ನೀಡುವ ವಯಸ್ಸು ಮತ್ತು ಅನುವಂಶಿಕವಲ್ಲದ ಜನ್ಮದೋಷಗಳ ನಡುವಿನ ಸಂಬಂಧದ ಬಗೆಗೆ ವಿವರಿಸಲಾಗಿದೆ.
ಇದನ್ನೂ ಓದಿ: Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!
ಈ ವರದಿಯ ಬಗ್ಗೆ ಸೆಮ್ಮೆಲ್‌ವೀಸ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಅಧ್ಯಯನದ ಮೊದಲ ಲೇಖಕರಾದ ಡಾ ಬೊಗ್ಲಾರ್ಕಾ ಪೆಥೋ ಅವರು ಪ್ರತಿಕ್ರಿಯೆ ನೀಡಿದ್ದು, “ಮೊದಲಿಗೆ ನಾವು ಜನ್ಮ ನೀಡುವುದಕ್ಕೆ ಸೂಕ್ತವಾಗುವ ಹತ್ತು ವರ್ಷದ ಅವಧಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದೆವು. ಆಗ ನಾವು 23 ಮತ್ತು 32ರ ನಡುವೆ ಜನ್ಮ ನೀಡಲು ಸೂಕ್ತ ವಯಸ್ಸು ಎಂದು ಕಂಡುಕೊಂಡಿದ್ದೇವೆ. ಈ ವಯಸ್ಸನ್ನು ಹೊರತುಪಡಿಸಿ ಬೇರೆ ವಯಸ್ಸಿನಲ್ಲಿ ಜನ್ಮ ನೀಡುವಾಗ ಹೆಚ್ಚಿನ ಸಮಸ್ಯೆಗಳು ಆಗಿರುವುದನ್ನು ಗುರುತಿಸಿದ್ದೇವೆ” ಎಂದು ಹೇಳಿದ್ದಾರೆ.
ಈ ನಿಗದಿತ ಅವಧಿಗೆ ಹೋಲಿಸಿದರೆ 22 ವರ್ಷದೊಳಗೆ ಜನ್ಮ ನೀಡಿದರೆ ಶೇ. 20ರಷ್ಟು ಜನ್ಮದೋಷ ಮತ್ತು 32 ವರ್ಷಕ್ಕಿಂತ ಮೇಲ್ಪಟ್ಟು ಜನ್ಮ ನೀಡಿದರೆ ಶೇ.15ರಷ್ಟು ಜನ್ಮದೋಷ ಉಂಟಾಗಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ. ಈ ರೀತಿ ನಿಗದಿತ ವಯಸ್ಸಿನಲ್ಲಿ ಗರ್ಭಧಾರಣೆ ಆಗದಿರುವ ಸುಮಾರು 31,128 ಗರ್ಭಧಾರಣೆಗಳಲ್ಲಿ ಮಕ್ಕಳಿಗೆ ಸಮಸ್ಯೆ ಉಂಟಾಗಿದೆ ಎಂದು ವರದಿ ಹೇಳಿದೆ. ಸಂಶೋಧಕರು 1980-2009ರ ಅವಧಿಯ ಹಂಗೇರಿಯನ್ ಕೇಸ್-ಕಂಟ್ರೋಲ್ ಸರ್ವೆಲೆನ್ಸ್ ಆಫ್ ಕಂಜೆನ್ಶಿಯಲ್ ಅಬ್‌ನಾರ್ಮಲಿಟಿಸ್ ವರದಿಯ ದತ್ತಾಂಶವನ್ನು ಆಧರಿಸಿ ಈ ಲೆಕ್ಕಾಚಾರ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral News : ಬಸ್ನ ಏಣಿ ಮೇಲೆ ಹತ್ತಿಕೊಂಡು ಗೋವಾದಲ್ಲಿ ಫ್ರೀ ರೈಡ್ ಮಾಡಿದ ವಿದೇಶಿ ದಂಪತಿ!
ಈ ರೀತಿ ನಿಗದಿತ ಅವಧಿಗಿಂತ ಬೇರೆ ವಯಸ್ಸಿನಲ್ಲಿ ಜನನವಾಗುವ ಮಕ್ಕಳಲ್ಲಿ ನರಮಂಡಲ ವಿರೂಪಗೊಳ್ಳುವುದು ಪ್ರಮುಖ ಸಮಸ್ಯೆಯಾಗಿದೆ. ಹಾಗೆಯೇ ತಲೆ, ಕುತ್ತಿಗೆ, ಕಿವಿ ಮತ್ತು ಕಣ್ಣುಗಳಲ್ಲಿಯೂ ಸಮಸ್ಯೆ ಉಂಟಾಗಿರುವುದು ಕಂಡುಬಂದಿದೆ. ಅದರಲ್ಲೂ 40 ವರ್ಷ ಮೇಲ್ಪಟ್ಟವರು ಗರ್ಭಧಾರಣೆಯಾದರೆ ಇಂತಹ ಸಮಸ್ಯೆ ಹೆಚ್ಚಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.