ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದು ಹಿಂದೆ ಹಿರಿಯರು ಹೇಳಿದ್ದು ನಿಜವೇ ಆದರೂ ಅತಿಯಾದ ಉಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಹೃದಯದ ಆರೋಗ್ಯಕ್ಕೆ ಉಪ್ಪು ಶತ್ರು, ಮುಂಗೋಪಕ್ಕೂ ಒಳ್ಳೆಯದಲ್ಲ, ಮೂತ್ರಪಿಂಡಗಳಿಗಂತೂ ಉಪ್ಪು ಒಳ್ಳೆಯದೇ ಅಲ್ಲ, ಪುಟ್ಟ ಮಕ್ಕಳಿಗೆ ಉಪ್ಪು ಬೇಡ, ಹೀಗೆ ಹಲವಾರು ಸಲಹೆ ಸೂಚನೆಗಳನ್ನು ವೈದ್ಯರಿಂದ ಪಡೆದೇ ಇರುತ್ತೇವೆ. ಆದರೂ ಉಪ್ಪೇ ಇಲ್ಲದೆ ಅಡುಗೆ ಮಾಡಲು ಒದ್ದಾಡಿ, ಒಂದಿಷ್ಟಾದರೂ ರುಚಿ ಇರಲಿ ಎಂದು ಉಪ್ಪುನ್ನು ಹಿತಮಿತಗೊಳಿಸಲು ಸಾಕಷ್ಟು ಪ್ರಯತ್ನಪಡುತ್ತೇವೆ. ಆದರೆ ಉಪ್ಪಿನ ಉಪಯೋಗ ಅಡುಗೆಯಲ್ಲಷ್ಟೆ ಅಲ್ಲ. ನಮ್ಮ ದಿನನಿತ್ಯದ ಹಲವು ಕೆಲಸಗಳಲ್ಲೂ ಉಪ್ಪನ್ನು ಬಳಸಬಹುದು ಎಂಬ ಸತ್ಯ ಗೊತ್ತಿರಲಿ.
೧. ಬೆಳ್ಳಿ, ತಾಮ್ರ, ಹಿತ್ತಾಳೆ ಪಾತ್ರೆಗಳನ್ನು ಸ್ವಚ್ಛಗೊಳಿಸುವಲ್ಲಿ ಉಪ್ಪನ್ನು ಬಳಸಬಹುದು. ನಿಂಬೆರಸದೊಂದಿಗೂ ಉಪ್ಪು ಸೇರಿಸಿ ತೊಳೆಯಬಹುದು, ಪಾತ್ರೆ ಲಕಲಕ.
೨. ಈರುಳ್ಳಿ, ಬೆಳ್ಳುಳ್ಳಿ, ಮೀನು ಮತ್ತಿತರ ಆಹಾರಗಳನ್ನು ಹೆಚ್ಚಿದ ಕೈ ವಾಸನೆ ಬರುತ್ತಿದ್ದರೆ ಉಪ್ಪನ್ನು ಕೈಯಲ್ಲಿ ಉಜ್ಜಿಕೊಂಡು ಕೈತೊಳೆಯಿರಿ. ವಾಸನೆ ಹೋಗುತ್ತದೆ.
೩. ಕಾರಿನ ಗಾಜುಗಳು ಪಳಪಳ ಹೊಳೆಯಬೇಕೆಂದಾದಲ್ಲಿ, ಒಂದಿಷ್ಟು ಉಪ್ಪಿಗೆ ಸ್ವಲ್ಪ ನೀರು ಸೇರಿಸಿ ತೊಳೆಯಬಹುದು.
೪. ಹತ್ತಿ ಬಟ್ಟೆ ಒಗೆಯುವಾಗ ಪ್ರತಿ ಸಾರಿಯೂ ಬಣ್ಣ ಹೋಗುತ್ತದೆಯೇ? ಹಾಗಿದ್ದಲ್ಲಿ ನೆನೆಹಾಕಿದ ನೀರಿಗೆ ಉಪ್ಪು ಸೇರಿಸಿ ಆದರಲ್ಲಿ ಒಗೆಯಿರಿ.
೫. ಪಿಂಗಾಣಿ ಪಾತ್ರೆಗಳಲ್ಲಿ ಕಲೆ ಅಂಟಿಕೊಂಡಿದ್ದರೆ ಉಪ್ಪು ಹಾಕಿ ತೊಳೆಯಿರಿ.
೬. ಬಟ್ಟೆಗಳಲ್ಲಿ ಬೆವರಿನ ಕಲೆಗಳಾಗಿದ್ದರೆ, ರಕ್ತದ ಕಲೆಯಾಗಿದ್ದರೆ ಸ್ವಲ್ಪ ಕಾಲ ಉಪ್ಪಿನ ದ್ರಾವಣದಲ್ಲಿ ಅದ್ದಿಟ್ಟು ಆಮೇಲೆ ತೊಳೆದರೆ ಕಲೆ ಹೋಗುತ್ತದೆ.
೭. ಒಳ್ಳೆಯ ಹತ್ತಿ ಬಟ್ಟೆಯ ಮೇಲೆ ಕಬ್ಬಿಣದ ಹುಕ್‌ನ ತುಕ್ಕು ಅಂಟಿಕೊಂಡು ಕಲೆಗಳಾಗಿದ್ದರೆ ಆ ಜಾಗಕ್ಕೆ ಉಪ್ಪು ಹಾಗೂ ನಿಂಬೆರಸ ಹಚ್ಚಿ ಬಿಸಿಲಲ್ಲಿಟ್ಟು ಆಮೇಲೆ ತೊಳೆಯಬಹುದು. ಹೋಗುತ್ತದೆ.
೮. ಹೂದಾನಿಯಲ್ಲಿ ಹೂ ಹಾಕಿ ಇಡುವಾಗ ಆ ನೀರಿಗೆ ಉಪ್ಪು ಹಾಕಿಟ್ಟರೆ ಅದು ಬಾಡುವುದಿಲ್ಲ.
೯. ತೋಟದಲ್ಲಿ, ಉದ್ಯಾನದಲ್ಲಿ ಕಳೆಗಳು ಕಾಟ ಕೊಡುತ್ತಿದ್ದರೆ, ಅವುಗಳ ಬೇರುಗಳಿಗೆ ಉಪ್ಪು ಸಿಂಪಡಿಸಿ. ಅವುಗಳು ಬೆಳೆಯುವುದಿಲ್ಲ.
೧೦. ಮಳೆಗಾಲದಲ್ಲಿ ಅಂಗಳದ ಕಲ್ಲುಹಾಸುಗಳು, ಇಟ್ಟಿಗೆಗಳ ಮೇಲೆ ಎಲ್ಲೆಂದರಲ್ಲಿ ಹುಲ್ಲು, ಹಾವಸೆ ಬೆಳೆಯುವುದನ್ನು ನಿಗ್ರಹ ಮಾಡಲೂ ಕೂಡಾ ಅಲ್ಲಿಗೆ ಉಪ್ಪು ಸಿಂಪಡಿಸಬಹುದು.
೧೧. ಮುಡಿದ ಹೂವನ್ನು ಮತ್ತೆ ಮರುದಿನವೂ ಮುಡಿಯಬೇಕಾದಲ್ಲಿ, ಅದನ್ನು ಹಾಳಾಗದಂತೆ ಬಾಡದಂತೆ ಇಡಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪುಹಾಕಿ ಹೂವಿನ ತೊಟ್ಟು ಮುಳುಗಿಸುವಷ್ಟು ನೀರು ಹಾಕಿ ತೇಲಲು ಬಿಡಿ. ಮರುದಿನವೂ ಫ್ರೆಶ್ ಎನಿಸುವ ಈ ಹೂವನ್ನು ಮತ್ತೆ ಮುಡಿಯಬಹುದು.
ಇದನ್ನೂ ಓದಿ: Diabetes: ಮಧುಮೇಹದ ಪ್ರಾರಂಭಿಕ ಲಕ್ಷಣಗಳು ಗೊತ್ತೇ?
೧೨. ತಳ ಹಿಡಿದು ಕಪ್ಪಾದ ಪಾತ್ರೆಗಳನ್ನು ಸ್ವಚ್ಛಗೊಳಿಸಲು, ಮೊದಲಿನ ಹೊಳಪು ತರಲು ಉಪ್ಪು ಬಳಸಬಹುದು.
೧೩. ಕ್ಲೀನ್ ಮಾಡುವ ಸ್ಪಾಂಜ್‌ಗಳನ್ನು ಕ್ಲೀನ್ ಮಾಡುವುದೇ ದೊಡ್ಡ ಸಾಹಸವಾಗುತ್ತಿದ್ದರೆ ಹೀಗೆ ಮಾಡಿ. ಉಪ್ಪು ನೀರಿನಲ್ಲಿ ಸ್ಪಾಂಜ್ ಮುಳುಗಿಸಿಟ್ಟು ಸ್ವಲ್ಪ ಹೊತ್ತು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ನಿಮಿ಼ಷಗಳಲ್ಲಿ ಸ್ಪಾಂಜು ಮೊದಲಿನಂತೆ ಕ್ಲೀನಾಗುತ್ತದೆ.
೧೪. ಪಾತ್ರೆ ತೊಳೆವ ಸಿಂಕ್ ಆಗಾಗ ಬ್ಲಾಕ್ ಆಗುತ್ತಿದ್ದರೆ, ಕೆಸರು ಸಿಕ್ಕಿಹಾಕಿಕೊಂಡಿದ್ದಂತಿದ್ದರೆ ಉಪ್ಪು ಹಾಗೂ ಬೇಕಿಂಗ್ ಸೋಡಾವನ್ನು ಡ್ರೈನ್ ಒಳಗೆ ಸುರಿದು ಅದಕ್ಕೆ ವಿನೆಗರ್ ಸುರಿದು ಹಾಗೇ ಬಿಟ್ಟು ಆಮೇಲೆ ಕುದಿವ ನೀರನ್ನು ಸುರಿದರೆ ಪೈಪುಗಳು ಕ್ಲೀನಾಗಿ ನೀರು ಸರಾಗವಾಗಿ ಹರಿಯುತ್ತದೆ.
೧೫. ಮನೆಯಲ್ಲಿ ಕೃತಕ ಹೂಗಳನ್ನಿಟ್ಟುಕೊಂಡವರಿಗೆ ಅದನ್ನು ಹಾಗೆಯೇ ತಾಜಾ ಹೂವಿನಂತೆ ಇರಿಸುವುದು ಎಷ್ಟು ಕಷ್ಟ ಎಂಬ ಅರಿವಿರುತ್ತದೆ. ಧೂಳು ಹಿಡಿದ ಹೂಗಳನ್ನು ಮತ್ತೆ ಮೊದಲಿನಂತಾಗಿಸುವುದು ಬಹಳ ಕಷ್ಟ. ಒಂದು ಪ್ಲಾಸ್ಟಿಕ್ ಕವರಿನಲ್ಲಿ ಉಪ್ಪನ್ನು ಹಾಕಿ ಅದರೊಳಗೆ ಹೂಗಳನ್ನು ಹಾಕಿ ಕುಲುಕಿ. ಧೂಳೆಲ್ಲ ಮಾಯ!
ಇದನ್ನೂ ಓದಿ: Tamarind benefits: ʻಹುಣಸೇ ಹಣ್ಣಿನʼ ಸೀಕ್ರೆಟ್: ಗರ್ಭಿಣಿಯರು ಯಾಕೆ ಇವನ್ನು ತಿನ್ನಬೇಕು?