Site icon Vistara News

ಒಂಟಿ ಕಾಲಿನ ಪರೀಕ್ಷೆಯಲ್ಲಿ ಆಯಸ್ಸಿನ ಗುಟ್ಟು ಬಯಲು?

standing

ಒಂಟಿ ಕಾಲಲ್ಲಿ ಸ್ವಲ್ಪ ಕಾಲ ನಿಲ್ಲಬಲ್ಲಿರೇ? ಹೌದೆಂದಾದರೆ ನಿಮ್ಮ ಆಯಸ್ಸು ಗಟ್ಟಿ!… ಎನ್ನುತ್ತದೆ ಒಂದು ಅಧ್ಯಯನ. ವಿಷಯವೇನೆಂದರೆ ನಡು ವಯಸ್ಸು ಅಥವಾ ೬೦ ದಾಟಿದ ನಂತರ ಒಂಟಿ ಕಾಲಲ್ಲಿ ಕೆಲಕಾಲ ನಿಂತು ಶರೀರದ ಸಮತೋಲನ ತಪ್ಪದಂತೆ ಹಿಡಿದರೆ, ಅವರ ಆಯಸ್ಸು ಸಾಕಷ್ಟಿರಬಹುದು ಎಂಬ ಮಾಹಿತಿಯನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

ಏನೆನ್ನುತ್ತದೆ ಅಧ್ಯಯನ?: ಅಮೆರಿಕ, ಬ್ರಿಟನ್‌, ಫಿನ್ಲೆಂಡ್‌, ಆಸ್ಟ್ರೇಲಿಯ ಮತ್ತು ಬ್ರೆಜಿಲ್‌ ದೇಶಗಳಲ್ಲಿ ೧೨ ವರ್ಷಗಳ ಕಾಲ ನಡೆಸಿದ ಈ ಅಧ್ಯಯನದ ವರದಿಯನ್ನು ಬ್ರಿಟಿಷ್‌ ಜರ್ನಲ್‌ ಆಫ್‌ ಸ್ಪೋರ್ಟ್ಸ್‌ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ, ೫೧ರಿಂದ ೭೫ ವರ್ಷಗಳ ವಯೋಮಾನದ ಸುಮಾರು ೧೭೦೦ ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಸಮತೋಲನ ತಪ್ಪದಂತೆ ಸುಮಾರು ೧೦ ಸೆಕೆಂಡುಗಳ ಕಾಲ ಒಂಟಿ ಕಾಲಲ್ಲಿ ಯಾರೆಲ್ಲಾ ನಿಲ್ಲಬಲ್ಲರು ಎಂಬುದನ್ನು ಪರಿಶೀಲಿಸಿ, ಅವರ ಮುಂದಿನ ಒಂದು ದಶಕದ ಜೀವನದ ಮೇಲೂ ನಿಗಾ ಇಡಲಾಗಿತ್ತು.‌

ಇದನ್ನೂ ಓದಿ: Hair Style: ಕೂದಲಿನ ಆರೋಗ್ಯಕ್ಕೆ ಉಲ್ಟಾ ಬಾಚಿ ನೋಡಿ!

೨೦೦೮ರಿಂದ ೨೦೨೦ರವರೆಗಿನ ಅವಧಿಯಲ್ಲಿ ನಡೆಸಲಾಗಿದ್ದ ಈ ಅಧ್ಯಯನದಲ್ಲಿ, ಶೇ. ೨೧ ಮಂದಿಗೆ ಒಂಟಿ ಕಾಲಲ್ಲಿ ನಿಲ್ಲಲಾಗಿರಲಿಲ್ಲ. ಇದಕ್ಕಾಗಿ ಮೂರು ಅವಕಾಶಗಳನ್ನೂ ನೀಡಲಾಗಿತ್ತು. ಇವರಲ್ಲಿ ೧೨೩ ಮಂದಿ ನಾನಾ ಕಾರಣಗಳಿಂದ ಮುಂದಿನ ಒಂದು ದಶಕದೊಳಗೆ ಮೃತಪಟ್ಟಿದ್ದರು ಎಂದು ಈ ಅಧ್ಯಯನದ ನೇತೃತ್ವ ವಹಿಸಿದ್ದ ಡಾ. ಕ್ಲಾಡಿಯ ಗಿಲ್‌ ಅರಾಹೊ ಹೇಳಿದ್ದಾರೆ. ಅಂದರೆ, ಒಂಟಿ ಕಾಲಿನಲ್ಲಿ ನಿಲ್ಲಲು ಅಸಮರ್ಥ ಎಂದರೆ, ಮುಂದಿನ ಕೆಲವು ವರ್ಷಗಳಲ್ಲಿ ಅವರ ಮರಣದ ಸಾಧ್ಯತೆ ಶೇ. ೮೪ರಷ್ಟು ಹೆಚ್ಚಾಗುತ್ತದೆ ಎಂಬುದು ಅಧ್ಯಯನದ ಸಾರ.

ಮಾತ್ರವಲ್ಲ, ೬೦ರ ನಂತರದ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡುವಾಗ ಒಂಟಿ ಕಾಲಲ್ಲಿ ನಿಲ್ಲುವಂಥ ಸಮತೋಲನ ಪರೀಕ್ಷೆಯನ್ನು ನಡೆಸಬೇಕು ಎಂಬುದು ತಜ್ಞರ ಅಭಿಮತ. ಇಳಿವಯಸ್ಸೆಂದರೆ ಮತ್ತೊಂದು ಬಾಲ್ಯದಂತೆ ಎಂಬ ಮಾತಿನಂತೆ, ಮತ್ತೊಮ್ಮೆ ಒಂಟಿ ಕಾಲಿನ ಶಿಕ್ಷೆಯೂ ಕಡ್ಡಾಯವಾದೀತೊ ಎಂಬುದನ್ನು ಕಾದು ನೋಡಬೇಕಿದೆ!

ಇದನ್ನೂ ಓದಿ: Life tips: 30 ವರ್ಷ ಆಗೋ ಮೊದಲು ಇವಿಷ್ಟನ್ನು ಮಾಡಿಬಿಡಿ!

Exit mobile version