ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯೋತ್ಸವದ ಸಂಭ್ರಮ ಬ್ಯೂಟಿ ಲೋಕದಲ್ಲೂ ರಂಗೇರಿದೆ. ತ್ರಿವರ್ಣದ ರಂಗು ಫೇಸ್ ಆರ್ಟ್ ಹಾಗೂ ಮೇಕಪ್‌ನಲ್ಲಿ ಕಲಾತ್ಮಕವಾಗಿ ಮೂಡಿದೆ. ಧರಿಸುವ ಬಳೆಗಳು ವರ್ಣಮಯವಾಗಿವೆ. ಅಷ್ಟೇಕೆ! ಉಗುರಿನ ಬಣ್ಣಗಳು ತಿರಂಗಾ ನೇಲ್‌ಆರ್ಟ್ನಲ್ಲಿ ಕಂಗೊಳಿಸುತ್ತಿವೆ.
ಸೋಷಿಯಲ್ ಮೀಡಿಯಾ ಸಾಥ್
ತ್ರಿವರ್ಣ ಶೇಡ್‌ನ ಮೇಕಪ್‌ನ ಝಲಕ್‌ಗಳು ಈಗಾಗಲೇ ಸೋಷಿಯಲ್ ಮೀಡಿಯಾ ಹಾಗೂ ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದು, ಬ್ಯೂಟಿ ಪ್ರಿಯರನ್ನು ಸೆಳೆದಿವೆ.
ರಾಷ್ಟ್ರಪ್ರೇಮ ಬಿಂಬಿಸುವ ಫೇಸ್‌ಆರ್ಟ್
ಮುಖದ ಮೇಲೆ ಫ್ಲಾಗ್‌ನ ಚಿತ್ತಾರ ಇಲ್ಲವೇ ಸ್ಟಿಕ್ಕರ್ ಅಂಟಿಸಿರುವ ವಧನದ ಫೋಟೋಗಳು ಈಗಾಗಲೇ ಆನ್‌ಲೈನ್‌ನಲ್ಲಿ ರಾಷ್ಟ್ರಪ್ರೇಮವನ್ನು ಬಿಂಬಿಸಲಾರಂಭಿಸಿವೆ. ಈ ಬಗೆಯ ಸ್ಟಿಕ್ಕರ್‌ಗಳು ಮಾರುಕಟ್ಟೆಯಲ್ಲಿ ರೆಡಿಮೇಡ್‌ನಲ್ಲೂ ದೊರೆಯುತ್ತಿವೆ.
ಐ ಮೇಕಪ್‌ನಲ್ಲೂ ತ್ರಿವರ್ಣ
ಕಂಗಳ ರೆಪ್ಪೆಗಳು ಇದೀಗ ತ್ರಿವರ್ಣ ಶೇಡ್‌ನಿಂದ ರಂಗಾಗಿವೆ. ಮೇಕಪ್ ಕಲಾವಿದರ ಕೈ ಚಳಕದಿಂದ ಆಕರ್ಷಕವಾಗಿ ಮೂಡಿ ಬಂದಿವೆ. ತುಟಿಗಳ ಮೇಲೂ ಕಲಾತ್ಮಕವಾಗಿ ಚಿತ್ತಾರ ರೂಪುಗೊಂಡಿವೆ. “ಸ್ವಾತಂತ್ರ್ಯೋತ್ಸವದ ಸಂಭ್ರಮ ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ, ನಮ್ಮ ಕಲೆಯ ಮುಖಾಂತರ ಪ್ರದರ್ಶಿಸಿದ್ದೇವೆ. ಇದು ನಮ್ಮ ಟ್ರೈಬ್ಯೂಟ್. ಆಕರ್ಷಕ ತ್ರಿವರ್ಣದ ಮೇಕಪ್ ಮೂಲಕ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಿದ್ದೇವೆ” ಎಂದಿದ್ದಾರೆ ಈ ಕಲೆಯನ್ನು ಮೂಡಿಸಿರುವ ಬೆಂಗಳೂರಿನ ಮೇಕಪ್ ಆರ್ಟಿಸ್ಟ್ ಶ್ರೀ ಗಂಗಾ.
ಇದು ಕೇವಲ ಪ್ರದರ್ಶನಕ್ಕಷ್ಟೇ ಮೀಸಲು. ಇತರೇ ಸಂದರ್ಭದಲ್ಲಿ ಬಳಸಲಾಗದು. ಈ ಮೂಲಕ ನಮ್ಮ ರಾಷ್ಟ್ರಪ್ರೇಮ ಬಿಂಬಿಸಿದ್ದೇವೆ ಎನ್ನುತ್ತಾರೆ ಬ್ಯೂಟಿ ತಜ್ಞರು.
ನೇಲ್ ಆರ್ಟ್ಸ್ ನಲ್ಲೂ ರಾಷ್ಟ್ರ ಪ್ರೇಮ
ತ್ರಿವರ್ಣಗಳನ್ನು ಸಿಂಪಲ್ಲಾಗಿ ಉಗುರುಗಳ ಮೇಲೆ ಹಚ್ಚುವ ನೇಲ್‌ಆರ್ಟ್ ಇದೀಗ ಹೆಚ್ಚಾಗಿದೆ. ನೇಲ್ ಆರ್ಟ್‌ನಲ್ಲಿಕೊಂಚ ವಿಭಿನ್ನವಾಗಿ ಚಿತ್ತಾರ ಮೂಡಿಸುವ ತಿರಂಗಾ ಆರ್ಟ್ ಟ್ರೆಂಡಿಯಾಗಿದೆ.
ನೋಡಲು ಒಂದಕ್ಕಿಂತ ಹೆಚ್ಚು ಶೇಡ್ ಕಾಣಿಸುವುದು ಹಾಗೂ ಎದ್ದು ಕಾಣಿಸುವ ಕಲರ್ಸ್, ಡಿಸೈನ್ ಈ ಆರ್ಟ್‌ನ ಹೈಲೈಟ್. ನೇಲ್ ಆರ್ಟ್ ವಿನ್ಯಾಸಕರು ಪ್ರಯೋಗ ಮಾಡಿರುವ ಈ ನೇಲ್ ಆರ್ಟ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿಹರಿದಾಡತೊಡಗಿದೆ. ಆದರೆ, ಯಾವುದೇ ಕಾರಣಕ್ಕೂ ಕಾಲಿನ ಬೆರಳಿಗೆ ಮಾತ್ರ ಈ ನೇಲ್‌ಆರ್ಟ್ ಮಾಡಕೂಡದು. ಇದು ನೆನಪಿರಲಿ ಎಂದು ಎಚ್ಚರಿಸುತ್ತಾರೆ.
ತಿರಂಗಾ ಪ್ರಿಯರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
- ಯಾವುದೇ ಕಾರಣಕ್ಕೂ ಮಾಡುವ ಡಿಸೈನ್ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತಾಗಬಾರದು.
- ರಾಷ್ಟ್ರದ ಧ್ವಜದ ವರ್ಣ ಬಳಸುವಾಗ ಎಚ್ಚರವಿರಲಿ.
- ತ್ರಿ ಡಿ ಆರ್ಟ್ ನೆಪದಲ್ಲಿ ರಾಷ್ಟ್ರ ಪ್ರೇಮಕ್ಕೆ ಧಕ್ಕೆಯಾಗುವಂತೆ ಬಳಸಕೂಡದು.
- ಕಾಲಿನ ಉಗುರಿಗೆ ಇದನ್ನು ಹಚ್ಚುವುದು ಅಪರಾಧ ಹಾಗೂ ನಿಷಿದ್ಧ.
ಇದನ್ನೂ ಓದಿ| Patriotic Fashion: ಸ್ವಾತಂತ್ರ್ಯೋತ್ಸವಕ್ಕೆ ಟ್ರೆಂಡಿಯಾದ ದೇಸಿ ಫ್ಯಾಷನ್