ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಣ್ಣ ಬಣ್ಣದ ಜುಮಕಿಗಳು ಇದೀಗ ಮಾರುಕಟ್ಟೆಗೆ ಎಂಟ್ರಿ ನೀಡಿವೆ.
ನೋಡಲು ಅತ್ಯಾಕರ್ಷಕವಾದ ಡಿಸೈನ್‌ಗಳಲ್ಲಿ ಆಗಮಿಸಿರುವ ಕಲರ್‌ಫುಲ್ ಜುಮಕಿಗಳು ಈ ಸೀಸನ್‌ನಲ್ಲಿ ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ಮನ ಸೆಳೆದು ಟ್ರೆಂಡಿಯಾಗಿವೆ.
ಬಣ್ಣಬಣ್ಣದ ಜುಮಕಿಗಳ ಸಾಲು
ಮೊದಲೆಲ್ಲಾ ಬಂಗಾರದ ಜುಮಕಿಗಳನ್ನು ಹೊರತುಪಡಿಸಿದರೆ, ವೈಟ್ ಹಾಗೂ ಬ್ಲಾಕ್ ಮೆಟಲ್ ಜುಮಕಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದವು. ಹೆಚ್ಚೆಂದರೆ ಪರ್ಲ್, ಮಣಿಗಳುಳ್ಳ ಜುಮಕಿಗಳು ಚಾಲ್ತಿಯಲ್ಲಿದ್ದವು. ಆದರೆ, ಬಣ್ಣಬಣ್ಣದ ಜುಮಕಿಗಳ ಸುದ್ದಿ ಇರಲಿಲ್ಲ. ಕೋವಿಡ್ ನಂತರ ಜುವೆಲರಿ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾದವು. ಆರ್ಟಿಫೀಶಿಯಲ್ ಜ್ಯುವೆಲರಿಗಳನ್ನು ಕೊಳ್ಳುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಯಿತು.
ಅಂತಹ ಸಮಯದಲ್ಲಿ ಸಾಕಷ್ಟು ಹೊಸ ವಿನ್ಯಾಸದ ಜ್ಯುವೆಲರಿಗಳು ಕಾಲಿಟ್ಟವು. ಅಂತವುಗಳಲ್ಲಿ ಈ ಕಲರ್‌ಫುಲ್ ಜುಮಕಿಗಳು ಒಂದು. ಪ್ರಯೋಗಾತ್ಮಕವಾಗಿ ನಡೆದ ಈ ಬಣ್ಣ ಬಣ್ಣದ ಜುಮಕಿಗಳ ವಿನ್ಯಾಸ ಯಾವ ಮಟ್ಟಿಗೆ ಹಿಟ್ ಆಯಿತೆಂದರೇ, ಯುವತಿಯರು ಮಾತ್ರವಲ್ಲ, ವೃತ್ತಿಪರ ಮಹಿಳೆಯರು ಕೂಡ ಮ್ಯಾಚಿಂಗ್ ಪರ್ಪಸ್‌ಗೆಂದು ಒಂದಲ್ಲ ಎರಡಲ್ಲ ಒಟ್ಟೊಟ್ಟಿಗೆ ಮೂರ್ನಾಲ್ಕು ಬಗೆಯವನ್ನು ಖರೀದಿಸಿ ಧರಿಸುವುದು ಹೆಚ್ಚಾಯಿತು. ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳ ಪ್ರೀತಿಗೆ ಇವು ಪಾತ್ರವಾದವು ಎಂದು ಕಲರ್ ಜುಮಕಿಗಳ ಟ್ರೆಂಡ್ ಹುಟ್ಟಿದ ಬಗ್ಗೆ ವಿವರವನ್ನು ನೀಡುತ್ತಾರೆ ಫ್ಯಾಷನಿಸ್ಟಾ ವಿದ್ಯಾ.
ಅವರ ಪ್ರಕಾರ, ಬಂಗಾರದ್ದು ಕೊಂಡಲ್ಲಿ ಇಡೀ ಜೀವನ ಒಂದೇ ಡಿಸೈನ್‌ನದ್ದು ಧರಿಸಬೇಕು. ಅದೇ ಆರ್ಟಿಫಿಶಿಯಲ್‌ನ ಸಾಕಷ್ಟು ಬಗೆಯ ಡಿಸೈನ್‌ನವನ್ನು ಕೊಂಡಲ್ಲಿ ಮ್ಯಾಚಿಂಗ್ ಮಾಡಿ ಸಾಕಷ್ಟು ಉಡುಪುಗಳಿಗೆ ಧರಿಸಬಹುದು. ಇತ್ತೀಚೆಗೆ ಬಾಲಿವುಡ್ ತಾರೆಯರು ಕೂಡ ಬಣ್ಣಬಣ್ಣದ ಜುಮಕಿಗಳ ಮೋಹಪಾಶಕ್ಕೆ ಸಿಲುಕಿದ್ದಾರೆ ಎನ್ನುತ್ತಾರೆ.
ವೆರೈಟಿ ಡಿಸೈನ್‌ನ ಬಣ್ಣದ ಜುಮಕಿಗಳು
ಗುಲಾಬಿ, ಪೀಚ್, ಪಿಸ್ತಾ, ಬ್ಲಾಕ್, ಬ್ರೌನ್, ರೆಡ್, ಗ್ರೀನ್ ಹೀಗೆ ಸಾಕಷ್ಟು ವರ್ಣಗಳಲ್ಲಿ ಈ ಜುಮಕಿಗಳು ಲಭ್ಯ. ಒಂದಕ್ಕಿಂತ ಒಂದು ನೋಡಲು ವಿಭಿನ್ನವಾಗಿರುತ್ತದೆ. ಸ್ಮಾಲ್, ಮಿಡಿಯಂ ಹಾಗೂ ಬಿಗ್ ಸೈಝ್‌ನಲ್ಲಿ ಇವು ದೊರೆಯುತ್ತವೆ. ಕೈಗೆಟಕುವ ದರದಲ್ಲಿ ಇವು ದೊರೆಯುತ್ತವೆ. ಸುಮಾರು ೫೦ ರೂ.ಗಳಿಂದ ಆರಂಭಗೊಂಡು ೨೦೦ ರೂ. ಗಳವರೆಗೆ ದರ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಮಾರಾಟಗಾರರು.
ಬಣ್ಣದ ಜುಮಕಿಗಳನ್ನು ಧರಿಸುವವರ ಗಮನಕ್ಕೆ:
- ಆದಷ್ಟೂ ಫಿನಿಶಿಂಗ್ ಚೆನ್ನಾಗಿರುವುದನ್ನು ನೋಡಿ ಖರೀದಿಸಿ.
- ಕಳಚಿದ ನಂತರ ಇತರೇ ಇಯರಿಂಗ್ಗಳ ನಡುವೆ ಇರಿಸಬೇಡಿ.
- ಲೈಟ್ವೇಟ್ನವನ್ನು ಖರೀದಿಸುವುದು ಉತ್ತಮ.
- ಸ್ಲಿನ್ ಅಲರ್ಜಿಯಾದಲ್ಲಿ ಧರಿಸದಿರುವುದು ಒಳಿತು.
- ನೀರು ತಾಕಿಸಕೂಡದು. ಬಣ್ಣಗೆಡುವ ಸಂಭವವಿರುತ್ತದೆ.