ಬಿಸಿಲು ಹಾಗೂ ಮಾಲಿನ್ಯಗಳಿಗೆ ಒಡ್ಡಿಕೊಳ್ಳುವ ಪುರುಷರ ಚರ್ಮವೂ ಕೂಡಾ ಕಾಳಜಿ ಹಾಗೂ ಆರೈಕೆಯನ್ನು ಬಯಸುತ್ತದೆ. ಕೆಲಸದ ಒತ್ತಡ, ಗಮನ ನೀಡದೆ ಇರುವುದೂ ಕೂಡಾ ಇದಕ್ಕೆ ಕಾರಣವಾಗಿರಬಹುದು. ಆದರೆ, ಬಹುತೇಕ ಪುರುಷರು ಇದು ಕೇವಲ ಮಹಿಳೆಯರಿಗೆ ಸಂಬಂಧಿಸಿದ್ದು ಎಂದು ತಮ್ಮ ಚರ್ಮದ ಕಾಂತಿಯ ಬಗ್ಗೆ ಉಡಾಫೆಯಿಂದ ವರ್ತಿಸುತ್ತಾರೆ.
ಸೌಂದರ್ಯದ ವಿಷಯದಲ್ಲಿ ಮಹಿಳೆಯ ಚರ್ಮದ ಆರೈಕೆಯ ಕುರಿತಾಗಿ ಸೌಂದರ್ಯ ಮಾರುಕಟ್ಟೆ ನೀಡಿದ ಗಮನದಷ್ಟು ಪುರುಷರ ಚರ್ಮ ರಕ್ಷಣೆಯ ಕುರಿತು ನೀಡಿಲ್ಲ. ಆದರೂ ಇತ್ತೀಚಿನ ದಶಕದಲ್ಲಿ ಪುರುಷರಿಗೆಂದೇ ಸೌಂದರ್ಯ ವರ್ಧಕಗಳೂ ಬಂದಿದ್ದು ಪುರುಷರ ನಿತ್ಯದ ಬದುಕಿನಲ್ಲಿ ಸ್ಥಾನವನ್ನೂ ಪಡೆದಿವೆ. ಪೈಪೋಟಿಗೆ ಬಿದ್ದವರಂತೆ ಸೆಲೂನುಗಳೂ ಇವೆ. ಆದರೂ, ಪುರುಷರು, ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಆರೈಕೆಗಳತ್ತ ಮಾತ್ರ ನಿರ್ಲಕ್ಷ್ಯ ವಹಿಸುತ್ತಾರೆ.
ಮಹಿಳೆಯರ ಚರ್ಮ ಸೂಕ್ಷ್ಮವಾದದ್ದರಿಂದ ಹೆಚ್ಚಿನ ಆರೈಕೆಯ ಅಗತ್ಯವಿದೆ, ಆದರೆ ಪುರುಷರ ಚರ್ಮಕ್ಕೆ ಇವೆಲ್ಲವುಗಳ ಅಗತ್ಯತೆ ಇರುವುದಿಲ್ಲ ಎಂಬುದು ಜನಜನಿತ ನಂಬಿಕೆ. ಆದರೆ, ವಿಷಯ ಇದಲ್ಲ. ಪುರುಷರಿಗೆ ಇಂಥ ವಿಷಯಗಳತ್ತ ಗಮನ ನೀಡಲು ಹೆಚ್ಚಿನ ಆಸಕ್ತಿ ಇರುವುದಿಲ್ಲ, ಜೊತೆಗೆ ಸಮಯವನ್ನೂ ಹೊಂದಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಸರಳವಾಗಿ ಪುರುಷರು, ಕಡಿಮೆ ಸಮಯದಲ್ಲಿ ನೀಡಬಹುದಾದ ಕನಿಷ್ಟ ಕಾಳಜಿಯನ್ನು ಇಲ್ಲಿ ವಿವರಿಸಲಾಗಿದೆ.
ಸಾಮಾನ್ಯವಾಗಿ ಪುರುಷರು ಮುಖದ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವುದೆಂದರೆ ಶೇವಿಂಗ್. ಸರಿಯಾದ ಕ್ರಮದಲ್ಲಿ ಶೇವ್ ಮಾಡಿಕೊಳ್ಳದೆ ಇದ್ದರೆ, ಕೊನೆಗೆ ಗಾಯ ಅಥವಾ ಕಳೆಗುಂದಿದ ಚರ್ಮ ನಿಮ್ಮದಾಗುತ್ತದೆ. ಮುಖದ ಮೇಲಿನ ಕೂದಲುಗಳಲ್ಲಿ ಯಾವಾಗಲೂ ಚರ್ಮದ ಮೇಲಿಗಿಂತಲೂ ಹೆಚ್ಚು ಧೂಳು, ಕಲ್ಮಶಗಳು ಕೂರುತ್ತವೆ. ಗಡ್ಡ ಹಾಗೂ ಮೀಸೆಯ ಮೇಲೆ ಕೂರುವ ಧೂಳು, ಕೊಳೆ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಮುಖ ಸ್ವಚ್ಛ ಮಾಡಿಕೊಳ್ಳುವ ಸಂದರ್ಭವೂ ಇವುಗಳ ಮೇಲೆ ಹೆಚ್ಚು ಗಮನ ಹೋಗುವುದಿಲ್ಲ. ಅದಕ್ಕಾಗಿಯೇ ಶೇವ್ ಮಾಡುವ ಮೊದಲು, ಸರಿಯಾಗಿ ಮುಖವನ್ನೂ, ನಿಮ್ಮ ಮುಖದ ಕೂದಲ ಸಮೇತ ಚೆನ್ನಾಗಿ ತೊಳೆದುಕೊಳ್ಳಿ. ಕೇವಲ ಮುಖಕ್ಕೊಮ್ಮೆ ನೀರು ಚಿಮುಕಿಸಿ ರೇಜರ್ ಹಿಡಿಯುವುದಲ್ಲ. ಸರಿಯಾಗಿ ಚರ್ಮ ನೀರಿನಲ್ಲಿ ನೆನೆಯಬೇಕು. ಆಗ ಚರ್ಮ ಮೆದುವಾಗಿ, ಶೇವ್ ಮಾಡಲು ಅನುಕೂಲವಾಗುತ್ತದೆ. ರೇಜರ್ ಯಾವಾಗಲೂ ಹರಿತವಾಗಿರಲಿ. ಸ್ವಚ್ಛವೂ ಆಗಿರಲಿ. ರೇಜರ್ ಮೂಲಕ ಚರ್ಮದ ಮೇಲೆ ಹೆಚ್ಚು ಒತ್ತಡ ಹಾಕದೆ, ನಯವಾಗಿ ಮುಖದ ಮೇಲೆ ಚಲಾಯಿಸಿ. ಆಗ, ಚರ್ಮದ ಮೇಲೆ ಅನಗತ್ಯ ಹಾನಿಯನ್ನು ತಪ್ಪಿಸಬಹುದು. ಶೇವಿಂಗ್ ನಂತರ ಮಾಯಿಶ್ಚರೈಸಿಂಗ್ ಹಚ್ಚುವುದನ್ನು ಮಾತ್ರ ಮರೆಯಬೇಡಿ.
ಇದನ್ನೂ ಓದಿ: Beauty Care: ಸೌಂದರ್ಯ ವರ್ಧಕ ರೋಸ್ ವಾಟರ್
ದಿನನಿತ್ಯ ಚರ್ಮದ ಆರೈಕೆಗೆ ಒಂದಿಷ್ಟು ಸಮಯ ನೀಡುವುದು ಸಾಧ್ಯವಾಗದಿದ್ದರೆ, ಸ್ನಾನಕ್ಕೂ ಮೊದಲು ಅಥವಾ ಕೆಲಸದಿಂದ ಮನೆಗೆ ಹಿಂತಿರುಗಿದ ಮೇಲೆ ಮುಖ ಚೆನ್ನಾಗಿ ತೊಳೆದುಕೊಂಡು ಒಂದೆರಡು ನಿಮಿಷ ಎಣ್ಣೆ ಮಸಾಜ್ ಮಾಡಿಕೊಳ್ಳಿ. ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಮಿಕ್ಸ್ ಮಾಡಿ, ಪ್ರತಿದಿನ ಮಸಾಜ್ ಮಾಡಿಕೊಳ್ಳಬಹುದು. ಹೆಚ್ಚೆಂದರೆ ಮೂರ್ನಾಲ್ಕು ನಿಮಿಷ ತೆಗೆದುಕೊಳ್ಳುವ ಈ ಕ್ರಿಯೆಯಿಂದ ಚರ್ಮಕ್ಕೆ ಪೋಷಣೆ ದೊರೆಯುತ್ತದೆ. ಮಸಾಜ್ ಮಾಡಿ ಹತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗೆ ನೀರಿನಿಂದ ಮುಖ ತೊಳೆದುಕೊಳ್ಳಿ. ಆಲೋವೆರಾ ಜೆಲ್ ಅನ್ನು ಆಮೇಲೆ ಹಚ್ಚಿಕೊಳ್ಳಬಹುದು.
ಹೊರಗೆ ಸದಾ ಓಡಾಡಿಕೊಂಡಿರುವ ಪುರುಷರು, ಬಿಸಿಲು, ಧೂಳು, ಮಾಲಿನ್ಯಗಳಿಂದ ತಮ್ಮ ಚರ್ಮವನ್ನು ರಕ್ಷಿಸಬೇಕು. ಇದಕ್ಕಾಗಿ ಅವರಿಗೆ ಸನ್‌ಸ್ಕ್ರೀನ್ ಲೋಷನ್ ಅಗತ್ಯವೂ ಇದೆ. ಪ್ರತಿನಿತ್ಯ ಇವುಗಳ ಬಳಕೆಯಿಂದ ಚರ್ಮವನ್ನು ಅತಿಯಾದ ಯುವಿ ಕಿರಣಗಳಿಗೆ ಒಡ್ಡಿಕೊಂಡು ಆಗುವ ಚರ್ಮದ ತೊಂದರೆಗಳಿಂದ ಬಚಾವಾಗಬಹುದು.
ಯಾವುದೇ ಸೌಂದರ್ಯ ವರ್ಧಕ ಖರೀದಿ ಸಂದರ್ಭವೂ ನಿಮ್ಮ ಚರ್ಮದ ಸೂಕ್ಷತೆ ಹಾಗೂ ಬಗೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ತನ್ನದು ಎಣ್ಣೆ ಚರ್ಮವೋ, ಒಣ ಚರ್ಮವೋ ಇತ್ಯಾದಿ ಸಾಮಾನ್ಯ ಜ್ಞಾನವನ್ನು ಹೊಂದಿರುವುದೂ ಅತೀ ಅವಶ್ಯಕ.
ಇದನ್ನೂ ಓದಿ: ಮರ್ಲಿನ್ ಮನ್ರೋ ಐತಿಹಾಸಿಕ ಉಡುಗೆ ಹಾಳು ಮಾಡಿದ ಕಾರ್ಡಾಶಿಯಾನ್?