ಈಗಷ್ಟೇ ಮಧ್ಯಾಹ್ನದ ಊಟ ಮುಗಿಸಿ (Sleep after Lunch) ಬಂದು ಆಫೀಸ್‌ನಲ್ಲಿ ಕುಳಿತಿದ್ದೀರಿ. ಅಲ್ಲಿಯವರೆಗೆ ಇಲ್ಲದ್ದು ಇದ್ದಕ್ಕಿದ್ದಂತೆ ಗಂಟು ಬೀಳುತ್ತದೆ- ಆಕಳಿಕೆ! ಹತ್ತಿಪ್ಪತ್ತು ಸಾರಿ ಆಕಳಿಸುವಷ್ಟರಲ್ಲಿ, ಮೆಲ್ಲಗೆ ತೂಕಡಿಕೆ ಆವರಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಕಣ್ಣು ತೆರೆದು ಕೂರುವುದಕ್ಕೇ ಆಗುತ್ತಿಲ್ಲ. ಸಣ್ಣದೊಂದು ಕೋಳಿ ನಿದ್ದೆ ಮಾಡಿದ ಮೇಲೆಯೇ ಈ ಅವಸ್ಥೆಯಿಂದ ಬಿಡುಗಡೆ ಅನಿಸಬಹುದು. ಕೂತಲ್ಲೇ ತೂಕಡಿಸಿ ನಿದ್ದೆ ತೆಗೆಯುವ ಸಾಮರ್ಥ್ಯ ಇದ್ದರೆ ಸರಿ, ಇಲ್ಲದಿದ್ದರೆ? ಫಜೀತಿ ತಪ್ಪಿದ್ದಲ್ಲ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೆಂದರೆ! ಇದಕ್ಕೆ ಕಾರಣಗಳು ಇಲ್ಲಿವೆ.
ಏಕೆ ಹೀಗೆ?
ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಕಾರಣಗಳು ಇಲ್ಲದಿಲ್ಲ. ದೇಹದಲ್ಲಿ ಹೆಚ್ಚುವ ಸೆರೋಟೀನಿನ್ ಎಂಬ ಅಂಶವೇ ಇದಕ್ಕೆ ಕಾರಣ. ವಿವರವಾಗಿ ಹೇಳುವುದಾದರೆ, ಪಿಷ್ಟ ಮತ್ತು ಪ್ರೊಟೀನ್ ಅಂಶಗಳು ಹೆಚ್ಚಿರುವಂಥ ಆಹಾರಗಳು ಸಾಮಾನ್ಯವಾಗಿ ನಿದ್ದೆ ಬರಿಸುತ್ತವೆ. ಕಾರಣ ಪ್ರೊಟೀನ್‌ಭರಿತ ಆಹಾರಗಳಲ್ಲಿ ಟ್ರಿಪ್ಟೋಫ್ಯಾನ್ ಎಂಬ ಅಮೈನೊ ಆಮ್ಲಗಳು ಧಾರಾಳವಾಗಿ ಇರುತ್ತವೆ. ಈ ಅಮೈನೊ ಆಮ್ಲಗಳಿಂದ ಸೆರೋಟೋನಿನ್ ಎನ್ನುವ ಹ್ಯಾಪಿ ಹಾರ್ಮೋನು ಬಿಡುಗಡೆ ಆಗುತ್ತದೆ. ನಮ್ಮ ಮೂಡ್ ಬದಲಾವಣೆ, ನಿದ್ದೆ ಮುಂತಾದ ಬಹಳಷ್ಟು ವಿಷಯಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಈ ಸೆರೋಟೋನಿನ್ ಹೀರಿಕೊಳ್ಳುವುದಕ್ಕೆ ಪಿಷ್ಟಭರಿತ ಆಹಾರಗಳು ಪ್ರೋತ್ಸಾಹ ನೀಡುತ್ತವೆ. ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಇಷ್ಟು ಸಾಲದೇ?
ಯಾವ ಆಹಾರಗಳು?
ಪ್ರೊಟೀನ್ ಹೆಚ್ಚಿರುವಂಥ ಮೊಟ್ಟೆ, ಚಿಕನ್, ಹಾಲು, ಮೊಸರಿನಂಥ ಡೇರಿ ಉತ್ಪನ್ನಗಳು, ಸೋಯ್ ಉತ್ಪನ್ನಗಳು, ಮೀನು, ಬೀಜಗಳು ಇತ್ಯಾದಿ ಆಹಾರಗಳಲ್ಲಿ ಟ್ರಿಪ್ಟೊಫ್ಯಾನ್ ಅಮೈನೊ ಆಮ್ಲ ಹೆಚ್ಚಾಗಿರುತ್ತದೆ. ಪಿಷ್ಟ ಹೆಚ್ಚಾಗಿರುವ ಆಹಾರಗಳೆಂದರೆ- ಅನ್ನ, ಚಪಾತಿ, ಬ್ರೆಡ್, ಪಾಸ್ತಾ, ಯಾವುದೇ ಸಿಹಿ ತಿಂಡಿಗಳು, ಕೇಕ್‌ನಂಥ ಬೇಕ್ ಮಾಡಿದ ತಿನಿಸುಗಳು, ಆಲೂಗಡ್ಡೆ ಮತ್ತು ಗೆಣಸಿನಂಥ ಗಡ್ಡೆಗಳು. ಇವುಗಳ ಮಿಶ್ರಣ ಆಹಾರದಲ್ಲಿದ್ದರೆ, ಊಟದ ನಂತರ ಕಣ್ಣೆಳೆಯುವುದು ಖಚಿತ. ಹಳೆಯ ಕಾಲದಲ್ಲಿ ಮಕ್ಕಳಿಗೆ ಮಲಗುವಾಗ ಹಾಲು ಕುಡಿಸುವ ಕ್ರಮದ ಹಿಂದೆಯೂ ಇಂಥದ್ದೇ ಕಾರಣಗಳು ಇರಬಹುದು.
ಎಷ್ಟು ತಿನ್ನುತ್ತೀರಿ?
ಆಹಾರವನ್ನು ತಿನ್ನುವ ಪ್ರಮಾಣ ಎಷ್ಟು ಎನ್ನುವುದು ಸಹ ಮುಖ್ಯವಾಗುತ್ತದೆ. ಭೂರಿ ಭೋಜನದ ನಂತರ ನಿದ್ದೆಯನ್ನು ತಪ್ಪಿಸುವುದು ಕಷ್ಟ. ಭರ್ಜರಿ ಊಟದ ನಂತರ ರಕ್ತದಲ್ಲಿನ ಸಕ್ಕರೆ ಅಂಶಗಳೂ ಏರಿಳಿತವಾಗಿ ಆಯಾಸದ ಅನುಭವ ಆಗಬಹುದು, ನಿದ್ದೆ ಬೇಕೆನಿಸಬಹುದು. ಆದರೆ ಊಟದ ಪ್ರಾರಂಭದಲ್ಲಿ ಒಂದಿಷ್ಟು ಸಲಾಡ್‌ಗಳನ್ನು ತಿನ್ನುವುದರಿಂದ, ಅತಿಯಾಗಿ ಊಟ ಮಾಡುವುದನ್ನು ತಪ್ಪಿಸಬಹುದು. ಸಲಾಡ್‌ಗಳು ಒಮ್ಮೆ ಹೊಟ್ಟೆ ತುಂಬಿದ ಅನುಭವ ನೀಡಿದರೂ, ನಂತರ ದೀರ್ಘ ಕಾಲದವರೆಗೆ ಹೊಟ್ಟೆ ಭಾರವಾದ ಅನುಭವವನ್ನು ನೀಡುವುದಿಲ್ಲ. ಅದರಿಂದಾಗಿ ಮಧ್ಯಾಹ್ನದ ತೂಕಡಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಧ್ಯಾಹ್ನದ ಊಟ ಮಿತವಾಗಿರುವುದು ಅಗತ್ಯ.
ನಿದ್ದೆ
ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಯಿಲ್ಲವೇ? ಮಧ್ಯಾಹ್ನ ತೂಕಡಿಕೆ ಬೆನ್ನುಹತ್ತುವುದು ನಿಶ್ಚಿತ. ಹಾಗಾಗಿ ರಾತ್ರಿ ಕಣ್ತುಂಬಾ ನಿದ್ರಿಸಲು ಆದ್ಯತೆ ನೀಡಿ. ಸಾಮಾನ್ಯವಾಗಿ 7 ತಾಸುಗಳ ರಾತ್ರಿಯ ನಿದ್ದೆಯಿಂದ ಹಗಲು ಹೊತ್ತಿನ ಆಯಾಸವನ್ನು ತಪ್ಪಿಸಲು ಸಾಧ್ಯವಿದೆ. ಇಷ್ಟಾಗಿಯೂ ನಿದ್ದೆ ತಡೆಯಲು ಆಗುತ್ತಿಲ್ಲವೆಂದರೆ, ಹತ್ತು ನಿಮಿಷಗಳಿಗೆ ಅಲರಾಂ ಇಟ್ಟು ನಿದ್ರಿಸಿ. ಈ ಕಿರು ನಿದ್ರೆ ಚೈತನ್ಯವನ್ನು ನೀಡಬಲ್ಲದು.
ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!
ಉಪಾಯಗಳು ಬೇರೆಯೂ ಇವೆ
ಊಟದ ನಂತರ ಹತ್ತಿಪ್ಪತ್ತು ನಿಮಿಷಗಳ ಲಘು ನಡಿಗೆ ನೆರವಾಗುತ್ತದೆ. ಕೊಂಚ ತಾಜಾ ಗಾಳಿ, ಬೆಳಕು ಮೈಸೋಕಿದಾಗಲೂ ನಿದ್ದೆಯನ್ನು ದೂರ ಓಡಿಸಬಹುದು. ಹಾಗೆಂದು ಬಿರು ಬಿಸಿಲಿನಲ್ಲಿ ವಾಕಿಂಗ್ ಮಾಡಿದರೆ ತೂಕಡಿಕೆ ಹೆಚ್ಚಲೂಬಹುದು, ಜಾಗ್ರತೆ! ಊಟದ ಜೊತೆಗೆ ಆಲ್ಕೊಹಾಲ್ ಸೇವನೆ ಬೇಡ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತದೆ. ಊಟದ ನಂತರದ ನಿದ್ದೆಯನ್ನು ತಡಯುವುದಕ್ಕೆಂದೇ, ಆ ಹೊತ್ತಿನಲ್ಲಿ ಒಂದು ಖಡಕ್ ಚಹಾ ಅಥವಾ ಸ್ಟ್ರಾಂಗ್ ಕಾಫಿ ಕುಡಿಯುವವರು ಬಹಳ ಜನರಿದ್ದಾರೆ.