Site icon Vistara News

Social Media: ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಯಾವ ವಯಸ್ಸಿನಿಂದ ಸೂಕ್ತ?

Social Media

Social Media

ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗುವುದಕ್ಕೆ ಮಕ್ಕಳಿಗೆ ಸೂಕ್ತವಾದ ವಯೋಮಾನ ಯಾವುದು ಎಂಬುದು ಅತ್ಯಂತ ಸೂಕ್ಷ್ಮ ಪ್ರಶ್ನೆ. ಟ್ವಿಟರ್‌, ಮೆಟಾ ಮೊದಲಾದ ಜಾಲತಾಣಗಳು 13 ವರ್ಷ ವಯಸ್ಸಾದರೆ ಸಾಕು ಎಂದು ಅಪ್ಪಣೆ ಕೊಡಿಸಿವೆ. ಆದರೆ ಅಮೆರಿಕದ ಸರ್ಜನ್‌ ಜನರಲ್‌ ವಿವೇಕ್‌ ಮೂರ್ತಿ ಅವರ ಪ್ರಕಾರ, 13 ವರ್ಷ ಎಂದರೆ ತೀರಾ ಕಡಿಮೆ.

Social Media

ಹದಿಹರೆಯದ ಆರಂಭ ಎಂದರೆ ಇನ್ನೂ ಜಗತ್ತನ್ನು, ಸಂಬಂಧಗಳನ್ನು, ವೈಯಕ್ತಿಕ ಘನತೆಯನ್ನು ಅನ್ವೇಷಿಸುವ ವಯಸ್ಸು. ಇಷ್ಟು ಕಡಿಮೆ ಪ್ರಾಯದಲ್ಲಿ ಸಾಮಾಜಿಕ ಮಾಧ್ಯಮಗಳ ತೆಕ್ಕೆಗೆ ಸಿಲುಕಿದರೆ, ಒಳಿತಿಗಿಂತ ಕೆಡುಕಾಗುವ ಸಂಭವವೇ ಹೆಚ್ಚು. “ನನಗೆ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಹೇಳುವುದಾದರೆ, 13 ಎಂದರೆ ಇನ್ನೂ ಚಿಕ್ಕ ವಯಸ್ಸು. ಸಾಮಾಜಿಕ ಮಾಧ್ಯಮಗಳಲ್ಲಿರುವ ತಿರುಚಿದ ವಾತಾವರಣಕ್ಕೆ ಮಕ್ಕಳನ್ನು ಬಿಡಬೇಕೆ ಎಂಬ ಬಗ್ಗೆ ನಾವೇ ಯೋಚನೆ ಮಾಡುವ ಅಗತ್ಯವಿದೆ” ಎಂಬುದು ಮೂರ್ತಿ ಅವರ ಅಭಿಮತ.

ಸಾಮಾಜಿಕ ಮಾಧ್ಯಮಗಳು ಮಕ್ಕಳ ಎಳೆಯ ಮನಸ್ಸಿನ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ಅಧ್ಯಯನಗಳು ನಡೆಯುತ್ತಿವೆ. ಆದರೆ ಅವರನ್ನು ಈ ಮಾಧ್ಯಮಗಳಲ್ಲಿ ಸಕ್ರಿಯರಾಗದಂತೆ ಸಂಪೂರ್ಣ ತಡೆಯುವುದೂ ಕಷ್ಟಸಾಧ್ಯ ಎಂಬಂತಾಗಿದೆ. “ಎಳೆಯ ಪ್ರಾಯದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳ ದುಷ್ಟಪರಿಣಾಮಗಳಿಗೆ ತೆರೆದುಕೊಳ್ಳಬಾರದು ಎಂದು ಬಯಸಿದಲ್ಲಿ ಕೆಲವು ಕ್ರಮಗಳನ್ನು ಪಾಲಕರು ಅಳವಡಿಸಿಕೊಳ್ಳಬೇಕಿದೆ. ನಾವೆಲ್ಲಾ ಜೊತೆಯಾಗಿ ಇಂಥ ತಾಣಗಳು ಅಥವಾ ಆ್ಯಪ್‌ಗಳಿಂದ ದೂರ ಇರೋಣ ಎಂದು ಮಕ್ಕಳೊಂದಿಗೆ ಪೋಷಕರೂ ನಿರ್ಧರಿಸಿದರೆ ಪ್ರಯೋಜನವಾದೀತು. ಆಗ ಮಕ್ಕಳನ್ನು 16, 17, 18 ಅಥವಾ ಎಲ್ಲಿಯವರೆಗೆ ಇವುಗಳ ಸಹವಾಸ ಬೇಡ ಎಂದು ಪಾಲಕರು ನಿರ್ಧರಿಸುತ್ತಾರೋ ಅಲ್ಲಿಯವರೆಗೆ ಇದನ್ನು ಮುಂದೂಡಬಹುದು” ಎಂಬುದು ವಿವೇಕ್‌ ಮೂರ್ತಿ ಅವರ ಸಲಹೆ.

Social Media

ಹದಿಹರೆಯದ ಮಕ್ಕಳು ಇಂದಿನ ದಿನಗಳಲ್ಲಿ ಎದುರಿಸುತ್ತಿರುವ ಒತ್ತಡ, ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯ ನಡುವೆ ನೇರ ಸಂಬಂಧವಿದೆ ಎನ್ನುತ್ತವೆ ಅಧ್ಯಯನಗಳು. ಇಂಥದ್ದೇ ಒಂದು ಅಧ್ಯಯನದಲ್ಲಿ ಭಾಗವಹಿಸಿದ 10-12ರ ವಯೋಮಾನದ ಪುಟ್ಟ ಮಕ್ಕಳು, ಒಂದು ವಾರದಲ್ಲಿ ಒಂದು ರಾತ್ರಿಗಾಗುವಷ್ಟು ನಿದ್ದೆಯನ್ನು, ಅಂದರೆ ಸುಮಾರು 8-10 ತಾಸುಗಳ ನಿದ್ದೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ, ಈ ಸೋಶಿಯಲ್‌ ಮೀಡಿಯ ವ್ಯಸನದಿಂದಾಗಿ ರಾತ್ರಿಯ ನಿದ್ದೆಯನ್ನೂ ಕಣ್ತುಂಬಾ ಮಾಡದೆ, ನಡುವೆ ಏಳುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಾವೇನಾದರೂ ಕಳೆದುಕೊಂಡರೆ ಅಥವಾ ತಮಗೇನಾದರೂ ತಪ್ಪಿಹೋದರೆ ಎಂಬ ಆತಂಕದಿಂದ ರಾತ್ರಿಯೂ ಎಚ್ಚರವಿದ್ದು ಫೋನ್‌ ನೋಡುವಂತಾಗಿದೆ ಎಂಬುದು ಮಕ್ಕಳ ಮಾತು. ಹಾಗಾಗಿ ಅತಿ ಕಡಿಮೆ ವಯಸ್ಸಿನಲ್ಲಿ ಮಕ್ಕಳಿಗೆ ಸಾಮಾಜಿಕ ತಾಣಗಳು ಸೂಕ್ತವಲ್ಲ ಎಂಬ ಮೂರ್ತಿಯವರ ಮಾತಿಗೆ ಪುಷ್ಟಿ ದೊರೆತಂತಾಗಿದೆ.

ಇದನ್ನೂ ಓದಿ: Backbone Health : ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version