ಈಗಿನ ದಿನಗಳಲ್ಲಿ ಇದನ್ನು ʻಒಂಟಿ ಊಟದ ಸೆಳೆತʼ ಎನ್ನೋಣ ಬೇಕಿದ್ದರೆ. ಒಂಟಿಯಾಗಿರುವುದು ಊಟವೋ ಅಥವಾ ಊಟ ಮಾಡುವವರೋ ಎಂಬ ಪ್ರಶ್ನೆ ಸಹಜವಾಗಿಯೇ ಬಂದೀತು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎಲ್ಲಾ ದೇಶಗಳಲ್ಲೂ ಇಂಥದ್ದೊಂದು ಒಂಟಿತನ ಒಪ್ಪಿತವಾಗಿದೆ ಎಂದರೆ ಸುಳ್ಳಲ್ಲ. ಹಾಗಿಲ್ಲದಿದ್ದರೆ, ಊಟದ ಸಮಯ ಎಂದರೆ ಹೆಚ್ಚಿನ ದೇಶ-ಕಾಲ-ಸಂಸ್ಕೃತಿಗಳಲ್ಲಿ ಅದು ಕುಟುಂಬಕ್ಕೆ ನೀಡುವ, ನೀಡಲೇಬೇಕಾದ ಸಮಯ. ಪೂರ್ವ ದೇಶದ ಸಂಸ್ಕೃತಿಗಳಲ್ಲಿ ಇದು ಕೌಟುಂಬಿಕ ಸಮಯ ಎನಿಸಿಕೊಂಡರೆ, ಪಶ್ಚಿಮ ದೇಶಗಳಲ್ಲಿ ಇದೊಂದು ಸಭ್ಯತೆಯ ವಿಷಯ. ಮಂತ್ರಕ್ಕಿಂತ ಉಗುಳೇ ಹೆಚ್ಚು ಎನ್ನುವಂತೆ, ವಿಷಯಕ್ಕಿಂತ ಪೀಠಿಕೆಯೇ ಹೆಚ್ಚು ಎಂದು ಗೊಣಗಬೇಡಿ. ಹೊಟೇಲ್-ರೆಸ್ಟೋರೆಂಟ್‌ಗಳಲ್ಲಿ ಒಬ್ಬರೇ ಊಟ ಮಾಡುವ ಸಂಸ್ಕೃತಿ ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಕುರಿತಾಗಿ ಇದಿಷ್ಟೂ ಪ್ರವರವನ್ನು ಹೇಳಿದ್ದೀಗ.
ನಾವು ಖಾಯಂ ಹೋಗುವ ದರ್ಶಿನಿಗಳೋ, ಖಾನಾವಳಿಗಳದ್ದೋ ಮಾತಲ್ಲ ಈಗ; ಅಲ್ಲಿ ಹೋಗುವುದೇ ಅವಸರಕ್ಕೆ ಒಂದಿಷ್ಟು ಹೊಟ್ಟೆಗೆ ಸುರಿದುಕೊಂಡು ಓಡುವುದಕ್ಕೆ. ಆದರೆ ದೊಡ್ಡ ಹೊಟೇಲ್‌ಗಳಿಗೆ ಹೋದಾಗ, ʻಟೇಬಲ್ ಎಷ್ಟು ಜನಕ್ಕೆ?ʼ ಎಂಬ ಸಿಬ್ಬಂದಿಯ ಸಹಜ ಪ್ರಶ್ನೆಗೆ, ʻಒಬ್ಬರಿಗೆʼ ಎಂಬುದನ್ನು ಗ್ರಾಹಕ ಮತ್ತು ಸಿಬ್ಬಂದಿಗಳಿಬ್ಬರೂ ಅತ್ಯಂತ ಸಹಜ ಎಂದು ನೋಡುವಂಥ ದೃಷ್ಟಿಕೋನ ಎಲ್ಲೆಡೆ ವ್ಯಾಪಿಸುತ್ತಿದೆ. ಹಾಗೆ ಡಿನ್ನರ್‌ಗೆಂದು ಹೊರಗೆ ಹೋಗುವುದೇ ಒಂದಿಷ್ಟು ಜನ ಸ್ನೇಹಿತರೋ, ಕುಟುಂಬದವರೋ ಸೇರಿ ಎಂಬಂಥ ಮನಸ್ಥಿತಿಯಲ್ಲಿ ನಿಧಾನವಾಗಿ ಆಗುತ್ತಿರುವ ಮತ್ತು ಆಗಲೇಬೇಕಾಗಿರುವ ಅನಿವಾರ್ಯ ಬದಲಾವಣೆಯಿದು. ಹಾಗಾದರೆ ಈ ʻಸೋಲೋ ಡೈನಿಂಗ್ʼ ಎನ್ನುವ ಬದಲಾವಣೆ ಏನನ್ನು ಪ್ರತಿಬಿಂಬಿಸುತ್ತದೆ?
ವಿಘಟನೆ ಹೆಚ್ಚಾಗುತ್ತಿದೆಯೇ?: ಮಾನವಶಾಸ್ತ್ರಗಳ ಪರಿಣತರನ್ನು ಈ ಬಗ್ಗೆ ಮಾತನಾಡಿಸಿದರೆ ಇನ್ನಷ್ಟು ವಿಕ್ಷಿಪ್ತ ಎನ್ನುವಂಥ ವಿಷಯಗಳು ನಮಗೆ ದೊರೆಯಬಹುದು. ಮೊದಲಿಗೆ ಕೋವಿಡ್ ಕಾಲದ್ದು. ಎಲ್ಲಾ ದೇಶಗಳಲ್ಲೂ ಇದ್ದಕ್ಕಿದ್ದಂತೆ ಲಾಕ್‌ಡೌನ್ ಹೇರಿದಾಗ ಕುಟುಂಬದ ಜೊತೆಗಿದ್ದವರು ಮುಂದಿನ ಹಲವಾರು ತಿಂಗಳುಗಳ ಕಾಲ ಕುಟುಂಬದ ಜೊತೆಗೇ ಉಳಿದರು. ಮನೆಯಿಂದ ಕೆಲಸ ಮಾಡುವುದು ಕೆಲವು ಉದ್ದಿಮೆಗಳಲ್ಲಿ ಸಾಧ್ಯವೂ ಆಯಿತು. ಎಲ್ಲರೂ ಇದ್ದಂಥ ಮನೆಗಳಲ್ಲಿ ಊಟ-ತಿಂಡಿಗಳು ಅತ್ಯಂತ ಆಪ್ತ ಕ್ಷಣಗಳು ಎನಿಸಿದವು. ಆದರೆ ಒಬ್ಬರೇ ಇದ್ದವರು ಸುದೀರ್ಘಕಾಲ ತಮ್ಮ ತಾವಿನಲ್ಲಿ ಒಬ್ಬರೇ ಉಳಿವಂತಾಯ್ತ. ಪರಿಣಾಮ, ಒಬ್ಬರಿಗಾಗಿಯೇ ಅಡುಗೆ ಮಾಡುವುದು, ಅಡುಗೆ ತರುವುದು, ತರಿಸಿಕೊಳ್ಳುವುದು- ಅಂದರೆ, ಆಹಾರದೊಂದಿಗಿನ ಕ್ಷಣಗಳೇ ಆಪ್ತ ಎನಿಸಿ, ಒಂಟಿ ಊಟ ಸಾಮಾನ್ಯ ಎನಿಸಲಾರಂಭಿಸಿತು. ವಿಚ್ಛೇದಿತರು, ಒಬ್ಬೊಂಟಿಗರು ಅಥವಾ ಕುಟುಂಬದ ಕವಚ ಇಲ್ಲದವರು ಒಬ್ಬರೇ ಡೈನಿಂಗ್ ಸುಖದಿಂದ ಹಿಂದೆ ಸರಿಯುವ ಬದಲು, ʻಹೀಗೂ ಇರಬಹುದುʼ ಎಂಬಂತೆ ಬದುಕಲಾರಂಭಿಸಿದರು. ಹಾಗಾದರೆ ಸಮಾಜ ಇನ್ನಷ್ಟು ವಿಘಟನೆಯತ್ತ ಹೋಗುತ್ತಿದೆಯೇ? ಅಂದರೆ, ಕುಟುಂಬಗಳ ಪರಿಧಿಯಿಂದ ಈಗಾಗಲೇ ದೂರವಾಗುತ್ತಿರುವ ಜನ, ʻನಾನು-ನನ್ನಿಷ್ಟʼ ಎಂಬತ್ತ ಇನ್ನಷ್ಟು ಸರಿಯುತ್ತಿರುವುದರ ದೂರಗಾಮಿ ಪರಿಣಾಮಗಳೇನು ಎಂಬುದರ ಬಗ್ಗೆ ಅಧ್ಯಯನ ಅಗತ್ಯ.
ಊಟದ ಖುಷಿ ಇರುವುದೇ ಹಂಚಿ ಉಣ್ಣುವುದರಲ್ಲಿ ಎಂಬ ಸಂಸ್ಕೃತಿ ವಿಶ್ವದ ಬಹಳಷ್ಟು ದೇಶಗಳಲ್ಲಿದೆ. ಉಣ್ಣುವುದಷ್ಟೇ ಈ ಹೊತ್ತಿನ ಕಾರ್ಯಸೂಚಿ ಆಗಿರದೆ, ಒಬ್ಬರಿಗೊಬ್ಬರು ಆಪ್ತರಾಗುವ, ದಿನವಿಡೀ ನಡೆದಿದ್ದನ್ನು ಹಂಚಿಕೊಳ್ಳುವ, ಅಲ್ಲಿರುವವರ ನಡುವಿನ ನಂಟು ಬಲಗೊಳ್ಳುವ ಕೌಟುಂಬಿಕ ಮತ್ತು ಸಾಮಾಜಿಕ ಮನೋವ್ಯಾಪಾರವದು. ಒಬ್ಬರಿಗಾಗೇ ಅಡುಗೆ ಮಾಡುವುದಾದರೆ, ʻಏನೋ ಒಂದುʼ ಎಂದು ಬೇಯಿಸಿಡುವ ಜನರೂ, ಊಟಕ್ಕೆ ನಾಲ್ಕಾರು ಜನರಿದ್ದಾರೆ ಎನ್ನುವಾಗ ತುಂಬಾ ಮುತುವರ್ಜಿಯಿಂದ, ನಾನಾ ರುಚಿಗಳನ್ನು ತಯಾರಿಸುವುದು ಇದಕ್ಕೆ ಸಾಕ್ಷಿ. ಆಯಸ್ಸು ದೀರ್ಘವಾಗಿ, ಕಡೆಗಾಲದಲ್ಲಿ ಒಬ್ಬರೇ ಬದುಕುವ ಸಂದರ್ಭಗಳು ಜಗತ್ತಿನೆಲ್ಲೆಡೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ʻಏನೋ ಒಂದುʼ ಬೇಯಿಸಿಕೊಂಡೇ ಅಪೌಷ್ಟಿಕತೆಗೆ ತುತ್ತಾಗುತ್ತಿರುವ ಪ್ರಕರಣಗಳು ಪಶ್ಚಿಮ ದೇಶಗಳಲ್ಲಿ ಹೆಚ್ಚುತ್ತಿವೆ.
ಇದಕ್ಕೆ ಒಂದಿಷ್ಟು ಕುತೂಹಲಕರ ಆಯಾಮಗಳೂ ಒದಗಿಬರುತ್ತಿವೆ. ಒಬ್ಬರಿಗಾಗಿಯೇ ಅಡುಗೆ ಮಾಡುವ ಪುಸ್ತಕಗಳು (ಕುಕ್‌ಬುಕ್) ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂದರೆ, ನಾಲ್ಕು ಜನರಿಗಾಗುವಷ್ಟು ಅಡುಗೆ ಮಾಡಿ, ಇರುವ ಒಬ್ಬ ವ್ಯಕ್ತಿ ಅದನ್ನೇ ಮೂರು ದಿನ ತಿನ್ನುವ ಅಗತ್ಯವಿಲ್ಲ. ಒಬ್ಬರಿಗೆ ಒಂದು ಹೊತ್ತಿಗೆ ಅಡುಗೆ ಮಾಡುವಾಗ ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂದು ನಿಖರವಾಗಿ ತಿಳಿಸುವ ಪುಸ್ತಕಗಳಿವು! ಒಬ್ಬರೇ ತಿನ್ನುವಾಗ ಇಷ್ಟವಾಗುವ ತಿನಿಸುಗಳು ಯಾವುವು ಎಂಬ ಬಗ್ಗೆ ಹಲವಾರು ಖ್ಯಾತ ರೆಸ್ಟೋರೆಂಟ್‌ಗಳು ಮುತುವರ್ಜಿ ವಹಿಸುತ್ತಿವೆ. ಬ್ರಿಟನ್‌ನ ಹೊಟೇಲ್‌ಗಳ ಮಾಹಿತಿಯನ್ನು ನಂಬುವುದಾದರೆ ಕಳೆದೆರಡು ವರ್ಷಗಳಲ್ಲಿ ಒಂಟಿ ಗ್ರಾಹಕರ ಸಂಖ್ಯೆ ಸುಮಾರು ಶೇ. ೧೬೦ರಷ್ಟು ಹೆಚ್ಚಿದೆಯಂತೆ. ʻಸೋಲೊ ಟೇಬಲ್‌ಗಳ ಗ್ರಾಹಕರು ತಮ್ಮ ಸಿಬ್ಬಂದಿಯೊಂದಿಗೆ ಹೆಚ್ಚು ಮಾತನಾಡುತ್ತಾರೆ. ಇದರಿಂದ ಗ್ರಾಹಕರನ್ನು ತೃಪ್ತಿ ಪಡಿಸುವಲ್ಲಿ ನಮ್ಮ ಮನೋಬಲವೂ ಹೆಚ್ಚುತ್ತದೆʼ ಎಂಬುದು ಈ ರೆಸ್ಟೋರೆಂಟ್‌ಗಳ ಅಭಿಪ್ರಾಯ.
ಇದನ್ನೂ ಓದಿ| Cold Feeling | ಕೆಲವರಿಗೆ ಮಾತ್ರ ಏಕೆ ಚಳಿ ಹೆಚ್ಚು?