ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೃತಿಕ್ ರೋಷನ್ ಬಾಲಿವುಡ್‌ನ ಫ್ಯಾಷನಬಲ್ ಹಾಗೂ ಸ್ಪುರದ್ರೂಪಿ ನಟ. ಒಂದು ಕಾಲದಲ್ಲಿ ತಮ್ಮ ಗೆಟಪ್‌ನಿಂದಲೇ ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳ ಹೃದಯ ಗೆದ್ದ ಸೂಪರ್ ಸ್ಟಾರ್ ಕೂಡ. ಈ ನಟನ ಫಿಟ್ನೆಸ್ ಹಾಗೂ ಫ್ಯಾಷನ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಅಂದು ಮನಸೋತವರೇಷ್ಟೋ! ಆದರೆ, ಇಂದಿಗೂ ಕೂಡ ಹೃತಿಕ್ ರೋಷನ್ ಬಾಲಿವುಡ್‌ನ ಮೋಸ್ಟ್ ಫ್ಯಾಷನಬಲ್ ಹಾಗೂ ಹ್ಯಾಂಡ್‌ಸಮ್ ನಟರ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇನ್ನು ಇವರನ್ನು ಗ್ರೀಕ್ ಗಾಡ್ ಆಫ್ ಬಾಲಿವುಡ್ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿಯವರೆಗೂ ಯಾವ ನಟನಿಗೂ ಈ ಕ್ರೆಡಿಟ್ ದೊರಕಿಲ್ಲ!
ಗ್ರೀಕ್ ಗಾಡ್ ಆಫ್ ಬಾಲಿವುಡ್ ಯಾಕೆ?
ಜಾಗತಿಕ ಮಟ್ಟದ ಇತಿಹಾಸದಲ್ಲಿ ಉಲ್ಲೇಖಗೊಂಡಿರುವಂತೆ, ಪ್ರಪಂಚದ ಅತ್ಯಂತ ಆಕರ್ಷಕ ದೇಹ ಸೌಂದರ್ಯ ಹೊಂದಿರುವ ಪುರುಷ ದೇವತೆಯೆಂದರೆ ಗ್ರೀಕ್ ದೇವರು. ಹಿಂದಿನಿಂದಲೂ ಮಹಿಳೆಯರಿಗಿರುವಂತೆ ಪುರುಷರಿಗೂ ಸೌಂದರ್ಯವನ್ನು ಅಳೆಯಲು ಒಂದಿಷ್ಟು ಅಂಶಗಳನ್ನು ದಾಖಲಿಸಲಾಗಿದೆ. ಅದರಂತೆ ಪರ್ಫೆಕ್ಟಾಗಿರುವ ಮುಖಚರ್ಯೆ, ದೇಹದ ಆಕೃತಿ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಇವೆಲ್ಲಕ್ಕೂ ಬಾಲಿವುಡ್ ನಟ ಹೃತಿಕ್ ರೋಷನ್ ನೂರು ಪರ್ಸೆಂಟ್ ಹೋಲುತ್ತಾರಂತೆ. ೪9ರ ಪ್ರಾಯದ ಈ ಸ್ಪುರದ್ರೂಪಿ ನಟ ಇಂದಿಗೂ ಆಕರ್ಷಕ ಮೈಮಾಟ ಕಾಪಾಡಿಕೊಂಡಿರುವುದರೊಂದಿಗೆ ಗ್ರೀಕ್ ಗಾಡ್‌ನಂತೆ ಪ್ರತಿಬಿಂಬಿಸುವ ಸ್ಲೀಕ್ ಬಾಡಿಯನ್ನು ಹೊಂದಿದ್ದಾರೆ. ಮುಖ ಚರ್ಯೆಯಿಂದ ಹಿಡಿದು ಮುಂಗುರುಳು, ಮುಗುಳ್ನಗೆ, ಸುಂದರವಾದ ಚೀಕ್ ಬೋನ್ಸ್ ಎಲ್ಲವೂ ಗ್ರೀಕ್ ಗಾಡ್‌ನ ಪ್ರತಿರೂಪದಂತಿದೆಯಂತೆ! ಹಾಗಾಗಿ ಅವರನ್ನು ಗ್ರೀಕ್ ಗಾಡ್ ಆಫ್ ಬಾಲಿವುಡ್ ಎಂದು ಕರೆಯಲಾಗುತ್ತದೆ. ಇದೀಗ ಈ ನಾಮಧೇಯ ಎಷ್ಟು ಖ್ಯಾತಿ ಗಳಿಸಿದೆ ಎಂದರೆ, ಹೃತಿಕ್ ರೋಷನ್ ಇದಕ್ಕೆ ಒಗ್ಗಿಹೋಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಬದಲಾಗದ ಹೃತಿಕ್ ಫ್ಯಾಷನ್
ಸಿಂಪಲ್ ಟೀ ಶರ್ಟ್, ಕೆಲವೊಮ್ಮೆ ಅದರ ಮೇಲೊಂದು ಹೂಡಿ ಜಾಕೆಟ್ ಇನ್ನು ಇದಕ್ಕೆ ಡೆನಿಮ್ ಪ್ಯಾಂಟ್ ಧರಿಸುವ ಹೃತಿಕ್‌ರದ್ದು, ಸಿಂಪಲ್ ಫ್ಯಾಷನ್ ಸ್ಟೇಟ್‌ಮೆಂಟ್. ಇನ್ನು ಇಂದಿಗೂ ರೆಡ್ ಕಾರ್ಪೆಟ್ ಹಾಗೂ ಸಿನಿಮಾ ಸಮಾರಂಭಗಳಿಗೆ ಕ್ಲಾಸಿ ಲುಕ್ ನೀಡುವ ಫಿಟ್ ಆಗಿ ಕಾಣಿಸುವ ಬ್ಲಾಕ್ ಅಥವಾ ಬೂದು ಬಣ್ಣದ ಸೂಟ್‌ಗಳನ್ನು ಧರಿಸಲು ಇಷ್ಟಪಡುತ್ತಾರಂತೆ.
ಅಂದಹಾಗೆ, ಹೃತಿಕ್ ಮೊದಲ ಸಿನಿಮಾದಿಂದಲೇ ಯುವಕರ ಸ್ಟೈಲ್ ಐಕಾನ್ ಆಗಿದ್ದರು. ಸಾಕಷ್ಟು ಹಾಲಿವುಡ್ ಟ್ರೆಂಡ್ ಹುಟ್ಟು ಹಾಕಿದ್ದರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
- ಮೊದಲ ಸಿನಿಮಾ ಕಹೋ ನಾ ಪ್ಯಾರ್ ಹೈ ಮೂಲಕ ಶೀರ್ ಟೀ ಶರ್ಟ್ ಟ್ರೆಂಡಿಯಾಗಿಸಿದ್ದರು.
- ಹೃತಿಕ್ ಹೇರ್ಸ್ಟೈಲ್ ಕೂಡ ಸಖತ್ ಪಾಪ್ಯುಲರ್ ಆಗಿತ್ತು.
- ಹಾಲಿವುಡ್ ನಟರಂತೆ ಕಾಣುವ ಅವರ ಬಿಂದಾಸ್ ಪೋಲೋ ನೆಕ್ ಟೀ ಶರ್ಟ್ -ಡೆನಿಮ್ ಪ್ಯಾಂಟ್ ಸ್ಟೈಲ್ ಸ್ಟೇಟ್‌ಮೆಂಟ್ ದಶಕಗಳವರೆಗೂ ಯುವಕರನ್ನು ಸೆಳೆದಿತ್ತು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ