ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾಂತಾರಾ ಸಿನಿಮಾ ಮೂಲಕ ಜಾಗತೀಕ ಮಟ್ಟದಲ್ಲಿ ಹೆಸರು ಮಾಡಿದ ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ, ಸಿನಿಮಾ ಪ್ರಮೋಷನ್ಗಳಲ್ಲಿ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಪಂಚೆ ಧರಿಸುವ ಮೂಲಕ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.
ಅಂದಹಾಗೆ, ನಟರು ತಮ್ಮ ಸಿನಿಮಾಗಳ ಪ್ರಮೋಷನ್ಗಳಲ್ಲಿ ಟ್ರೆಂಡಿ ಫ್ಯಾಷನ್ವೇರ್ ಧರಿಸುವುದು ಕಾಮನ್. ಆದರೆ, ರಿಷಬ್ ಶೆಟ್ಟಿಯವರು ಮಾತ್ರ, ಸಾಂಪ್ರದಾಯಿಕ ಉಡುಗೆಯಾದ ಶ್ವೇತ ವರ್ಣದ ಬಾರ್ಡರ್ ಪಂಚೆಯನ್ನು ಶರ್ಟ್ನೊಂದಿಗೆ ಧರಿಸುವ ಮೂಲಕ ರಾಷ್ಟ್ರದಾದ್ಯಂತ ಟ್ರೆಂಡ್ ಹುಟ್ಟು ಹಾಕಿದ್ದಾರೆ ಹಾಗೂ ಟ್ರೆಂಡ್ ಸೆಟ್ ಮಾಡಿದ ನಾಯಕ ನಟರ ಸಾಲಿಗೆ ಸೇರಿದ್ದಾರೆ.
ಮೇರುನಟ ಡಾ. ರಾಜ್ ನಂತರ ರಿಷಬ್ ಶೆಟ್ಟಿ
ಹೌದು. ಕನ್ನಡದ ಮೇರು ನಟ ಡಾ. ರಾಜ್ಕುಮಾರ್ ಅವರನ್ನು ಹೊರತುಪಡಿಸಿದರೆ ಮತ್ಯಾರೂ, ಪಂಚೆ ಧರಿಸಿ ಹೊರಗೆ ಹೆಚ್ಚಾಗಿ ಕಾಣಿಸಿಕೊಂಡವರಲ್ಲ! ಧರಿಸಿದರೂ ಆಗೊಮ್ಮೆ ಈಗೊಮ್ಮೆ ಇಲ್ಲವೇ ಹಬ್ಬ-ಹರಿದಿನಗಳಲ್ಲಿ ಮಾತ್ರ ಧರಿಸಿ ಪೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೆಲವು ಚಿತ್ರಗಳಲ್ಲಿ ಹಾಗೂ ಸೀರಿಯಲ್ಗಳಲ್ಲಿ ಕಿರುತೆರೆ ನಟರು ಸಾಂದರ್ಭಿಕ ಸನ್ನಿವೇಶಗಳಲ್ಲಿ ಪಂಚೆಯಲ್ಲಿ ಕಾಣಿಸಿಕೊಂಡದ್ದನ್ನು ಹೊರತುಪಡಿಸಿದರೇ ಅಷ್ಟಾಗಿ ಪಂಚೆಯ ಬಳಕೆ ಎಲ್ಲಿಯೂ ಕಾಣಿಸಿಲ್ಲ! ಇದೀಗ ಕಾಂತಾರ ಸಿನಿಮಾ ಬಿಡುಗಡೆಯ ನಂತರ ಪ್ರಮೋಷನ್ಗಳಲ್ಲಿ ನಟ ರಿಷಬ್ ಶೆಟ್ಟಿ ಶ್ವೇತ ವರ್ಣದ ಪಂಚೆಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಸದ್ಯದ ಸ್ಟೈಲ್ ಸ್ಟೇಟ್ಮೆಂಟ್ ಹೈಲೈಟ್ ಆಗಿದೆ. ಇದು ತಾತ್ಕಾಲಿಕ ಸ್ಟೈಲ್ ಸ್ಟೇಟ್ಮೆಂಟ್ ಆದರೂ ಟ್ರೆಂಡ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿದೆ.
ರಾಷ್ಟ್ರದಾದ್ಯಂತ ಪಂಚೆ ಸ್ಟೈಲ್
ಇನ್ನು, ಎಲ್ಲದಕ್ಕಿಂತ ಹೆಚ್ಚಾಗಿ, ಕೇವಲ ಕರ್ನಾಟಕ ಮಾತ್ರವಲ್ಲ, ಚೆನ್ನೈ, ಮುಂಬಯಿ, ದಿಲ್ಲಿಯಲ್ಲೂ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲೂ ಶ್ವೇತ ವರ್ಣದ ಪಂಚೆ ಹಾಗೂ ಇದಕ್ಕೆ ಹೊಂದುವ ಶರ್ಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ಟಿವಿ ಚಾನೆಲ್ಗಳು ಹಾಗೂ ಯೂ ಟ್ಯೂಬ್ ಕಾರ್ಯಕ್ರಮಗಳಲ್ಲೂ ಇದೇ ರೀತಿ ಪಂಚೆ ಫ್ಯಾಷನ್ನಲ್ಲಿ ಮಿಂದೆದ್ದಿದ್ದಾರೆ. ಇದು ಅವರ ಸದ್ಯದ ಸ್ಟೈಲ್ಸ್ಟೇಟ್ಮೆಂಟ್ ಬಿಂಬಿಸಿದೆ ಮಾತ್ರವಲ್ಲದೇ, ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪನ್ನು ರಾಷ್ಟ್ರಮಟ್ಟದಲ್ಲಿ ಹೈಲೈಟ್ ಮಾಡುವಲ್ಲಿ ಸಹಕಾರಿಯಾಗಿದೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ಹರ್ಷ್. ಇನ್ನು ಸ್ಟೈಲಿಸ್ಟ್ ರಾಘವ್ ಪ್ರಕಾರ, ನಟ ರಜನಿಕಾಂತ್, ಮೋಹನ್ ಲಾಲ್, ಮುಮ್ಮುಟಿ ಸೇರಿದಂತೆ ಕೆಲವು ದಕ್ಷಿಣ ಭಾರತದ ಸಿನಿಮಾ ತಾರೆಯರನ್ನು ಹೊರತುಪಡಿಸಿದಲ್ಲಿ , ಸದ್ಯಕ್ಕೆ ಯಾವ ಕನ್ನಡದ ತಾರೆಯರೂ ಇಷ್ಟೊಂದು ಬಾರಿ ಪಂಚೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ! ಎನ್ನುತ್ತಾರೆ.
ಸ್ಟೈಲಿಸ್ಟ್ಗಳು ಹೇಳುವುದೇನು ?
ಸಿನಿಮಾ ಪ್ರಮೋಷನ್ಗಾದರೂ ಸರಿಯೇ!ಅದು ತಾತ್ಕಾಲಿಕವಾಗಿಯಾದರೂ ಸರಿಯೇ! ಒಟ್ಟಿನಲ್ಲಿ ನಟ ರಿಷಬ್ ಶೆಟ್ಟಿ, ಸಾಂಪ್ರದಾಯಿಕ ಉಡುಪಿನ ಪಟ್ಟಿಯಲ್ಲಿ ಸೇರುವ ಶ್ವೇತ ವರ್ಣದ ಪಂಚೆಯನ್ನು ಧರಿಸಿ ಟ್ರೆಂಡ್ ಸೆಟ್ ಮಾಡಿದ್ದು, ಇತರೇ ನಟ-ನಟಿಯರಿಗೆ ಮಾದರಿಯಾಗುವಂತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್ ರಜತ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಕೈರೋ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಂಸೆ ಗಿಟ್ಟಿಸಿದ ನಟಿ ಸ್ವರ ಭಾಸ್ಕರ್ ಗಾಡ್ ಮದರ್ ಲುಕ್