ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಾನು ಸದಾ ಟ್ರೆಂಡ್ ಸೆಟ್ಟರ್ ಆಗಲು ಬಯಸುತ್ತೇನೆ ಹೊರತು ಟ್ರೆಂಡ್ ಫಾಲೋವರ್ ಆಗಲಾರೆ ಎನ್ನುತ್ತಾರೆ ತೇಜಸ್ವಿನಿ ಶರ್ಮಾ.
ಅಂದ ಹಾಗೆ, ತೇಜಸ್ವಿನಿ ಶರ್ಮಾ ಸ್ಯಾಂಡಲ್‌ವುಡ್ ನಟಿ ಹಾಗೂ ಸೂಪರ್ ಮಾಡೆಲ್. ಮಖೌನಲ್ಲಿ ನಡೆದ ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷಿಯಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ವೆಬ್ ಸೀರೀಸ್ ಸೇರಿದಂತೆ ಇಂಗ್ಲೀಷ್ ಮಂಜ, ಫ್ಲಾಟ್ ನಂಬರ್ 9 ಹಾಗೂ ವಾರ್ಡ್ ನಂಬರ್ 11 ಸೇರಿದಂತೆ ಕೊಡಗಿನ ಪ್ರಾದೇಶಿಕ ಸಿನಿಮಾ ಕೊಡಗ್ರ ಸಿಪಾಯಿಯಲ್ಲೂ ಅಭಿನಯಿಸಿದ್ದಾರೆ. ಈ ಬಾರಿ ಸ್ಟಾರ್ ಸ್ಟೈಲ್ ಕಾಲಂನಲ್ಲಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಮಾತನಾಡಿದ್ದಾರೆ.
ಬಿಡದ ಫ್ಯಾಷನ್ ನಂಟು
ನನಗೂ ಫ್ಯಾಷನ್‌ಗೂ ಎಂದಿಗೂ ಬಿಡಿಸಲಾಗದ ನಂಟಿದೆ. ಮೂಲತಃ ನಾನು ಸೂಪರ್ ಮಾಡೆಲ್. ಹಾಗಾಗಿ ಫ್ಯಾಷನ್ ಎಂಬುದು ನನ್ನೊಂದಿಗೆ ಸದಾ ಬೆಸೆದುಕೊಂಡಿದೆ. ಐಡೆಂಟಿಟಿಗೆ ಸಾಥ್ ನೀಡುವ ಡ್ರೆಸ್ಸಿಂಗ್ ಕಾನ್ಸೆಪ್ಟ್ ನನ್ನ ಫ್ಯಾಷನ್. ಇನ್ನು ಮನೆಯಲ್ಲಿರುವಾಗ ಸಿಂಪಲ್ ಫ್ಯಾಷನ್. ಹೊರಗೆ ಇದ್ದಾಗ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ ಎನ್ನುತ್ತಾರೆ ತೇಜಸ್ವಿನಿ.
ಫ್ಯಾಷೆನಬಲ್ ಆಗಿದ್ದರೆ ಮಾತ್ರ ಗ್ಲಾಮರಸ್ ಲುಕ್
ಯಾವುದೇ ನಟಿ ಫ್ಯಾಷನಬಲ್ ಆಗಿದ್ದಲ್ಲಿ ಗ್ಲಾಮರ್ ಲುಕ್ ತಂತಾನೇ ಕ್ರಿಯೇಟ್ ಆಗುತ್ತದೆ. ಫ್ಯಾಷನ್ ಹಾಗೂ ಗ್ಲಾಮರ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅದಕ್ಕೂ ಒಂದು ಬಾರ್ಡರ್ ಲೈನ್ ಇರುತ್ತದೆ. ಅದು ಆಚೆ ಈಚೆಯಾದರೂ ಅರ್ಥ ಬದಲಾಗುತ್ತದೆ. ಹಾಗೆಂದು ಸದಾ ಫ್ಯಾಷನ್ ಹೆಸರಲ್ಲಿ ಫೇಕ್ ಗ್ಲಾಮರ್‌ಗೆ ಮೊರೆ ಹೋಗಕೂಡದು. ಆಕರ್ಷಕವಾಗಿ ಕಾಣುವುದು ಬೇರೇ ಗ್ಲಾಮರಸ್ ಆಗಿ ಬಿಂಬಿಸಿಕೊಳ್ಳುವುದು ಬೇರೇ ಎಂಬುದು ತೇಜಸ್ವಿನಿ ಅಭಿಪ್ರಾಯ.
ಯೂನಿಕ್ ಫ್ಯಾಷನ್ ನನ್ನದು
ನನ್ನದು ಯೂನಿಕ್ ಫ್ಯಾಷನ್. ನನ್ನ ಫ್ಯಾಷನ್ ಮಂತ್ರ ಸಿಂಪಲ್ ಹಾಗೂ ಕಂಫರ್ಟಬಲ್ ಆಗಿರುವುದು. ಸಂದರ್ಭಕ್ಕೆ ತಕ್ಕಂತೆ ಡ್ರೆಸ್‌ಕೋಡ್ ಆಯ್ಕೆ ಮಾಡುವುದು. ಇನ್ನು ನನಗೆ ವೆಸ್ಟರ್ನ್ ಔಟ್‌ಫಿಟ್ ಜೊತೆ ಜೊತೆಗೆ ಟ್ರೆಡಿಷನಲ್ ಉಡುಪುಗಳು ಇಷ್ಟವಾಗುತ್ತವೆ. ಈ ಶ್ರಾವಣ, ಹಬ್ಬಗಳ ಮಾಸ. ಕುಟುಂಬದೊಂದಿಗೆ ಆಚರಿಸುವಾಗ ಸೀರೆ ಹಾಗೂ ಲೆಹೆಂಗಾದಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುತ್ತಾರೆ ತೇಜಸ್ವಿನಿ.
ಟ್ರೆಂಡ್ ಸೆಟ್ಟರ್ ಆಗಿರಲು ಇಷ್ಟ
ಮಾಡೆಲ್ ಹಾಗೂ ಸಿನಿಮಾ ನಟಿಯಾಗಿರುವುದರಿಂದ ಫ್ಯಾಷನ್ ಟ್ರೆಂಡ್ ಫಾಲೋ ಮಾಡುವುದಕ್ಕಿಂತ ನನ್ನದೇ ಆದ ಟ್ರೆಂಡ್ ಸೆಟ್ ಹುಟ್ಟುಹಾಕಲು ಇಷ್ಟಪಡುತ್ತೇನೆ. ಬಹಳಷ್ಟು ಬಾರಿ ನನ್ನದೇ ಆದ ಸ್ಟೈಲ್‌ನಲ್ಲಿ ವಾಕ್ ಮಾಡುತ್ತೇನೆ ಎನ್ನುವ ತೇಜಸ್ವಿನಿ ಆಗಾಗ್ಗೆ ಫ್ಯಾಷನ್ ಅಪ್‌ಡೇಟ್‌ಗಳನ್ನು ತಪ್ಪದೇ ತಿಳಿದುಕೊಳ್ಳುತ್ತಾರಂತೆ.
ಡ್ರೀಮ್ ಶಾಪಿಂಗ್ ತಾಣ
ಜಾಗತೀಕ ಮಟ್ಟದಲ್ಲಿ ಫ್ಯಾಷನ್ ಪ್ರಿಯರ ಫ್ಯಾಷನ್ ಹಬ್ ಎಂದೇ ಖ್ಯಾತಿ ಗಳಿಸಿದ ಪ್ಯಾರೀಸ್‌ನಲ್ಲಿ ಫ್ಯಾಷೆನಬಲ್ ಆಗಿ ತಿರುಗಾಡುತ್ತಾ ಶಾಪಿಂಗ್ ಮಾಡುವ ಕನಸಿದೆ ಎನ್ನುತ್ತಾ ತೇಜಸ್ವಿನಿ ತಮ್ಮ ಮಾತಿಗೆ ಇತಿಶ್ರೀ ಹಾಕಿದರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)