Site icon Vistara News

Sudha Murthy Thoughts: ಜಗಳವಾಡಿಲ್ಲ ಎಂದರೆ ನೀವು ಗಂಡ-ಹೆಂಡತಿಯೇ ಅಲ್ಲ!; ಸುಖ ದಾಂಪತ್ಯಕ್ಕೆ ಇಲ್ಲಿದೆ ಸುಧಾಮೂರ್ತಿ ಪಂಚ ಸೂತ್ರ!

Sudha Murthy Thoughts

ಸುಧಾಮೂರ್ತಿ ಅವರ ಬಗ್ಗೆ ಪ್ರತ್ಯೇಕ (Sudha Murthy Thoughts) ಪರಿಚಯದ ಅಗತ್ಯವಿಲ್ಲ. ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ, ಯಶಸ್ಸು ಸಾಧಿಸಿದರೂ ಸರಳವಾಗಿರುವುದು ಹೇಗೆ ಎನ್ನುವುದಕ್ಕೆ ಅವರೇ ಸಾಕ್ಷಿ. ತಮ್ಮ ಜೀವನವನ್ನು ತೆರೆದಿಟ್ಟ ಪುಸ್ತಕದ ಹಾಗೆ, ಇತರರಿಗೂ ಮಾದರಿಯಾಗಿ, ಸ್ಫೂರ್ತಿಯಾಗಿ ಬದುಕುತ್ತಿರುವವರು. ಮಕ್ಕಳ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಯನ್ನು ಮಾಡಿ ಮುಂದಿನ ತಲೆಮಾರಿಗೆ ಓದುವ ರುಚಿಯನ್ನು ಹಚ್ಚಿ, ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವನ್ನೂ ಮಾಡುತ್ತಿರುವವರು. ಇಂತಹ ಸುಧಾಮೂರ್ತಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ.

ಅನುಭವದ ಮಾತು

ಸುಧಾಮೂರ್ತಿ ಅವರ ಮಾತುಗಳು ಸದಾ ಅನುಭವದ ಮೂಸೆಯಿಂದ ಹೊಳೆದು ಬರುವಂಥವುಗಳು. ತಮ್ಮ ಅನುಭವವನ್ನು ಸಾಮಾನ್ಯರ ಜೀವನಕ್ಕೆ ಅನ್ವಯಿಸಿ, ಸದಾ ಸ್ಫೂರ್ತಿಯ ತಿಳಿವಳಿಕೆ ಮಾತನ್ನಾಡುವವರು. ಮದುವೆ, ಕಲಹ, ಕುಟುಂಬ ನಿರ್ವಹಣೆ, ಮಕ್ಕಳ ಪೋಷಣೆ, ಹೆಣ್ಣುಮಕ್ಕಳ ಶಿಕ್ಷಣ, ಜೀವನ ಚಿಂತನೆ, ಸಂಸ್ಕೃತಿ ಹೀಗೆ ಜನಸಾಮಾನ್ಯರಿಗೆ ಅಗತ್ಯವಾದ ವಿಚಾರಗಳನ್ನೇ ಇವರು ಸರಳವಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುತ್ತಾರೆ. ಬನ್ನಿ, ಈ ಬಾರಿ ಅವರು ದಾಂಪತ್ಯದ ಕಲಹಗಳ ಬಗೆಗೆ ಹೇಳಿದ ಕಿವಿಮಾತಿಗಳಿಗೆ ಕಿವಿಯಾಗೋಣ.

ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ನೀವು ಮದುವೆಯಾದಿರಿ ಎಂದರೆ, ನೀವು ಜಗಳ ಮಾಡಲೇಬೇಕು. ಅದರಲ್ಲಿ ಯಾವ ಸಂದೇಹವೂ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳಿ. ಒಪ್ಪಿಕೊಳ್ಳಿ. ಪರಿಸ್ಥಿತಿಯೇ ಹಾಗೆ. ನಾನು ಯಾವತ್ತೂ ಜಗಳವಾಡಲಾರೆ ಎಂದು ಮೊದಲೇ ನಿಶ್ಚಯಿಸಿಕೊಂಡು ಹಾಗೆಯೇ ಇರಲು ಶತಾಯಗತಾಯ ಪ್ರಯತ್ನಿಸಬೇಡಿ. ಯಾಕೆಂದರೆ ನೀವು ಜಗಳವಾಡಿಲ್ಲ ಎಂದರೆ ನೀವು ಗಂಡ ಹೆಂಡತಿಯೇ ಅಲ್ಲ!

ಬದುಕು ಎಂದರೆ ಹೊಂದಾಣಿಕೆ

ಬದುಕು ಎಂದರೆ ಹೊಂದಾಣಿಕೆ. ಅಲ್ಲಿ ಕೊಡುಕೊಳ್ಳುವಿಕೆಗಳು ಸಾಕಷ್ಟು ನಡೆಯುತ್ತವೆ. ಪರ್ಫೆಕ್ಟ್‌ ಜೀವನ ಎಂಬುದೇ ಈ ಜಗತ್ತಿನಲ್ಲಿ ಇಲ್ಲ. ಪರ್ಫೆಕ್ಟ್‌ ಕಪಲ್‌ಗಳೂ ಜಗತ್ತಿನಲ್ಲಿಲ್ಲ. ನಿಮ್ಮ ಆತ ಆತನದೇ ಆದ ಪಾಸಿಟಿವ್‌ ಹಾಗೂ ನೆಗೆಟುವ್‌ಗಳೊಂದಿಗೆ ನಿಮ್ಮ ಜೀವನಕ್ಕೆ ಬಂದಿರುತ್ತಾನೆ. ಅಥವಾ ನಿಮ್ಮಾಕೆಗೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇರುತ್ತವೆ. ಇದನ್ನು ಮೊದಲು ಒಪ್ಪಿಕೊಳ್ಳಿ. ನನಗೆ ನನ್ನದೇ ಆದ ಪ್ಲಸ್‌ ಹಾಗೂ ಮೈನಸ್‌ಗಳಿದ್ದಂತೆಯೇ ಆತ/ಆಕೆಯೂ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ.

couple

ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ

ಮದುವೆಯಾದ ಮೇಲೆ ನಿಮ್ಮ ನಡುವೆ ಯಾವುದೇ ಸಮಸ್ಯೆಗಳು ಬಂದರೆ ಏನು ಮಾಡಬೇಕು ಎಂದೂ ಸುಧಾಮೂರ್ತಿ ಹೇಳುತ್ತಾರೆ. ಅವರ ಪ್ರಕಾರ, ಮದುವೆಯಾದ ಮೇಲೆ ನಿಮ್ಮಿಬ್ಬರ ನಡುವೆ ಜಗಳವಾಯಿತು ಎಂದರೆ, ಒಬ್ಬರು ಸಮಾಧಾನದಿಂದಿರುವುದನ್ನು ಕಲಿಯಿರಿ. ಒಬ್ಬರಿಗೆ ಅಪ್‌ಸೆಟ್‌ ಆದರೆ, ಇನ್ನೊಬ್ಬರು ಶಾಂತವಾಗಬೇಕು. ಜೊತೆಗೆ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು. ಇದಷ್ಟೇ ಜಗಳಕ್ಕೆ ಮದ್ದು ಎನ್ನುತ್ತಾರೆ ಅವರು.

ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿಯಿರಿ

ಇಬ್ಬರೂ ಮೊದಲು ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಕಲಿತುಕೊಳ್ಳಿ. ಈಗ ಇಬ್ಬರೂ ಹೊರಗೆ ದುಡಿಯುವವರೇ. ಹೀಗಾಗಿ ಮಹಿಳೆಯೂ ತನ್ನ ಗಂಡನ ಸಹಾಯವನ್ನು ಪಡೆಯಬೇಕು. ಎಲ್ಲ ಕೆಲಸವನ್ನೂ ಆಕೆಯೇ ಮಾಡಬೇಕು ಎಂಬ ಮನಸ್ಥಿತಿ ಗಂಡಸರಲ್ಲಿದ್ದರೆ ಅದನ್ನು ಮೊದಲು ಬಿಡಿ ಎನ್ನುತ್ತಾರೆ ಅವರು.

ಇದನ್ನೂ ಓದಿ: Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು

ಪೀಳಿಗೆಯ ಎಲ್ಲ ಗಂಡಸರೂ, ತಮ್ಮ ಹೆಂಡತಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು. ಇದು ಬಹಳ ಮುಖ್ಯ. ಇದು ಕೇವಲ ಸಹಾಯವಷ್ಟೇ ಅಲ್ಲ, ಇಬ್ಬರ ನಡುವಿನ ಸಂಬಂಧಕ್ಕೂ ಬಹಳ ಮುಖ್ಯ. ಪುರುಷರು ಹೆಂಗಸರ ಹೆಗಲ ಮೇಲೆ ಬೀಳುವ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದನ್ನು ಕಲಿತರೆ ಎಷ್ಟೋ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗುತ್ತದೆ.

Exit mobile version