Site icon Vistara News

Summer Tips: ಬೆವರಿನ ದುರ್ಗಂಧ ಶಮನಕ್ಕೆ ಪರಿಹಾರ ಏನು?

Summer Tips: What is the remedy for sweat odor relief?

ಬೇಸಿಗೆಯಲ್ಲಿ (Summer Tips) ನಮ್ಮನ್ನು ಕಾಡುವ ಹಲವು ಸಮಸ್ಯೆಗಳ ಪೈಕಿ ಬೆವರಿನ ದುರ್ಗಂಧವೂ ಒಂದು. ವರ್ಷದ ಎಲ್ಲಾ ಕಾಲದಲ್ಲಿಯೂ ದೇಹಕ್ಕೊಂದು ಗಂಧ ಇರುವುದು ಹೌದಾದರೂ, ಅತಿಯಾಗಿ ಬೆವರಿದಾಗ ದೇಹ ದುರ್ಗಂಧ ಬೀರಲು ಆರಂಭಿಸುತ್ತದೆ. ಚರ್ಮದ ಮೇಲ್ಮೈನಲ್ಲಿರುವ ಬ್ಯಾಕ್ಟೀರಿಯಾಗಳ ಚಟಿವಟಿಕೆಯಿಂದಾಗಿ ಈ ಸಮಸ್ಯೆ ಕೆಲವೊಮ್ಮೆ ನಮ್ಮ ಆತ್ಮವಿಶ್ವಾಸಕ್ಕೂ ಬಾಧೆ ತರುತ್ತದೆ. ಒಮ್ಮೊಮ್ಮೆ ಮುಜುಗರವನ್ನೂ ತರುತ್ತದೆ. ಕೆಲವು ಸರಳ ಬದಲಾವಣೆಗಳು ಮತ್ತು ಕ್ರಮಗಳಿಂದ ದೇಹದ ಬೆವರಿನ ವಾಸನೆಯ ಸಮಸ್ಯೆಯನ್ನು ತಹಬಂದಿಗೆ ತರಬಹುದು.

ಶುಚಿತ್ವದತ್ತ ಗಮನ

ದೇಹದ ವೈಯಕ್ತಿಕ ಶುಚಿತ್ವದತ್ತ ಗಮನ ನೀಡುವುದು ಮುಖ್ಯ. ದಿನಕ್ಕೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬೆಚ್ಚಗಿನ ನೀರು ಅಥವಾ ತಣ್ಣೀರಿನಿಂದ ಸ್ನಾನ ಮಾಡುವುದು ಅಗತ್ಯ. ಕುತ್ತಿಗೆ ಕೆಳಗೆ, ಕಂಕುಳು ಮುಂತಾದ ಬೆವರು ಹೆಚ್ಚು ಸ್ರವಿಸುವ ಭಾಗಗಳ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಲೇಬೇಕು. ಆದಷ್ಟೂ ತಿಳಿಬಣ್ಣದ ಹತ್ತಿಯ ವಸ್ತ್ರಗಳು ಆರಾಮದಾಯಕ. ಮಾತ್ರವಲ್ಲ, ಬೆವರನ್ನೂ ಹೀರಿಕೊಳ್ಳುತ್ತವೆ. ಬೆವರಾದ ವಸ್ತ್ರಗಳನ್ನು ತೊಳೆಯದೇ ಮತ್ತೆ ಧರಿಸುವಂತಿಲ್ಲ. ದಿನವಿಡೀ ಶೂ ಹಾಕುವುದು ಅನಿವಾರ್ಯ ಎಂದಾದರೆ, ಎರಡು ಜೊತೆ ಶೂ ಇರಿಸಿಕೊಳ್ಳಲು ಯತ್ನಿಸಿ. ಇಂದು ಧರಿಸಿದ ಜೊತೆಯನ್ನು ನಾಳೆಯಿಡೀ ಒಣಗಿ, ಗಾಳಿಯಾಡುವುದಕ್ಕೆ ಬಿಡಿ. ಇಷ್ಟಾದರೂ ಕಾಲು ವಾಸನೆ ಬರುತ್ತಿದೆ ಎಂದಾದರೆ, ದಿನಕ್ಕೆ ಒಂದೆರಡು ಬಾರಿ ಸಾಕ್ಸ್‌ ಬದಲಿಸಿ.

ಡಿಯೊಡರೆಂಟ್

ಇದೀಗಾಗಲೇ ಬಹಳಷ್ಟು ಜನರಿಂದ ಬಳಕೆಯಲ್ಲಿದೆ. ಆದರೆ ಇದು ಕೇವಲ ಬೆವರಿನ ದುರ್ಗಂಧ ಬಡಿಯದಂತೆ ತಡೆಯುತ್ತದಷ್ಟೇ. ಒಂದೊಮ್ಮೆ ವಿಪರೀತ ಬೆವರುತ್ತಿದ್ದೀರಿ ಎಂದಾದರೆ ಬೆವರು ಶಮನ ಮಾಡುವ Antiperspirant ಗಳನ್ನೂ ಬಳಸಬಹುದು. ಅಲ್ಯುಮಿನಿಯಂ ಹೊಂದಿರುವ ಈ ವಸ್ತುಗಳನ್ನು ಕಂಕುಳು ಮತ್ತಿತರ ಭಾಗಗಳಲ್ಲಿ ಲೇಪಿಸಿದಾಗ, ಬೆವರಿನ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತವೆ. ಮಾತ್ರವಲ್ಲ, ಹೆಚ್ಚಿನ ಬೆವರು ಸ್ರವಿಸುವುದನ್ನು ತಡೆಯುತ್ತವೆ. ಕೆಲವು Antiperspirant ಗಳಲ್ಲಿ ಡಿಯೋಡರೆಂಟ್‌ ಸಹ ಸೇರಿಕೊಂಡಿದ್ದು, ಬೆವರಿನ ಅತಿಯಾದ ದುರ್ಗಂಧ ಇದ್ದವರಿಗೆ ಸೂಕ್ತವಾಗಬಹುದು.

ನೈಸರ್ಗಿಕ ಉಪಾಯಗಳು

ಯಾವುದೇ ರಾಸಾಯನಿಕ ಬೇಡ ಎನ್ನುವವರಿಗೆ ಅಥವಾ ಡಿಯೊನಂಥ ವಸ್ತುಗಳಿಂದ ಅಲರ್ಜಿಯಾಗುತ್ತದೆ ಎನ್ನುವವರಿಗೆ ಕೆಲವು ಸರಳ ನೈಸರ್ಗಿಕ ಉಪಾಯಗಳೂ ಪ್ರಯತ್ನಕ್ಕೆ ಲಭ್ಯವಿವೆ. ಉದಾ, ಬೇಕಿಂಗ್‌ ಸೋಡಾ- ನೀರಿನಲ್ಲಿ ಬೇಕಿಂಗ್‌ ಸೋಡಾ ಬೆರೆಸಿ ಪೇಸ್ಟ್‌ನಂತೆ ಮಾಡಿ, ಸ್ನಾನಕ್ಕೆ ಹೋಗುವ ಮುನ್ನ ಇದನ್ನು ಕಂಕುಳಿಗೆ ಹಚ್ಚಿ ಕೆಲವು ನಿಮಿಷ ಬಿಡಿ. ನಂತರ ಹದವಾದ ನೀರಿನಿಂದ ಸ್ನಾನ ಮಾಡಿ. ಇದರಿಂದ ಕಂಕುಳಲ್ಲಿ ಬೆಳೆಯುವ ಬೆವರಿನ ಬ್ಯಾಕ್ಟೀರಿಯಾ ಪ್ರಮಾಣವನ್ನು ಕಡಿಮೆ ಮಾಡಬಹುದು.

ಆ್ಯಪಲ್ ಸಿಡರ್‌ ವಿನೇಗರ್

ಇದಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರು ಬೆರೆಸಿ, ಹತ್ತಿಯಲ್ಲಿ ಅದ್ದಿ ಕಂಕುಳಿಗೆ ಇಟ್ಟುಕೊಳ್ಳಿ. ಇದು ಆ ಭಾಗದ ಚರ್ಮದ ಪಿಎಚ್‌ ಸಮತೋಲನಕ್ಕೆ ತಂದು, ಬೆವರು ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತವೆ.

ಟೀಟ್ರೀ ತೈಲ

ತೆಂಗಿನ ಎಣ್ಣೆಗೆ ಕೆಲವು ಹನಿ ಟೀಟ್ರೀ ಎಣ್ಣೆಯನ್ನು ಬೆರೆಸಿ, ಕಂಕುಳಿಗೆ ಹಚ್ಚಿ. ಇದರಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣದಿಂದಾಗಿ ಬೆವರಿಗೆ ದುರ್ಗಂಧ ತಡೆಯುವಲ್ಲಿ ನೆರವಾಗುತ್ತದೆ.

ಇದನ್ನೂ ಓದಿ: Watermelon Selection: ಸಿಹಿಯಾದ ಪರ್ಫೆಕ್ಟ್‌ ಕಲ್ಲಂಗಡಿ ಹಣ್ಣು ಆಯ್ಕೆ ಹೇಗೆ? ಇಲ್ಲಿವೆ ಟಿಪ್ಸ್!

ಈ ಆಹಾರ ಸೇವಿಸಿ

ಕೆಲವು ಆಹಾರಗಳು ನಮ್ಮ ತನುಗಂಧವನ್ನು ಬದಲಿಸಬಲ್ಲವು. (ಮಹಾಭಾರತದಲ್ಲಿ ಶಂತನುವನ್ನು ಸೆಳೆದ ಮತ್ಸಗಂಧಿಯ ಕಥೆ ನೆನಪಾದರೆ ಅಚ್ಚರಿಯಿಲ್ಲ!) ಅತಿಯಾದ ಸಕ್ಕರೆ, ಕೊಬ್ಬು, ಮಸಾಲೆಭರಿತ ಅಹಾರಗಳು ಬೆವರು ಸ್ರವಿಸುವುದನ್ನು ಹೆಚ್ಚಿಸುತ್ತವೆ ಮತ್ತು ಅಸಹನೀಯ ದುರ್ಗಂಧವನ್ನೂ ಬೆವರಿಗೆ ಸೇರಿಸುತ್ತವೆ. ಮುಖ್ಯವಾಗಿ ದೇಹದ ಚಯಾಪಚಯ ಕ್ರಿಯೆ ಸೂಕ್ತವಾಗಿರುವಂಥ ಆಹಾರ ಸೇವಿಸುವುದು ಮುಖ್ಯ. ಅಂದರೆ ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ಶರೀರ ಹಗುರವಾದಂತೆನಿಸಿ, ಬೆವರುವ ಪ್ರಮಾಣವೂ ಕಡಿಮೆಯಾಗುತ್ತದೆ. ಇವೆಲ್ಲವುಗಳ ಜೊತೆಗೆ ಕುಡಿಯುವ ನೀರಿನ ಪ್ರಮಾಣ ಮಹತ್ವದ್ದು. ದಿನಕ್ಕೆಂಟು ಗ್ಲಾಸ್‌ ನೀರು ಕುಡಿಯಲೇಬೇಕು. ಇದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಿ ಬೆವರಿನ ಸಮಸ್ಯೆ ನಿರ್ವಹಣೆಗೆ ನೆರವಾಗುತ್ತದೆ.

Exit mobile version